ಜೀವನಯಾನ

Friday, November 11, 2016

ಮರಗಳೂ ಚಲಿಸಬಲ್ಲವು!

  • ಲ್ಯಾಟಿನ್ ಅಮೆರಿಕದಲ್ಲಿದೆ ಚಲಿಸುವ ಮರ


ಭೂಮಿಯ ಆಳಕ್ಕೆ ಬೇರು ಬಿಟ್ಟು, ದೊಡ್ಡದಾಗಿ ಬೆಳೆಯುವುದೇ ಸಸ್ಯಗಳ ಬದುಕು. ಅವು ಪ್ರಾಣಿಗಳಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲು ಸಾಧ್ಯವಿಲ್ಲ. ಇದೇ ಸಾರ್ವಕಾಲಿಕ ಸತ್ಯ ಎಂದು ಬಹುತೇಕರ ನಂಬಿಕೆ. ಆದರೆ, ಮರಗಳು ಕೂಡ ಚಲಿಸಬಲ್ಲವು! ಸರಿಯಾದ ಸೂರ್ಯನ ಬೆಳಕು, ನೆಲ ಸಿಗುವ ಜಾಗಕ್ಕೆ ಹೋಗಬಲ್ಲವು!
 ಹೌದು, ಇಂಥದ್ದೊಂದು ಜಾತಿಯ ಮರಗಳು ಲ್ಯಾಟಿನ್ ಅಮೆರಿಕದ ಭಾಗದಲ್ಲಿ ಕಂಡುಬರುತ್ತವೆ. ಸೊಕ್ರಾಟೆಯಾ ಕ್ಸೋರ್ಹಿಝಾ ಅಥವಾ ವಾಕಿಂಗ್ ಪಾಮ್ ಎಂಬ ಹೆಸರಿನ ಈ ಮರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಬಲ್ಲ ವಿಶೇಷ ಸಾಮಥ್ರ್ಯವನ್ನು ಹೊಂದಿದೆ. ಜಗತ್ತಿನ ಏಕೈಕ ಚಲನಶೀಲ ಮರ ಎಂದು ಕರೆಸಿಕೊಂಡಿದೆ.
 
 ಚಲಿಸುವುದು ಹೇಗೆ ಮತ್ತು ಯಾಕಾಗಿ?
ಆಹಾರವನ್ನು ಉತ್ಪಾದಿಸುವ ಸಲುವಾಗಿ ಸೂರ್ಯನ ಬೆಳಕು ಇರುವ ಕಡೆಗೆ ಸಸ್ಯಗಳು ವಾಲುವುದು ಅಥವಾ ಟೊಂಗೆಗಳು ಚಾಚಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇರೀತಿ ವಾಕಿಂಗ್ ಪಾಮ್ ಮರಗಳು ಕೂಡ ಮಣ್ಣು ಸವಕಳಿಯಾದಾಗ, ಸದೃಢವಾದ ಮಣ್ಣು ಇರುವ ಪಕ್ಕದ ಜಾಗದಲ್ಲಿ ಬೇರನ್ನು ಬಿಡುತ್ತದೆ. ಹೊಸ ಬೇರು ಭೂಮಿಯ ಆಳಕ್ಕೆ ಇಳಿಯುತ್ತಿದ್ದಂತೆ ಮರ ಆ ಕಡೆಗೆ ವಾಲುತ್ತದೆ. ಆಗ ಹಳೆಯ ಬೇರು ಮೇಲಕ್ಕೆ ಬರುತ್ತದೆ. ಮೇಲಕ್ಕೆ ಬಂದ ಬೇರನ್ನು ಅದು ಹಾಗೆಯೇ ಸಾಯಲು ಬಿಡುತ್ತದೆ. ಹೀಗೆ ಗೊತ್ತಾಗದ ರೀತಿಯಲ್ಲಿ ಮರ ತಾನು ಇದ್ದ ಜಾಗವನ್ನು ಖಾಲಿ ಮಾಡಿಬಿಟ್ಟಿರುತ್ತದೆ. ಈ ಪ್ರಕ್ರಿಯೆ ತೀರಾ ನಿಧಾನ. ಅಗತ್ಯವೆನಿಸಿದರೆ ವರ್ಷಕ್ಕೆ ಸುಮಾರು 20 ಮೀಟರ್ನಷ್ಟು ಚಲಿಸಬಲ್ಲವು ಎಂದು ಅಂದಾಜಿಸಲಾಗಿದೆ. ಉತ್ತಮವಾದ ಸೂರ್ಯನ ಬೆಳಕು ಮತ್ತು ಸದೃಢವಾದ ಮಣ್ಣಿರುವ ಜಾಗವನ್ನು ಅವು ಆಯ್ಕೆ ಮಾಡಿಕೊಳ್ಳುತ್ತವೆ.

ಕಾಲುಗಳಂತೆ ಕಾಣುವ ಬೇರುಗಳು:
ಮರಗಳು ಚಲಿಸಬೇಕಾದರೆ ಅವುಗಳ ಬೇರುಗಳು ವಿಭಿನ್ನವಾಗಿರಬೇಕು. ಅದೇ ರೀತಿ ವಾಕಿಂಗ್ ಪಾಮ್ ಮರಗಳ ಬೇರುಗಳು ಕೂಡ ನೀಳವಾಗಿವೆ. ಭೂಮಿಯ ಮೇಲಿಂದ ಕೆಲವು ಅಡಿ ಎತ್ತರಕ್ಕೆ ಅವು ಚಾಚಿಕೊಂಡಿರುತ್ತವೆ. ಅವುಗಳನ್ನು ನೋಡಿದರೆ ಮರಗಳಿಗೆ ಕಾಲುಗಳನ್ನು ಅಂಟಿಸಿದ ಹಾಗೆ ಕಾಣುತ್ತದೆ.

ಮಳೆ ಕಾಡಿನ ಸಸ್ಯ:
ಕೋಸ್ಟಾರಿಕಾ ಮತ್ತು ದಕ್ಷಿಣ ಅಮೆರಿಕದ ಖಂಡದ ಮಳೆಕಾಡುಗಳಲ್ಲಿ ಮಾತ್ರ ವಾಕಿಂಗ್ ಪಾಮ್ ಮರಗಳು ಕಾಣಸಿಗುತ್ತವೆ. ಅದರ ಎಲೆಗಳು ದಪ್ಪ ಮತ್ತು ಉದ್ದವಾಗಿರುತ್ತವೆ. ಸೂರ್ಯನ ಕಿರಣ ಹೆಚ್ಚಿಗೆ ಸಿಕ್ಕಷ್ಟೂ ಅವು ಇನ್ನಷ್ಟು ದಪ್ಪವಾಗಿ ಬೆಳೆಯುತ್ತವೆ. ಎಪಿಫೈಟ್ ಎಂಬ ಸಸ್ಯದ ಹಲವು ಪ್ರಭೇದಗಳು ಈ ಮರದ ಮೇಲೆ ಬೆಳೆಯುತ್ತವೆ. ಮರದ ಬೀಜಗಳನ್ನು ತಿನ್ನಲು ಬರುವ ಜೀರುಂಡೆಗಳ ಮತ್ತು ಇತರ ಕೀಟಗಳಿಂದ ಪರಾಗಸ್ಪರ್ಶ ಕ್ರಿಯೆ ನೆರವೇರುತ್ತದೆ. ಈ ಮರಗಳು ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯಬಲ್ಲವು. ಮನೆಗಳನ್ನು ಕಟ್ಟಲು ಈ ಮರವನ್ನು ಉಪಯೋಗಿಸುತ್ತಾರೆ. ಬೇರುಗಳು ನೀಳವಾಗಿರವುದರಿಂದ ಅವುಗಳನ್ನು ಈಟಿಗಳನ್ನು ತಯಾರಿಸುತ್ತಾರೆ.

ಮರ ಚಲಿಸುವುದು ನಿಜವೇ?
ಮರಗಳು ಚಲಿಸುತ್ತವೆ ಎಂಬುದನ್ನು ವಿಜ್ಞಾನಿಗಳು ನಂಬಲು ಸಿದ್ಧರಿಲ್ಲ. ಆದರೆ, ಮರದ ಬೇರುಗಳು ಭೂಮಿಯಿಂದ 6 ಅಡಿಯಷ್ಟು ಎತ್ತರ ಇರುವ ಕಾರಣ ಬಿಸಿಲಿನ ಕಡೆಗೆ ವಾಲುವುದಕ್ಕೆ ವರದಾನವಾಗಿದೆ. ವರ್ಷಕ್ಕೆ 10ರಿಂದ 20 ಮೀಟರ್ ಜಾಗವನ್ನು ಅವು ಬದಲಿಸಬಲ್ಲವು. ಅಲ್ಲದೇ ಸೂರ್ಯನ ಬೆಳಕು, ನೆಲ ಮತ್ತು ನೀರು ಸಮರ್ಪಕವಾಗಿ ದೊರೆಯುತ್ತಿದ್ದರೆ ಅವುಗಳು ಚಲಿಸುವುದು ತೀರಾ ವಿರಳ. 

No comments:

Post a Comment