ಜೀವನಯಾನ

Wednesday, February 26, 2014

ಕಾಡು ಸೇವಂತಿಗೆ ಹೂವಿನ ಬೀಜಗಳ ಹಾರಾಟ!

ಮನುಷ್ಯ ತನಗೆ ಬೇಕಾದ ಸಸ್ಯಗಳನ್ನು ಸಂಗ್ರಹಿಸಿ ಬೆಳೆಯುತ್ತಾನೆ. ಆದರೆ, ಕಾಡಿನಲ್ಲಿಯ ಸಸ್ಯಗಳು ಹಾಗಲ್ಲ. ಅವು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ, ಅದರ ಜೀವಕ್ಕೇ ಕುತ್ತು.  ಹೀಗಾಗಿ ಹಲವಾರು ಸಸ್ಯಗಳು ಸುಂದರವಾದ ಹಣ್ಣುಗಳನ್ನು ಬಿಟ್ಟು, ಪಕ್ಷಿಗಳನ್ನು ಆಕರ್ಷಿಸಿ ಅದರ ಮೂಲಕ
ಸಂತಾನವನ್ನು ಪಸರಿಸುತ್ತವೆ. ಇವೆಲ್ಲದರ ಹೊರತಾಗಗಿಯೂ ಕೆಲವು ಸಸ್ಯಗಳು ತನ್ನ ಬೀಜಗಳನ್ನು ಗಾಳಿಯಲ್ಲಿ ತೇಲಿಬಿಡುತ್ತವೆ. ಇವುಗಳನ್ನು ಗಾಳಿಯು ತನ್ನೊಂದಿಗೆ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಒಯ್ಯುತ್ತದೆ. ಹೊಸ ಪರಿಸರದಲ್ಲಿ ಬೀಜ ಕುಡಿಯೊಡೆಯುತ್ತದೆ! ಕಾಡು ಸೇವಂತಿಗೆಯ ಹೂವು ಇದಕ್ಕೊಂದು ಉದಾಹರಣೆ. ಇದಕ್ಕೆ ಇಂಗ್ಲಿಷ್ನಲ್ಲಿ ಡ್ಯಾಂಡೇಲಿಯನ್ ಸೀಡ್ಸ್ (dandelion flower) ಎನ್ನುತ್ತಾರೆ.  ಇದು ತಾನೇ ತಾನಾಗಿ ಎಲ್ಲೆಲ್ಲೋ ಬೆಳೆಯುತ್ತದೆ.


ಪ್ಯಾರಾಚ್ಯೂಟ್ ಕಲ್ಪನೆ:
ಇದು ತಿಳಿಹಳದಿ ಬಣ್ಣದ ಸೇವಂತಿಗೆಯನ್ನು ಹೋಲುತ್ತವೆ. ಇವು ಅತಿ ಹಗುರವಾಗಿದ್ದು, ನಿಶ್ಚಲ ಗಾಳಿಯಲ್ಲಿ ಕೂಡ ಚಲಿಸಬಲ್ಲದು. ಇವು ನಿಧಾನವಾಗಿ ಭೂಮಿಗೆ ಇಳಿಯುವುದನ್ನು ನೋಡಿದರೆ ಪ್ಯಾರಾಚ್ಯೂಟ್ ಕಲ್ಪನೆ ಬಂದಿರಬಹುದು. ಈ ವಿನ್ಯಾಸದ ಆಧಾಸಿಯೇ ಕ್ರೊಯೇಷಿಯಾದ ಫಾಸ್ಟ್ ರ್ಯಾಸ್ಸಿಕ್ ಎಂಬಾತ 1617ರಲ್ಲಿ ಪ್ಯಾರಾಚ್ಯೂಟ್ ಅನ್ನು ಸಿದ್ಧಪಡಿಸಿ, ಚರ್ಚ್ ವೊಂದರ ಮೇಲಿಂದ ಜಿಗಿದಿದು ಸುರಕ್ಷಿತವಾಗಿ ನೆಲವನ್ನು ತಲುಪಿದ್ದನಂತೆ.




ಯಾವಾಗಲೋ ಒಮ್ಮೆ ಬೆಳ್ಳನೆಯ ರೇಷ್ಮೆಯಂತ, ಹೊಳಪಾದ ಕೂದಲಿನಂಥ ಎಳೆಗಳನ್ನು ಹೊತ್ತಿಕೊಂಡ ಒಂದು ಬೀಜವು ಗಾಳಿಯಲ್ಲಿ ತೇಲುತ್ತ ಬಂದು ನಿಮ್ಮ ಕೈಗೆ ಸಿಕ್ಕಾಗ ಅದನ್ನು ಸಂತೋಷದಿಂದ ಹಿಡಿದು "ಅಜ್ಜನ ಗಡ್ಡ" ಎನ್ನುವ ಉದ್ಗಾರ ನಿಮ್ಮ ಬಾಯಿಂದಲೂ ಹೊರಬಂದಿರಬಹುದು! 
 
ಹಗಲಲ್ಲಿ ಹೂವು ರಾತ್ರಿ ಮೊಗ್ಗು!

ಕಾಡುಸೇವಂತಿಗೆ ಗಿಡಗಳು ಹೂವರಳಿಸುವ ಪ್ರಕ್ರಿಯೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಹೂವುಗಳು ಸೂರ್ಯನ ಬೆಳಕಿನಲ್ಲಿ ಮಾತ್ರ ಅರಳಿ ನಿಲ್ಲುತ್ತವೆ. ರಾತ್ರಿಯಾಗುತ್ತಿದ್ದಂತೆ ಮುದುಡಿಕೊಂಡು ಮತ್ತೆ ಮೊಗ್ಗಿನಂತಾಗುತ್ತದೆ! ಈ ಗಿಡದ ಹೂವು ಬಲಿತು ಬೀಜವಾದಾಗ ಹತ್ತಿಯನ್ನು ಹೋಲುವ ಸಣ್ಣದಾದ ನವಿರಾದ ಎಳೆಯ ದಾರಗಳು ಬೀಜದ ತುದಿಯಲ್ಲಿ ಜೋಲಾಡುತ್ತವೆ. ಗಾಳಿಯ ರಭಸಕ್ಕೆ ಅನುಗುಣವಾಗಿ ಬೀಜಗಳು ಕಿಲೋಮೀಟರ್ಗಟ್ಟಲೆ ದೂರದವರೆಗೂ ಹಾರಿಹೋಗಿ ಬೀಳುವುದುಂಟು. ಸಾಮಾನ್ಯವಾಗಿ ಜೂನ್ನಲ್ಲಿ ಬೀಜಗಳು ಬಲಿತು ಹಾರುತ್ತವೆ. ಭೂಮಿಯನ್ನು ಕಂಡ ಬೀಜ ಮಳೆಯ ನೀರು ತಾಗಿದೊಡನೆ ಮೊಳಕೆ ಒಡೆಯುತ್ತದೆ.

ಸೂರ್ಯ, ಚಂದ್ರ, ನಕ್ಷತ್ರ!
ಹಳದಿ ಬಣ್ಣದ ಕಾಡುಸೇವಂತಿಗೆ ಹೂವು ಅರಳಿ ನಿಂತಾಗ ಸೂರ್ಯನನ್ನೂ, ಬಲಿತು ಬಿಳಿಯ ಚೆಂಡಿನ ಆಕಾರವನ್ನು ಪಡೆದಾಗ ಚಂದ್ರನನ್ನೂ, ಅವುಗಳಿಂದ ಬೇರ್ಪಟ್ಟು ಗಾಳಿಯಲ್ಲಿ ತೇಲುವಾಗ ನಕ್ಷತ್ರದ ಆಕೃತಿಯನ್ನು ತಾಳುತ್ತದೆ.

ಔಷಧೀಯ ಗುಣ:
ಇದೊಂದು ಕಾಡು ಸಸ್ಯ. ಎಲ್ಲೆಂದರಲ್ಲಿ ಬೆಳೆಯುತ್ತೆ. ಆದರೆ, ಇದರ ಎಲೆಗಳಿಗೆ ಔಷಧೀಯ ಗುಣವಿದೆ. ಇದರ ಎಲೆಗಳನ್ನು ಹಿಂಡಿ ರಸವನ್ನು ಗಾಯಗಳಿಗೆ ಹಚ್ಚಲಾಗುತ್ತದೆ. ಅಡುಗೆ ಮಾಡಲು ಕೂಡ ಉಪಯೋಗಿಸುತ್ತಾರೆ.
 
ಸ್ವಯಂ ಪರಾಗಸ್ಪರ್ಶ!

ಕಾಡು ಸೇವಂತಿ ಹೂವಿನ ಬೀಜಗಳು ಊರೆಲ್ಲಾ ಅಲೆದು ನೆಲೆಕಂಡುಕೊಳ್ಳುತ್ತವೆ. ಆದರೆ, ಈ ಗಿಡಗಳು ಸ್ವತಃ ಹೂವನ್ನು ಅರಳಿಸಬೇಕಾದರೆ, ಇದರ ಜಾತಿಯ ಇನ್ನೊಂದು ತನ್ನದೇ ಜಾತಿಯ ಇನ್ನೊಂದು ಗಿಡದ ಸಾಮಿಪ್ಯ ಬೇಕು. ಅಂದರೆ, ಇವು ಸ್ವಯಂ ಪರಾಗಸ್ಪರ್ಶದ ಮೂಲಕ ಹೂವರಳಿಸುತ್ತದೆ. ಹೀಗಾಗಿ ಒಂದು ಕಾಡುಸಂಪಿಗೆ ಗಿಡದ ಪಕ್ಕ ಇನ್ನೊಂದು ಗಿಡ ಇರುತ್ತದೆ. 

ಹಾರುವ ಹಾವು!

ನೆಲದ ಮೇಲೆ ತೆವಳುತ್ತಾ ಸಾಗುವ ಹಾವುಗಳು ಎಂದಾದರೂ ಹಾರುವುದನ್ನು ನೋಡಿದ್ದೀರಾ? ನಿಜ, ಹಾವುಗಳಿಗೆ ಹಾರಲು ಬರುವುದಿಲ್ಲ. ಆದರೆ, ಪೃಕೃತಿ ಹಾವುಗಳಿಗೆ ಹಾರುವುದನ್ನೂ ಕಲಿಸಿದೆ! ಕ್ರಿಸೋಪೆಲಿ ಎನ್ನುವ ಹಾವುಗಳಿಗೆ ಗಾಳಿಯಲ್ಲಿ ಹಾರುವ ಸಾಮಥ್ರ್ಯವಿದೆ. ಇವು ಹಾರುವ ಹಾವುಗಳು ಎಂದೇ ಗುರುತಿಸಲ್ಪಟ್ಟಿವೆ. ಇವು ಮರದಿಂದ ಮರಕ್ಕೆ ಹಾರಬಲ್ಲವು. ಇದನ್ನು ಮರದ ಹಾವು ಎಂತಲೂ ಕರೆಯುತ್ತಾರೆ. ಮರದ ಎತ್ತರದ ಕೊಂಬೆಯನ್ನು ಏರಿ ಅದರ ತುದಿಯಿಂದ ಇನ್ನೊಂದು ಮರಕ್ಕೆ ಜಿಗಿಯುತ್ತವೆ! 

 


  • ಗುಣ ಲಕ್ಷಣಗಳು:

ಕ್ರಿಸೋಪೆಲಿ ಇತರ ಹಾವುಗಳಂತೆ ಇರುತ್ತವೆ. ಹಾರುವ ಹಾವುಗಳು ಅಷ್ಟೇನು ಉದ್ದವಿರುವುದಿಲ್ಲ. ಇವುಗಳ ಉದ್ದ ನಾಲ್ಕು ಅಡಿ. ಉದ್ದನೆಯ ಬಾಲವನ್ನು ಹೊಂದಿರುತ್ತದೆ. ಮೈ ಮೇಲೆ ಕಪ್ಪು ಮತ್ತು ಹಳದಿ ಪಟ್ಟಿಗಳಿರುತ್ತವೆ. ಇಲಿ, ಹಲ್ಲಿ ಕಪ್ಪೆ, ಪಕ್ಷಿಗಳು, ಬಾವಲಿಗಳು ಇದರ ಪ್ರಮುಖ ಆಹಾರ. ಈ ಹಾವುಗಳಿಗೆ ವಿಷ ಇರುವುದಿಲ್ಲ. ಹೀಗಾಗಿ ಮನುಷ್ಯರಿಗೆ ಇವುಗಳಿಂದ ಯಾವುದೇ ಅಪಾಯವಿಲ್ಲ.  ಕ್ರಿಸೋಪೆಲಿ ಗುಂಪಿನ ಹಾವುಗಳಲ್ಲಿ 5 ರೀತಿಯ ಪ್ರಭೇದಗಳನ್ನು  ಗುರುತಿಸಲಾಗಿದ್ದು, ಅವುಗಳಲ್ಲಿ ಪ್ಯಾರಡೈಸಿ ಟ್ರೀ ಸ್ನೇಕ್, ಗೋಲ್ಡನ್ ಟ್ರೀ ಸ್ನೇಕ್ ಪ್ರಮುಖವಾದವುಗಳು.  ಈ ಹಾವುಗಳು ಆಗ್ನೇಯ ಏಷ್ಯಾದ ದೇಶಗಳಾದ ಇಂಡೋನೇಷ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ ಮತ್ತು ದಕ್ಷಿಣ ಥೈಲ್ಯಾಂಡ್ನಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅಲ್ಲದೆ ಭಾರತದಲ್ಲಿಯೂ ಕಂಡುಬರುತ್ತದೆ.
  • ಹಾರುವುದು ಕಲಿತಿದ್ದು ಏಕೆ?

ದಟ್ಟವಾದ ಕಾಡುಗಳಲ್ಲಿ ನೆಲದ ಮೇಲೆ ವೇಗವಾಗಿ ಓಡಾಡಲು ಹಾವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲದೆ,  ಬೇಟೆಗಾಗಿ ಹೆಚ್ಚಾಗಿ ಮರವನ್ನೇ ಆಶ್ರಯಿಸ ಬೇಕಾಗುತ್ತದೆ. ಹಿಗಾಗಿ ಎಷ್ಟೇ ಎತ್ತರದ ಮರವಾದರೂ ಸರಾಗವಾಗಿ ಏರಿ, ತುದಿಯನ್ನು ತಲುಪಬಲ್ಲದು. ಮರದಲ್ಲಿರುವ ವೈರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ಹಲ್ಲಿ, ಬಾವಲಿ, ಪಕ್ಷಿಗಳನ್ನು ಹಿಡಿಯುವ ಸಲುವಾಗಿ ಹಾರುವ ತಂತ್ರಗಾರಿಕೆಯನ್ನು ಇವು ರೂಢಿಸಿಕೊಂಡಿವೆ.
  • ಏನು ಲಾಭ? ಈ ಕುರಿತು ವಿಜ್ಞಾನಿಗಳು ಇನ್ನೂ ಅಧ್ಯಯನ ನಡೆಸುತ್ತಲೇ ಇದ್ದಾರೆ. ಹಾರುವುದರಿಂದ ಈ ಹಾವಿಗೆ ಎರಡು ರೀತಿಯಿಂದ ಲಾಭವಿದೆ. ನೆಲದ ಮೇಲೆ ತೆವಳುವುದರಿಂದ ನಷ್ಟವಾಗುವ ಶಕ್ತಿಯನ್ನು ಉಳಿಸಬಹುದು. ಜತೆಗೆ ಭೂಮಿಯ ಮೇಲಿನ ವೈರಿಗಳ ಕಾಟದಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು.
  • ಹಾರಾಟ ಹೇಗಿರುತ್ತೆ?
ಮೊದಲು ಮರದ ತುದಿ ಕೊಂಬೆಯನ್ನು  ತಲುಪುತ್ತದೆ. ಕೊಂಬೆಗೆ ಬಾಲದ ತುದಿಯನ್ನು ಸುತ್ತಿಕೊಂಡು ಇನ್ನೊಂದು ಮರಕ್ಕೆ ಅಥವಾ ನೆಲದತ್ತ ಜಿಗಿಯುತ್ತದೆ. ರೆಕ್ಕೆ ಅಥವಾ ಇತರ ಯಾವುದೇ ಅವಯವಗಳು ಇಲ್ಲದ ಕಾರಣ ಹಕ್ಕಿಯಂತೆ ಮೇಲ್ಮುಖವಾಗಿ ಹಾರಲು ಬರುವುದಿಲ್ಲ. ಹಾರಲು ಅನುಕೂಲವಾಗುವಂತೆ ತನ್ನ ದೇಹದ ಆಕಾರವನ್ನು ಪರಿವರ್ತಿಸಿಕೊಳ್ಳುತ್ತದೆ. ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಒಮ್ಮಲೇ ಜಿಗಿಯುತ್ತದೆ. ಹಾರಿದ ಬಳಿಕ ತಲೆಯಿಂದ ಬಾಲದವರೆಗೆ ಮೈ ಮೂಳೆಗಳನ್ನು ಚಪ್ಪಟೆ (ಅಗಲ) ಗೊಳಿಸಿಕೊಳ್ಳುತ್ತದೆ. ಹೀಗಾಗಿ ಗಾಳಿಯಲ್ಲಿ ಜಾರಲು ಅನುಕೂಲ. ಹಾರುವಾಗ ಇವುಗಳ ದೇಹ ನೇರವಾಗಿ ಇರುವುದಿಲ್ಲ. ಬದಲಿಗೆ  ಅರ್ಧ  ವೃತ್ತಾಕಾರದಲ್ಲಿ ದೇಹವನ್ನು ಬಾಗಿಸಿ ತನಗೆ ಬೇಕಾದ ದಿಕ್ಕಿಗೆ ಸಾಗುತ್ತದೆ. ಬಾಲದ ಮೂಲಕ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುತ್ತದೆ. ತಾನು ಸಾಗಬೇಕಾದ ದಿಕ್ಕಿನೆಡೆಗೆ ತಲೆಯನ್ನು ನೆಟ್ಟಿರುತ್ತದೆ. ಒಂದು ಸೆಕೆಂಡಿಗೆ 26ರಿಂದ 33 ಅಡಿ ದೂರವನ್ನು ಇವು ಕ್ರಮಮಿಸಬಲ್ಲವು. ಕೆಲವೊಂದು ಹಾವುಗಳು 100 ಮೀಟರ್ ದೂರದವರೆಗೆ ಸಾಗಬಲ್ಲವು. ಸಾಮಾನ್ಯವಾಗಿ ಇವು ಮರದಿಂದ ಮರಕ್ಕೆ ಜಿಗಿಯುತ್ತವೆ. ಮರಗಳು ಇಲ್ಲದಿದ್ದಾಗ ನೆಲಕ್ಕೆ ಬೀಳುತ್ತವೆ. ಗಾಳಿಯಲ್ಲಿ ಪ್ಯಾರಾಚ್ಯೂಟ್ನಂತೆ ಇಳಿಯುವ ಇವು, ನೆಲಕ್ಕೆ ರಪ್ಪೆನೆ ಅಪ್ಪಳಿಸುತ್ತವೆ. ಇಲ್ಲವೇ ಮರಕ್ಕೆ ತನ್ನ ಮೈಯನ್ನು ಸುತ್ತಿಕೊಂಡು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.

Thursday, February 20, 2014

ಗಾಳಿಯಲ್ಲೇ ನಿಲ್ಲುವ ಹಮ್ಮಿಂಗ್ ಬರ್ಡ್!

ಜಗತ್ತಿನ ಅತ್ಯಂತ ಚಿಕ್ಕ ಪಕ್ಷಿ ಎನ್ನುವ ಹೆಗ್ಗಳಿಕೆ ಹಮ್ಮಿಂಗ್ ಬರ್ಡ್ ನದ್ದು. ಆದರೆ, ಇದರ ಸಾಮರ್ಥ್ಯಕ್ಕೆ ಯಾರೂ ಸರಿಸಾಟಿಯಿಲ್ಲ. ಗಾಳಿಯಲ್ಲೇ ನಿಂತು ಹೂವಿನ ಮಕರಂದ ಹೀರುವ, ಹಿಮ್ಮುಖವಾಗಿ ಹಾರಬಲ್ಲ, ಅತ್ಯಂತ ವೇಗವಾಗಿ ರಕ್ಕೆ ಬಡಿಯುವ, ಅಷ್ಟೇ ವೇಗವಾಗಿ ಹಾರಬಲ್ಲ, ಸಂದರ್ಭಕ್ಕೆ ತಕ್ಕಂತೆ ಹಿಮ್ಮುಖವಾಗಿ ಚಲಿಸಬಲ್ಲ ಏಕಮಾತ್ರ ಪಕ್ಷಿ. ಅಲ್ಲದೆ, ಎಡಕ್ಕೆ-ಬಲಕ್ಕೆ, ಮೇಲೆ-ಕೆಳಗೆ ಹೇಗೆ ಬೇಕಾದರೂ ನಿಲ್ಲಬಲ್ಲದು. ಮಕರಂದ ಪಡೆಯಲು ಗಾಳಿಯಲ್ಲಿ ಇವು ನಡೆಸುವ ಸರ್ಕಸ್ ಅನ್ನು ನೋಡುವುದೇ ಚೆಂದ.
 

ಜಗತ್ತಿನ ಅತಿ ಚಿಕ್ಕ ಪಕ್ಷಿ:
ಈ ಹಕ್ಕಿಯ ಸಾಮಾನ್ಯ ಗಾತ್ರ 3-5 ಇಂಚು. ಇವುಗಳಲ್ಲಿ ಚಿಕ್ಕ ಪ್ರಭೇದವೆನಿಸಿರುವ "ಬೀ ಹಮ್ಮಿಂಗ್ ಬರ್ಡ್"ನ ಗಾತ್ರ ಕೇವಲ 5-6 ಸೆ.ಮೀ. ಇದರ ತೂಕ 2 ಗ್ರಾಮ್ಗಿಂತ ಕಡಿಮೆ! ಹಸಿರು ಮೈನ ಈ ಹಕ್ಕಿಗಳು ಕ್ಯೂಬಾದ ದ್ವೀಪದಲ್ಲಿ ಕಾಣಸಿಗುತ್ತವೆ.

ಹಿಂದಕ್ಕೆ ಹಾರಬಲ್ಲ ಏಕೈಕ ಪಕ್ಷಿ:
ಹೂವಿನ ಮಕರಂದವೇ ಹಮ್ಮಿಂಗ್ ಬರ್ಡ್ ನ ಪ್ರಮುಖ ಆಹಾರ. ಇತರ ಹಕ್ಕಿಗಳಂತಲ್ಲದೇ, ಹಮ್ಮಿಂಗ್ ಬಡರ್್ ತನ್ನ ರೆಕ್ಕೆಗಳನ್ನು ಮುಂದೆಕ್ಕೆ ಮತ್ತು ಹಿಂದಕ್ಕೆ ವೃತ್ತಾಕಾರದಲ್ಲಿ ಬಡಿದು, ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಬಲ್ಲದು. ಪ್ರತಿ ಸೆಕೆಂಡಿಗೆ 60-80 ಬಾರಿ ರೆಕ್ಕೆ ಬಡಿಯಬಲ್ಲದು. ಮಕರಂದ ಹೀರಲು ತೆಳ್ಳಗಿನ ಉದ್ದನೆಯ ಕೊಕ್ಕು ಕೂಡಾ ಸಹಕಾರಿಯಾಗಿದೆ. ಆದರೆ, ಹೂವಿಂದ ಹೂವಿಗೆ ಹಾರುವ ಈ ಪಕ್ಷಿಗೆ ಮಕರಂದದ ಕಂಪು ತಿಳಿಯುವುದಿಲ್ಲ. ಸಂಗಾತಿಯನ್ನು ವರಿಸುವ ಸಂದರ್ಭದಲ್ಲಿ ತನ್ನ ರೆಕ್ಕೆ ಬಡಿಯುವ ವೇಗವನ್ನು ಸೆಕೆಂಡಿಗೆ 200ಕ್ಕೆ ಹೆಚ್ಚಿಸಿಕೊಳ್ಳಬಲ್ಲದು. ಇವು 30ರಿಂದ 60 ಸೆಕೆಂಡ್ ಗಾಳಿಯಲ್ಲೇ ನಿಂತು ತಾಸಿಗೆ 5 ರಿಂದ 8 ಸಲ ಮಕರಂದ ಹೀರುತ್ತದೆ. ಮಕರಂದ ಸಿಗದಿದ್ದಾಗ ಚಿಕ್ಕ ಪುಟ್ಟ ಹುಳಹಪ್ಪಟೆಯನ್ನೂ ತಿನ್ನುತ್ತವೆ.


ರೆಕ್ಕೆಯಿಂದ ಇಂಪಾದ ನಾದ:
ಹಮ್ಮಿಂಗ್ ಹಕ್ಕಿಗೆ ಕೋಗಿಲೆಯಂತೆ ಹಾಡಲು ಬರುವುದಿಲ್ಲ. ಆದರೆ, ತನ್ನ ರೆಕ್ಕೆಯಿಂದಲೇ ಇಂಪಾದ ಶಬ್ದವನ್ನು ಹೊರಹಾಕುತ್ತದೆ. ಹಮ್ಮಿಂಗ್ ಅಂದರೆ ಮೊರೆತ, ಗುಂಯ್ಗುಡು ಎನ್ನುವ ಅರ್ಥವಿದೆ. ರೆಕ್ಕೆ ಬಡಿಯುವಾಗ ಶಬ್ದವನ್ನು ಹೊರಹಾವುದರಿಂದ ಹಮ್ಮಿಂಗ್ ಎಂಬ ಹೆಸರು ಬಂದಿದೆ. ಆದರೆ, ಎಲ್ಲ ಹಕ್ಕಿಯ ಶಬ್ದವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಇವುಗಳ ನಾದ ಒಂದರಕ್ಕಿಂತ ಇನ್ನೊಂದರದ್ದು ಭಿನ್ನ.

ಅಮೆರಿಕಲ್ಲಿ ಮಾತ್ರ ಕಾಣಸಿಗುತ್ತೆ:

ಹಮ್ಮಿಂಗ್ ಬರ್ಡ್ ಗಳೂ ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಮಾತ್ರ ಕಂಡುಬರುತ್ತವೆ. ಪಕ್ಷಿ ಸಂಕುಲದಲ್ಲಿಯೇ ಎರಡನೇ ದೊಡ್ಡ ಕುಟುಂಬ ಹಮ್ಮಿಂಗ್ ಬಡರ್ಡ್ ಗಳದ್ದು, ಇವುಗಳಲ್ಲಿ ಸುಮಾರು 343 ಪ್ರಭೇದಗಳು ಅಮೆರಿಕದಾದ್ಯಂತ ಕಾಣಸಿಗುತ್ತವೆ. ಇವುಗಳ ಜೀವಿತಾವಧಿ 3ರಿಂದ 4 ವರ್ಷ. ಕೆಂಪು ಕುತ್ತಿಗೆಯ ಹಮ್ಮಿಂಗ್ ಬರ್ಡ್ 6 ವರ್ಷಗಳ ಕಾಲ ಬದುಕುತ್ತದೆ.

500 ಮೈಲಿ ದೂರ ವಲಸೆ:
ವಲಸೆಯ ಸಂದರ್ಭದಲ್ಲಿ ತಡೆಇಲ್ಲದೆ ಮೆಕ್ಸಿಕೊ ಕೊಲ್ಲಿಯ ಮೇಲೆ 500 ಮೈಲಿ ದೂರಕ್ಕೆ ಹಾರಬಲ್ಲದು. ಇವು ಗಂಟೆಗೆ 90 ಕಿ.ಮೀ. ವೇಗವನ್ನು  ತಲುಪಬಲ್ಲದು. ಹಮ್ಮಿಂಗ್ ಬರ್ಡ್ ಗಾಳಿಯಲ್ಲಿರುವಾಗ ಅದರ ಹೃದಯ ನಿಮಿಷಕ್ಕೆ 1260 ಬಾರಿ ಬಡಿದುಕೊಳ್ಳುತ್ತದೆ.  

ನಡೆಯಲು ಬರುವುದಿಲ್ಲ:
ಹಮ್ಮಿಂಗ್ ಬರ್ಡ್ ನ ಕಾಲು ತೀರಾ ಚಿಕ್ಕದು. ಹೀಗಾಗಿ ಇದಕ್ಕೆ ನಡೆದಾಡಲು ಆಗುವುದಿಲ್ಲ. ಕುಳಿತುಕೊಳ್ಳಲು ಅಥವಾ ಆಧಾರವಾಗಿ ಹಿಡಿದುಕೊಳ್ಳಲಷ್ಟೇ ಕಾಲನ್ನು ಬಳಸುತ್ತದೆ.

ಶಕ್ತಿ ಉಳಿಸುವ ತಂತ್ರ:

ವೇಗವಾಗಿ ರೆಕ್ಕೆ ಬಡಿಯುವುದರಲ್ಲೇ ಹಮ್ಮಿಂಗ್ ಬರ್ಡ್ ನ ಶಕ್ತಿಯೆಲ್ಲವೂ ಕರಗಿಹೋಗುತ್ತದೆ. ದೇಹದಲ್ಲಿ ಶಕ್ತಿ ಉಳಿಸಿಕೊಳ್ಳಲು ದಿನದ ಹೆಚ್ಚಿನ ಸಮಯ ಮರದ ಕೊಂಬೆಗಳ ಮೇಲೆ ನಿದ್ರಿಸುತ್ತವೆ. ನಿದ್ರೆಯ ವೇಳೆ ಹೃದಯ ಬಡಿತವನ್ನು 500 ರಿಂದ 50ಕ್ಕೆ ಇಳಿಸಿಕೊಳ್ಳುತ್ತದೆ. ಕೆಲವು  ಸಮಯ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ! ದೇಹದ ಉಷ್ಣಾಂಶವನ್ನೂ ಕಡಿಮೆ ಮಾಡಿಕೊಳ್ಳುತ್ತದೆ.

Sunday, February 2, 2014

ಹೂ ಬಿಟ್ಟು ಸಾವನ್ನಪ್ಪುವ ಬಿದಿರು!

ಶತಮಾನಕ್ಕೊಮ್ಮೆ ಸಂಭವಿಸುವ ವಿದ್ಯಮಾನ

ಬಿದಿರು ಹೂ ಬಿಡುವುದು ತೀರಾ ಅಪರೂಪದ ವಿದ್ಯಮಾನ. ಶತಮಾನದಲ್ಲಿ ಒಮ್ಮೆ ಅಥವಾ ಎರಡುಬಾರಿ ಮಾತ್ರ ಬಿದಿರು ಹೂ ಬಿಟ್ಟ ಸನ್ನಿವೇಶ ನೋಡಲು ಸಿಗುತ್ತದೆ. ಏಕೆಂದರೆ ಬಿದಿರು ಹೂ ಬಿಡುವುದು 40 ರಿಂದ 60 ವರ್ಷಕ್ಕೊಮ್ಮೆ ಮಾತ್ರ! ಆದರೆ ಅದು ಬಿದಿರಿನ ಅಂತ್ಯಕಾಲ. ಹೂ ಬಿಟ್ಟು ಕಾಯಿ ಆದ ಬಳಿಕ ಕಾಡಿನಲ್ಲಿದ್ದ ಬಿದಿರೆಲ್ಲಾ ಯಾವುದೋ ಸಾಂಕ್ರಾಮಿಕ ರೋಗಬಂದಂತೆ ಸತ್ತುಹೋಗುತ್ತದೆ. ಹೀಗಾಗಿಯೇ ಬಿದಿರಕ್ಕಿ  ಬಂದಿದೆ ಅಂದರೆ, ಅದನ್ನು ಬಿದಿರಿನ ಕ್ಷಾಮ ಅಂತಲೇ ಹೇಳಲಾಗುತ್ತದೆ. ಇದೊಂದು ಸಹಜ ನೈಸರ್ಗಿಕ ವಿದ್ಯಮಾನವಾಗಿದ್ದರೂ, ಇಡೀ ಕಾಡು ಕಂಗಾಲಾಗುತ್ತದೆ. ಬಿದಿರು ಅಳಿದರೆ ಅರ್ಧ ಕಾಡಿಗೆ ಕಾಡೇ ಖಾಲಿ ಖಾಲಿ! ನೆಲಕ್ಕೆ ಬಿದ್ದ ಬೀಜ ಮೊಳೆತು ಬೆಳೆಯಲು ಇನ್ನು ಕನಿಷ್ಠ ಹತ್ತಾರು ವರ್ಷಗಳೇ ಬೇಕು. ಅಲ್ಲಿಯವರೆಗೂ ಕಾಡಿನಲ್ಲಿ ಸೂತಕದ ಕಳೆ. 



ಹೂ ಬಿಡುವ ಸಾಂಕ್ರಾಮಿಕ ರೋಗ!

ಬಿದಿರು ಹೂಬಿಟ್ಟು  ಸಾಯುವ ಪ್ರಕ್ರಿಯೆಯಲ್ಲಿ ಮೂರು ಪ್ರಕಾರವನ್ನು ಗುರುತಿಸಬಹುದು. 60ರಿಂದ 130 ವರ್ಷದ ನಡುವಿನ ಅವಧಿಯಲ್ಲಿ ಹೂ ಕಾಣಿಸಿಕೊಂಡರೆ ಅದು ಇಡೀ ಕಾಡನ್ನೂ ವ್ಯಾಪಿಸುತ್ತದೆ. ಸಾಂಕ್ರಾಮಿಕವಾಗಿ  ಪ್ರತಿಯೊಂದು ಗಿಡದಲ್ಲಿಯೂ ಹೂ ಕಾಣಿಸಿಕೊಳ್ಳುತ್ತದೆ. ಹೂವು ಮತ್ತು ಬಿದಿರಕ್ಕಿ (ಬೀಜ)ಯಿಂದಲೇ  ಕಾಡೆಲ್ಲಾ ತುಂಬಿಹೋಗುತ್ತದೆ. ಇದರ ಒತ್ತಡಕ್ಕೆ ಸಂಪೂರ್ಣ ಬಿದಿರಿನ ಕಾಡೇ ನಾಶವಾಗುತ್ತದೆ. ವಿಚಿತ್ರವೆಂದರೆ ಒಂದು ನಿರ್ದಿಷ್ಟ ಪ್ರಭೇದದ ಬಿದಿರಿನಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಈ  ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಏಷ್ಯಾದಲ್ಲಿ ಸಾವನ್ನಪ್ಪಿದ ಬಿದಿರಿನ ಪ್ರಭೇದ ಅಮೆರಿಕ ಅಥವಾ ಆಫ್ರಿಕಾದಲ್ಲಿಯೂ ಅದೇಕಾಲಕ್ಕೆ ಸಾವನ್ನಪ್ಪುತ್ತದೆ. ಇಂತಹ ವಿದ್ಯಮಾನ ಅಪರೂಪದಲ್ಲಿ ಅಪರೂಪಕ್ಕೊಮ್ಮೆ ಸಂಭವಿಸುತ್ತದೆ.
ಇನ್ನೊಂದು ಪ್ರಕ್ರಿಯೆಯಲ್ಲಿ ಹೂ ಬಿಟ್ಟ ಬಳಿಕ ಸಂಪೂರ್ಣ ಕಾಡಿಗೆ ವ್ಯಾಪಿಸದೇ ಒಂದು ಬಿದಿರಿನ ಹಿಂಡು ಅಥವಾ ಜಾತಿ ಮಾತ್ರ ನಾಶಹೊಂದುತ್ತದೆ. ಇದನ್ನು  ವಿರಳವಾಗಿ  ಹೂ ಬಿಡುವ ಪ್ರಕ್ರಿಯೆ ಎನ್ನಲಾಗುತ್ತದೆ. ಇದು ಪ್ರತಿ 10  ವರ್ಷಕ್ಕೊಮ್ಮೆ ನಡೆಯುತ್ತದೆ. ಇನ್ನು ಕೆಲವು ಬಿದಿರು ಗಿಡಗಳು ಪ್ರತಿವರ್ಷವೂ ಹೂ ಬಿಡುತ್ತವೆ. ಆದರೆ ಇದರಿಂದ ಮರಕ್ಕೆ ಯಾವುದೇ ಹಾನಿ ಅಥವಾ ಸಾವು ಸಂಭವಿಸುವುದಿಲ್ಲ.

ಬರಗಾಲದೊಂದಿಗೆ ನಂಟು!
ಬಿದಿರು ಹೂ ಬಿಟ್ಟರೆ ಅದನ್ನು ಬರಗಾಲಕ್ಕೆ ಹೋಲಿಸಲಾಗುತ್ತದೆ. ಉತ್ತರದ ಮಿಜೋರಂ, ಅರುಣಾಚಲ ಪ್ರದೇಶಗಳಲ್ಲಿ ಈ ಕ್ಷಾಮ ಆಗಾಗ ಸಂಭವಿಸುತ್ತಲೇ ಇರುತ್ತದೆ. ಏಕೆಂದರೆ ಮಿಜೋ ಬೆಟ್ಟಗಳ ತುಂಬೆಲ್ಲಾ ಬಿದಿರೇ ತುಂಬಿದೆ. ಇಲ್ಲಿ ಕೇವಲ ಎರಡು ಪ್ರಭೇದಗಳು ಮಾತ್ರ ಇವೆ. ಒಂದು ಪ್ರಭೇವು 30 ವರ್ಷಕ್ಕೊಮ್ಮೆ ಹೂ ಬಿಟ್ಟು ಬೀಜವಾಗುತ್ತದೆ. ಮತ್ತೊಂದು 50 ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಇಲ್ಲಿ 1959ರಲ್ಲಿ ಭೀಕರ ಕ್ಷಾಮ ಕಾಣಿಸಿಕೊಂಡಿತ್ತು. ಬಳಿಕ 2002ರಲ್ಲಿ ಇಲ್ಲಿ ಬಿದಿರು ಕ್ಷಾಮ ಉಂಟಾಗಿತ್ತು. ಬಿದಿರು ಹೊಲದ ಇಂತಹುದೇ ಕಾಡು ಸುಗ್ಗಿ 45 ವರ್ಷಗಳ ಹಿಂದೆ ಕನರ್ನಾಟದಲ್ಲಿಯೂ ಆದ ಉದಾಹರಣೆಗಳಿವೆ. ಜಪಾನ್ ಮತ್ತು ಮ್ಯಾನ್ಮಾರ್ಗಳಂತ ಪೂರ್ವ ರಾಷ್ಟ್ರಗಳಲ್ಲಿ ಈ ಕ್ಷಾಮ ಕಾಣಿಸುತ್ತಿರುತ್ತವೆ. 


ಅಪಾಯದ ಮುನ್ಸೂಚನೆ?
ಹಿಂದೆಲ್ಲಾ ಕಾಡಿನಲ್ಲಿ ಬಿದಿರು ಹೂವರಳಿಸಿದಂತೆ ಇತ್ತ ಕಾಡಿನ ಜನ ವಿವಿಧ ರೋಗರುಜಿನೆಗಳಿಗೆ ತುತ್ತಾಗುತ್ತಿದ್ದರು. ಹೀಗಾಗಿ ಬಿದಿರು ಹೂ ಭವಿಷ್ಯದ ಅಪಾಯದ ಸಂಕೇತ ಎನ್ನುವ ನಂಬಿಕೆ. ಹೀಗೆ ಹೂ ಬಿಟ್ಟಾಗ ಕ್ವಿಂಟಾಲ್ಗಟ್ಟಲೆ ಬೀಜ ಉದುರುತ್ತದೆ. ಬಿದರಕ್ಕಿ ತಿಂದು ಇಲಿಗಳು ಬೆಳೆಯುತ್ತವೆ, ನಂತರ ಪ್ಲೇಗ್ ಬರುತ್ತಿದ್ದ ಕತೆಗಳನ್ನು ನಾವು ಕೇಳಿದ್ದೇವೆ. ರೋಗದಿಂದ ಹಳ್ಳಿಗಳೇ ಖಾಲಿಯಾಗುತ್ತಿದ್ದವು. ಅಪಾರ ಸಾವುನೋವುಗಳು ಉಂಟಾಗುತ್ತಿದ್ದವು. ಆದರೆ, ಬಿದಿರು ಹೂವರಳಿಸಿದ್ದಕ್ಕೆ ಬರಗಾಲ ಬಂದ ಅಧಿಕೃತ ದಾಖಲೆಗಳು ತೀರಾ ಅಪರೂಪ. 1963ರಲ್ಲಿ ಬಿದಿರು ಹೂವರಳಿದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಅನಾಹುತವಾಗಿತ್ತು. ಹೀಗಾಗಿ ಬಿದಿರು ಹೂವರಳುವ  ಪೂರ್ವದಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿದಿರನ್ನು ಕಡಿಯಲಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.