ಜೀವನಯಾನ

Monday, May 21, 2012

ಗೀಜಗ ಹಕ್ಕಿಯ ಗೂಡು ಕಟ್ಟುವ ಸೋಜಿಗ!

ಗೂಡು ಹೆಣೆಯುವುದರಲ್ಲಿ ಗೀಜಗನನಿಗೆ ಎಷ್ಟೊಂದು ಶೃದ್ಧೆ, ಆಸಕ್ತಿ. ನಿಗಕ್ಕೂ ಆಶ್ಚರ್ಯಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಶಿಸಲು. ತನ್ನದಾದ ಒಂದು ಪುಟ್ಟ ಸಂಸಾರ ಹೂಡಲು. ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ. ಇಕ್ಕಳದಂಹ ತನ್ನ ಚಿಕ್ಕ ಚುಂಚಿನಲ್ಲಿ ಸಟಸಟನೆ ನೇಯುವ ಇದರ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಾಗಲಾರದು. ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದು ಕೊಳ್ಳುತ್ತದೆ. ಇದರ ರಚನೆಯನ್ನು ಅರ್ಥ ಮಾಡಿಕೊಳ್ಳಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ.

ಆಫ್ರಿಕ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುವ ಗೀಜಗ
ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಆದರೆ ಇದರ ಗೂಡು 30 ರಿಂದ 60 ಸೆಂಟಿಮೀಟರ್ನಷ್ಟು ಉದ್ದವಿರುತ್ತದೆ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ. 

ಗೀಜಗನ ಕಾಲೊನಿ
ಸಾಮಾನ್ಯವಾಗಿ ಭತ್ತದ ತೆನೆಕಟ್ಟುವ ಸಮಯದಲ್ಲಿ ಚಿ..ಚಿ...ಚಿವ್...ಚಿವ್ ಎಂದು ಹಾಡಿಕೊಂಡು ಗಂಡು ಹಕ್ಕಿಗಳು ಒಟ್ಟಾಗಿ ಗೂಡು ಕಟ್ಟುತ್ತವೆ. ಜೌಗು ಪ್ರದೇಶ, ಕೃಷಿ ಭೂಮಿಗಳ ಸುತ್ತಮುತ್ತ ಜಾಲಿ-ಮುಳ್ಳುಕೊಂಬೆ, ತಾಳೆಮರದ ಎಲೆಗಳಿಗೆ ಜೋಕಾಲಿಯಂತೆ ಗೂಡುಗಳು ತೇಲಾಡುತ್ತಿರುತ್ತವೆ.  ಜೊಂಡು ಹುಲ್ಲು, ತೆಂಗಿನನಾರು ಮುಂತಾದ ಕಸಕಡ್ಡಿಗಳನ್ನು ಬಳಸಿ ಕಟ್ಟಿದ ಎರಡು ಅಂತಸ್ತಿನ ಈ ಗೂಡು ಎಂಥಾ ಬಿಸಿಲು ಮಳೆಗೂ ಜಗ್ಗದೇ ಮರದ ಕೊಂಬೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಕೆಲವೊಮ್ಮ ಒಂದೇ ಮರಕ್ಕೆ ಹತ್ತಾರು ಗೂಡುಗಳು ನೇತಾಡುತ್ತಾ ಅಲ್ಲಿ ಗೀಜಗನ ಕಾಲೋನಿಯೇ ನಿರ್ಮಾಣವಾಗಿರುತ್ತದೆ.
  
 ಗೂಡು ಕಟ್ಟುವ ಬಗೆ ಹೇಗೆ?

ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತುಬಿದ್ದರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಬೇಕು. ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಗೂಡು ಕಟ್ಟುತ್ತವೆ. ಗೀಜಗ ಗೂಡನ್ನು ಹಸಿರಾದ ಎಳೆಗಳಿಂದ ನಿರ್ಮಾಣ ಮಾಡುತ್ತದೆ. ಅವು ಒಣಗಿದ ನಂತರ ಕೆಂಪು ಬಣ್ಣಕ್ಕೆ ತಿರುತ್ತದೆ. ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷೀಸಿದ ನಂತರವೇ ಗೂಡಿಗೆ ಸೇರಿಸುತ್ತದೆ.  ಗಂಡುಹಕ್ಕಿ ಗೂಡನ್ನು ಅರ್ಧನಿರ್ಮಿಸಿದ ನಂತರ ಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ ಇಷ್ಟವಾಗದಿದ್ದರೆ ಪುನಃ ಹೊಸದಾಗಿ ಗೂಡನನ್ನು ಹೆಣೆಯುತ್ತದೆ ಬಡ ಗಂಡು ಹಕ್ಕಿ. ಗೂಡು ಹೆಣ್ಣುಹಕ್ಕಿಗೆ ಇಷ್ಟವಾದರೆ ಅದನ್ನು ಮುಂದುವರಿಸುತ್ತದೆ. ಗೂಡ ಅಪೂರ್ಣವಾಗಿರುವಾಗಲೇ ಹೆಣ್ಣು ಹಕ್ಕಿ ಗೂಡನ್ನು ಪ್ರವೇಶಿಸಿ ಮೊಟ್ಟೆಗಳನ್ನು ಇಡುತ್ತದೆ. ನಂತರ ಗಂಡು ಹಕ್ಕಿ ಗೂಡಿನಲ್ಲಿ ಇತರರು ಪ್ರವೇಶಿಸದ ಹಾಗೆ ಕೆಳಗಿನ ಬಾಯಿಯವರೆಗೆ ಗೂಡನ್ನು ಮುಚ್ಚಿಬಿಡುತ್ತದೆ. ವಿಚಿತ್ರವೆಂದರೆ ಗಂಡುಹಕ್ಕಿ ಗೂಡನ್ನು ಹೆಣೆದ ನಂತರ ಅದನ್ನು ಮರಿಗಳ ಪೋಷಣೆಗೇ ಮೀಸಲಿಟ್ಟು ತನಗಾಗಿ ಇನ್ನೊಂದು ಗೂಡನ್ನು ಹೆಣೆದುಕೊಳ್ಳುತ್ತದೆ. ತಾಯಿ ಮತ್ತು ಮರಿಗಳಿಗೆ ಆಹಾರವನ್ನು ಚುಂಚಿಲ್ಲಿ ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುವ ಕೆಲಸವನ್ನಷ್ಟೇ ಮಾಡುತ್ತದೆ. ಗೂಡಿನಲ್ಲಿ ಮರಿಗಳನ್ನು ಬೆಳೆಸಲು ಪ್ರತ್ಯೇಕ ಕೋಣೆಯನ್ನೇ ನಿರ್ಮಾಸುತ್ತದೆ. ಕೆಲವೊಮ್ಮೆ ಗೂಡನ್ನು ಗಟ್ಟುಮುಟ್ಟುಗೊಳಿಸುವ ಸಲುವಾಗಿ ಒದ್ದೆ ಮಣ್ಣುಗಳನ್ನು ತಂದು ಅಂಟಿಸುತ್ತದೆ. ಎಲ್ಲಾ ಕಾಲಕ್ಕೂ ಹವಾನಿಂತ್ರಿತ ವ್ಯವಸ್ಥೆ ಇದರ ಗೂಡಿನಲ್ಲಿರುತ್ತದೆ.  


Sunday, May 13, 2012

ಮಾಂಸ ಭಕ್ಷಕ ಸಸ್ಯಗಳ ಮಾಯಾ ಜಾಲ

ಹೊರನೋಟಕ್ಕೆ ಇತರ ಸಸ್ಯಗಳಂತಹದೇ ರೂಪ. ಹಸಿರು ತುಂಬಿದ, ಹೂ ಅರಳಿನಿಂತ ಗಿಡ. ಹಾಗೆಂದು ಇವು ನಮ್ಮ ಸುತ್ತಮುತ್ತಲಿನ ಗಡಗಳಂತೆ ಅಲ್ಲ. ಈ ಸಸ್ಯಗಳ ಜೀವನ ಕ್ರಮ ತೀರಾ ವಿಭಿನ್ನ, ವಿಚಿತ್ರ, ವಿಲಕ್ಷಣ  ಮತ್ತು ಭಯಾನಕ.  ಪರೊಕ್ಷವಾಗಿ ಇಡೀ ಜೀವ ಸಂಕುಲಕ್ಕೇ ಆಹಾರ ಒದಗಿಸುವ ಸಸ್ಯ ಸಾಮ್ರಾಜ್ಯದಲ್ಲಿ ಈ ಸಸ್ಯಗಳು ಮಾತ್ರ ಪ್ರಾಣಿ ಪೋಷಕವಲ್ಲ ಬದಲಾಗಿ ಮಾಂಸ ಭಕ್ಷಕಗಳು!

ಹಾಗೆಂದೊಡನೆ ಮಾಂಸಾಹಾರಿ ಸಸ್ಯಗಳು ಪ್ರಾಣಿಗಳನ್ನೆಲ್ಲಾ ಬೇಟೆಯಾಡಿ ತಿಂದು ಹಾಕುತ್ತವೆ ಎಂದು ಭಾವಿಸಬೇಕಾಗಿಲ್ಲ. ವಾಸ್ತವವಾಗಿ ಈ ಸಸ್ಯಗಳು ಹಿಡಿಯುವ ಜೀವಿಗಳೆಲ್ಲಾ ತೀರಾ ಸಣ್ಣ ಗಾತ್ರದವು. ಪ್ರಮುಖವಾಗಿ ನೊಣ, ದುಂಬಿ, ಜಿರಲೆ,  ಮಿಡತೆ ಇತ್ಯಾದಿ.  ಆದರೆ ಕಪ್ಪೆ,  ಹಲ್ಲಿ, ಓತಿಕ್ಯಾತ  ಮುಂತಾದ ಮಧ್ಯಮ ಗಾತ್ರದ ಪ್ರಾಣಿಗಳನ್ನೂ ತಿನ್ನಬಲ್ಲ ಸಸ್ಯಗಳು ಸಹ ಇವೆ. ಬಹುಮಟ್ಟಿಗೆ ಈ ಸಸ್ಯಗಳು ಕೀಟಗಳನ್ನೇ ಸರೆಹಿಡಿದು ಸೇವಿಸುವುದರಿಂದ ಇವುಗಳಿಗೆ ಕೀಟಾ ಹಾರಿ ಸಸ್ಯ ಎನ್ನುವ ಹೆಸರೂ ಇದೆ. 
ಇವು ಒಂದೇ ಜಾತಿಯ ಪ್ರಭೇದಗಳಿಗೆ ಸೇರಿಲ್ಲ. ಇಬ್ಬನಿಗಿಡ, ಹೂಜಿಗಿಡ, ವೀನಸ್ ಫ್ಲೈಟ್ರಾಪ್, ಬ್ಲಾಡರ್ ವರ್ಟ್ ಇತ್ಯಾದಿ ಆರುನೂರಕ್ಕೂ ಹೆಚ್ಚು ಜಾತಿಯ ಮಾಂಸಾಹಾರಿ ಸಸ್ಯಗಳ ವಿಶಿಷ್ಟ ವರ್ಗಗಳಿವೆ. ಈ ವಿಲಕ್ಷಣ ಸ್ವಭಾವದಿಂದಲೇ ಅವು  ಕುಖ್ಯಾತ. ಮಾಂಸಾಹಾರಿ ಸಸ್ಯಗಳು ಪ್ರಾಣಿ ಬೇಟೆಯ ಕ್ರಮ ಎಂಥವರನ್ನೂ ಬೆರಗುಗೊಳಿಸುತ್ತದೆ.
   ಏಕೆ ಹೀಗೆ?

ಮಣ್ಣು ತುಂಬಾ ನಿಸ್ಸಾರವಾಗಿರುವ ಅಥವಾ ಪೌಷ್ಟಿಕಾಂಶವಿಲ್ಲದ. ನಿಸ್ಸಾರವಾಗಿರುವ, ಅದರಲ್ಲೂ ಸಾರಜನಕದ ಅಂಶವಿಲ್ಲದಿರುವ ಜೌಗು ಪ್ರದೇಶದಲ್ಲಿ ಮಾಸಾಹಾರಿ ಸಸ್ಯಗಳು ಕಂಡುಬರುತ್ತವೆ. ಈ ರೀತಿಯ ಮಾಂಸಾಹಾರಿ ಸಸ್ಯಗಳ ಕುರಿತು ಮೊದಲ ಬಾರಿಗೆ ಅಧ್ಯಯನ ಮಾಡಿ ಪುಸ್ತಕ ಬರೆದ ವಿಜ್ಞಾನಿ ಚಾಲ್ಸ್ ಡಾರ್ವಿನ್.  ಈ ವರ್ಗದ ಸಸ್ಯಗಳು ಕೀಟಗಳ ಮಾಂಸವನ್ನು ಆಹಾರವಾಗಿ ಸೇವಿಸುವುದಿಲ್ಲ. ಇತರ ಸಸ್ಯಗಳಂತೆ ಇವೂ ಸಹ ದ್ಯುತಿ ಸಂಶ್ಲೇಷಣೆಯಿಂದಲೇ ಆಹಾರ ಉತ್ಪಾದಿಸುತ್ತವೆ. ಆದರೆ ಮಾಂಸಾಹಾರಿ  ಸಸ್ಯಗಳು ಅವು ಪಡೆದ ಮಾಂಸಾಹಾರದಿಂದ ಸಾರಜನಕ ಮತ್ತು ರಂಜಕ ಅಂಶಗಳನ್ನು ಸೆಳೆದು ದ್ಯುತಿ ಸಂಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. 

ನಿಂತಲ್ಲೇ  ವೈರಿಗಳನ್ನು ಆಕರ್ಶಿಸಿ ಕೊಂದು ಹಾಕುವ ಇವುಗಳ ತಂತ್ರವೇ ಸೋಜಿಗ. ಆಶ್ಚರ್ಯವೆಂದರೆ ಪ್ರತಿಯೊಂದು ಜಾತಿಯ ಸಸ್ಯವೂ ವಿಭಿನ್ನ ರೀತಿಯಲ್ಲಿ ಬೇಟೆಯಾಡುತ್ತವೆ. ಇವುಗಳಿಗೆ ಕೆಲವು ಉದಾಹರಣೆ ಇಲ್ಲಿದೆ.
 
ಇಬ್ಬನಿ ಗಿಡ.

ಈ ಮಾಂಸಾಹಾರಿ ಗಿಡದ ಎಲೆಗಳ ತುಂಬ ತಂತುಗಳು ಚಾಚಿನಿಂತಿರುತ್ತವೆ. ಪ್ರತಿ ತಂತುವಿನ ತುದಿಯಲ್ಲೂ ದ್ರವರೂಪದ ಅಂಟು ಹನಿ ತಾಕಿಕೊಂಡಿರುತ್ತದೆ.  ಇಬ್ಬನಿಯ  ಹನಿಯಂತೆ ಕಾಣುವ ಈ ಜಲದ ಸೆಲೆಯ ಸುತ್ತ ಹಾರಿಬರುವ, ಬಾಯಾರಿದ ಕೀಟಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲೇ ಬಂಧಿಯಾಗಿ ಇಬ್ಬನಿ ಗಿಡಕ್ಕೆ  ಆಹಾರ ವಾಗುತ್ತವೆ.

ಹೂಜಿ ಗಿಡ.
ಈ ಗಿಡದ ಎಲೆಗಳು ನೋಡಲು  ಕೊಳವೆಯಾಕಾರದ ಉದ್ದ ಕತ್ತಿನ ಮುಚ್ಚಳವಿರುವ  ಹೂಜಿಯಂತೆ ಕಾಣುತ್ತವೆ. ಹೂಜಿಯ  ತೆರೆದ ಅಂಚಿನ ಆಸುಪಾಸಿನಿಂದ ಆಕರ್ಶಕ ದೃವ್ಯ ಹೊರಸೂಸುತ್ತದೆ.  ಇದನ್ನು ಸವಿಯಲು ಬರುವ ಕೀಟಗಳು ಹೂಜಿಯಲ್ಲಿ  ಸಿಕ್ಕಿಹಾಕಿಕೊಳ್ಳುತ್ತವೆ. ಹೂಜಿಯಲ್ಲಿ ಜಾರಿ ಬೀಳುವ ಕಪ್ಪೆಗಳನ್ನೂ ಜೀಣರ್ಿಸಿಕೊಳ್ಳುತ್ತದೆ ಈ ಸಸ್ಯ.

ವೀನಸ್ ಫ್ಲೈಟ್ರಾಪ್.

 ಇಬ್ಬಾಗಗೊಂಡ ರಚನೆಯ, ಮಡಿಸಿಕೊಳ್ಳಬಲ್ಲ ವಿನ್ಯಾಸದ ಎಲೆಗಳನ್ನು ಹೊಂದಿದೆ. ಪ್ರತೀ ಎಲೆಯ  ಅಂಚಿನುದ್ದಕ್ಕೂ ಸೂಕ್ಷ್ಮ  ಸಂವೇದಿ ತಂತುಗಳು ಇರುತ್ತವೆ. ಬಲಿಯೊಂದು  ಈ ತಂತುನ್ನು  ಸ್ಪರ್ಶಿಸಿದಾಗ ಸಸ್ಯದಲ್ಲಿ ವಿದ್ಯುತ್ ಆವೇಶ ವಿಸರ್ಜನೆಗೊಂಡು ಕ್ಷಣಾರ್ಧದಲ್ಲಿ ಎಲೆಗಳನ್ನು ಭದ್ರವಾಗಿ ಮಡಿಸಿಕೊಳ್ಳುತ್ತವೆ. ಬಲಿಪ್ರಾಣಿ ಅದರೊಳಗೆ ಬಂಧಿಯಾಗುತ್ತದೆ.

ಗಾಳಿಗುಳ್ಳೆಯ ಗಿಡ.

ನೀರು ಕುಡಿದ ನಿಷ್ಪ್ರಯೋಜಕ ನೆಲದಲ್ಲಿ ಬೆಳೆಯುತ್ತವೆ. ಈ  ಸಸ್ಯಗಳು ಹೀರಿಕೊಳ್ಳುವ ನೀರಿನಿಂದ ನಿರ್ವಾತ ಗುಳ್ಳೆಗಳನ್ನು ಸೃಷ್ಟಿಸುತ್ತವೆ. ಕೀಟಗಳನ್ನು ಈ ಗುಳ್ಳೆಗಳು ತನ್ನೊಳಗೆ ಎಳೆದು ಕೊಳ್ಳುತ್ತವೆ. 
ಮಾಂಸಾಹಾರಿ ಗಿಡಗಳ ವಿವಿಧ ರೀತಿಯ ಬೇಟೆಯಾಡುವ ತಂತ್ರಗಳಿಗೆ ಇವು ನಿದರ್ಶನಗಳಷ್ಟೇ. ಇಂಥಹ ಅನೇಕ ರೋಚಕ ವಿಧಾನಗಳನ್ನು ಈ ಸಸ್ಯಗಳು ಅನುಸರಿಸುತ್ತವೆ.
  

Friday, May 4, 2012

ಕತ್ತಲನ್ನು ಬೆಳಗುವ ಮಿಣುಕುಹುಳ

ಕತ್ತಲ ರಾತ್ರಿಯಲ್ಲಿ ಮೆಲ್ಲನೆ ಹಾರಾಡುತ್ತಾ ಕತ್ತಲ ತೆರೆಯನ್ನು ಸರಿಸುವ ಹುಳಗಳಿವು. ತನ್ನ ಬೆಳಕಿನಿಂದ ಕಾಡನ್ನೆಲ್ಲಾ ಬೆಳಗುತ್ತವೆ. ಕಾಡಿನ ತುಂಬೆಲ್ಲಾ ಬೆಳಕಿನ ಚಿತ್ತಾರ ಮೂಡಿಸಿ ಒಮ್ಮಲೇ ಮೆರೆಯಾಗುತ್ತವೆ. ರಾತ್ರಿಯಾಗುತ್ತಿದಂತೆ ಬ್ಯಾಟರಿ ಹಿಡಿದು ಹಾಜರಾಗುವ ಈ ಅತಿಥಿಯೇ ಮಿಣುಕುಹುಳ. 


 ದೇಹದಿಂದ ಬೆಳಕನ್ನು ಉತ್ಪಾದಿಸುವುದರಿಂದ ಇವುಗಳಿಗೆ ಮಿಣುಕುಹುಳ ಎನ್ನುವ ಹೆಸರು ಬಂದಿದೆ. ಮಿಣುಕುಹುಳ ಬೆಳಕನ್ನು ಉತ್ಪತ್ತಿಮಾಡುವ ಪ್ರಕ್ರಿಯೆಯೇ ಅದ್ಭುತ. ಉಷ್ಣತೆಯನ್ನು ಉತ್ಪಾದಿಸದೇ ಶಕ್ತಿಯನ್ನು ಪೂರ್ತಿಯಾಗಿ ಬೆಳಕನ್ನಾಗಿ ಪರಿವರ್ತಿಸುವ ಮಿಣುಕು ಹುಳಗಳ ರಹಸ್ಯವನ್ನು ಆಧುನಿಕ ಜಗತ್ತು ಇನ್ನೂ ಬೇಧಿಸಿಲ್ಲ. ಮಿಣುಕು ಹುಳಗಳು ತಾವು ವ್ಯಯಿಸುವ ಶಕ್ತಿಯ ಸುಮಾರು ಶೇ. 10 ರಷ್ಟನ್ನು ಬೆಳಕನ್ನಾಗಿ ಪರಿವರ್ತಿಸುತ್ತವೆ. ಇವುಗಳ ಈ ಪ್ರಕ್ರಿಯೆ ಇಂದಿಗೂ ಒಂದು ಅಚ್ಚರಿಯಾಗಿಯೇ ಉಳೀದುಕೊಂಡಿದೆ.  ಒಂದು ವೇಳೆ ಈ ರಹಸ್ಯ ಬೇಧಿಸಿದರೆ ಈಗಿರುವ ಬಲ್ಬು, ಟ್ಯೂಬ್ಲೈಟುಗಳು ಬೀರುರ ಬೆಳಕನ್ನು ಇನ್ನಷ್ಟು ಉತ್ತಮಗೊಳಿಸಬಹುದು.

ಮಿಣುಕು ಹುಳಗಳು ಜೀರುಂಡೆಯ ಜಾತಿಗೆ ಸೇರಿದ ಕೀಟಗಳಾಗಿವೆ. ಇದರಲ್ಲಿ 2 ಸಾವಿರಕ್ಕೂ ಹೆಚ್ಚಿನ ಜಾತಿಗಳಿವೆ. ಅಧಿಕ ಉಷ್ಣಾಂಶವಿರುವ ಏಷ್ಯಾ ಮತ್ತು ಉತ್ತರ ಅಮೆರಿಕಗಳಲ್ಲಿ ಇವು ಕಂಡುಬರುತ್ತವೆ. ಮಳೆಗಾಲದಲ್ಲಿ ಇವುಗಳ ಹಾರಾಟ ಸರ್ವೇಸಾಮಾನ್ಯ. ಇವುಗಳ ಗಾತ್ರ ಕೇವಲ ಒಂದು ಇಂಚು. 

 
  • ಬೆಳಕು ಹೇಗೆ ಉತ್ಪತ್ತಿಯಾಗುತ್ತದೆ?

 ಮಿಂಚು ಹುಳುಗಳಿಗೆ ಹೊಟ್ಟೆಯ ಕೆಳ ಭಾಗದಲ್ಲಿ ಬೆಳಕನ್ನು ಉತ್ಪಾದಿಸುವ ಒಂದು ವಿಶಿಷ್ಟವಾದ ಅಂಗವಿದೆ. ಇದರಲ್ಲಿರುವ ವಿಶೇಷ ಕೋಶಗಳು ಆಮ್ಲಜನಕ ಮತ್ತು ಶಕ್ತಿಯನ್ನು ಶಾಖರಹಿತ ಬೆಳಕನ್ನಾಗಿ ಪರಿವರ್ತಿಸುತ್ತವೆ. ಇವುಗಳ ದೇಹದಿಂದ ಹಳದಿ ಬಣ್ಣದ ಬೆಳಕು ಮಿನುಗುತ್ತಿರುತ್ತದೆ. ಮಿಣುಕುಹುಳುಗಳು  ದೇಹದ ಆಂತರ್ಯದಿಂದಲೇ ಬೆಳಕನ್ನು ಉತ್ಪತ್ತಿ ಮಾಡುತ್ತವೆ. ಈ ಕ್ರಮ ಒಂದೊಂದು ಜಾತಿಯ ಮಿಣುಕು  ಹುಳುಗಳಲ್ಲಿ  ಒಂದೊಂದು ತೆರನಾಗಿರುತ್ತದೆ.  ತಮಗೆ ಬೇಕಾದಾಗ ಮಾತ್ರ  ಬೆಳಕನ್ನು ಬೀರಿ ಬೇಡವೆನಿಸಿದಾಗ ಬ್ಯಾಟರಿಯಂತೆ ಸ್ವಿಚ್ ಆಫ್ ಮಾಡತ್ತವೆ. ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ವಿಜ್ಞಾನಿಗಳು ಇನ್ನೂ ತಲೆ ಕೆಡಿಸಿಕೊಂಡಿದ್ದಾರೆ. ಇದರ ದೇಹದಿಂದ 50 ರಿಂದ 70 ಸೆಕೆಂಡ್ಗಳ ಕಾಲ ಬೆಳಕು ಕಾಣಿಸುತ್ತದೆ. ಗಾಳಿಯಲ್ಲಿ ಹಾರಾಡುವ ಚಿಕ್ಕ ಚಿಕ್ಕ ಕೀಟಗಳಾದ ಮಿಂಚುಹುಳಗಳು ನಮಗೆಲ್ಲಾ ಹೆಚ್ಚು ಪರಿಚಿತ. ನೆಲದ ಮೇಲೆ ವಾಸಿಸುವ ಮಿಂಚುಹುಳಗಳೂ ಹಲವು ಇವೆ.
 
ಬೆಳಕು ಉತ್ಪಾದಿಸಬಲ್ಲ ಇತರ ಜೀವಿಗಳು
 ಮಿಂಚುಹುಳಗಳಂತೆಯೇ ಬೆಳಕನ್ನು ಉತ್ಪಾದಿಸಬಲ್ಲ ಇನ್ನೂ ಹಲವಾರು ಜೀವಿಗಳು ಕರ್ನಾಟಕದ ಸೈಹಾದ್ರಿಯ ಕಾಡುಗಳಲ್ಲಿವೆ ಅಂದರೆ ಅಚ್ಚರಿಯೇ? ಕೆಲವು ಅಣಬೆಗಳೂ ಬೆಳಕನ್ನು ಬೀರುತ್ತವೆ. ತುಂಬಾ ಹಳೆಯ ಮರದ  ಮೇಲೆ ಬೆಳೆಯಬಲ್ಲ ಅಣಬೆಗಳು ಕೆವೊಮ್ಮೆ ಇಡೀ ಮರವನ್ನು ಆಕ್ರಮಿಸಿ ಮರಕ್ಕೆ ಮರವೇ ಜಗಮಗನೆ ಹೊಳೆಯುವ ಭ್ರಮೆ ಮೂಡಿಸುತ್ತವೆ. ಲಡ್ಡು ಮರದ ಮೇಲೆ ಬೆಳೆದ ನೂರಾರು ಅಣಬೆಗಳಿಂದಾಗಿ ಈ ಬೆಳಕು ಎಂದು ಅರಿವಾಗಲು ಬೆಳಗಿನ ತನಕ  ಕಾಯಬೇಕು.
ಬೆಳಕನ್ನು  ಉತ್ಪಾದಿಸಬಲ್ಲ ಇನ್ನೊಂದು ಜೀವಿಯೆಂದರೆ ಸರಸ್ವತಿ ಚೇಳು. ನಾಲ್ಕಾರು ಸೆಂಟಿಮೀಟರ್ ಉದ್ದವಿರುವ ದಟ್ಟ ಹಸಿರು ಬಣ್ಣದ ತೆಳ್ಳನೆಯ ಈ ಹುಳು ನೋಡಲು ಎರೆಹುಳುಗಳನ್ನು ಹೋಲುತ್ತದೆ. ರಾತ್ರಿ ಹೊತ್ತು ಮನೆಯೊಳಗೆ ಬಂದ ಈ ಅತಿಥಿಯನ್ನು ಅಕಸ್ಮಾತ್ ಮುಟ್ಟಿದರೆ ಅಥವಾ ಕಡ್ಡಿಯಿಂದ ದೂಡಿದರೆ ಅದರ ದೇಹ ಬೆಳಕು ಬೀರಲು ಆರಂಭಿಸುತ್ತದೆ. ಇದೊಂದು ಸಂರಕ್ಷಣೆಯ ತಂತ್ರ. ವಿದ್ಯುತ್ ದೀಪಗಳ ಬಳಕೆ ಬಂದನತರ ಹೊಳೆಯುವ ಮೈನ  ಸರಸ್ವತಿ ಚೇಳಿನ ನೋಟ ಅಪರೂಪವಾಗುತ್ತಿದೆ.  ಸಮುದ್ರದಲ್ಲಿ ಕೂಡಾ ಕೆಲವು ಜೀವಿಗಳು ಬೆಳಕು ಬೀರಬಲ್ಲವು. ಒಂದು  ಜಾತಿಯ ಪಾಚಿ, ಕೆಲವು  ಮೀನುಗಳು ಬೆಳಕು ಬೀರುವ ಜಲವಾಸಿಗಳು.

Tuesday, May 1, 2012

ಎಂಥವರನ್ನೂ ತೇಲಿಸುವ ಮೃತ ಸಮುದ್ರ


ಇಲ್ಲಿ ಸಮುದ್ರಕ್ಕೂ ಸಾವು ಬಂದಿದೆ. ಲಕ್ಷಾಂತರ ಜಲಚರಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿರುತ್ತದೆ ಸಮುದ್ರ. ಆದರೆ ಇಲ್ಲಿ ಒಂದೇ ಒಂದು ಜೀವಿಯೂ ಇಲ್ಲ. ಬದುಕಲು ಸಾಧ್ಯವೂ ಇಲ್ಲ. ಈ ಸಮುದ್ರ ಸತ್ತು 30 ಲಕ್ಷ ವರ್ಷಗಳಾಗಿದೆ. ಇಂಥ ಸಮುದ್ರವನ್ನು ನೋಡಬೇಕಾದದರೆ ಇಸ್ರೇಲ್ ಮತ್ತು ಜೋರ್ಡನ್ ದೇಶಕ್ಕೆ ಹೋಗಬೇಕು. ಈ ಎರಡು ದೇಶಗನ್ನು ಹಂಚಿ ಹಾಕಿರುವ ಈ ಸಮುದ್ರ ತನ್ನ ಮಟ್ಟಕ್ಕಿಂತಲೂ 400 ಮೀಟರ್ನಷ್ಟು ಕೆಳಗೆ ಇದೆ. 


  • ಹಿಂದಕ್ಕೆ ಸರಿಯುತ್ತಿರುವ ಸಮುದ್ರ
ನಿಜ ಹೇಳಬೇಕೆಂದರೆ ಇದು ಸಮುದ್ರವೇ ಅಲ್ಲ. ಇದೊಂದು ಉಪ್ಪು ನೀರಿನ ಬೃಹತ್ ಸರೋವರ. ಇದು 67 ಕಿ.ಮೀ. ಉದ್ದ ಮತ್ತು 18 ಕಿ.ಮೀ ಅಗಲವಾಗಿದೆ. ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಈ ತಾಣದಲ್ಲಿ ನೀರು ಮುಂದೆ ಹರಿದು ಹೋಗಲು ಅವಕಾಶವೇ ಇಲ್ಲ. ಚಲನೆ ಇಲ್ಲದ ನೀರು ಆವಿಯಾದಂತೆಲ್ಲಾ ಲವಣಾಂಶ ದಟ್ಟವಾಗುತ್ತಾ ಹೋಗುತ್ತದೆ. ಇಲ್ಲಿನ ನೀರು ಮನುಷ್ಯನನ್ನು ತೇಲಿಸುವಷ್ಟು ದಪ್ಪ. ಕೈಯಲ್ಲಿ ಹಿಡಿದರೆ ಕೈಯೆಲ್ಲಾ ಎಣ್ಣೆ ಎಣ್ಣೆ. ಬಾಯಿ ಕತ್ತರಿಸುವಷ್ಟು ಉಪ್ಪು. ಇದರ ನೀರು ಸಾಗರಗಳ ನೀರಗಿಂತ 8.6 ರಷ್ಟು ಹೆಚ್ಚು ಉಪ್ಪಾಗಿದೆ.  ಇಲ್ಲಿ ನೀರು ಇಂಗುವುದಿಲ್ಲ. ಬದಲಾಗಿ ಪ್ರತಿನಿತ್ಯ 7 ಮಿಲಿಯನ್ ಟನ್ನಷ್ಟು ನೀರು ಆವಿಯಾಗುತ್ತದೆ.  ಆದರೆ ಲವಣದ ಅಂಶ ಹಾಗೆಯೇ ಉಳಿದುಕೊಳ್ಳುತ್ತದೆ. ನೀರು ಆವಿಯಾಗುವ ಪ್ರಮಾಣ ಹೆಚ್ಚುತ್ತಿದ್ದು, ವರ್ಷಕ್ಕೆ ನಾಲ್ಕು ಮೀಟರನಷ್ಟು ಸಮುದ್ರ ಹಿಂದಕ್ಕೆ ಸರಿಯುತ್ತಿದೆ.  ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮೃತ ಸಮುದ್ರ ಪೂರ್ಣವಾಗಿ ಬತ್ತಿಹೋಗಿ ಭೂಮಿಯ ಮೇಲಿಂದ ಮಾಯವಾಗುವ ಭೀತಿ ಇದೆ.   
  • ಬಿದ್ದು ಕೊಂಡರೆ ತೇಲಿಸುತ್ತದೆ
ಈ ನೀರಿಲ್ಲಿ ಖನಿಜಾಂಶಗಳು ಹೇರಳವಾಗಿವೆ. ಕ್ಯಾಲ್ಸಿಯಂ, ಐಯೋಡೀನ್, ಪೊಟ್ಯಾಶಿಯಂ, ಸಲೈನ್ ಮುಂತಾದವುಗಳು ಕರಗಿಕೊಂಡಿವೆ. ಈಜಿಪ್ತಿಯನ್ನರು ಈ ಸಮುದ್ರದ ಮಣ್ಣನ್ನು ಮೃತ ದೇಹಗಳನ್ನು ಕೆಡದಂತೆ ಇಡಲು ಬಳಸುತ್ತಿದ್ದರು. ಸತ್ತ ಸಮುದ್ರದಲ್ಲಿ ತೇಲುವುದು, ಸಮುದ್ರದ ಆಳದಿಂದ ತೆಗೆದ ಕಪ್ಪು ಮಣ್ಣಿನ್ನು ಮೈಗೆಲ್ಲಾ ಮೆತ್ತಿಕೊಳ್ಳುವುದರಿಂದ ಮೈಕಾಂತಿ ಹೆಚ್ಚುತ್ತಂತೆ. ಆದರೆ ನೀರಿಗೆ ಇಳಿಯುವಾಗ ಎಚ್ಚರ. ಒಂದು ಸಾರಿ ನೀರಿಗೆ ಇಳಿದರೆ ಮೇಲೆ ಬರಬೇಕು ಅನ್ನಿಸುವುದಿಲ್ಲ. ಈ ನೀರಿನಲ್ಲಿ 20 ನಿಮಿಷಕ್ಕಿಂತ ಹೆಚ್ಚುಹೊತ್ತು ಇರುವುದು ಕೂಡಾ  ಅಪಾಯ. ತೇಲಿಸುವ ಸಮುದ್ರ ದಂಡೆಯಲ್ಲಿ ಕೇವಲ 13 ಅಡಿಯಷು ಆಳವಿದ್ದರೆ ಸ್ವಲ್ಪ ದೂರ ಸಾಗಿದರೂ ಸಾಕು 1320 ಅಡಿಯಷ್ಟು ಆಳವಿದೆ. ಈ  ವೈಶಿಷ್ಟ್ಯದಿಂದಾಗಿ ಮೃತ ಸಮುದ್ರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕಶರ್ಶಿಸುತ್ತದೆ. ಲವಣಾಂಶ ಅಷ್ಟು ದಟ್ಟವಾಗುತ್ತಿರುವುದರಿಂದ ಕೇವಲ ಬಿದ್ದು ಕೊಂಡರೆ ಸಾಕು ಮನುಷ್ಯ ತೇಲುತ್ತಾನೆ. ನೀರಿನಮೇಲೆ ಸರಾಗವಾಗಿ ತೇಲುತ್ತಾ ಕಾಲಕಳೆಯುವುದು ಪ್ರವಾಸಿಗರಿಗೊಂದು ಮೋಜು.
  • ದಡದಲ್ಲಿ ಕಲ್ಲಿನ ಮೂಟೆ
ಮೃತ ಸಮುದ್ರ ಇರುವ ಪ್ರದೇಶ ಒಂದು ಮರುಭೂಮಿ. ಇಲ್ಲಿ ಯಾವಾಗಲೂ ಶುಷ್ಕ ಹವೆ. ಬೇಸಿಗೆಯಲ್ಲಿ ಉಷ್ಣಾಂಶ 34 ರಿಂದ 51 ಡಿಗ್ರಿ ಇರುತ್ತದೆ. ಇಲ್ಲಿ ಮಳೆಯ ಪ್ರಮಾಣ ಅತ್ಯಲ್ಪ. ವರ್ಷಕ್ಕೆ ಸರಾಸರಿ 100 ಮಿಲಿ ಮೀಟರ್ನಷ್ಟು ಮಳೆಯಾದರೆ ಹೆಚ್ಚು. ಹೀಗಾಗಿ ಮೃತ ಸಮುದ್ರಕ್ಕೆ ಸಿಹಿನೀರು ಹರಿದು ಬರುವುದು ತೀರಾವಿರಳ. ಇದರ ಕಠು ಉಪ್ಪುನೀರು ಬಂಡೆಗಳನ್ನು ಕೊರೆದು ದಡದತ್ತ ಸಾಗಿಸುತ್ತದೆ. ಹೀಗಾಗಿ ದಡದ ಸುತ್ತಲೂ ಕಲ್ಲುಗಳ ರಾಶಿಯೇ ಬಿದ್ದಿರುತ್ತದೆ. ಅವುಗಳಿಗೆ ಮೆತ್ತಿಕೊಂಡಿರುವ ಉಪ್ಪು ಬಿಸಿಲಿಗೆ ಮತ್ತಿನಂತೆ ಹೊಳೆಯುತ್ತದೆ.
  • ಪ್ರಕೃತಿ  ಚಿಕಿತ್ಸಾಲಯ
ಇದರ ನೀರಿಗೆ ಔಷಧಿಯ ಗುಣವಿದೆ. ಮಾಲಿನ್ಯವಿಲ್ಲದ  ಶುಭ್ರವಾತಾವರಣ, ಕಡಿಮೆ ಇರುವ ನೇರಳಾತೀತ ಕಿರಣ,  ತಗ್ಗಿನಲ್ಲಿರುವುದರಿಂದ ಅತಿಯಾದ ಗಾಳಿಯ ಒತ್ತಡ ಮಾನವರ  ಕಲವು ವ್ಯಾಧಿಗಳನ್ನು ಶಮನಮಾಡಬಲ್ಲವು. ಮೃತ ಸಮುದ್ರದ ಪರಿಸರದಲ್ಲಿ ದೊಡ್ಡ ಸಂಖ್ಯೆಯ ಪ್ರಕೃತಿ ಚಿಕಿತ್ಸಾಲಯಗಳು ನಿಮರ್ಮಾಣಗೊಳ್ಳುತ್ತಿವೆ. ಉಳಿದಂತೆ ಉಪ್ಪು ಮತ್ತು ಇತರ  ಲವಣಗಳ  ಉತ್ಪಾದನೆ ಮೃತ ಸಮುದ್ರ ಪ್ರದೇಶದ ಮುಖ್ಯ ಉದ್ದಿಮೆ. ಒಂದು ಕಾಲದಲ್ಲಿ ಜನವಸತಿಯೇ ಇಲ್ಲದ ಪ್ರದೇಶ ಇಂದು ಪ್ರವಾಸಿಗರಿಂದ ಗಿಜಿಗುಟ್ಟುತ್ತಿದೆ.