ಜೀವನಯಾನ

Monday, January 30, 2012

ಜೇಡ .....


ಜೇಡ ನೆಯ್ದ ಬಲೆಯ ಕಲೆ !

ಜೇಡ ಜಗತ್ತಿನ ಎಲ್ಲಾ ಭಾಗಗಳಲ್ಲಿ ಕಂಡು ಬರುವ ಕೀಟ ಪ್ರಭೇದ. ಇದರಲ್ಲಿ ತರಹೇವಾರಿ ಜಾತಿಗಳಿವೆ. 350 ಮಿಲಿಯನ್ ವರ್ಷಗಳಿಂದ ಇವು ಭೂಮಿಯಲ್ಲಿ ವಾಸವಾಗಿವೆ. ಜಗತ್ತಿನಲ್ಲಿ 40 ಸಾವಿರ ಜಾತಿಯ ಜೇಡಗಳಿವೆ ಎಂದು ಅಂದಾಜಿಸಲಾಗಿದ್ದು, ಇದುವರೆಗೂ ಭಾರತದಲ್ಲಿ 1500 ಜಾತಿಯ ಜೇಡಗಳನ್ನು ಗುರುತಿಸಲಾಗಿದೆ.  ಇದುವರೆಗೂ ಭಾರತದಲ್ಲಿ 1500 ಜಾತಿಯ ಜೇಡಗಳನ್ನು ಗುರುತಿಸಲಾಗಿದೆ. ಜೇಡ ಎಲ್ಲೆಂದರಲ್ಲಿ ಬಲೆ ಕಟ್ಟುತ್ತದೆ. ಮರದ ತೊಗಟೆ, ಕೊಂಬೆ, ಎಲೆ ಗಿಡಗಂಟಿ, ಕಸ ಕಡ್ಡಿ ಹೀಗೆ ಇವು ಗೂಡು ಕಟ್ಟದ ಜಾಗವೇ ಇಲ್ಲ. ಕೊನೆಗೆ ಮನೆಯ ಗೋಡೆಯನ್ನೂ ಬಿಡುವುದಿಲ್ಲ. ಬಲೆ ನೆಯುವುದರಲ್ಲಿ ಹೆಸರುವಾಸಿಯಾದ ಜೇಡ ಪ್ರಕೃತಿಯ ನೇಕಾರ ಎಂದು ಹೆಸರು ಪಡೆದಿದೆ.
ಜೇಡನ ಬಲೆ : ಜೇಡ ತನ್ನ ಎಂಜಲಿನಿಂದ ಸುಂದರವಾದ ಬಲೆ ಹೆಣೆದು ಅದರ ಮಧ್ಯದಲ್ಲಿ ವಾಸಿಸುತ್ತದೆ. ಬಲೆಯಲ್ಲಿ ಸಿಲುಕಿದ ಹುಳಹಪ್ಪಟೆಗಳೆ ಇದರ ಆಹಾರ. ಇದರ ಹೊಟ್ಟೆಯಲ್ಲಿರುವ ರೇಷ್ಮೆಗ್ರಂಥಿಯಂತಹ ದ್ರವ ಗಾಳಿ ತಾಗಿದೊಡನೆ ಗಟ್ಟಿಯಾಗುತ್ತದೆ. ಬಲೆಯ ದಾರ ಕೂದಲಿಗಿಂತ ಸಣ್ಣದಾಗಿದ್ದರೂ, ಅಷ್ಟೇ ಸಣ್ಣದಾದ ಉಕ್ಕಿನ ದಾರದಂತಿರುತ್ತದೆ. ಜೇಡನ ಹುಳು 25 ವರ್ಷ ಜೀವಿತಾವಧಿಯನ್ನು ಹೊಒಂದಿವೆ. ಆದರೆ ಅವು ನೇಯುವ ಬಲೆಗಳು ಸಾವಿರಾರು ವರ್ಷಗಳವರೆಗೂ ಹಾಗೆಯೇ ಇರುತ್ತವೆ. ಎಲ್ಲಾ ಜೇಡಗಳೂ ಬಲೆ ನೇಯುವುದಲ್ಲ. ಕೆಲವು ಜೇಡಗಳು ಬೇಟಯನ್ನೂ ಆಡುತ್ತವೆ. ಮರದಮೇಲೆ ಅಂಟು ರಸವನ್ನು ಸ್ರವಿಸಿ ಬೇಟೆಗಾಗಿ ಹೊಂಚು ಹಾಕುತ್ತದೆ. ಗುಬ್ಬಿ ಚಿಟ್ಟೆ ಮುಂತಾದ ಚಿಕ್ಕಪುಟ್ಟ ಸಸ್ತನಿಗಳು ಇವುಗಳ ಮೇಲೆ ಕೂತಾಗ ಅಂಟು ಕಾಲಿಗೆ ಅಂಟಿ ಅಲ್ಲಿಯೇ ಜೋತು ಬೀಳುತ್ತವೆ ಈ ಸಂದರ್ಭದಲ್ಲಿ ಅವುಗಳನ್ನು ಜೇಡ ಬೇಟೆಯಾಡುತ್ತದೆ. ಅಂತಯೇ ಆತ್ಮ ರಕ್ಷಣೆಗೂ ಬಲೆಗಳು ನೆರವಾಗುತ್ತವೆ. 

ರಚನೆ : ಇದರ ದೇಹ ಎರಡು ಭಾಗಗಳನ್ನು ಒಳಗೊಂಡಿದೆ. ಬೆರೆಲ್ಲಾ ಕೀಟಗಳಿಗೆ ಆರು ಕಾಲಿದ್ದರೆ, ಇದಕ್ಕೆ ಎಂಟು ಕಾಲುಗಳು. ಕೀಟಗಳಿಗಿರುಂತಹ ತಲೆಯ ಮೇಲಿನ ಸ್ಪರ್ಶಾಅಂಗ  ಜೇಡಕ್ಕಿಲ್ಲ. ಎರಡು ಸಾಲುಗಳಲ್ಲಿರುವ ಎಂಟು ಕಣ್ಣುಗಳು ಇದರ ವೈಶಿಷ್ಟ್ಯ. ಗಂಡಿಗಿಂತ ಹೆಣ್ಣು ಜೇಡವೇ ಗಾತ್ರದಲ್ಲಿ ದೊಡ್ಡದು. ಸಾಮಾನ್ಯವಾಗಿ ಹೆಣ್ಣು ಜೇಡವೇ ಬಲೆ ನೇಯುತ್ತದೆ. ಕೀಟಗಳಿಗೆ ಅಂಟುವ ಜೇಡನ ಬಲೆ ಜೇಡನಿಗೆ ಮಾತ್ರ ಅಂಟದು.
ಜೇಡಗಳ ಪ್ರಣಯವೇ ವಿಶೇಷ.
ಇದರ ಮಿಲನವೆಂದರೆ ಗಂಡು ಜೇಡದ ಮರಣವೆಂದೇ ಅರ್ಥ. ಮಿಲನದ ನಂತರ ಗಂಡು ಜೇಡ ಹೆಣ್ಣಿನಿಂದ ಪಾರಾಗಲು ಓಡುತ್ತದೆ. ಇಲ್ಲದಿದ್ದರೆ ಹೆಣ್ಣು ಜೇಡಕ್ಕೆ ಇದು ಆಹಾರವಾಗಿತ್ತದೆ. ಕೆಲವೊಮ್ಮೆ ಗಂಡು ಹೆಣ್ಣಿಗೆ ಆಹಾರ ತಂದು ಕೊಟ್ಟು ನಂತರ ಸೇರುವುದುಂಟು. ಆದರೂ ಸರಸವೆಂದೆ ಗಂಡಿಗೆ ಸಾವು. ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಯಿಡುತ್ತೆ. ಮೊಟ್ಟೆಯಿಡುವ ಸಲುವಾಗಿಯೇ ಇವು ರೇಷ್ಮೆಯ ಚೀಲವನ್ನು ತಾಯಾರಿಸಿ ಕೊಳ್ಳುತ್ತದೆ.
ಜೇಡದಿಂದ ಮಾನವನಿಗೆ ಯಾವುದೇ ಅಪಾವಿಲ್ಲ. ಎಲ್ಲಾ ಜೇಡಗಳಲ್ಲೂ ವಿಷವಿರುತ್ತದೆ. ಆದರೆ, ಮಾನವನ ಚರ್ಮವನ್ನು ಅವುಗಳ ಕೊಂಡಿ ಭೇಧಿಸಲು ಸಾಧ್ಯವಿಲ್ಲ. ಕೆಲವು ದೊಡ್ಡ ಜೇಡಗಳು ಮಾತ್ರ ಮಾನವನಿಗೆ ಅಪಾಯಕಾರಿ, ಜೇಡ ತನ್ನ ಬಲೆಗೆ ಬಿದ್ದ ಕೀಟವನ್ನು ವಿಷಪೂರಿತ ಕೊಂಬಿನಿಂದ ಕಚ್ಚಿ ಸಾಯಿಸುತ್ತದೆ. ಇದರ ಬಾಯಿ ದ್ರವ ಆಹಾರವನ್ನು ಮಾತ್ರ ಸೇವಿಸಲು ಸಮರ್ಥವಾಗಿರುವುದರಿಂದ ಸತ್ತ ಕೀಟದ ಮೈಯೊಳಗಿನ ದ್ರವವನ್ನು ಹೀರಿ ಹೊರಮನ್ನು ಹಾಗೇ ಬಿಡುತ್ತದೆ.
ರೈತನ ಮಿತ್ರ :
ಜೇಡಗಳ ಸ್ಪರ್ಶಜ್ಞಾನಕೂಡ ಅದ್ಭುತವಾದದ್ದು. ಈ ಶಕ್ತಿಯನ್ನೇ ಬಳಸಿಕೊಂಡು ಅವು ಬಲೆಗೆ ಬಿದ್ದ ಆಹಾರವನ್ನು ಕೂಡಲೇ ಆಹಾರ ಪತ್ತೆ ಮಾಡುತ್ತವೆ. ಜೈವಿಕ  ಕೀಟ ನಿಯಂತ್ರಣದಲ್ಲಿ ಇವುಗಳ ಕೊಡುಗೆ ಅಪಾರ. ರೈತನ ಮಿತ್ರ ಎನಿಸಿಕೊಂಡ ಜೇಡಗಳು ಬೆಳೆಗಳನ್ನು ಹಾಳುಮಾಡುವ  ಕೀಟಗಳನ್ನು ತಿನ್ನುತ್ತವೆ. ಮಲೇರಿಯ ತರಬಲ್ಲ ಸೊಳ್ಳೆಗಳಿಗೆ ಈ ಜೇಡಗಳು ಶತ್ರು. ಕೀಟನಿಯಂತ್ರಣಕ್ಕೆ ಹೊಲಗದ್ದೆಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾದಂತೆ ಪರಿಸರ ಸ್ನೇಹಿ ಮತ್ತು ಕೀಟ ನಿಂತ್ರಕಗಳಾದ ಜೇಡಗಳು ನಮ್ಮಿಂದ ಕಣ್ಮರೆಯಾಗುತ್ತಿವೆ.    

ಗ್ರೇಟ್ ಬ್ಯಾರಿಯರ್ ರೀಫ್


ನೀರೋಳಗೊಂದು ಹವಳದ ಬೆಟ್ಟ !

ಪ್ರಕೃತಿ ತನ್ನ ಒಡಲಿನಲ್ಲಿ ಅದೆಷ್ಟೊ ವಿಸ್ಮಯವನ್ನು ಹುದುಗಿಸಿಕೊಂಡಿದೆ. ಅಂಥ ಅದ್ಭುತಗಳಲ್ಲಿ ಆಸ್ಟ್ರೇಲಿಯಾದ ಉತ್ತರ ಮತ್ತು ಪೂರ್ವ ದಿಕ್ಕಿಗೆ ವಿಶಾಲವಾಗಿ ಹರಡಿಕೊಂಡಿರುವ ಹವಳದ ದಂಡೆಗಳೂ ಒಂದು. ಲೋಳೆಯಂತಹ ಲಕ್ಷಗಟ್ಟಲೆ ಸುಕ್ಷ ಜೀವಿಗಳಿಂದ ಸಮುದ್ರ ತಳದಲ್ಲಿರುವ ಕಲ್ಲಿನ ಬಂಡೆಗಳ ಮೇಲೆ ಪಾಚಿಗಳ ರೂಪದಲ್ಲಿ ಈ ಹವಳದ ದಂಡೆಗಳು ನಿರ್ಮಾಣಗೊಂಡಿದೆ. ಇದು ಇನ್ನೂ ಜೀವಂತದ್ದು, ಎಂಟು ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಜಗತ್ತಿನ ಅತೀದೊಡ್ಡ ಜೀವರಚನೆಯನ್ನು ಹೊಂದಿರುವ ಸಮುದ್ರ ದಂಡೆ ಎನ್ನುವುದೇ ಇದರ ವಿಶೇಷ. ಹೀಗಾಗಿಯೇ ಇದಕ್ಕೆ ಗ್ರೇಟ್ ಬ್ಯಾರಿಯರ್ ರೀಫ್ ( ಹವಳದ ದಂಡೆ) ಎನ್ನುವ ಹೆಸರು ಬಂದಿದೆ.

ವೈವಿಧ್ಯಮಯ ಜೀವ ಸಂಕುಲಗಳ ತಾಣ.

ಗ್ರೇಟ್ ಬ್ಯಾರಿಯರ್ ರೀಫ್ ಅತೀ ವೈವಿಧ್ಯಮಯ ಜೀವ ಸಂಕುಲಗಳನ್ನು ಹೊಂದಿರುವುದರಿಂದ ಇದನ್ನು 1981ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಜಗತ್ತಿನ ಏಳು ನೈಸಗರರ್ಗಿಕ ಅದ್ಭುತಗಳಿಲ್ಲಿ ಬ್ಯಾರಿಯರ್ ರೀಫ್ ಸಹ ಒಂದು. ಇಲ್ಲಿ ಸುಮಾರು 2,900 ಪ್ರತ್ಯೇಕ ಹವಳದ ದಂಡೆಗಳಿವೆ. 2,600 ಕಿ.ಮೀ ಉದ್ದವಿರುವ ಈ ದಂಡೆಗೆ ತಾಗಿಕೊಂಡಂತೆ 900 ದ್ವೀಪ ಸಮೂಹಗಳಿವೆ. ಈ ದಂಡೆಯ ಒಟ್ಟೂ ಸುತ್ತಳತೆ 344, 400 ಚದರ್ ಕಿ.ಮೀ. ಹವಳದ ದಂಡೆಗಳನ್ನು ಜೋಪಾನವಾಗಿ ಕಾಪಾಡುವ ಸಲುವಾಗಿ ಕೆಲವು ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿ 1,500ಕ್ಕೂ ಹೆಚ್ಚು ಮೀನಿನ ಪ್ರಭೇದಗಳು ಕಂಡುಬರುತ್ತವೆ. ಇಲ್ಲಿನ ದ್ವೀಪಗಳಲ್ಲಿ ವಿವಿಧ ಜಾತಿಯ 215 ಪಕ್ಷಿಗಳು ವಾಸವಾಗಿವೆ.

ಹೇಗೆ ನಿರ್ಮಾಣ ವಾಗುತ್ತವೆ? 
ಹವಳಗಳು ಲೋಳೆಯಂತಹ ಸೂಕ್ಷ್ಮ ಜೀವಿಗಳಿಂದ ತಯಾರಾಗುವುದರಿಂದ ಇದನ್ನು ಸಮುದ್ರ ಪಾಚಿಗಳು ಎಂದೂ ಕರೆಯಬಹುದು. ಹವಳಗಳು ಎರಡು ರೀತಿಯಲ್ಲಿ ಉತ್ಪತ್ತಿಯಾಗುತ್ತವೆ. ಹವಳದ ದಂಡೆ ನಿರ್ಮಾಣವಾಗಲು ಸಾವಿರಾರು ವರ್ಷ ಬೇಕಾಗುತ್ತದೆ. ಇಲ್ಲಿ ಎರಡು ವಿಧಾನಗಳಿವೆ. ಪಾಚಿಗಳು ಒಂದಕ್ಕೊಂದು ಕವಲೊಡೆದು ರೂಪಗೊಂಳ್ಳುವುದು ಒಂದು ವಿಧಾನವಾದರೆ, ಪಚಿ ಅಥವಾ ಲೋಳೆಗಳ ಮೊಟ್ಟೆಗಳಿಂದಲೂ ಹವಳಗಳು ರೂಪತಾಳೂತ್ತವೆ. ಆಳವಿಲ್ಲದ ಸಮುದ್ರದಲ್ಲಿ (60 ಮೀಟರ್) ಹವಳದ ದಂಡೆಗಳು ನಿರ್ಮಾಣಗೊಳ್ಳುವುದು ಜಾಸ್ತಿ. ಆಳ ಸಮುದ್ರದ ದಿಣ್ಣೆಗಳಿಗೆ ಅಟೊಲ್ಸ್ ಎಂದು ಹೆಸರು. ನೀರಿನ ಉಷ್ಣಾಂಶ 18 ರಿಂದ 33 ಡಿಗ್ರಿ ಸೆಲ್ಸಿಯಸ್ ಇರುವ ಬೆಚ್ಚಗಿನ ವಾತಾವರಣದಲ್ಲಿ ಈ ದಿಣ್ಣೆಗಳು ಬೆಳವಣಿಗೆ ಹೊಂದುತ್ತವೆ. ಇವು ಜೀವಂತವಾಗಿರಲು ಸೂರ್ಯನ ಬೆಳಕು ಅತೀ ಅವಶ್ಯಕ. ಹಳದಿ, ಕಂದು, ಹಸಿರು ಮುಂತಾದ ವೈವಿಧ್ಯಮಯ ಬಣ್ಣಗಳಲ್ಲಿ ಇವು ಕಂಡುಬರುತ್ತವೆ.

ಆಹಾರ ಸಂಪನ್ಮೂಲ.

ಹವಳದ ದಂಡೆಗಳು ಸೂಕ್ಷಜೀವಿಗಳ ಆಹಾರ ಸಂಪನ್ಮೂಲ. ಇದರಲ್ಲಿ ವಾಸವಾಗಿರುವ ಸೂಕ್ಷ ಜೀವಿಗಳು ಸೂರ್ಯನ ಬೆಳಕು ಮತ್ತು ತ್ಯಾಜ್ಯಗಳನ್ನು ಉಪಯೋಗಿಸಿ ಆಮ್ಲಜನಕ ಮತ್ತು ಆಹಾರವನ್ನು ಉತ್ಪತ್ತಿ ಮಾಡುತ್ತವೆ. ಪಾಚಿಯಂತಹ ಸೂಕ್ಷಜೀವಿಗಳು ಒಂದಕ್ಕೊಂದು ಸಾವಿರಾರು ಕವಲೊಡೆದು ಬೃಹತ್ ಆಕಾರ ಪಡೆಯತ್ತವೆ. ಒಂದು ಹವಳದ ಎತ್ತರ 3ರಿಂದ 56ಮಿಲಿ ಮೀಟರ್. ಇಂತಹ ಒಂದು ಗೂಡಿನ ಅಗಲ 75 ರಿಂದ 1.500 ಮಿಮೀಟರ್.
 
ಪ್ರವಾಸೋದ್ಯಮ:
ಗ್ರೇಟ್ ಬ್ಯಾರಿಯರ್ ರೀಫ್ನಿಂದ ಆಸ್ಟ್ರೇಲಿಯಾಕ್ಕೆ ಪ್ರತಿ ವರ್ಷ ಕೋಟಿಗಟ್ಟಲೆ ಆದಾಯ ಬರುತ್ತದೆ. ಇಲ್ಲಿ ಪ್ರವಾಸಿಗರಿಗೆ ಹವಳದ ದಂಡೆಗಳ ವೀಕ್ಷಣೆಗೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಅಂತರ್ಗಾಮಿಗಳ ಮೂಲಕ ಹವಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ  

ಅಳೀವಿನ ಅಂಚಿನಲ್ಲಿದೆ.

ಜಾಗತಿಕ ತಾಪಮಾನದ ಏರಿಕೆ ಮತ್ತು ಮಾನವನ ಹಸ್ತಕ್ಷೇಪದಿಂದ ಇಂದು ಹವಳದ ದಂಡೆಗಳು ನಿಧಾನವಾಗಿ ಸಾವಿನತ್ತ ಮುಖಮಾಡಿದೆ. ವಾತಾಚರಣ ಬದಲಾವಣೆ, ಪರಿಸರ ಮಾಲಿನ್ಯ ಇವುಗಳ ಬೆಳವಣಿಗೆಗೆ ಅಡ್ಡಿಯಾಗಿದೆ. ಸಮುದ್ರಕ್ಕೆ ಸೇರ್ಪಡೆಗೊಳ್ಳುತ್ತಿರುವ ಕಲುಷಿತ ನೀರಿನಿಂದಾಗಿ ಅವುಗಳ ಆಯಸ್ಸು ಕಡಿಮೆಯಾಗುವ ಅಪಾಯ ಎದುರಾಗಿದೆ.


 

Saturday, January 28, 2012

ದೈತ್ಯ ಸೆಕ್ಯೊವಾ (ಶರ್ಮನ್) ಟ್ರಿ...


ಎತ್ತರದ ಮರಕ್ಕೆ ಇದೇ ಉತ್ತರ !
  ಎತ್ತರವಾಗಿ ಬೆಳೆಯುವುದೇ ಮರಗಳ ಸ್ವಭಾವ. ಆದರೆ, ಇಡೀ ಪ್ರಪಂಚವನ್ನು ತುಂಬಿಕೊಂಡಿರುವ ಇಷ್ಟೊಂದು ಮರಗಳಲ್ಲಿ ಅತೀ ಎತ್ತರದ ಮರ ಯಾವುದು ಎನ್ನುವುದರ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿದೆ. ಭೂಮಿಯ ಮೇಲೆ ಮಾನವ ಕಾಲಿಡುವುದಕ್ಕಿಂತಲೂ ಎಷ್ಟೋ ಸಾವಿರ ವರ್ಷ ಮೊದಲೇ ಮರಗಳು ಭುಮಿಯನ್ನು ಆವರಿಸಿಕೊಂಡಿವೆ. ಹೀಗಾಗಿ ಅವುಗಳ ಆಯಸ್ಸನ್ನು ನಿಖರವಾಗಿ ಅಳೆಯುವುದು ಕಷ್ಟ. ನಮ್ಮ ಸುತ್ತಮುತ್ತಲೂ ಕಂಡುಬರುವ ಸಾಮಾನ್ಯ ಮರಗಳ ಆಯಸ್ಸು 100 ರಿಂದ 150 ವರ್ಷ ಎಂದು ಗುರುತಿಸಬಹುದು. ಆದರೆ, ಕೆಲವೊಂದು ಮರಗಳು 500 ರಿಂದ 600 ವರ್ಷ ಬದುಕಿದ ಉದಾಹರಣೆಗಳಷ್ಟೇ ನಮಗೆ ಸಿಗುತ್ತವೆ.
 
ವಿಶ್ವದ ಅತ್ಯಂತ ಹಳೆಯ ಮರ : ದೈತ್ಯ ಸೆಕ್ಯೊವಾ ಮರವನ್ನು ವಿಶ್ವದ ಅತ್ಯಂತ ಹಳೆಯ ಮತ್ತು ಬೃಹತ್ ಗಾತ್ರದ ಮರ ಎಂದು ಗುರುತಿಸಲಾಗಿದೆ. ಅಲ್ಲದೇ ಇದು ಅತ್ಯಂತ ವೇಗವಾಗಿ ಬೆಳೆಯಬಲ್ಲ ಮರವಾಗಿದೆ. ಇದು ಅಮೇರಿಕನ್ನರಿಗೆ ತೀರಾ ಪರಿಚಿತ. ಅಮೇರಿಕಾದ ಹೊರತಾಗಿ ಕೆನಡಾ, ಯುರೋಪ್, ಆಸ್ಟ್ರೇಲಿಯಾ, ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿಯೂ ಇದರ ವಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

ಅಮೇರಿಕಾದ ಪ್ರವಾಸಿ ತಾಣ: ಅಮೇರಿಕಾದ ಕ್ಯಾಲಿಫೋನಿಯ ರಾಷ್ಟ್ರೀಯ ಉದ್ಯಾನದಲ್ಲಿರುವ ದೈತ್ಯ ಸೆಕ್ಯೊವಾ ಮರ ಜನರಲ್ ಶರ್ಮನ್ ಎನ್ನುವ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಕುರಿತು ಒಂದು ಇತಿಹಾಸವೇ ಇದೆ. ಸರ್ಮನ್ ಮರದ ಬೃಹತ್ ಗಾತ್ರವನ್ನು ವೀಕ್ಷಿಸುವ ಸಲುವಾಗಿಯೇ ಪ್ರತಿವರ್ಷ ಇಲ್ಲಿನ ರಾಷ್ಟ್ರೀಯ ಉದ್ಯಾನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಮರ ಕಳೆದ 2 ಸಾವಿರ ವರ್ಷಗಳಿಂದ ಸತತ ಬೆಳವಣಿಗೆ ಹೊಂದುತ್ತಲೇ ಇದೆ. ಈ ಮರದ ಆಯಸ್ಸನ್ನು 2,700 ವರ್ಷಗಳು ಎಂದು ಅಂದಾಜಿಸಲಾಗಿದೆ. ಕ್ಯಾಲಿಫೋನಿಯ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 10, ಸಾವಿರಕ್ಕೂ ಹೆಚ್ಚು ಶರ್ಮನ್ ಮರವನ್ನು ಸಂರಕ್ಷಸಲಾಗಿದೆ. 

ಎತ್ತರಕ್ಕೆ ಆಕಾಸವೇ ಕೊನೆ : ದೈತ್ಯ ಸೆಕ್ಯೊವಾ ಮರದ ಗರಿಷ್ಠ ಆಯಸ್ಸ 3,500 ವರ್ಷಗಳು ಎಂದು ಸಸ್ಯ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇದರ ಸಾಮಾನ್ಯ ಎತ್ತರ 83.8ಮೀಟರ್ ( 300 ಫೀಟ್). ಈ ಮರದ ತುದಿಯನ್ನು ಮುಟ್ಟಲು 27 ಅಂತಸ್ತಿನ ಕಟ್ಟಡವನ್ನಾದರೂ ಏರಲೇ ಬೇಕು. ಇದರ ಮೊದಲ ಕೊಂಬೆಯನ್ನು ಮುಟ್ಟಲು ಕನಿಷ್ಠ 13 ಅಂಸ್ತಿನ ಕಟ್ಟಡ ಏರಬೇಕು. ಈ ಮರದ ಸುತ್ತಳತೆಯ ವ್ಯಾಸ 7.7 ಮೀಟರ್ (25 ಫೀಟ್). ಈ ಮರದ ಎಲೆಗಳು ಸದಾ ಹಸಿರಾಗಿಯೇ ಇರುತ್ತವೆ. ಎಲೆಗಳು ಅತೀ ಚಿಕ್ಕದಾಗಿದ್ದು, 3 ರಿಂದ 6 ಮಿಲಿ ಮೀಟರ್ ಉದ್ದವಾಗಿರುತ್ತದೆ. ಈ ಮರದ ಕಾಯಿಗಳು 4 ರಿಂದ7 ಸೆ.ಮಿ ದೊಡ್ಡದಾಗಿರುತ್ತವೆ. ಒಂದು ಬೃಹತ್ ಮರದಲ್ಲಿ 11,000 ಕಾಯಿಗಳು ಕಂಡುಗರುತ್ತದೆ.

ಭಾವನಾತ್ಮಕ ಸಂಬಂಧ: ಈ ಮರಗಳು ದೈತ್ಯವಾಗಿರುವಷ್ಟೇ ಉಪಯೋಗವನ್ನೂ ಹೊಂದಿವೆ. ಮರದ ಖಾಂಡ ಮೃದು, ಹಗುರ ಮತ್ತು ಸುಲಭವಾಗಿ ಮುರಿಬಲ್ಲದ್ದಾಗಿದೆ. ಅಲ್ಲದೇ ಕೇವಲ 38% ದಷ್ಟು ದಹನ ಶೀಲತೆ ಹೊಂದಿದೆ. ಈ ಮರಗಳನ್ನು ಹೆಚ್ಚಾಗಿ ಅಲಂಕಾರಿಕ ಸಲಕರಣೆಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಅಲ್ಲದೇ, ಲಘು ಉಪಕರಣಗಳ ತಯಾರಿಕೆಗೂ ಬಳಸಲಾಗುತ್ತದೆ. ಇದು ವ್ಯಾಪಾರಿ ಉದ್ದೇಶಕ್ಕಿಂತಲೂ ಜನರ ಭಾವನೆಗಳೊಂದಿಗೆ ಬೆರೆತು ಕೊಂಡಿದೆ.

ಬಲು ಭಾರ: ಈ ಮರಗಳು ಅತ್ಯಂತ ಶೀತ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ. ವಾತಾವರಣದ ಉಷ್ಣಾಂಶ -32 ಡಿಗ್ರಿ ಸೆಲ್ಸಿಯಸ್ ಇಳಿದರೂ ಈ ಮರಕ್ಕೆ ಏನೂ ಆಗುವುದಿಲ್ಲ. ಈ ಮರವನ್ನು ಕಡಿದರೆ ಸಾಗಿಸುವುದು ಅಷ್ಟು ಸುಲಭವಲ್ಲ ಎಕೆಂದರೆ ಇದರ ಒಟ್ಟೂ ತೂಕ 6,167 ಟನ್. 




Friday, January 27, 2012

ಮಲಬಾರ್ ಪೈಡ್ ಹಾರ್ನಬಿಲ್

ಹಕ್ಕಿಗೆ ಒಂದೆ ಗಂಡ ಒಂದೆ ಹೆಂಡ್ತಿ !
ಮಲಬಾರ್ ಪೈಡ್ ಹಾರ್ನಬಿಲ್ (ಮಂಗಟ್ಟೆ ಹಕ್ಕಿ) ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟ ಜಾತಿಯ ಪಕ್ಷಿ. ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾ ನಗರಗಳಲ್ಲಿ ಸುತ್ತಾಡಿದರೆ ಇವುಗಳನ್ನು ನೋಡಬಹುದು.
ಮಲಬಾರ್ ಪೈಡ್ ಹಾರ್ನಬಿಲ್ ಹಕ್ಕಿಗೆ ಹಿಂದಿಯಲ್ಲಿ ದನ್ ಛಿರಿ, ಕೊಂಕಣಿಯಲ್ಲಿ ಕನಾರಿ, ಕನ್ನಡದಲ್ಲಿ ಮಂಗಟ್ಟೆ ಹಕ್ಕಿ ಎಂದು ಕರೆಯಲಾಗುತ್ತದೆ. ಸದಾ ಹಸಿರಾಗಿರುವ ಕಾನನಗಳಲ್ಲಿ ಇವು ವಾಸವಾಗಿರುತ್ತವೆ. ಪಕ್ಷಿಗಳು ಹೆಚ್ಚಾಗಿ ಕಂಡುಬಂದರೆ ಕಾಡು ಆರೋಗ್ಯ ಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಒಂದು ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹೀಗಾಗಿ ಕಾಡಿಗೆ ಅಪಾಯ ಎದುರಾಗೆದೆ ಎನ್ನುವ ಮುನ್ಸೂಚನೆ ರವಾನಿಸುತ್ತೆ. ಅಂಜೂರದ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲಾ ಜಾತಿಯ ಹಣ್ಣಿನ ಮರಗಳಲ್ಲಿ ಗುಂಪುಗೂಡಿ ಗಲಾಟೆ ಎಬ್ಬಿಸಿ ಹಣ್ಣನ್ನು ಕೀಳುವ ಶಬ್ದ ಅರಣ್ಯದಲ್ಲೆಲ್ಲಾ ಕೇಳಿಬರುತ್ತದೆ. ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಒತಿಕ್ಯಾಟ, ಇಲಿ, ಹುಳಹಪ್ಪಟೆ ಮುಂತಾದ ಚಿಕ್ಕಪುಟ್ಟ ಪ್ರಾಣಿಗಳನ್ನೂ ತಿನ್ನುವುದುಂಟು.

ದೇಹ ರಚನೆ:
ರಣ ಹದ್ದಿನ ಗಾತ್ರದ ಹಕ್ಕಿಗೆ ಅಘಾದವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವ ರೀತಿಯ ಕೊಂಬು. ಕುತ್ತಿಗೆ ಹಾಗೂ ಕೆನ್ನೆಗಳ ಬಣ್ಣ ಕಪ್ಪು, ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯಮೇಲೆ ಬಿಲಿ ಪಟ್ಟಿಯಿರುತ್ತದೆ. ಗಲ್ಲದಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಲಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಯಿರುತ್ತದೆ. ರೆಕ್ಕೆಯ ಅಂಚಿನಲ್ಲಿರುವ ಬಿಳಿಪಟ್ಟಿಗಳು ಹಕ್ಕಿಹಾರಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ.

ತನ್ನ
ಗೂಡಿನಲ್ಲಿ ತನೇ ಬಂಧಿ:
ಮಾರ್ಚನಿಂದ ಜೂನ್ ತಿಂಗಳಿನಲ್ಲಿ ಮಂಗಟ್ಟೆ ಹಕ್ಕಿಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕೆಲವೊಮ್ಮ ಫೆಬ್ರವರಿ ತಿಂಗಳಿನಲ್ಲಿಯೇ ಸಂಸಾರ ಹೂಡುತ್ತವೆ. ಮಂಗಟ್ಟೆಗಳ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣುಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಭೂಮಿಯಿಂದ ಸುಮಾರು 60 ಅಡಿ ಎತ್ತರದಲ್ಲಿ ಪೊಟರೆಕೊರೆದು ಅದರಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಕೊಲವೊಮ್ಮೆ ಒಂದೇ ಸಲಕ್ಕೆ 3 ರಿಂದ 5 ಮೊಟ್ಟಗಳನ್ನೂ ಇರಿಸಿದ ಉದಾಹರಣೆಗಳಿವೆ. ಮೊಟ್ಟೆ ಇರಿಸಿದ ತಕ್ಷಣ ಹೆಣ್ಣು ಮಂಗಟ್ಟೆ ಕೇವಲ ಕೊಕ್ಕು ಮತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿಯ ಜೊಲ್ಲು, ಮರದ ಅಂಟನ್ನು ಬಳಸಿಕೊಂಡು ಪೊಟರೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಬಿಡುತ್ತದೆ. ಮೂಲಕ ತನ್ನನ್ನೇ ತಾನು ಗೂಡಿನೊಳಗೆ ಬಂಧಿಸಿಕೊಳ್ಳುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗುತ್ತದೆ.
ಪೊಟರೆಯೊಳಗಿದ್ದ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತಾ, ಮೊಟ್ಟೆ ಒಡೆದು ಜೀವತಳೆಯುವ ಮರಿಗೆ ಗೂಡಿನಲ್ಲಿ ಜಾಗಸಾಲುವುದಿಲ್ಲ ಎನ್ನುವ ಸಲುವಾಗಿ ತನ್ನೆಲ್ಲಾ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹರಲಾಗದ ಸ್ಥಿತಿ ತಂದು ಕೊಳ್ಳುತ್ತದೆ. ಚಿಕ್ಕಗರಿಗಳನ್ನು ಬಳಸಿ ಪೊಟರೆಯೊಳಗೆ ಮರಿಗಳಿಗೆ ಹಾಸಿಗೆ ನಿರ್ಮಿಸುತ್ತದೆ. ಮೊಟ್ಟೆಯಿಂದ ಮರಿಹೊರಬಂದು ಹಾರಲು ಕಲಿಯುವ ವೇಳೆಗೆ ತಾಯಿ ಸಹ ಉದುರಿದ ತನ್ನ ಗರಿಗಳನ್ನು ಪುನಃ ಪಡೆದುಕೊಂಡಿರುತ್ತದೆ. ಮಧ್ಯೆ ಗಂಡುಹಕ್ಕಿ ವೇಳೆಯಲ್ಲಿ ನೀರಿನ ಅಂಶಹೆಚ್ಚಾಗಿರುವ ಹಣ್ಣುಗಳನ್ನೇ ತಂದು ತನ್ನ ಮರಿಗಳಿಗೆ ಉಣಬಡಿಸುತ್ತದೆ. ಕೆವೊಮ್ಮ ತಾನು ಉಪವಾಸ ಬಿದ್ದರೂ ಮರಿಗಳಿಗೆ ಆಹಾರ ಒದಗಿಸಲು ಮರೆಯುವುದಿಲ್ಲ. ವೇಳೆ ಗಂಡುಹಕ್ಕಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ರೆಕ್ಕೆಕಳೆದುಕೊಂಡು ಪೊಟರೆಯೊಳಗೆ ಬಂಧಿಯಾಗಿರುವ ಹೆಣ್ಣುಹಕ್ಕಿ ಮತ್ತು ಅದರ ಮರಿಗಳು ಹಸಿವಿನಿಂದ ಬಳಲಿ ಅಲ್ಲಿಯೇ ಸಾವನ್ನಪ್ಪುತ್ತವೆ.

ಸಂಸಾರ
ಹೂಡುತ್ತವೆ.
ಮಂಗಟ್ಟೆ ಮಾನವನಂತೆ ಸಂಸಾರ ನಡೆಸುತ್ತದೆ. ಮರಿ ಹಾರುವ ಹಂತ ತಲುಪಿದಾಗ ತಾಯಿ ತನ್ನ ಕೊಕ್ಕಿನಿಂದ ಗೂಡಿನ ಬಾಗಿಲು ಒಡೆದು ಹೊರಗರುತ್ತದೆ. ತಂದೆ ತಾಯಿಯ ಸುಪರ್ದಿಯಲ್ಲಿ ಮರಿಗಳು ಬೆಳೆದು ಕಾಡಿನ ಬದುಕಿಗೆ ಅಣಿಯಾಗುತ್ತವೆ. ತನಗೊಂದು ಸಂಗಾತಿ ಜೊತೆಯಾಗುವ ವರೆಗೆ ತಂದೆ ತಾಯಿ ಹಕ್ಕಿಗಳೊಂದಿಗೆ ಮರಿ ಅನ್ಯೋನ್ಯವಾಗಿ ಸ್ವಚ್ಚಂದವಾಗಿ ಬದುಕುತ್ತವೆ. ಏಕ ಪತಿ ಹಾಗೂ ಏಕ ಪತ್ನಿ ಮಂಗಟ್ಟೆಗಳು ಒಂದೇ ಗೂಡಿನ್ನು ಹತ್ತಾರುಬಾರಿ ಸಂತಾನೋತ್ಪತ್ತಿಗೆ ಬಳಸಿಕೊಳ್ಳುತ್ತವೆ. ಇಬ್ಬರಲ್ಲಿ ಯಾರಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ ಬದುಕುಳಿದ ಹಕ್ಕಿ ಜೀವನ ಪರ್ಯಂತ ಏಕಾಂಗಿಯಾಗಿ ಜೀವನ ಸಾಗಿಸುತ್ತದೆ.

ಬೊನ್ಸಾಯ್

ಆಕಾರ ಚಿಕ್ಕದು, ಆಯಸ್ಸು ದೊಡ್ಡದು !
ಬೊನ್ಸಾಯ್, ದೊಡ್ಡ ಮರಗಳ ಚಿಕ್ಕ ಪ್ರತಿರೂಪ. ಇದೊಂದು ಕಲಾತ್ಮಕವಾಗಿ ಸಸ್ಯಗಳನ್ನು ಬೆಳೆಸುವ ವಿಧಾನ. ಇದನ್ನು ಮನೆಯ ಒಳಗಡೆ ಸಹ ಬೆಳೆಸಬಹುದು. ಸಸ್ಯಗಳ ಬೆಳವಣಿಗೆಗಿಂತಲೂ ಸಸ್ಯಗಳ ಸೌಂದರ್ಯ ಸವಿಯುವ ಸಲುವಾಗಿ ಇವುಗಳನ್ನು ಬೆಳೆಸಲಾಗುತ್ತದೆ. ನೋಡಲು ಕುರುಚಲು ಗಿಡದಂತೆ ಕಾಣುವ ಬೊನ್ಸಾಯ್ ಸಸ್ಯಗಳು ಅಬ್ಬಬ್ಬಾ ಅಂದರೂ ಒಂದು ಮೀಟರ್ಗಿಂತ ಜಾಸ್ತಿ ಎತ್ತರಕ್ಕೆ ಬೆಳೆಯಲಾರವು. ನೈಸರ್ಗಿಕವಾಗಿ ಬೆಳೆಯುವ ಸ್ವತಂತ್ರ ಮರಗಳಿಗೆ ಹೋಲಿಸಿದರೆ ಇವು ಪರಾವಲಂಬಿಗಳು. ಇವು ಸಾಮಾನ್ಯ ಮರಗಳಂತೆ ನೂರಾರು ವರ್ಷ ಬದುಕಬಲ್ಲವು. ಆದರೆ, ಮನುಷ್ಯನ ಆರೈಕೆ ಇಲ್ಲದಿದ್ದರೆ ಇವುಗಳ ಆಯಸ್ಸ ಅಂದಿಗೇ ನಿಂತು ಹೋಗುತ್ತವೆ.

ಇತಿಹಾಸ: ಬೊನ್ಸಾಯ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದನ್ನು ಮೊದಲು ಕಂಡುಹಿದದ್ದು ಚೀನಿಯರು. ನಂತರ 12ನೇ ಶತಮಾನದಲ್ಲಿ ಜಪಾನೀಯರು ಇದನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪರಿಚಯಿಸಿದರು. ಜಪಾನ್ ಭಾಷೆಯಲ್ಲಿ ಬೊನ್ ಅಂದರೆ ಕುಂಡ ಮತ್ತು ಸಾಯ್ ಅಂದರೆ ಸಸ್ಯ. ಬೊನ್ಸಾಯ್ ಅಂದರೆ ಕುಂಡದಲ್ಲಿ ಬೆಳೆಸುವ ಸಸ್ಯ ಎನ್ನುವ ಅರ್ಥ ನೀಡುತ್ತದೆ.

ಹವ್ಯಾಸ : ಇಂದು ಬೊನ್ಸಾಯ್ ಕಲೆ ಹವ್ಯಾಸವಾಗಿ ಬೆಳೆಯುತ್ತಿದೆ. ಯುರೋಪಿಯನ್ ದೇಶಗಳ ಪ್ರತಿ ಮನೆಯಲ್ಲಿಯೂ ಒಂದು ಬೊನ್ಸಾಯ್ನ್ನು ಕಾಣಬಹುದು. ಇವು ಕೇವಲ ಮನೆಯ ಸೌಂದರ್ಯಕಷ್ಟೇ ಅಲ್ಲ ಸಸ್ಯಶಾಸ್ತ್ರವನ್ನು ಅಧ್ಯಯನ ಮಾಡುವವರಿಗೂ ಮಾದರಿ. ಉದ್ಯಾನವನ, ವಸ್ತು ಸಂಗ್ರಹಾಲಯ, ಆಸ್ಪತ್ರೆ, ವಾಣಿಜ್ಯಮಳಿಗೆ ಹೀಗೆ ಅನೇಕ ಕಡೆಗಳಲ್ಲಿ ಇದು ಸಾಮಾನ್ಯ.

ಬೆಳೆಸುವುದುಹೇಗೆ ? ಒಂದು ಬೊನ್ಸಾಯ್ ಮರಬೆಳೆಯಲು ಅನೇಕ ವರ್ಷ ತೆಗೆದುಕೋಳ್ಳುತ್ತದೆ. ಇದನ್ನು ಬೆಳೆಸುವುದು ಸಹ ಒಂದು ಕಲೆ. ಒಂದು ಚಿಕ್ಕ ತೆಗೆದುಕೊಂಡು ಅದರ ಬೇರು ಮತ್ತು ಕೊಂಬೆಗಳನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಬೇಕು. ನಂತರ ರಂದ್ರವಿರುವ ಚಿಕ್ಕ ಕುಂಡದಲ್ಲಿ ಅದನ್ನು ಇಟ್ಟು ಉತ್ತಮ ಮಣ್ಣು ಗೊಬ್ಬರ ಹಾಕಿ ಬೆಳೆಸಬೇಕು. ತೇವಾಂಶವನ್ನು ಹಿಡಿದಿಟ್ಟುಕೋಳ್ಳುವ ಮಣ್ಣನ್ನು ಕುಂಡಕ್ಕೆ ಬಳಸಬೇಕು. ಸಸಿ ಬೆಳೆದಂತೆಲ್ಲಾ ಅದನ್ನು ಕುಂಡದಿಂದ ತೆಗೆದು ಬಲಿತ ಬೇರು ಮತ್ತು ಕೊಂಬೆಗಳನ್ನು ಆಗಾಗ ಕತ್ತರಿಸಿ ನಮಗೆ ಬೇಕಾದ ರೂಪವನ್ನು ನೀಡಬಹುದು. ಇವುಗಳ ರಚನೆ ಸೂಕ್ಷ್ಮವಾಗಿರುವುದರಿಂದ ಅತ್ಯಂತ ಕಾಳಜಿಯಿಂದ ಇವುಗಳನ್ನು ಬೆಳೆಸಬೇಕು. ಉತ್ತಮ ಗಾಳಿ, ಬೆಳಕಿನ ವಾತಾವರಣ ಕಲ್ಪಿಸಬೇಕು. ಇವುಗಳ ಆಯಸ್ಸು ಹೆಚ್ಚಾದಂತೆಲ್ಲಾ ಸೌಂದರ್ಯವೂ ಹೆಚ್ಚುತ್ತಾ ಹೋಗುತ್ತದೆ. ಇವುಗಳ ಸಂಪೂರ್ಣ ಸೌಂದರ್ಯ ಸವಿಯಬೇಕಾದರೆ 15 ರಿಂದ 20 ವರ್ಷಗಳದರೂ ಅಗತ್ಯ.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ: ಬೊನ್ಸಾಯ್ ಮರಗಳು ಸೌಂದರ್ಯಕ್ಕೆ ಹೆಸರುವಾಸಿ. ಇದು ಮಾನವನ ಕ್ರತಕ ಸೃಷ್ಟಿ. ಬೆಳೆಸುವವನ ಸೃಜನಶೀಲತೆಗೆ ತಕ್ಕಂತೆ ಇವು ಆಕಾರ ಪಡೆಯುತ್ತವೆ. ಬೃಹದಾಕಾರವಾಗಿ ಬೆಳಯುವ ಮರಗಳನ್ನು ಅಂಗೈ ಅಳತೆಗೆ ಮೊಟಕು ಗೊಳಿಸಿದ ಬೊನ್ಸಾಯ್ಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ. 15 ವರ್ಷದ ಒಂದು ಬೊನ್ಸಾಯ್ ಮರಸಾವಿರಾರು ರೂ. ಬೆಲೆಬಾಳುತ್ತದೆ. ಹೀಗಾಗಿ ಇದೊಂದು ಕೃಷಿ ಉದ್ಯಮವಾಗಿಯೂ ಬೆಳೆಯುತ್ತಿದೆ.

ಬೊನ್ಸಾಯ್ ಅರಣ್ಯ ಗೊತ್ತಾ ? : ವಿವಿಧ ಜಾತಿಯ ಬೊನ್ಸಾಯ್ ಮರಗಳನ್ನು ಒಂದೆಡೆ ಸಂಗ್ರಹಿಸಿದ ಬೊನ್ಸಾಯ್ ಅರಣ್ಯಗಳು ಇಂದು ಪ್ರಸಿದ್ಧಿ ಪಡೆಯುತ್ತಿವೆ. ಕಣ್ಮರೆಯಾಗುತ್ತಿರುವ ಉಪಯುಕ್ತ ಸಸ್ಯ ಸಂಕುಲಗಳನ್ನು ಮುಂದಿನ ಪೀಳೀಗೆಗೆ ಕಾಯ್ದಿರಿಸಲು ಬೊನ್ಸಾಯ್ ಅರಣ್ಯಗಳು ಸಹಾಯಕ. ಮಕ್ಕಳಿಗೆ ಸಸ್ಯಗಳ ಕುರಿತು ಪಾಠ ಹೇಳಲು ಇವು ಉಪಯುಕ್ತ. ಬೊನ್ಸಾಯ್ ಅರಣ್ಯ ಬೆಳೆಸಲು ಮನೆಯ ಮುಂದಿನ ಪುಟ್ಟ ಅಂಗಳವೇ ಸಾಕು. ಆದರೆ ಅದನ್ನು ಬೆಳೆಸಲು ಬೆಟ್ಟದಷ್ಟು ತಾಳ್ಮೆ ಬೇಕು.