ಜೀವನಯಾನ

Monday, October 27, 2014

ಬೋವರ್ ಹಕ್ಕಿಯ ಮನೆಯ ಸಿಂಗಾರ!

ಈ ಹಕ್ಕಿಯನ್ನು ಪಕ್ಷಿ ಲೋಕದ ಇಂಟೀರಿಯರ್ ಡೆಕೊರೇಟರ್ ಎಂದೇ ಕರೆಯಲಾಗುತ್ತದೆ. ನೆಲದ ಮೇಲೆ ಗುಡಿಸಲಿನ ಹಾಗೆ ಗೂಡು ಕಟ್ಟುವ ಇದು, ತನ್ನ ಗೂಡನ್ನು ಬಣ್ಣ ಬಣ್ಣದ ವಸ್ತುಗಳಿಂದ, ಹೂವುಗಳಿಂದ ಅಲಂಕರಿಸುತ್ತದೆ. ಇದೇ ಬೋವರ್ ಹಕ್ಕಿಯ ವೈಶಿಷ್ಟ್ಯ. ಆಸ್ಟ್ರೇಲಿಯಾ, ನ್ಯೂಗಿಯಾ ಮಳೆಕಾಡುಗಳಲ್ಲಿ ಇವು ವಾಸಿಸುತ್ತವೆ.


ಗುಡಿಸಲಿನಾಕಾರದ ಗೂಡು!

ಬೋವರ್ ಬರ್ಡ್ 7 ರಿಂದ 8 ಇಂಚಿನಷ್ಟು ದೊಡ್ಡದು. ಆದರೆ, ಅದು ಕಟ್ಟುವ ಗೂಡು ಮಾತ್ರ ಊಹಿಸಲು ಅಸಾಧ್ಯ.
ಇತರ ಎಲ್ಲ ಹಕ್ಕಿಗಳು ಮೊಟ್ಟೆಯನ್ನು ಸಂರಕ್ಷಿಲು ಮರದ ತುದಿಯಲ್ಲೋ, ಯಾರಿಗೂ ಕಾಣದ ರೀತಿಯಲ್ಲೋ ಗೂಡನ್ನು ಕಟ್ಟಿದರೆ, ಬೋವರ್ ಹಕ್ಕಿ ರಾಜಾರೋಷವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತದೆ. ಇದರ ಗೂಡನ್ನು ಒಂದು ಚಿಕ್ಕ ಗುಡಿಸಲಿಗೆ ಹೋಲಿಸಬಹುದು. ಅಷ್ಟೊಂದು ಅಚ್ಚುಕಟ್ಟು.  ಕಸ ಕಡ್ಡಿ, ಹುಲ್ಲುಗಳನ್ನು ಬಳಸಿ ನಿರ್ಮಿಸಿದ ಇದರ ಗೂಡಿನ ಆವರಣ ಸುಮಾರು 15 ಮೀಟರ್ ನಷ್ಟು ವಿಶಾಲವಾಗಿರುತ್ತದೆ. ಕೆಲವೊಮ್ಮೆ 5 ರಿಂದ 6ಅಡಿ ಎತ್ತರದವರೆಗೂ ಗೂಡನ್ನು ಕಟ್ಟಿದ ಉದಾಹರಣೆಗಳಿವೆ. ಗೂಡಿನ ಒಳಗೂ ಮೂರು ಅಡಿಯಷ್ಟು ವಿಶಾಲ ಜಾಗವಿರುತ್ತದೆ. ಚಾವಣಿ ನೆಲಕ್ಕೆ ತಾಗದಂತೆ ಪ್ರವೇಶ ದ್ವಾರದಲ್ಲಿ ಎರಡು ಆಧಾರ ಕಂಬಗಳನ್ನು ನೆಟ್ಟು ಭದ್ರ ಪಡಿಸುತ್ತದೆ.

ಮನೆಯ ಸುತ್ತ ಸಿಂಗಾರ!
ಗೂಡಿನ ಸುರಕ್ಷತೆಗಿಂತ ಹೆಚ್ಚಾಗಿ ಸೌಂದರ್ಯಕ್ಕೆ ಮೊದಲ ಪ್ರಾಶಸ್ತ್ಯ. ಎಲೆಗಳು, ಕೀಟಗಳ ಆಕರ್ಷಕ ಚಿಪ್ಪುಗಳು, ಕಾಯಿ
 ಹಣ್ಣುಗಳು, ಕೊನೆಗೆ ಮಾನವ ನಿರ್ಮಿ ತ ಬಾಟಲ್ ಕ್ಯಾಪ್, ಕ್ಲಿಪ್ ಯಾವುದೇ ಸಿಕ್ಕರೂ ಅಲಂಕಾರಕ್ಕೆ ಬಳಸಿಕೊಳ್ಳುತ್ತದೆ. ಆ ಬಳಿಕ ಆರ್ಚಿಡ್ ಹೂವುಗಳನ್ನು ತಂದು ಇನ್ನಷ್ಟು ಸಿಂಗಾರಗೊಳಿಸುತ್ತದೆ. ಸುಂದರ ವಸ್ತುಗಳನ್ನು ಕಂಡರೆ ಅವುಗಳನ್ನು ತಂದು ಗೂಡಿನ ಮುಂದೆ ರಾಶಿ ಹಾಕುತ್ತದೆ. ಗೂಡಿನ ಒಳಗಡೆ ಮತ್ತು ಹೊರಗೆ ಕೆಂಪು, ನೀಲಿ, ಕಪ್ಪು, ಕೇಸರಿ ಬಣ್ಣದ ವಸ್ತುಗಳನ್ನು ತಂದು ಜೋಡಿಸುತ್ತದೆ. ಇಷ್ಟೆಲ್ಲಾ ಮಾಡಲು ಸಮಯ ಬೇಡವೇ? ಹೀಗಾಗಿ ವರ್ಷದಲ್ಲಿ 9 ತಿಂಗಳು ಮನೆಯನ್ನು ಕಟ್ಟಿ ಅದನ್ನು ನಿರ್ವಹಿಸುವುದಕ್ಕೆ ಮೀಸಲು. ವಿಪರ್ಯಾಸವೆಂದರೆ, ಗಂಡು ಹಕ್ಕಿ ವರ್ಷವಿಡೀ ಕಷ್ಟಪಟ್ಟು ಗೂಡು ನಿರ್ಮಿಸುವುದು ಹೆಣ್ಣನ್ನು ಆಕರ್ಷಿಸಲು ಮಾತ್ರ.

 ಹೆಣ್ಣನ್ನು ಆಕರ್ಷಿಸಲು ಕಸರತ್ತು!
ಹೆಣ್ಣು ಹಕ್ಕಿಯೂ ಅಷ್ಟೇ ಚಾಲಾಕಿ. ಇಂತಹ ಕೆಲ ಮನೆಯನ್ನು ನೋಡಿ, ತನಗೆ ಹೆಚ್ಚು ಇಷ್ಟವಾದ ಮನೆಯ ಗಂಡನ್ನು ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳತ್ತದೆ! ಒಮ್ಮೆ  ಒಂದು ಹೆಣ್ಣು ಒಲಿದು, ಅದರೊಂದಿಗೆ ನಲಿದಾದ ಮೇಲೆ ಹೆಣ್ಣು ಹಕ್ಕಿ ಬೇರೆ ಜಾಗದಲ್ಲಿ ತಾನೇ ಗೂಡು ನಿರ್ಮಿಸಿ ಮೊಟ್ಟೆ ಇಡುತ್ತದೆ. ಕಾವುಕೊಡುವುದು ಮರಿಗಳನ್ನು ಸಾಕುವುದು ಮೊದಲಾದ ಎಲ್ಲ ಕಾರ್ಯವನ್ನು ಹೆಣ್ಣು ಹಕ್ಕಿಯೊಂದೇ ನಿಭಾಯಿಸುತ್ತದೆ. ಹೆಣ್ಣು ಹೀಗೆ ತನ್ನ ಮರಿಗಳನ್ನು ಬೆಳೆಸುವ ಕಾಯಕದಲ್ಲಿರುವಾಗ ಅದರ ಸಂಗಾತಿಯಾಗಿದ್ದ ಗಂಡು ಹಕ್ಕಿ ತನ್ನ ಸುಂದರವಾದ ಗೂಡಿನೊಂದಿಗೆ ಬೇರೊಂದು ಹೆಣ್ಣನ್ನು ಆಕರ್ಷಿಸುವ ಕೆಲಸದಲ್ಲಿರುತ್ತದೆ.

ಸುದೀರ್ಘ ಬದುಕು:

ಬೋವರ್ ಹಕ್ಕಿಗಳು ಸುದೀರ್ಘ ಕಾಲ ಬದುಕು ನಡೆಸುತ್ತದೆ. ಇದರ ಆಯುಸ್ಸು ಸರಾಸರಿ 21 ವರ್ಷಗಳವರೆಗೆ ಬದುಕಿರ ಬಲ್ಲದು ಎಂದು ಅಂದಾಜಿಸಲಾಗಿದೆ. ಈ ಹಕ್ಕಿಯಲ್ಲಿ ಸುಮಾರು 20 ಪ್ರಕಾರಗಳಿವೆ. ಹಣ್ಣುಗಳು ಇದರ ಇಷ್ಟವಾದ ಆಹಾರ.

Thursday, October 23, 2014

ಕಪ್ಪು ಸಮುದ್ರದ ಒಡಲಿನ ರಹಸ್ಯ!

ಕಪ್ಪು ಸಮುದ್ರ ತನ್ನೊಳಗೆ ಏನೇನು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆಯೋ? ಅವು ಇಂದಿಗೂ ಪತ್ತೆಯಾಗುತ್ತಲೇ ಇವೆ! ಈ ಸಮುದ್ರ ಜಗತ್ತಿನ ಇತರ ಸಮುದ್ರಗಳೊಂದಿಗೆ ಬಹುತೇಕ ಸಂಪರ್ಕ ಕಡಿದುಕೊಂಡಿದೆ. ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಬೊಸ್ಟೊರಸ್ ಜಲಸಂಧಿ ಕಪ್ಪು ಸಮುದ್ರದಿಂದ ನೀರು ಹೊರಹೋಗಲು ಇರುವ ಏಕೈಕ ಮಾರ್ಗ. ಇಲ್ಲದಿದ್ದರೆ ಇದೊಂದು ಸರೋವರವಾಗಿರುತ್ತಿತ್ತು! 436,400 ಚದರ್ ಕಿ.ಮೀ. ವಿಸ್ತೀರ್ಣ ಹೊಂದಿರುವ ಇದು, 2,212 ಮೀಟರ್ ಆಳವಿದೆ. ಯುರೋಪ್, ಅನಾಟೋಲಿಯಾ, ಕಾಕಸ್ ಭೂ ಪ್ರದೇಶಗಳ ಆರು ದೇಶಗಳಿಂದ ಸಮುದ್ರ ಸುತ್ತುವರಿದಿದೆ.


ಉಬ್ಬರ ಇಳಿತವಿಲ್ಲದ ಸಮುದ್ರ!
ಕಪ್ಪು ಸಮುದ್ರದ ಆಳದಲ್ಲಿ  ಶತಮಾನಗಳ ಹಿಂದೆ ಮುಳುಗಡೆಯಾದ ಹಡಗುಗಳು, ಕಾಣೆಯಾದ ವಸ್ತುಗಳು, ತಿಮಿಂಗಿಲುಗಳ ಮೂಳೆಗಳು ಮೇಲಕ್ಕೆ ಹೊರಬರುತ್ತಲೇ ಇವೆ. ಕ್ರಿಸ್ತಪೂರ್ವ 3 ಮತ್ತು 5ನೇ ಶತಮಾನದಲ್ಲಿ ಗ್ರೀಸರು ನಿರ್ಮಿಸಿದ ಹಡಗಿನ ಅವಶೇಷಗಳು ಇಂದದಿಗೂ ಪತ್ತೆಯಾಗುತ್ತಿರುವುದು ವಿಶೇಷ. ಈ ಸಮುದ್ರದಲ್ಲಿ ನೀರು ಯಾವಾಗಲೂ ತಟಸ್ಥವಾಗಿರುತ್ತದೆ. ಉಬ್ಬರ ಇಳಿತಗಳಾಗಲೀ ಇಲ್ಲ.  ನೀರಿನ ಪ್ರಮಾಣವೂ ಒಂದೇ ರೀತಿಯಾಗಿರುತ್ತದೆ. ಹೀಗಾಗಿ ಮುಳುಗಿದ ವಸ್ತುಗಳನ್ನು ಸಮುದ್ರವೇ ಕಬಳಿಸಿಬಿಡುತ್ತದೆ. ಕಪ್ಪು ಸಮುದ್ರ ಎಂಬ ಹೆಸರು ಬಂದ ಬಗ್ಗೆಯೂ ಅನೇಕ ವಾದಗಳಿವೆ. ಪ್ರಾರಂಭದಲ್ಲಿ ಈ ಸಮುದ್ರಕ್ಕೆ ಗ್ರಿಕರು ನಿರಾಶ್ರಯ ಸಮುದ್ರ ಎಂದು ಹೆಸರು ನೀಡಿದ್ದರು. ಇಲ್ಲಿ ಸಂಚಾರ ಕೈಗೊಳ್ಳಲು ಹೆದರುತ್ತಿದ್ದರು. ಬಳಿಕ ಟರ್ಕರು ಈ ಸಮುದ್ರದಲ್ಲಿ ಸುಲಭವಾಗಿ ಸಂಚಾರ ಮಾಡಿದರು. ಇದಕ್ಕೆ ಕಪ್ಪು ಸಮುದ್ರ ಎಂಬ ಹೆಸರು ಅವರಿಂದಲೇ ಬಂದಿದೆ.

6 ದೇಶಗಳಿಂದ ಸುತ್ತುವರಿದ ಸಮುದ್ರ: 
ರೊಮಾನಿಯಾ, ಟರ್ಕಿ , ಉಕ್ರೇನ್, ಬಲ್ಗೇರಿಯಾ, ರಷ್ಯಾ, ಜಾರ್ಜಿಯಾದೊಂದಿಗೆ ಕಪ್ಪು ಸಮುದ್ರ ದಂಡೆಗಳನ್ನು ಹಂಚಿಕೊಳ್ಳುತ್ತದೆ. ಅತಿ ಹೆಚ್ಚು ಸಮುದ್ರ ದಂಡೆಯನ್ನು ಟರ್ಕಿ ಒಳಗೊಂಡಿದೆ. ಇಷ್ಟು ದೇಶಗಳಿಂದ ಸುತ್ತುವರಿದ ಮತ್ತೊಂದು ಸಮುದ್ರ ಬೇರೆಲ್ಲಿಯೂ ಇಲ್ಲ.

  • ಕಪ್ಪು ಸಮುದ್ರಕ್ಕಾಗಿ ಯುದ್ಧ! 
ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾನ್ಸ್ಟಾಂಟಿನೋಪಲ್ ಪತನದ ನಂತರ ಕಪ್ಪು ಸಮುದ್ರ ಟರ್ಕಿ ಸಮಾಜ್ಯದ ವಶವಾಯಿತು. ಆ ಸಮಯದಲ್ಲಿ ಅದನ್ನು ಟರ್ಕಿ ಸರೋರವರ ಎಂದೇ ಕರೆಯಲಾಗುತ್ತಿತ್ತು. ಕಪ್ಪು ಸಮುದ್ರವನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ರಷ್ಯಾ ಮತ್ತು ಟರ್ಕಿಯ ನಡುವೆ ಯುದ್ಧವೂ ನಡೆದಿತ್ತು.
  • ಆಮ್ಲಜನಕ ರಹಿತ ಸಮುದ್ರ:
ಕಪ್ಪು ಸಮುದ್ರದಲ್ಲಿ ತಳದಿಂದ ಮೇಲ್ಮಟ್ಟದವರೆಗೂ ಒಂದೇ ರೀತಿಯಾದ ನೀರಿದೆ. ವಾತಾವರಣದ ಆಮ್ಲಜನಕವನ್ನು ಪಡೆಯುವ ನೀರಿನ ಮೇಲ್ಪದರದ ತೀರಾ ಕಡಿಮೆ. ಶೇ.90ಕ್ಕಿಂತ ಹೆಚ್ಚು ಪ್ರಮಾಣದ ಕಪ್ಪು ಸಮುದ್ರದ ನೀರು ಆಮ್ಲಜನಕ ರಹಿತವಾಗಿದೆ.
  • ಸಮುದ್ರ ತಳದಲ್ಲಿ ಗುಪ್ತಗಾಮಿನಿ:
ಕಪ್ಪು ಸಮುದ್ರದಲ್ಲಿ ಆಳದಲ್ಲಿ ಅತಿದೊಡ್ಡ ನದಿಯೊಂದು ಪ್ರವಹಿಸುತ್ತದೆ. ಈ ಪ್ರವಾಹ ಸಮುದ್ರಕ್ಕೆ ನೀರು ಮತ್ತು ಗಾಳಿಯನ್ನು ಪೂರೈಸುತ್ತದೆ. ಈ ಪ್ರವಾಹ ಇಂದಿಗೂ ಸಕ್ರಿಯ. ಇದರ ಸಹಾಯದಿಂದಲೇ ಸಮುದ್ರದ ತಳದಲ್ಲಿ ಜೀವಿಗಳು ಬದುಕಲು ಸಹಾಯವಾಗಿದೆ ಎಂದು  ವಿಜ್ಞಾನಿಗಳು ಸಂಶೋಧಿಸಿದ್ದಾರೆ.

  • ಪ್ರವಾಸಿಗರ ನೆಚ್ಚಿನ ತಾಣ:
ಕಪ್ಪು ಸಮುದ್ರದಲ್ಲಿ 10 ಚಿಕ್ಕಪುಟ್ಟ ದ್ವೀಪಗಳಿವೆ. ಪ್ರಯೊಂದರಲ್ಲಿಯೂ ಭಿನ್ನವಾದ ಸಸ್ಯ ಮತ್ತು ಜೀವರಾಶಿಗಳಿವೆ. ಈ ವಿಲಕ್ಷಣದ ದ್ವೀಪಗಳಲ್ಲಿ ವಿಹರಿಸಲು ಸಾವಿರಾರು ಪ್ರವಾಸಿಗರು ಕಪ್ಪು ಸಮುದ್ರಕ್ಕೆ  ಭೇಟಿ ನೀಡುತ್ತಾರೆ. ಇಂದು ಕಪ್ಪು ಸಮುದ್ರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
  • ವಿಷಕಾರಿ ಆಗುತ್ತಿದೆ ಎಚ್ಚರ!
ಕಪ್ಪು ಸಮುದ್ರ ಇಂದು ವಿಷಕಾರಿಯಾಗಿ ಪರಿವತರ್ಿತವಾಗುತ್ತಿವೆ. ಯುರೋಪ್ ದೇಶಗಳು ಸಮುದ್ರಕ್ಕೆ ವಿಷಕಾರಕ ರಾಸಾಯನಿಕ, ತೈಲೋತ್ಪನ್ನ ತ್ಯಾಜ್ಯಗಳನ್ನು ತುಂಬುತ್ತಿವೆ. ಅಲ್ಲದೆ,  ಸಮುದ್ರದಲ್ಲಿ ಅತಿಯಾದ ಮೀನುಗಾರಿಕೆಯಿಂದ 21 ಪ್ರಕಾರದ ಮೀನುಗಳ ಅಳಿವಿಗೆ ಕಾರಣವಾಗಿದೆ.


 


ಐತಿಹಾಸಿಕ ಕೆಂಪು ಕೋಟೆ!

ದೆಹಲಿಯ ಜನಪ್ರಿಯ ಕಿಲ್ಲಾ- ಇ- ಮೊಲ್ಹಾ ಇದರ ಹೊಸ ಹೆಸರೇ ಈಗಿನ ಕೆಂಪು ಕೋಟೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನಾವಾದ 1947ರ ಆಗಸ್ಟ್ 15ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರ್ ಗೇಟಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಇದರ ಧ್ಯೋತಕವಾಗಿ ಪ್ರತಿ ವರ್ಷ ಆಗಸ್ಟ್- 15 ರಂದು ಭಾರತದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲೆ  ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಕೆಂಪುಕೋಟೆಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಇಂದು ಇದು ಪ್ರಸಿದ್ಧ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.
 

ಕೆಂಪು ಕೋಟೆಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. 254.67 ಎಕರೆಯಷ್ಟು ವಿಶಾಲವಾದ ಜಾಗವನ್ನು ಕೆಂಪು ಕೋಟೆ ಆವರಿಸಿಕೊಂಡಿದೆ. ಈ ಕೋಟೆಯು ಸುಮಾರು 2.41 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಲಾಹೋರ್ ದ್ವಾರವು ಚಚ್ಛಾ ಚೌಕ ಮಾರುಕಟ್ಟೆಗೆ ಕೊಂಡೊಯ್ಯುತ್ತದೆ. ಇಲ್ಲಿ ರೇಷ್ಮೆ ಒಡವೆಗಳು ಹಾಗೂ ಇತರೇ ಬೆಲೆಬಾಳುವ ವಸ್ತುಗಳನ್ನು ರಾಜವಂಶಸ್ಥರಿಗಾಗಿ ಮಾರಾಟ ಮಾಡಲಾಗುತ್ತಿತ್ತು. ದೆಹಲಿ ಗೇಟ್ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂ ಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಇಲ್ಲಿ ಬೀಡುಬಿಟ್ಟಿರುತ್ತದೆ. 

ಕುತೂಹಲಗಳ ಆಗರ!
ಈ ಸುಂದರ ಸ್ಮಾರಕದಲ್ಲಿ ಅನೇಕ ಅದ್ಭುತ ಕಲಾಕೃತಿಗಳಿವೆ. ದಿವಾನ್ ಐ ಆಮ್ ಅವುಗಳಲ್ಲೊಂದು. ಇಲ್ಲೇ ರಾಜನು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುತ್ತಿದ್ದನು. ಕೆಂಪು ಕೋಟೆಯ ಒಳಭಾಗದಲ್ಲಿ ದಿವಾನ್ ಐ ಖಾಸ್ (ಖಾಸ್ ಮಹಲ್) ಇದೆ. ಇಲ್ಲಿ ರಾಜ್ಯದ ಮಂತ್ರಿಮಂಡಲದ ಸದಸ್ಯರು ಮತ್ತು ಅಥಿತಿಗಳೊಂದಿಗೆ ರಾಜರು ಖಾಸಗೀ ಸಭೆಗಳನ್ನು ನಡೆಸುತ್ತಿದ್ದರು. ಇಡೀ ಕೆಂಪುಕೋಟೆ ಅರ್ಧ ಚಂದ್ರಾಕಾರದಲ್ಲಿದ್ದು, ಕೋಟೆಯ ಗೋಡೆಗಳು 21 ಮೀಟರ್ ಎತ್ತರವಾಗಿವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಕೆಂಪು ಕೋಟೆಯಲ್ಲಿರುವ ರಾಗ ಮಹಲ್ಲನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಹಜಾನನ ಪತ್ನಿ ಮತ್ತು ಉಪಪತ್ನಿಯರು ವಾಸವಿದ್ದರು. ಇಲ್ಲಿರುವ ಮುಮ್ತಾಜ್ ಮಹಲ್ ಮಹಿಳೆಯರ ಸಭಾಂಗಣವಾಗಿದ್ದು, ಇಂದು ವಸ್ತು ಸಂಗ್ರಹಾಲಯವಾಗಿದೆ.

ಕೆಂಪು ಕೋಟೆಯ ಚರಿತ್ರೆ:
5ನೇ ಮುಘಲ್ ದೊರೆ ಷಹಜಹಾನನ ರಾಜಧಾನಿಯಾಗಿ ಕೆಂಪುಕೋಟೆಯನ್ನು 1648ರಲ್ಲಿ ನಿರ್ಮಿಸಲಾಯಿತು. ಷಹಜಹಾನನ ಆಸ್ತಾನದಲ್ಲಿದ್ದ ಉಸ್ತಾದ್ ಅಹಮದ್ ಲಹೌರಿ ಕೆಂಪು ಕೋಟೆಯ ವಾಸ್ತುಶಿಲ್ಪಿ. 1632ರಿಂದ 1648ರ ಅವಧಿಯಲ್ಲಿ ಮುಘಲ್ ವಾಸ್ತುಶಿಲ್ಪದ ಪ್ರಕಾರದಲ್ಲಿ ಕೆಂಪು ಕೋಟೆ ನಿರ್ಮಾಣಗೊಂಡಿದೆ. ತದನಂತರ ಮುಘಲರು ನಿರ್ಮಿಸಿದ ಎಲ್ಲ ಕಟ್ಟಡಗಳಿಗೂ ಕೆಂಪು ಕೋಟೆ ಮಾದರಿ ಎನಿಸಿಕೊಂಡಿತು.
ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೇ ರಾಜರಾಣಿಯರ ಅರಮನೆ ನಿವಾಸವಾಗಿಯೂ ರೂಪತಳೆಯಿತು.  200 ವರ್ಷಗಳ ಕಾಲ ಕೆಂಪು ಕೋಟೆಯಲ್ಲಿ ಮುಘಲ್ ದೊರೆಗಳು ವಾಸವಿದ್ದರು. ಕೆಂಪು ಕೋಟೆಯನ್ನು ಆಳಿದ ಕೊನೆಯ ಮುಘಲ್ ದೊರೆ 2ನೇ ಬಹದ್ದೂರ್ ಶಾ. 1857ರಲ್ಲಿ ನಡೆದ ಮೊದಲ ಸೇನಾ ದಂಗೆಗೆ ಕೆಂಪು ಕೋಟೆ ಸಾಕ್ಷಿಯಾಯಿತು. ಈ ಸಮಯದಲ್ಲಿ 2ನೇ ಬಹದ್ದೂರ್ ಶಾ ತಾನು ಸಂಪೂರ್ಣ ಭಾರದ ಅರಸ ಎಂದು ಘೋಷಿಸಿಕೊಂಡ. ಯುದ್ಧದಲ್ಲಿ ಸೋತಬಳಿಕ ಕೋಟೆಯಿಂದ ಪಲಾಯನಗೈದ. ಯುದ್ಧದ ಬಳಿಕ ಬ್ರಿಟೀಷರು ಕೆಂಪು ಕೋಟೆಯ ಬಹುಭಾಗವನ್ನು ನಾಶಪಡಿಸಿ ಅಲ್ಲಿ ಮಿಲಿಟರಿ ಬ್ಯಾರಕ್ಗಳನ್ನು ನಿಮರ್ಮಿಸಿದ್ದಾರೆ. ಕೋಟೆಯ ಒಳಗಿದ್ದ ಮೂರನೇ ಎರಡರಷ್ಟು ರಚನೆಗಳನ್ನು ನಾಶಪಡಿಸಿದ್ದಾರೆ. 1911ರಲ್ಲಿ ಬ್ರಿಟನ್ ರಾಜ ಮತ್ತು ರಾಣಿ ದೆಹಲಿ ದರ್ಭಾರ್ ಗೆ  ಭೇಟಿ ನೀಡಿದರು. ಈ ಕಾರಣಕ್ಕಾಗಿ ಕೆಲವೊಂದು ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ. 2007ರಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿದೆ.