ಜೀವನಯಾನ

Friday, July 22, 2016

ಟಿಬೆಟ್ ಪ್ರಸ್ಥಭೂಮಿ

ಟಿಬೆಟ್ ಜಗತ್ತಿನ ಚಾವಣಿ ಎಂದೇ ಕರೆಸಿಕೊಂಡಿದೆ. ಎಲ್ಲಿ ನೋಡಿದರೂ ಗುಡ್ಡ ಬೆಟ್ಟಗಳೇ ತುಂಬಿರುವ ಟಿಬೆಟ್ನಲ್ಲಿ ಸಮತಟ್ಟಾದ ಪ್ರಸ್ಥಭೂಮಿಗಳೂ ಕಾಣಸಿಗುತ್ತವೆ. ಅವು ಟಿಬೆಟ್ ಪ್ರಸ್ಥಭೂಮಿ ಅಂತಲೇ ಕರೆಸಿಕೊಂಡಿವೆ. ಇದನ್ನು ಏಷ್ಯನ್ ವಾಟರ್ ಟವರ್ ( ಏಷ್ಯಾದ ನೀರಿನ ಗೋಪುರ), ಮೂರನೇ ಧ್ರುವ ಎಂತಲೂ ಕರೆಯಲಾಗುತ್ತದೆ. ಅವುಗಳಲ್ಲಿ ಚಾಂಗ್ ತಾಂಗ್ ಪ್ರಸ್ಥಭೂಮಿ ಅತ್ಯಂತ ವಿಶಾಲ ಮತ್ತು ಯಾರೂ ತಲುಪಲಾಗದ ಸ್ಥಳ ಎನಿಸಿಕೊಂಡಿದೆ. 



ಏಷ್ಯಾದ ನೀರಿನ ಮೂಲ
ಟಿಬೆಟ್ ಪ್ರಸ್ಥಭೂಮಿ ಒಂದು ಸ್ವಾಯತ್ತ ಪ್ರದೇಶವೆನಿಸಿಕೊಂಡಿದ್ದರೂ ಅದು ಸಂಪೂರ್ಣವಾಗಿ ಚೀನಾದ ನಿಯಂತ್ರಣದಲ್ಲಿದೆ. ಸುಮಾರು 14ರಿಂದ 16 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ  2,500,000 ಚದರ ಕಿ.ಮೀ.ಯಷ್ಟು ವಿಶಾಲವಾದ ಪ್ರದೇಶಕ್ಕೆ ಚಾಚಿಕೊಂಡಿದೆ. ಹೀಗಾಗಿ ಇದನ್ನು ಜಗತ್ತಿನ ಚಾವಣಿ ಎಂತಲೂ ಕರೆಯಲಾಗುತ್ತದೆ. ಪ್ರಸ್ಥಭೂಮಿ ಸುತ್ತಲೂ ಎತ್ತರದ ಪರ್ವತಗಳು ಮತ್ತು ಗಡಿಯಲ್ಲಿ ಹಿಮಾಲಯದ ಪರ್ವತ ಶ್ರೇಣಿಯನ್ನು ಒಳಗೊಂಡಿದೆ. ಇದು ಸಾವಿರಾರು ನೀರ್ಗಲ್ಲುಗಳು, ತೊರೆಗಳ ಆಗರ. ಏಷ್ಯಾದ ಅರ್ಧಭಾಗಕ್ಕೆ ಟಿಬೆಟ್ ಪ್ರಸ್ಥಭೂಮಿ ನೀರಿನ ಮೂಲವೆನಿಸಿಕೊಂಡಿದೆ. ಎತ್ತರದ ಗೋಪುರಗಳು ನೀರನ್ನು ಹಿಡಿದಿಟ್ಟುಕೊಂಡು ನೀರಿನ ಹರಿವನ್ನು ನಿಯಂತ್ರಿಸುತ್ತವೆ. ಗಂಗಾ, ಚೀನಾದಲ್ಲಿ ಹರಿಯುವ ಮೆಕಾಂಗ್ ಮತ್ತು ಯಾಂಗ್ಟ್ಜ್ ನದಿಗಳಿಗೆ ಟಿಬೇಟಿಯನ್ ಪ್ರಸ್ಥಭೂಮಿಯೇ ನೀರಿನ ಮೂಲ. ಅಲ್ಪೈನ್ ಟುಂಡ್ರಾ, ತೋಳ, ರಣ ಹದ್ದುಗಳು, ಕಾಡು ಕತ್ತೆ. ದ ಹಾಕ್ಸ್ ಮತ್ತಿತರ ಅಪರೂಪದ ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದೆ. ಟಿಬೇಟ್ ಪ್ರಸ್ಥಭೂಮಿ ಭೂಮಿಯ ಮೂರನೇ ಒಂದರಷ್ಟು ಹಿಮವನ್ನು ಹಿಡಿದಿಟ್ಟುಕೊಂಡಿದೆ.

ಕೈಗೆಟುಕದ ಚಾಂಗ್ ತಾಂಗ್ ಪ್ರಸ್ಥಭೂಮಿ
ಚಾಂಗ್ ತಾಂಗ್ ಪ್ರಸ್ಥಭೂಮಿ 1600 ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿದೆ. ಈ ಪ್ರದೇಶ ಟಿಬೆಟ್ ಪ್ರಸ್ಥಭೂಮಿಯ ಒಂದು ಭಾಗ. 14, 500 ಅಡಿ ಎತ್ತರದಲ್ಲಿರುವ ಈ ಪ್ರದೇಶ ಊಹಿಸಲು ಸಾಧ್ಯವಾಗದ ವಾತಾವರಣವನ್ನು ಹೊಂದಿದೆ. ಇಲ್ಲಿ ನಿರಾಶ್ರಿತರಂತೆ ಬೆಟ್ಟ ಕಾಡುಗಳನ್ನು ಅಲೆಯುವ ಚಾಂಗ್ಪಾ ಜನಾಂಗ 5 ಲಕ್ಷದಷ್ಟು ಇದ್ದಾರೆ ಎಂದು ಊಹಿಸಲಾಗಿದೆ. ಆದರೆ, ಅವರು ಕಣ್ಣಿಗೆ ಬೀಳುವುದೇ ಅಪರೂಪ.  ಚಾಂಗ್ ತಾಂಗ್ ಪ್ರಸ್ಥಭೂಮಿಯ ಗಡಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಗೂ ತಾಗಿಕೊಂಡಿದೆ. ಆದರೆ, ಇದು ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಲ್ಲಿ ಒಂದೆನಿಸಿದೆ. ಚಾಂಗ್ ತಾಂಗ್ ಪ್ರಸ್ಥಭೂಮಿಯನ್ನು ದಾಟುವುದು ಅಸಾಧ್ಯದ ಮಾತು. ಸ್ವೀಡನ್ನ ಸಾಹಸಿಗ ಸ್ವೇನ್ ಹೆಡಿನ್ ಎಂಬಾತ 2009ರಲ್ಲಿ ಈ ಪ್ರಸ್ಥಭೂಮಿಯನ್ನು ದಾಟಿದ್ದ, 81 ದಿನಗಳ ಆತನ ಚಾರಣದಲ್ಲಿ ಯಾವೊಬ್ಬ ವ್ಯಕ್ತಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಇಲ್ಲಿನ ವಾತಾವರಣ ಎಷ್ಟು ಕಠಿಣವೆಂದರೆ, ಸಾಮಾನ್ಯ ಉಷ್ಣಾಂಶ -5 ಡಿಗ್ರಿ ಸೆಲ್ಸಿಯಸ್ ಇದ್ದರೆ, ಚಳಿಗಾಲದಲ್ಲಿ - 50 ಡಿಗ್ರಿಯ ವರೆಗೂ ಇಳಿಕೆಯಾಗುತ್ತದೆ. ಹೀಗಾಗಿ ಚಾಂಗ್ ತಾಂಗ್ ಪ್ರಸ್ಥಭೂಮಿ ಆಧುನಿಕತೆಯಿಂದ ಸಂಪೂರ್ಣ ದೂರವಾಗಿ ಕೈಗೆಟುಕದ ಪ್ರದೇಶವಾಗಿಯೇ ಉಳಿದುಕೊಂಡಿದೆ. ಕಾಡು ಚಮರೀಮೃಗ, ಕಿಯಾಂಗ್ನಂತಹ ಪ್ರಾಣಿಗಳನ್ನಷ್ಟೇ ಇಲ್ಲಿ ನೋಡಲು ಸಾಧ್ಯ.

ಆಯಸ್ಕಾಂತೀಯ ಗುಡ್ಡ

ಬೆಟ್ಟ ಅಂದರೆ ಎಲ್ಲರಿಗೂ ಆಕರ್ಷಣೆ. ಆದರೆ, ಇಲ್ಲೊಂದು ಬೆಟ್ಟಕ್ಕೆ ವಾಹನಗಳನ್ನು ತನ್ನತ್ತ ಆಕರ್ಷಿಸುವ ಚುಂಬಕದ ಶಕ್ತಿ ಇದೆ. ಈ ಬೆಟ್ಟದ ಮುಂದಿರುವ ರಸ್ತೆಯಲ್ಲಿ ವಾಹನಗಳು ಇಂಜಿನ್ ಆಫ್ ಆಗಿದ್ದರೂ ಗಂಟೆಗೆ 20 ಕಿ.ಮೀ. ವೇಗದಲ್ಲಿ ಏರನ್ನು ಹತ್ತುತ್ತವೆ! ಈ ಅಚ್ಚರಿಯ ವಿದ್ಯಮಾನ ನಡೆಯುವುದು ಲಡಾಖ್ನ ಆಯಸ್ಕಾಂತೀಯ ಗುಡ್ಡದಲ್ಲಿ. ಇದೊಂದು ಭ್ರಮೆಯೋ ಅಥವಾ ನಿಜವಾಗಿಯೂ ಬೆಟ್ಟಕ್ಕೆ ಚುಂಬಕದ ಶಕ್ತಿ ಇದೆಯೇ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ.


ಲೇಹ್ ನ ಕಾರ್ಗಿಲ್- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಸ್ಕಾಂತೀಯ ಗುಡ್ಡ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ಕಾರಿನಲ್ಲಿ ಬರುವ ಪ್ರವಾಸಿಗರಿಗೆ ಆಯಸ್ಕಾಂತಿಯ ಗುಡ್ಡ ಪ್ರಸಿದ್ಧ ನಿಲುಗಡೆ ಸ್ಥಳ. ಲೇಹ್ನಿಂದ ಕಾಗರ್ಗಿಲ್ ಗೆ ತೆರಳುವ 30 ಕಿ.ಮಿ. ಉದ್ದದ ರಸ್ತೆಯಲ್ಲಿನ ಒಂದು ನಿರ್ದಿಷ್ಟ ಜಾಗದಲ್ಲಿ ಇಂಥದ್ದೊಂದು ಅನುಭವ ಆಗುತ್ತದೆ. ರಸ್ತೆಯ ಪಕ್ಕದಲ್ಲಿ ಆಯಸ್ಕಾಂತೀಯ ಗುಡ್ಡ ಆರಂಭವಾಗುತ್ತಿದೆ ಎಂಬುದನ್ನು ತೋರಿಸುವ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಸೂಚನಾ ಫಲಕದ ಪಕ್ಕದಲ್ಲಿ ಒಂದು ಚೌಕಾಕಾರದ ಗುರುತನ್ನು ಹಾಕಲಾಗಿದೆ. ಅಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಇಂಜಿನ್ ಆಫ್ ಮಾಡಬೇಕು. ತಕ್ಷಣವೇ ಕಾರು ತನ್ನಿಂದ ತಾನಾಗಿ ಗಂಟೆಗೆ ಸುಮಾರು 20 ಕಿ.ಮೀ. ವೇಗದಲ್ಲಿ ಏರು ಮುಖವಾಗಿ ಚಲಿಸಲು ಆರಂಭಿಸುತ್ತದೆ. ಮುಂದೆ ಕಾಣುವ ಬೆಟ್ಟದ ಪ್ರಭಾವದಿಂದಲೇ ಕಾರು ಮುಂದೆ ಚಲಿಸುತ್ತಿದೆ ಎಂಬ ಅನುಭವಕ್ಕೆ ಚಾಲಕರು ಒಳಗಾಗುತ್ತಾರೆ. ಒಂದು ವೇಳೆ ಕಾರನ್ನು ಹಿಮ್ಮುಖವಾಗಿ ನಿಲ್ಲಿಸಿರೂ ಅದೇ ದಿಕ್ಕಿಗೆ ಚಲಿಸಲು ಆರಂಭಿಸುತ್ತದೆ. ಆದರೆ, ಕ್ರಿಯೆಗೆ ಏನು ಕಾರಣ ಎಂಬುದು ಮಾತ್ರ ನಿಗೂಢ. ಇಲ್ಲಿ ವಾಹನವಷ್ಟೇ ಅಲ್ಲ, ಈ ಪ್ರದೇಶದ ಮೇಲೆ ಚಲಿಸುವ ವಿಮಾನಗಳ ಮೇಲೂ ಈ ಗುಡ್ಡ ತನ್ನ ಪ್ರಭಾವ ಹೊಂದಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಮೇಲ್ಮಟ್ಟದಲ್ಲಿ ವಿಮಾನ ಹಾರಾಟ ಕೈಗೊಳ್ಳಲಾಗುತ್ತದೆ. ಹೀಗಾಗಿ ಆಯಸ್ಕಾಂತೀಯ ಗುಡ್ಡ ಭೂಮಿಯ ಗುರುತ್ವಾಕರ್ಷಣೆಗೆ ಕ್ರಿಯೆಗೂ ಇದು ಸಾವಾಲಾಗಿದೆ.

ಇದೊಂದು ಕೇವಲ ಭ್ರಮೆ?

ಈ ರಸ್ತೆಯಲ್ಲಿ ಸಣ್ಣ ಇಳಿಜಾರಿದೆ. ಆದರೆ, ಮುಂದೆ ನೋಡಿದರೆ ಘಟ್ಟವನ್ನು ಹತ್ತುತ್ತಿದ್ದಂತೆ ಭಾಸವಾಗುತ್ತದೆ. ಹೀಗಾಗಿ ಇದನ್ನು ಬರಿಗಣ್ಣಿಗೆ ಗೋಚರಿಸುವ  ಭ್ರಮೆ ಎಂದು ಹೇಳುವವರಿದ್ದಾರೆ. ಹಿಂಬದಿಯಿಂದ ಬೀಸುವ ಗಾಳಿ ಪ್ರಭಾವದಿಂದ ವಾಹನ ಮುಂದೆ ಚಲಿಸುತ್ತದೆ ಎಂದು ವಾದಿಸುಸುವವರೂ ಇದ್ದಾರೆ. ಒಂದು ವೇಳೆ ಅಲ್ಲಿನ ಸ್ಥಳೀಯರನ್ನು ಮಾತನಾಡಿಸರೆ ಅವರು ನೀಡುವ ಉತ್ತರವೇ ಬೇರೆ. ಅವರ ಪ್ರಕಾರ ಈ ಪ್ರದೇಶ ಅಲೌಕಿಕ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಹೇಳುತ್ತಾರೆ.

ಪ್ರಸಿದ್ಧ ಪ್ರವಾಸಿ ತಾಣ

ನೈಸಗರಕ ಗುಡ್ಡ ಬೆಟ್ಟಗಳಿಂದ ಕೂಡಿರುವ ಲಡಾಖ್ ಒಂದು ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಬೈಕ್ ಸವಾರರಿಗೆ ಮತ್ತು ಚಾರಣಿಗರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಅಲಚಿ, ನೋಬ್ರಾ ಕಣಿವೆ, ಹೇಮಿಸ್, ಲಮ್ಯಾರು, ಜನ್ಸ್ಕರ ಕಣಿವೆಗಳು ಕಣ್ಮನ ಸೆಳೆಯುತ್ತವೆ.

ರೌದ್ರ ರಮಣೀಯ ಸಿಯಾಚಿನ್ ನೀರ್ಗಲ್ಲು

ಅಲ್ಲಿ ಮೈಕೊರೆಯುವ -50 ಡಿಗ್ರಿ ತಾಪಮಾನ. ಸಮುದ್ರ ಮಟ್ಟದಿಂದ 18,875 ಅಡಿ ಎತ್ತರ. ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ. ಕೊಂಚ ಇತ್ತ ಸರಿದರೆ ಪಾಕಿಸ್ತಾನ, ಚೀನಾದ ಗಡಿ. ಈ ಪುಟ್ಟ ಭೂಮಿಯನ್ನು ಭಾರತೀಯ ಯೋಧರು ಪ್ರಾಣ ಒತ್ತೆಇಟ್ಟು ಕಾಯುತ್ತಿದ್ದಾರೆ. ಅದೇ ರೌದ್ರ ಸೌಂದರ್ಯದ ಸಿಯಾಚಿನ್ ನೀರ್ಗಲ್ಲು.

ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಯಲ್ಲಿ ಇರುವ ಸಿಯಾಚಿನ್, ಪರ್ವತಾರೋಹಿಗಳ ನೆಚ್ಚಿನ ತಾಣವೂ ಹೌದು. ಈ ಸುಂದರ ಜಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತ್ತು. ಆದರೆ, 1984ರಲ್ಲಿ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತ ಬಿಡಿಸಿಕೊಂಡಿತ್ತು. ಸಿಯಾಚಿನ್ ಅಂದರೆ ಕಾಡು ಗುಲಾಬಿಗಳು ಇರುವ ಸ್ಥಳ ಎಂದರ್ಥ. ಇಲ್ಲಿ ಗುಲಾಬಿ ಮಾತಿರಲಿ ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತನೋಡಿದರೂ ಕಣ್ಣಿಗೆ ರಾಚುವ ಹಿಮ. ಅದು ಅಷ್ಟೇ ಭೀಕರ. ಅಲ್ಲಿ ಮದ್ದುಗುಂಡಿಗಿಂತ ಹೆಚ್ಚಾಗಿ ಸೈನಿಕರು ಸಾಯುವುದು ವಾತಾವರಣದ ವೈಪರೀತ್ಯದಿಂದಾಗಿ. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಪಾತದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಇದೀಗ ಸೈನಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದ್ದು, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಲಿ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್ ಮೂಲಕವೇ  ತಲುಪಿಸಬೇಕಾಗುತ್ತದೆ. ಸಕರ್ಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ 10 ಲಕ್ಷದಿಂದ 2 ಕೋಟಿ ರೂ. ವರೆಗೂ ವೆಚ್ಚ ತಗುಲುತ್ತದೆ.


1984ರ ಯುದ್ಧ:
ಸಿಯಾಚಿನ್ ಪ್ರದೇಶಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1984ರಲ್ಲಿ ಯುದ್ಧ ನಡೆದಿತ್ತು. ಅದು ವಿಶ್ವದ  ಅತ್ಯಂತ ಎತ್ತರದ ಯುದ್ಧಭೂಮಿಯಲ್ಲಿ ನಡೆದ ಕಾಳಗವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಸೈನಿಕರು ಸಿಯಾಚಿನ್ ಅನ್ನು ಏರಿ ಪರಸ್ಪರ ಕಾದಾಡಿದ್ದರು. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತ ಆಪರೇಷನ್ ಮೇಘದೂತ ಕಾಯರ್ಾಚರಣೆಯನ್ನು ನಡೆಸಿತ್ತು. ಇದರ ಪರಿಣಾಮ ಭಾರತಕ್ಕೆ ಸಿಯಾಚಿನ್ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಸಿಯಾಚಿನ್ನಲ್ಲಿ ಯೋಧರನ್ನು ಹಿಂಪಡೆದುಕೊಳ್ಳುವುದುಕ್ಕೆ ಭಾರತ ಒಪ್ಪಿದೆ. ಆದರೆ, ಪಾಕಿಸ್ತಾನ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಬಂದಿರುವುದರಿಂದ ಅದು ಸಾಧ್ಯವಾಗಿಲ್ಲ. ಸಿಯಾಚಿನ್ನಲ್ಲಿ ಇತ್ತೀಚಿನ ದಿನಗಳಲ್ಲಿ ಚಾರಣಕ್ಕೂ ಅವಕಾಶ ನೀಡಲಾಗಿದೆ. ಸಾಹಸಪ್ರಿಯರು ಪರ್ವತಾರೋಹಣ ಕೈಗೊಳ್ಳಬಹುದು. ಆದರೆ, ಗುಂಡಿಗೆ ಗಟ್ಟಿ ಇರಬೇಕಷ್ಟೆ.


ಸಿಂಧು ನದಿಗೆ ನೀರಿನ ಮೂಲ
ಸಿಯಾಚಿನ್ನಲ್ಲಿ ಶೇಖರವಾಗಿರುವ ನೀರ್ಗಲ್ಲು ಅಥವಾ ಹಿಮ ನದಿ ಕರಗಿ ಲಡಾಖ್ ಪ್ರದೇಶದಲ್ಲಿ ಹರಿಯುವ ನುಬ್ರಾ ನದಿಗೆ ನೀರನ್ನು ಒದಗಿಸುತ್ತದೆ. ಅದು ಶೋಕ್ ನದಿಯ ಕಾಲುವೆ ಮೂಲಕ 3000 ಕಿ.ಮೀ. ಉದ್ದದ ಸಿಂಧು ನದಿಯನ್ನು ಹೋಗಿ ಸೇರುತ್ತದೆ.  ಹೀಗಾಗಿ ಸಿಂಧು ನದಿಗೆ ಸಿಯಾಚಿನ್ ಪ್ರಮುಖ ನೀರಿನ ಮೂಲ.

ಕರಗುತ್ತಿರುವ ನೀರ್ಗಲ್ಲು
ಇಂಥ ಅದ್ಭುತವಾದ ನೀರ್ಗಲ್ಲು ಅಪಾಯಕಾರಿಯಾದ ರೀತಿಯಲ್ಲಿ ಕರಗುತ್ತಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ. ಸೆಟಲೈಟ್ ಆಧಾರಿತ ಚಿತ್ರದಲ್ಲಿ ನೀರ್ಗಲ್ಲು ವರ್ಷಕ್ಕೆ 110 ಮೀಟರ್ನಷ್ಟು ಕ್ಷೀಣಿಸುತ್ತಿರುವುದು ಕಂಡು ಬಂದಿದೆ. ಅಂದರೆ ನೀರ್ಗಲ್ಲಿನ ಎತ್ತರ ಶೇ.35ರಷ್ಟು ಇಳಿಕೆಯಾಗಿದೆಯಂತೆ. ಇದರ ಪ್ರಮಾಣ ಹೀಗೆಯೇ ಮುಂದುವರಿದರೆ ಇನ್ನು 10 ವರ್ಷದಲ್ಲಿ ನೀರ್ಗಲ್ಲು 800 ಮೀಟರ್ನಷ್ಟು ಕರಗಿ ಹೋಗುವ ಅಪಾಯವಿದೆ. ಇನ್ನೊಂದು ಕಳವಳಕಾರಿ ಅಂಶವೆಂದರೆ  ಪರ್ವತಾರೋಹಿಗಳು ಅಮೋನಿಯಂ ಶೆಲ್ಗಳು, ಪ್ಯಾರಾಚೂಟ್ಗಳನ್ನು ನೀರ್ಗಲ್ಲಿನಲ್ಲಿಯೇ ಎಸೆದುಬರುತ್ತಾರೆ. ಇದರಿಂದ ಅಲ್ಲಿ ಅಪಾರ ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ಅಲ್ಲದೇ ಯೋಧರು ಅಲ್ಲಿ ಕಾವಲು ಕಾಯುವುದರಿಂದ, ಆಗಾಗ ಗುಂಡಿನ  ಕಾಳಗ ನಡೆಯುವುದರಿಂದ ಅಪರೂಪದ ಸಸ್ಯ ಮತ್ತು ಜೀವ ಸಂಕುಲಕ್ಕೆ ಧಕ್ಕೆ ಉಂಟಾಗಿದೆ.

ವರ್ಷವಿಡೀ ಮಳೆಯಾಗುವ ಚಿರಾಪುಂಜಿ

ಭೂಮಿಯ ಮೇಲೆ ಅತ್ಯಧಿಕ ಮಳೆ ಬೀಳುವ ಸ್ಥಳವೆಂದರೆ ಅದು ಚಿರಾಪುಂಜಿ. ಈ ಹಿಂದೆ ಹಲವು ಸಲ ಅತಿಹೆಚ್ಚು ಮಳೆಯನ್ನು ಪಡೆಯುವ ಮೂಲಕ ಭೂಗ್ರಹದ ಮೇಲಿನ ಅತ್ಯಂತ ತೇವ ಪ್ರದೇಶ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಈ ಪ್ರದೇಶವಿದೆ. ಮುಂಗಾರು ಮಾರುತಗಳು ಇಲ್ಲಿನ ಬೆಟ್ಟ ಪ್ರದೇಶಗಳಿಗೆ ಅಪ್ಪಳಿಸಿ ಈ ಭಾಗಕ್ಕೆ ಭಾರೀ ಪ್ರಮಾಣದ ಮಳೆಯನ್ನು ಸುರಿಸುತ್ತವೆ. ನೈಋತ್ಯ ಮತ್ತು ಈಶಾನ್ಯ  ಮುಂಗಾರು ಚಿರಾಪುಂಜಿಯನ್ನು ಮಳೆಯಿಂದ  ನೆನೆಯುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಬ್ರಹ್ಮಪುತ್ರ ಕಣಿವೆಯಿಂದ ಬೀಸುವ ಈಶಾನ್ಯ ಮಾರುತಗಳು ಇಲ್ಲಿ ಮಳೆಯನ್ನು ಸುರಿಸುತ್ತವೆ. ಹೀಗಾಗಿಯೇ ಜಗತ್ತಿನ ಅತ್ಯಧಿಕ ಪ್ರಮಾಣದ ಮಳೆ ಸುರಿಯುವ ಪ್ರದೇಶ ಎಂಬ ಖ್ಯಾತಿ ಪಡೆದಿದೆ.



ಕರಾವಳಿಯ ವಾತಾವರಣ:

ಇದು ಸಮುದ್ರ ಮಟ್ಟದಿಂದ 4500 ಅಡಿ  ಎತ್ತರದಲ್ಲಿ ಇದ್ದರೂ, ಇಲ್ಲಿ ಕರಾವಳಿಯ ವಾತಾವರಣವಿದೆ. ಬೇಸಿಗೆಯ ಸಮಯದಲ್ಲಿ ಬೆಚ್ಚನೆಯ ಹಾಗೂ ಚಳಿಗಾಲದಲ್ಲಿ ಅತಿಯಾದ ಚಳಿ ಇಲ್ಲದ ತಂಪನ್ನು ಹೊಂದಿರುತ್ತದೆ. ಅನೇಕ ಗಿರಿ ಶಿಖರಗಳು, ಅರಣ್ಯ ಪ್ರದೇಶಗಳು ಹಾಗೂ ಜಲಪಾತಗಳು ಇಲ್ಲಿನ ಆಕರ್ಷಣೆ.  ಚಿರಾಪುಂಜಿಯಲ್ಲಿ ವಾಷರ್ಿಕ ಸರಾಸರಿ 11,777 ಮಿಲಿಮೀಟರ್ ಮಳೆ ಸುರಿಯುತ್ತದೆ.
ಇನ್ನು ಚಿರಾಪುಂಜಿಯ ಪಕ್ಕದಲ್ಲಿರುವ ಮಾಸಿನ್ರಾಂನಲ್ಲಿ ಕೂಡ ಹೀಗೆಯೇ ಮಳೆಸುರಿಯುತ್ತದೆ. ಸದ್ಯ ಜಗತ್ತಿನ ಅತಿ ತೇವದ ಪ್ರದೇಶ ಎಂಬ ಖ್ಯಾತಿಗೆ ಅದು ಪಾತ್ರವಾಗಿದೆ. ಇಲ್ಲಿ ವಾರ್ಷಿಕ ಸರಾಸರಿ 11,873 ಮಿ.ಮೀ. ಮಳೆಯಾಗುತ್ತಿದೆ.
ಚಿರಾಪುಂಜಿಯ ಮೂಲ ಹೆಸರು ಸೋಹ್ರಾ ಎಂದು. ಆದರೆ, ಬ್ರಿಟೀಷರು ಚುರ್ರಾ ಎಂದು ಹೇಳುತ್ತಿದ್ದರು. ಹೀಗೆ ಅದಕ್ಕೆ ಚಿರಾಪುಂಜಿ ಎಂಬ ಹೆಸರು ಬಂತು. ಚಿರಾಪುಂಜಿ ಅಂದರೆ ಕಿತ್ತಳೆ ಭೂಮಿ ಎಂಬ ಅರ್ಥವಿದೆ. ಚಿರಾಪುಂಜಿಯ ಕಣಿವೆಗಳು ಹಲವು ಸ್ಥಳೀಯ ಪ್ರಭೇದದ ಗಿಡಮರಗಳ ಆಶ್ರಯ ತಾಣವಾಗಿದೆ. ಮೇಘಾಲಯದ ಉಪ ಉಷ್ಣವಲಯದ ಕಾಡುಗಳು ಇಲ್ಲಿ ಕಂಡು ಬರುತ್ತವೆ. ಚಿರಾಪುಂಜಿ ಹಲವಾರು ಜಲಪಾತಗಳ  ತವರೂರು. ಇಲ್ಲಿಗೆ ಸಮೀಪದ 1,035 ಅಡಿ ಎತ್ತರವಿರುವ ಮಾಸ್ಮೈ ಫಾಲ್ಸ್ ದೇಶದ 4ನೇ ಅತಿದೊಡ್ಡ ಜಲಪಾತ. 


ಮಳೆಯಲ್ಲಿ ದಾಖಲೆ ನಿರ್ಮಾಣ
ಚಿರಾಪುಂಜಿ ಸದ್ಯಕ್ಕೆ ಎರಡು ಗಿನ್ನೆಸ್ ದಾಖಲೆಗಳನ್ನು ಹೊಂದಿದೆ. 1860 ಆಗಸ್ಟ್ 1ರಿಂದ 1861 ಜು. 31ರ ನಡುವಿನ ಅವಧಿಯಲ್ಲಿ 22,987 ಮಿ.ಮೀ. ಮಳೆಯಾಗಿತ್ತು. ಇನ್ನು 1861ರ ಜುಲೈ ಒಂದರಲ್ಲೇ  9,300 ಮಿಲಿಮೀಟರ್ ಮಳೆ ಸುರಿದು ದಾಖಲೆ ನಿಮರ್ಮಾಣವಾಗಿತ್ತು.


ಮಳೆ ಸುರಿದರೂ ನೀರಿಗೆ ಬರ!
ದೇಶದಲ್ಲಿ ಮಳೆಗಾಲ ಮಾತ್ರ ಇರುವ ಪ್ರದೇಶವೆಂದರೆ ಅದು ಚಿರಾಪುಂಜಿ. ಇಲ್ಲಿ ಮಳೆ ಇಲ್ಲದ ತಿಂಗಳೇ ಇಲ್ಲ. ಅಚ್ಚರಿಯೆಂದರೆ  ಭಾರೀ ಮಳೆ ಬೀಳುವ ಪ್ರದೇಶವಾದರೂ ಇಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಅತಿಯಾದ ಅರಣ್ಯ ಒತ್ತುವರಿಯಿಂದ ಫಲವತ್ತಾದ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿಹೋಗುವ ಸಮಸ್ಯೆಯನ್ನು ಎದುರಿಸುತ್ತಿದೆ.
ಚಿರಾಪುಂಜಿಯ ಇನ್ನೊಂದು ವಿಶೇಷವೆಂದರೆ ಲಿವಿಂಗ್ ಬ್ರಿಡ್ಜ್. ಇಲ್ಲಿನ ಜನರು ಮರದ ಬೇರುಗಳನ್ನು ಉಪಯೋಗಿಸಿ ಸೇತುವೆಗಳನ್ನು ನಿರ್ಮಿಸುತ್ತಾರೆ. ಈ ಕಾರ್ಯಕ್ಕೆ 10 ರಿಂದ 15 ವರ್ಷಗಳು ತಗುಲುತ್ತವೆ. ಆದರೆ, ಅವು ದೀರ್ಘ ಸಮಯ ಬಾಳಿಕೆ ಬರುತ್ತವೆ. ಸುಮಾರು 500 ವರ್ಷ ಹಳೆಯದಾದ ಇಂಥದ್ದೊಂದು ಸೇತುವೆ ಇಲ್ಲಿದೆ.


ಕೇರಳದ ದೋಣಿಮನೆಗಳು

ಒಂದು ಕಡೆ ಕಡಲು, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಿನ್ನೀರು. ದಂಡೆಗುಂಟ ಕಾಣುವ ತೆಂಗಿನ ಮರಗಳು, ಚಲಿಸುವ ಬೆತ್ತದ ಮನೆಗಳಂತೆ ಭಾಸವಾಗುವ ದೋಣಿಮನೆಗಳು...  ಇವು ಪೂರ್ವದ ವೆನಿಸ್ ಅಂತಲೇ ಕರೆಯಲ್ಪಡುವ ಕೇರಳದ ಅಲೆಪ್ಪಿ ಕೊಟ್ಟಾಯಂ ಜಿಲ್ಲೆಗಳಲ್ಲಿನ ಹಿನ್ನೀರಿಗೊಮ್ಮೆ ಭೇಟಿಕೊಟ್ಟರೆ
 ಕಂಡುಬರುವ ದೃಶ್ಯಾವಳಿಗಳಿವು.



ದೋಣಿಮನೆಯಲ್ಲಿ ಏನೆಲ್ಲಾ ಇದೆ  ಗೊತ್ತಾ?
ಭಾರತದ ತುತ್ತತುದಿಯಲ್ಲಿರುವ ಈ ರಾಜ್ಯ ತನ್ನ ಹಿನ್ನೀರು, ದೋಣಿಮನೆಗಳಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ದೋಣಿಮನೆಯ ಒಳಹೊಕ್ಕರೆ ಬೇರೊಂದು ಪ್ರಪಂಚವೇ ತೆರೆದುಕೊಳ್ಳುತ್ತದೆ. ದೋಣಿಮನೆಗಳಲ್ಲಿ ಐಷಾರಾಮಿ ಸೇವೆ ಸಿಗುತ್ತದೆ. ಅಧ್ಬುತವಾದ ಶಯನಗೃಹಗಳು, ಆಧುನಿಕ ಶೌಚಾಲಯ, ಆಕರ್ಷಕ ಲೀವಿಂಗ್ ರೂಮ್, ಅಡುಗೆ ಮನೆ ಮತ್ತು ಹೊರಗಿನ ದೃಶ್ಯಗಳನ್ನು ಸವಿಯಲು ಬಾಲ್ಕನಿಗಳನ್ನು ಹೊಂದಿರುತ್ತವೆ. ಒಬ್ಬ ಚಾಲಕ ದೋಣಿಯನ್ನು ನಡೆಸುತ್ತಿದ್ದರೆ, ಬಾಣಸಿಗ ಅಡುಗೆ ಮೆನೆಯಲ್ಲಿ ತರಹೇವಾರಿ ಅಡುಗೆ ತಯಾರಿಸಿ ತಂದುಕೊಡುತ್ತಾನೆ. ಎಲ್ಲಾ ದೋಣಿಮನೆಗಳ ಕೊಠಡಿಗಳಿಗೂ ಹವಾನಿಯಂತ್ರಿತ ವ್ಯವಸ್ಥೆ ಸಾಮಾನ್ಯ. ಅಲೆಪ್ಪಿಯಿಂದ ಕೊಲ್ಲಂವರೆಗೆ ಹಿನ್ನೀರಿನಲ್ಲಿ ಪ್ರಯಾಣಿಸುತ್ತಾ ಮೂರುದಿನ ದೋಣಿಮನೆಯಲ್ಲೇ ಕಳೆಯಬಹುದು. 600 ವಿವಿಧ ನಮೂನೆಯ ದೋಣಿಮನೆಗಳು ಇಲ್ಲಿ ಕಾಣಸಿಗುತ್ತವೆ. ಕೇರಳವನ್ನು ಹೊರತುಪಡಿಸಿ ಜಮ್ಮು- ಕಾಶ್ಮೀರದ ದಾಲ್ ಸರೋವರದಲ್ಲಿಯೂ ದೋಣಿಮನೆಗಳ ಸಂಚಾರವನ್ನು ಕಾಣಬಹುದು.

ನಿರ್ಮಾಣದ ಸಾಂಪ್ರದಾಯಿಕ ವಿಧಾನ:
ಸಾಂಪ್ರದಾಯಿಕವಾಗಿ ದೊಣಿಮನೆಗಳನ್ನು ಕೆಟ್ಟುವಲ್ಲಮ್ ಎಂದು ಕರೆಯಲಾಗುತ್ತದೆ. ಕೆಟ್ಟುವಲ್ಲಮ್ಗಳನ್ನು ನಾರಿನ ಗಂಟಿನಿಂದ ಬಂಧಿಸಲಾಗುತ್ತದೆ. ಒಂದೆ ಒಂದು ಕಬ್ಬಿಣದ ಮೊಳೆಯನ್ನೂ ದೋಣಿಯ ನಿಮರ್ಮಾಣಕ್ಕೆ ಬಳಸುವುದಿಲ್ಲ. ದೋಣಿಯನ್ನು  ಹಲಸಿನ ಮರದ ಹಲಗೆಗಳನ್ನು ನಾರಿನಿಂದ ಒಟ್ಟಾಗಿ ಸೇರಿಸಿ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಗೇರಿನ ಎಣ್ಣೆಯನ್ನು ಬಳಿಯಲಾಗುತ್ತದೆ. ಎಚ್ಚರಿಕೆಯಿಂದ ನಿರ್ವಹಣೆ ಮಾಡಿದಲ್ಲಿ ಇದನ್ನು ತಲೆಮಾರುಗಳ ಕಾಲ ಬಳಸಬಹುದು.
ದೋಣಿಯ ಒಂದು ಭಾಗವನ್ನು ಬಿದಿರು ಹಾಗೂ ನಾರಿನಿಂದ ಹೊದಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ದೋಣಿಯು ದೊಡ್ಡದಾಗಿದ್ದು, ಬಿಡುಬಿನ ಪ್ರಯಾಣಕ್ಕಾಗಿ ನಿಧಾನ ಚಲಿಸುವ ಹಾಯಿಗಳನ್ನು ಬಳಸಲಾಗುತ್ತದೆ.  ಹೆಚ್ಚಿನ ದೋಣಿಗಳು 40 ಎಚ್.ಪಿ. ಎಂಜಿನ್ನ ಶಕ್ತಿಯನ್ನು ಹೊಂದಿವೆ. ಎರಡು ಅಥವಾ ಹೆಚ್ಚು ದೋಣಿಗಳನ್ನು ಸೇರಿಸಿ    ಮಾಡಿದ ದೋಣಿ ಟ್ರೈನ್ಗಳನ್ನು ಸಹ ಪ್ರವಾಸಿಗರ ದೊಡ್ಡಗುಂಪಿದ್ದಾಗ ಬಳಸಲಾಗುತ್ತದೆ. ಮೂಲದಲ್ಲಿ ಕೆಟ್ಟುವೆಲ್ಲಮ್ಗಳ್ನು ಟನ್ಗಟ್ಟಲೆ ಅಕ್ಕಿ ಮತ್ತು ಮಸಾಲೆಗಳನ್ನು ತರಲು ಬಳಸಲಾಗುತ್ತಿತ್ತು. ದೊಡ್ಡದಾದ ಒಂದು ದೋಣಿಮನೆ ಕಟ್ಟನಾಡಿನಿಂದ ಕೊಚ್ಚಿಬಂದರಿಗೆ ಸುಮಾರು 30 ಟನ್ ಸರಕನ್ನು ತರುತ್ತಿತ್ತು.

ಒಂದು ದಿನದ ಪ್ರಯಾಣಕ್ಕೆ 10 ಸಾವಿರ ರೂ.
ಶತಮಾನಗಳ ಹಿಂದೆ ಕೇರಳದ ರಾಜರು ಮತ್ತು ವ್ಯಾಪಾರಿಗಳು ಸಾರಿಗೆ ಸೇವೆಗೆ ದೋಣಿ ಮನೆಗಳನ್ನೇ  ಅವಲಂಬಿಸಿದ್ದರು. ಈಗ ಇದು ಪ್ರವಾಸೋದ್ಯಮವಾಗಿ  ಮಾರ್ಪಟ್ಟಿದೆ. ಹಿನ್ನೀರ ದಂಡೆಯ ಸಣ್ಣ ಹಳ್ಳಿಗಳ ಜನಜೀವನ, ಸಂಸ್ಕೃತಿ, ಸಂಚಾರ ವ್ಯವಸ್ಥೆ ಕೃಷಿ ಪದ್ಧತಿಯ ದರ್ಶನವೂ ಈ ನೀರಯಾನದಲ್ಲಿ ಆಗುತ್ತದೆ. ಐಷಾರಾಮಿ ದೋಣಿಮನೆಗಳ ನಿರ್ಮಾಣಕ್ಕೆ ಲಕ್ಷದಿಂದ ಕೋಟಿಗಟ್ಟಲೆ ಬಂಡವಾಳ ಬೇಕಾಗುತ್ತದೆ. ಕೇರಳದಲ್ಲಿ 1,200 ದೋಣಿಮನೆಗಳಿವೆ. ಇದರಲ್ಲಿ ವಿಹರಿಸಲು ಡಿಸೆಂಬರ್ನಿಂದ ಮಾರ್ಚ್ ಅವಧಿಯಲ್ಲಿ ವಿದೇಶಿಗರ ದಂಡೇ ಹರಿದುಬರುತ್ತದೆ. ಅಂದಹಾಗೆ ಒಂದು ಕೊಠಡಿಯ ದೋಣಿಮನೆಯಲ್ಲಿ ಒಂದು ದಿನ ವಿಹರಿಸಬೇಕೆಂದರೆ 10 ರಿಂದ 20 ಸಾವಿರ ರೂ. ನೀಡಬೇಕು. ದೋಣಿ ಮನೆಗಳಿಂದ ಕೇರಳ ಗಳಿಸುವ ವಾಷರ್ಿಕ ವರಮಾನ 164 ಕೋಟಿ ರೂ. ಅದರಲ್ಲಿ 120 ಕೋಟಿ ರೂ. ವರಮಾನ ಅಲೆಪ್ಪಿಯ ದೋಣಿ ಮೆನಗಳಿಂದಲೇ ಬರುತ್ತವೆ.


ನೆಕ್ ಚಾಂದ್ ನಿರ್ಮಿಸಿದ ರಾಕ್ ಗಾರ್ಡನ್!

ಗಾರ್ಡನ್ ಎಂದಾಕ್ಷಣ ಬಣ್ಣದ ಹೂವುಗಳು, ಹಸಿರು ಹುಲ್ಲುಹಾಸುಗಳು ನೆನಪಿಗೆ ಬರುತ್ತವೆ.  ಆದರೆ, ನಿರುಪಯುಕ್ತ ವಸ್ತುಗಳನ್ನು ಬಳಸಿ ನಿರ್ಮಿಸಿದ ರಾಕ್ ಗಾರ್ಡನ್ (ಕಲ್ಲಿನ ಉದ್ಯಾನವನ)ದ ಬಗ್ಗೆ ಕೇಳಿದ್ದೀರಾ? ನೋಡುಗರನ್ನು ನಿಬ್ಬೆರಗಾಗಿಸಬಲ್ಲ ರಾಕ್ ಗಾರ್ಡನ್ ಇರುವುದು ಚಂಡೀಗಢದಲ್ಲಿ. ಇಲ್ಲಿ ಕಲ್ಲಿನ ಚೂರು, ತುಂಡಾದ ಟೈಲ್ಸ್, ಬಳೆ, ಗಾಜು, ಮರ, ಕಪ್ಪೆ ಚಿಪ್ಪು, ಹಾಳಾದ ಬಲ್ಬ್, ತಲೆಗೂದಲೂ ಹೀಗೆ ನಾವು ನಿರುಪಯುಕ್ತ ಎಂದು ಬೀಸಾಡುವ ವಸ್ತುಗಳು ಕಲಾಕೃತಿಯ ರೂಪ ಪಡೆದುಕೊಂಡಿದೆ. ಇದೆಲ್ಲಾ ಸಾಧ್ಯವಾಗಿದ್ದು ದಿ.ನೆಕ್ ಚಾಂದ್ ಎಂಬ ಮಾತ್ರಿಕ ನಿಂದ.



ಗಾರ್ಡನ್ ನಿರ್ಮಿಸಿದ ಕಥೆ:
ಪಂಜಾಬ್ ಸರ್ಕಾರದಲ್ಲಿ ರಸ್ತೆ ಯೋಜನೆಗಳ ನಿರೀಕ್ಷಕರಾಗಿದ್ದ ನೆಕ್ ಚಾಂದ್ ಅವರು, ಸುಖ್ನಾ ಸರೋವರದ ಸಮೀಪದ ಅರಣ್ಯದಲ್ಲಿ ಒಂದು ಸಣ್ಣ ಜಾಗವನ್ನು ಸಮತಟ್ಟುಗೊಳಿಸಿ ಸಣ್ಣ ಉದ್ಯಾನವನವೊಂದನ್ನು 1960ರ ವೇಳೆಯಲ್ಲಿ ನಿರ್ಮಿಸಿದ್ದರು. ಸುಲಭವಾಗಿ ದೊರಕುವ ವಸ್ತುಗಳನ್ನು ಮರು ಬಳಕೆ ಮಾಡಿಕೊಂಡು ಕೆಲವು ಆಕೃತಿಗಳನ್ನು ನಿರ್ಮಿಸಿದರು. ಈ ಅರಣ್ಯವನ್ನು ಸರ್ಕಾರ 1902ರಲ್ಲಿ ಸುರಕ್ಷಿತ ಅರಣ್ಯ ಎಂಬುದಾಗಿ ಘೋಷಿಸಿತ್ತು. ಹೀಗಾಗಿ ತಾವು ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆ ಎಂಬ ಅರಿವಿದ್ದ ಅವರು, 18 ವರ್ಷಗಳ ಕಾಲ ತಮ್ಮ ಶಿಲ್ಪಕಲೆಗಳನ್ನು ಮುಚ್ಚಿಟ್ಟಿದ್ದರು. ಹಗಲಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದ ಅವರು ರಾತ್ರಿಯಲ್ಲಿ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು. ಆದರೆ, 1975ರಲ್ಲಿ ಇದು ಅಧಿಕಾರಿಗಳ ಕಣ್ಣಿಗೆ ಬಿತ್ತು. ಆ ವೇಳೆಗ ಆ ಸ್ಥಳ 13  ಎಕರೆ ಪ್ರದೇಶಕ್ಕೆ ವ್ಯಾಪಿಸಿತ್ತು. ಈ ಉದ್ಯಾನವನ ಧ್ವಂಸಗೊಳ್ಳುವ ಭೀತಿ ಎದುರಾಗಿತ್ತು. ಆದರೆ, ಅವರ ಪರವಾಗಿ ಜನಾಭಿಪ್ರಾಯ ರೂಪಗೊಂಡಿತು. ಉದ್ಯಾನವನದ ಕನಸನ್ನು ಸಾಕಾರಗೊಳಿಸಲು ಅಧಿಕಾರಿಗಳು ಅವಕಾಶ ನೀಡಿದರು. 1976ರಲ್ಲಿ ಉದ್ಯಾನವನ್ನು ಉದ್ಘಾಟಿಸಲಾಯಿತು. ಆ ಬಳಿಕ ಚಾಂದ್ ಅವರ ಶಿಲ್ಪಕಲೆ ವಿಶ್ವವಿಖ್ಯಾತಿ ಪಡೆಯಿತು. ಚಾಂದ್ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಆದರೆ, ಅವರ ರಾಕ್ ಗಾರ್ಡನ್, ಮೊಲಾಯಿಕ್ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿದೆ.
 
ಕಸದಿಂದ ಮೂಡಿದ ಶಿಲ್ಪ:

ಕೃತಕ ಜಲಪಾತಗಳು ಬಣ್ಣ ಬಣ್ಣದ ಮೀನುಗಳ ಕೊಠಡಿ, ಗುಹೆಗಳು, ಒಣ ಮರದಲ್ಲಿ ಮೂಡಿದ ಕಲಾತ್ಮಕ ಕೆತ್ತನೆಗಳು, ಮಕ್ಕಳ ಆಟಕ್ಕೇಂದೇ ಮೀಸಲಾದ ಪ್ರದೇಶಗಳು ರಾಕ್ ಗಾರ್ಡನ್ನಲ್ಲಿವೆ. ಕೈಗಾರಿಕೆ ಮತ್ತು ನಗರದ ತ್ಯಾಜ್ಯಗಳನ್ನು ಮರುಬಳಕೆ ಮಾಡಿಕೊಂಡು ಸಾವಿರಾರು ಕಲಾಕೃತಿಗಳನ್ನು ಚಾಂದ್ ಅವರು ನಿರ್ಮಿಸಿದ್ದಾರೆ. ಒಡೆದ ಪಿಂಗಾಣಿ ಸಾಮಗ್ರಿಗಳು, ವಿದ್ಯುತ್ ಉಪಕರಣಗಳು, ಪೈಪುಗಳು, ಬೆಣಚು ಕಲ್ಲುಗಳು, ಮಡಿಕೆ- ಕುಡಿಕೆಗಳು ಇತ್ಯಾದಿ ಕಸಗಳು ಇಲ್ಲಿ ಗಾರೆಯೊಂದಿಗೆ ಸೇರಿ ಸುಂದರವಾದ ಪ್ರಾಣಿ, ಪಕ್ಷಿ, ಗೊಂಬೆ, ಗೋಪುರಗಳಾಗಿ ಕಂಗೊಳಿಸುತ್ತಿವೆ. ಈ ರಾಕ್ ಗಾರ್ಡನ್ 40 ಎಕರೆಯಷ್ಟು ವಿಶಾಲವಾದ ಪ್ರದೇಶಕ್ಕೆ ವ್ಯಾಪಿಸಿದೆ. ಪ್ರತಿವರ್ಷ ದೇಶವಿದೇಶಗಳ 2.5 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಟಿಕೆಟ್ ಮಾರಾಟದಿಂದಲೇ 1.8 ಕೋಟಿ ರೂ. ಸಂಗ್ರಹವಾಗುತ್ತಿದೆ. ಕಸದಿಂದ ರಸವನ್ನು ಹೇಗೆ ತೆಗೆಯಬಹುದು ಎಂಬುದಕ್ಕೆ ರಾಕ್ ಗಾರ್ಡನ್ ಒಂದು ಉತ್ತಮ ಉದಾಹರಣೆ.