ಜೀವನಯಾನ

Wednesday, July 31, 2013

ಗತವೈಭವ ಸಾರುವ ರೋಮನ್ ಕಲೋಸಿಯಂ

ಜಗತ್ತು ಕಂಡ ಶ್ರೇಷ್ಠ ನಾಗರಿಕತೆಯಲ್ಲಿ ರೋಮನ್ ನಾಗರಿಕತೆ ಸಹ ಒಂದು. ಅಂದು ನಿರ್ಮಿಸಿದ ಕಟ್ಟಡಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ ಒಂದು ಈ ರೋಮನ್ ಕಲೋಸಿಯಂ. ಇದೊಂದು ಹಿಂಸಾತ್ಮಕ ಮಲ್ಲ ಯುದ್ಧ,  ಪ್ರಾಣಿಗಳ ಕದನಗಳು ನಡೆಯುತ್ತಿದ್ದ ಕ್ರೀಡಾಂಗಣ. ಗ್ರೀಕರ ಕಾಲದಲ್ಲಿ ಸಂಗೀತ ನಾಟಕ ಸ್ಪರ್ಧೆ, ಕ್ರೀಡೆ, ಮನೋರಂಜನೆಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ವರ್ತುಲಾಕಾರದ ರಂಗಮಂದಿರ (ಆಂಫಿಥಿಯೇಟರ್)ಗಳು ರೋಮನ್ನರ ಕಾಲಕ್ಕೆ ಕಲೋಸಿಯಂಗಳಾಗಿ ಬದಲಾದವು. ಗುಲಾಮರನ್ನು ಖಡ್ಗ ಮಲ್ಲರನ್ನೂ ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಗಳಿಸಿದ್ದವು.

ಖಡ್ಗಮಲ್ಲರ ಕಾದಾಟ:
ಹಿಂಸಾತ್ಮಕ ಮಲ್ಲಯುದ್ಧವನ್ನು ಆಡಿಸುವ ಉದ್ದೇಶಕ್ಕಾಗಿಯೇ 2 ಸಾವಿರ ವರ್ಷಗಳ ಹಿಂದೆ ಕಲೋಸಿಯಂ ನಿರ್ಮಾಣ ಮಾಡಲಾಗಿತ್ತು. ಮರಳಿನ ಅಂಗಳದಲ್ಲಿ ಮಲ್ಲ ಯೋಧರು ಸಾಯುವ ತನಕವೂ ಕಾದಾಡಬೇಕಾಗಿತ್ತು. ಈ ಕಾದಾಟದಲ್ಲಿ ಕೆಲವೇ ಕೆಲವು ಯೋಧರು ಮಾತ್ರ ಬದುಕುಳಿಯುತ್ತಿದ್ದರು. ಉಳಿದವರು ಪ್ರೇಕ್ಷಕರಿಗೆ ಕ್ರೂರ ಮನೋರಂಜನೆಯ ಹಸಿವನ್ನು ನೀಗುವ ಸಲುವಾಗಿ ಪ್ರಾಣಿಗಳಿಗಿಂತಲೂ ಹೀನಾಯವಾದ ಸಾವನ್ನು ಅನುಭವಿಸಬೇಕಾಗಿತ್ತು.

ಕಲೋಸಿಯಂ ವಿಶೇಷತೆ:
  • ರೋಮನ್ ಕಲೋಸಿಯಂ ಇಂದಿನ ಕ್ರಿಕೆಟ್ ಕ್ರೀಡಾಂಗಣದಷ್ಟು ದೊಡ್ಡದಾಗಿತ್ತು. ಇದರಲ್ಲಿ 45 ಸಾವಿರ  ಮಂದಿಗೆ ಆಸನ ವ್ಯವಸ್ಥೆ,  5 ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. 
  • ಇದಲ್ಲದೆ ಕ್ರೀಡೆಯಲ್ಲಿ ಭಾಗವಹಿಸುವವರು ರಂಗ  ಪ್ರವೇಶಿಸುವುದಕ್ಕೆ ಮತ್ತು ಪಂದ್ಯಾಟದಲ್ಲಿ ಪ್ರಾಣತೆತ್ತವರ ಕಳೇಬರವನ್ನು ಕೂಡಲೇ ಸಾಗಿಸುವ ಏರ್ಪಾಡುಗಳೂ ಇದ್ದವು. 
  • ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆ ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯನಾಗರಿಕರಿಗೆ, ಅವರವರ ಘನತೆಗೆ ತಕ್ಕಂತೆ ಆಸನಗಳು ಇರುತ್ತಿದ್ದವು.
  • ಅಂಡಾಕಾರದಲ್ಲಿರುವ ಕಲೋಸಿಯಂ 189 ಮೀಟರ್ ಉದ್ದ, 156 ಮೀಟರ್ ಅಗಲ ಮತ್ತು  545 ಮೀಟರ್ ಸುತ್ತಳತೆಯದ್ದಾಗಿದೆ. ಕೇಂದ್ರ ರಂಗಸ್ಥಳ ಕೂಡಾ ಅಂಡಾಕಾರವಾಗಿದ್ದು, 87 ಮೀ. ಉದ್ದ ಮತ್ತು 74 ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದುಕೊಂಡಿದ್ದು, 57 ಮೀ. ಎತ್ತರವಾಗಿದೆ. ಹೊರಗಿನ ಆವರಣ ನಾಲ್ಕು ಅಂತಸ್ತನ್ನು ಹೊಂದಿದ್ದು, ಮೂರನೇ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.
ರೋಮನ್ ಗತವೈಭವದ ನೆನಪು:
ಇಟಲಿ ರಾಜಧಾನಿ ರೋಮ್ನ ಮಧ್ಯಭಾದಲ್ಲಿರುವ ಕಲೋಸಿಯಂ ರೋಮನ್ ಸಾಮ್ರಾಜ್ಯದ ಗತವೈಭವನ್ನು ಇಂದಿಗೂ ಸಾರುತ್ತಾ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಆಕಷರ್ಿಸುತ್ತಿದೆ. ಈಗ ಉಳಿದುಕೊಂಡಿರುವ ಕಲೋಸಿಯಂ ನಿಮರ್ಾಣ ಕಾರ್ಯ ಕ್ರಿ.ಶ. 70ರಲ್ಲಿ ಪ್ರಾರಂಭವಾಯಿತು. ಇದಕ್ಕಿಂತಲೂ ಮುಂಚೆ ಇದ್ದ ಕಲೋಸಿಯಮ್ನ್ನು  ಮರದಿಂದ ನಿಮರ್ಿಸಲಾಗಿದ್ದು, ಕ್ರಿ.ಶ. 64ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾಗಿದ್ದರಿಂದ ಹೊಸ ಕಲೋಸಿಯಂ ನಿರ್ಮಾಣ ಅಗತ್ಯವಾಯಿತು. 10 ವರ್ಷಗಳ ಕಾಲ ನಡೆದ ನಿರ್ಮಾಣ ಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತುಶಿಲ್ಪಿಗಳು, ರೋಮಿನ ಕಾರ್ಮಿಕರ ಜತೆ ಸಾವಿರಾರು ಗುಲಾಮರನ್ನು ಬಳಸಿಕೊಳ್ಳಲಾಗಿತ್ತು.

ಹಿಂಸಾತ್ಮಕ ಕ್ರೀಡೆಗೆ ತೆರೆ:
ಕಲೋಸಿಯಂ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ಮೋಜಿನ ಕ್ರೀಡೆಗಳ ಸಮಾರಂಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೆ, ಅಪರಾಧಿಗಳನ್ನು ಸೈನ್ಯ ಸೇವೆ ತೊರೆದವರನ್ನು ಮತ್ತು  ಇನ್ನು ಹಲವು ಕೈದಿಗಳನ್ನು ಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆ ಆಯೋಜಿಸಲಾಗುತ್ತಿತ್ತು. ಕೆಲವೊಮ್ಮೆ ಕೈದಿಗಳು ತಮ್ಮ ತಮ್ಮಲ್ಲಿಯೇ ಕಾದಾಡುತ್ತಾ, ಮಿತ್ರರನ್ನೇ ಕೊಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಮುಂದೆ ಕ್ರಿ.ಶ. 404ರಲ್ಲಿ ಖಡ್ಗಮಲ್ಲರ ಕ್ರೀಡೆಯನ್ನು ಅಧಿಕೃತವಾಗಿ ರದ್ದು ಮಾಡಲಾಯಿತು. 

Thursday, July 25, 2013

ಮೌಂಟ್ ರಶ್ಮೋರ್ ಕಲ್ಲಿನ ಕೆತ್ತನೆ

 ಮೌಂಟ್ ರಶ್ಮೋರ್ ಒಂದು ಚಿರಸ್ಮರಣೀಯ ಕಲ್ಲಿನ ಶಿಲ್ಪ. ಅಮೆರಿಕದ ದಕ್ಷಿಣ ಡಕೊಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಶ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಈ ಶತಮಾನದಲ್ಲಿ ನಿರ್ಮಿ ತವಾದ ಮೌಂಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ
ಅದ್ಭುತಗಳಲ್ಲಿ ಒಂದೆಂದು ಹೇಳಬಹುದು.

ನಾಲ್ಕು ಅಧ್ಯಕ್ಷರ ಕಲಾಕೃತಿ:
ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್,  ಥಾಮಸ್ ಜೆಫರ್ಸನ್, ಥಿಯೋಡರ್ ರೂಸ್ವೆಲ್ಟ್, ಅಬ್ರಹಾಂ ಲಿಂಕನ್ ಇವರ ಆಕೃತಿಯನ್ನು ಇಲ್ಲಿ ಕೆತ್ತಲಾಗಿದೆ. ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾಶ್ರ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನು ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಮಾಡಿದರು ಎನ್ನುವ ಕಲ್ಪನೆಯೇ ರೋಚಕ.

ಕೆತ್ತನೆಯ ರೋಚಕ ಇತಿಹಾಸ:
ಇತಿಹಾಸಕಾರ ಡೋನ್ ರಾಬಿನ್ ಸನ್ ದಕ್ಷಿಣ ಡಕೋಟದಲ್ಲಿ ಪ್ರವಾಸೋದ್ಯಮವನ್ನು  ಬೆಳೆಸಲು 1923ರಲ್ಲಿ ಮೌಂಟ್ ರಶ್ಮೋರದ ಕಲ್ಪನೆಯನ್ನು  ಗ್ರಹಿಸಿದ. ಮೌಂಟ್ ರಶ್ಮೋರ್ ಸಮುದ್ರ ಮಟ್ಟಕ್ಕಿಂತ 1745 ಮೀಟರ್ ಎತ್ತರದಲ್ಲಿದೆ. ಇಲ್ಲಿ ಕೊರೆಯಲಾದ ಶಿಲ್ಪವೇ 465 ಅಡಿಯಷ್ಟು ಎತ್ತರವಾಗಿದೆ. ಪ್ರತಿಯೊಬ್ಬ ಅಧ್ಯಕ್ಷನ ತಲೆ ಆರು ಮಹಡಿ ಕಟ್ಟಡದಷ್ಟು ದೊಡ್ಡದಾಗಿದೆ. ಅಧ್ಯಕ್ಷರ ಮೂಗು 20 ಅಡಿ ಉದ್ದ, ಬಾಯಿ 18 ಅಡಿ ಅಗಲವಾಗಿದೆ. ಕಣ್ಣುಗಳು ಸುಮಾರು  11 ಅಡಿಯಷ್ಟು ಅಳತೆ ಹೊಂದಿದೆ. ಕಾರ್ಮಿಕರು ಈ ಶಿಲ್ಪವನ್ನು ಕೆತ್ತಲು ಪ್ರತಿದಿನ 5006 ಮೆಟ್ಟಿಲುಗಳನ್ನು ಹತ್ತಿ ಮೌಂಟ್ ರಶ್ಮೋರ್ನ ತುದಿಯನ್ನು  ತಲುಪಬೇಕಾಗಿತ್ತು. ಗುಟ್ಜೋನ್ ಬೋಗ್ರ್ ಲಮ್ ಎಂಬಾತ ಸ್ಮಾರಕವನ್ನು ವಿನ್ಯಾಸಗೊಳಿಸಿದ ಶಿಲ್ಪಿ. ಪ್ರತಿಮೆಯನ್ನು ಕೆತ್ತುವ ಮೇಲ್ವಿಚಾರಣೆಯನ್ನು ಆತನೇ ನೋಡಿಕೊಡಿದ್ದ. ಪ್ರತಿಮೆ ಕೆತ್ತುವ ಕೆಲಸ 1927ರಲ್ಲಿ ಆರಂಭವಾಗಿ ಕುಂಟುತ್ತಾ, ಎಡವುತ್ತಾ 14 ವರ್ಷಗಳ ಕಾಲ ನಡೆಯಿತು. 1941ರಲ್ಲಿ ಸ್ಮಾರಕ ಪೂರ್ಣಗೊಳ್ಳುವ ಮೊದಲೇ ಬೊಗ್ರ್ಲಮ್  ತೀರಿಕೊಂಡ. ಮುಂದೆ ಆತನ ಮಗ ಪ್ರತಿಮೆಯನ್ನು ಪೂರ್ಣಗೊಳಿಸಿದ. ಮಹಾಯುದ್ಧದ ಸಂದರ್ಭದಲ್ಲಿ ಇದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖವಿರುವ ಮೌಂಟ್ ರಶ್ಮೋರ್ವನ್ನು ಅಮೆರಿಕದ ರಾಷ್ಟ್ರೀಯ ಸ್ಮಾರಕ ಎಂದು ಪರಿಗಣಿಸಲಾಗಿದೆ. 1966ರಲ್ಲಿ  ಮೌಂಟ್ ರಶ್ಮೋರ್ ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ದಾಖಲೆಗಳಲ್ಲಿ ನಮೂದಿಸಲ್ಪಟ್ಟಿತು. ಇಷ್ಟೊಂದು ದೊಡ್ಡಗಾತ್ರದ ಆಕೃತಿ ಕೆತ್ತುವಾಗ ಯಾವುದೇ ಕೆಲಸಗಾರ ಬಿದ್ದು ಸಾವನ್ನಪ್ಪದೇ ಇರುವುದು ಇದರ ಮತ್ತೊಂದು ವಿಶೇಷತೆ.
 
ದೂರದಿಂದಲೇ ನೋಡಬೇಕು.

ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ, ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರಿನ ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ವಾಹನಗಳನ್ನು ನಿಲ್ಲಿಸಿ, ಈ  ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ. ಈ ಸ್ಮಾರಕವು ವಾರ್ಷಿಕವಾಗಿ ಸರಿಸುಮಾರು 20 ಲಕ್ಷ ಜನರನ್ನು ಆಕರ್ಷಿಸುತ್ತದೆ.

ಹಿಂಭಾಗದಲ್ಲಿ ದಾಖಲೆ ಭವನ:

ಮುಖಗಳ ಹಿಂಭಾಗದಲ್ಲಿನ ಗುಹೆಗಳಲ್ಲಿ ಕೊಠಡಿಗಳನ್ನು  ಕೊರೆಯಲಾಗಿದ್ದು, ಸ್ವಾತಂತ್ರ್ಯದ ಪ್ರಕಟಣೆ ಮತ್ತು ಸಂವಿಧಾನ, ನಾಲ್ಕು ಅಧ್ಯಕ್ಷರ ಮತ್ತು ಬೊಗ್ರ್ಲಮ್ನ ಜೀವನ ಚರಿತ್ರೆ ಮತ್ತು ಅಮೆರಿದ ಇತಿಹಾಸದ ಉಲ್ಲೇಖವನ್ನು ಒಳಗೊಂಡಿದೆ. ಇದನ್ನು ಯೋಜಿತ ದಾಖಲೆಗಳ ಭವನ ಎಂದು  ಕರೆಯಲಾಗುತ್ತದೆ.
 

Sunday, July 14, 2013

ಅಮರನಾಥ ಗುಹೆಯ ಹಿಮಲಿಂಗ ದರ್ಶನ

ಅಮರನಾಥ ಗುಹೆ ಹಿಂದುಗಳ ಪವಿತ್ರ ಯಾತ್ರಾ ಸ್ಥಳ. ಜಮ್ಮು-ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ. ದೂರಲ್ಲಿನ ಪಹಲ್ಗಾಮ್ ಸಮೀಪದಲ್ಲಿದೆ. ಈ ಗುಹೆ ಸಮುದ್ರ ಮಟ್ಟದಿಂದ 3,888 ಮೀ. (12,756 ಅಡಿ) ಎತ್ತರದಲ್ಲಿದೆ. ಶಿವಕ್ಷೇತ್ರಗಲ್ಲಿ ಒಂದಾಗಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ  ರೂಪಗೊಳ್ಳುವ ಹಿಮಲಿಂಗ ಪ್ರಮುಖ ಆಕರ್ಷಣೆ. ದಕ್ಷಿಣಕ್ಕೆ ಮುಖಮಾಡಿ ನಿಂತಿರುವ 131 ಅಡಿ ಎತ್ತರದ ಗುಹೆಯ ಒಳಗೆ ಹಿಮಲಿಂಗವಿದೆ.
 ಈ ಗುಹೆ 5000 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ.


ಹಿಮಲಿಂಗದ ಉದ್ಭವ ಹೇಗೆ?
ಗುಹೆಯ ಮೇಲ್ಭಾಗ ಮತ್ತು ಕೆಳಭಾಗ ನೀರಿನ ಸೆಲೆ ಇದ್ದು, ಗುಹೆಯ ನೆತ್ತಿಯ ಮೇಲಿನಿಂದ ತೊಟ್ಟಿಕ್ಕುವ ನೀರು ಘನೀಕೃತವಾಗಿ ಶಿವವಲಿಂಗದ ಆಕೃತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಹಿಮಲಿಂಗ ಸುಮಾರು 15 ಅಡಿ ಎತ್ತರ ಬೆಳೆದು ಗುಹೆಯ ಒಳಗಿನ ತುದಿಯನ್ನು ಮುಟ್ಟುತ್ತದೆ. ಇದನ್ನು ಶಿವಲಿಂಗ ಎಂದು ಪರಿಗಣಿಸಲಾಗುತ್ತದೆ. ಮೇನಿಂದ ಆಗಸ್ಟ್ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಚಂದ್ರನ ಗತಿಗೆ ಅನುಸಾರವಾಗಿ ಬೆಳೆದು ಬಳಿಕ ಕರಗುವುದು ಹಿಮಲಿಂಗದ ವಿಶೇಷ. ಶ್ರಾವಣ ಪೂರ್ಣಿಮೆಯಂದು  ಹಿಮಲಿಂಗ ಪೂರ್ಣ ಪ್ರಮಾಣದ ಎತ್ತರವನ್ನು ತಲುಪುತ್ತದೆ. ಈ ಹಿಮಲಿಂಗನ್ನು ಅಮರೇಶ್, ಅಮರೇಶ್ವರ, ರಾಸ ಲಿಂಗಂ, ಶುದ್ಧಿ ಲಿಂಗಂ ಮುಂತಾದ ಅನೇಕ ಹೆಸರಿನಿಂದ ಕರೆಯಲಾಗುತ್ತದೆ. 

ಹಿಮಲಿಂಗದ ಮಹತ್ವ: 
ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಿವ ತನ್ನ ಪತ್ನಿ ಪಾರ್ವತಿಗೆ ಜೀವನದ ರಹಸ್ಯವನ್ನು ಹೇಳಿದ ಎನ್ನುವ ಪ್ರತೀತಿ ಇದೆ. 

ಅಮರನಾಥ ಯಾತ್ರೆ:
ಅಮರನಾಥ ಯಾತ್ರೆ ಶ್ರಾವಣ ಮಾಸದಲ್ಲಿ ಅಂದರೆ, ಜೂನ್ ನಿಂದ  ಆಗಸ್ಟ್ ತನಕ ವರ್ಷಂಪ್ರತಿ ಆಯೋಜನೆ ಮಾಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹಿಮಲಿಂಗದ ದರ್ಶನ ಪಡೆಯಲು ಸಾವಿರಾರು ಭಕ್ತರು ಅಮರನಾಥಕ್ಕೆ ಆಗಮಿಸುತ್ತಾರೆ.  ಸಾವಿರಾರು ವರ್ಷಗಳ ಇತಿಹಾಸವಿರುವ ಅಮರನಾಥ ದೇಗುಲ 12ನೇ  ಶತನಾನದ ಬಳಿಕ ಜನಮಾನಸದಿಂದ ಕಳೆದುಹೋಗಿತ್ತು. ಅಮರನಾಥದಲ್ಲಿ ಗುಹಾಂರ್ತಗತ ಹಿಮಲಿಂಗ ಇರುವುದನ್ನು ಮುಸ್ಲಿಂ ದನಗಾಹಿಯೊಬ್ಬ ಪತ್ತೆಹಚ್ಚಿದ. ನಂತರ ಅಮರನಾಥ ಯಾತ್ರೆ ಆರಂಭವಾದಾಗ ಯಾತ್ರಾರ್ಥಿಗಳ  ಕಷ್ಟ ಸುಖವನ್ನು ನೋಡಿಕೊಳ್ಳುತ್ತಿರುವುದು ಸಹ ಮುಸ್ಲಿಮರೇ. 

ಗುಡ್ಡ, ಪರ್ವತಗಳ ಚಾರಣ:
ಅಮರನಾಥ ಗುಹೆಗೆ ತೆರಳಲು ಯಾವುದೇ ವಾಹನದ ವ್ಯವಸ್ಥೆಯಿಲ್ಲ. ಭಕ್ತರು 24 ಕಿ.ಮೀ. ಹಾದಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಇದು ಪರ್ವತ ಚಾರನವನ್ನು ಹೊಂದಿರುವ ಪ್ರಯಾಸದ ಹಾದಿ. ನಡೆಯಲು ಸಾಧ್ಯವಾಗದವರಿಗೆ ಕುದುರೆ ಸವಾರಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾತ್ರೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅನೇಕ ಭಕ್ತರು ಸಾವನ್ನಪ್ಪುತ್ತಾರೆ. ಇತ್ತಿಚೆಗೆ ಉಗ್ರರ ಬೆದರಿಕೆಯಿಂದಾಗಿ ಯಾತ್ರೆಯುದ್ದಕ್ಕೂ ಮಿಲಿಟರಿ ಭದ್ರತೆ ಒದಗಿಸಲಾಗುತ್ತಿದೆ. ಯಾತ್ರೆಗೂ ಮುನ್ನ ಭಕ್ತರು ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಮೂಲ ಸ್ವರೂಪಕ್ಕೆ ಧಕ್ಕೆ:
ಅಮರನಾಥದ ಸರಾಸರಿ ಉಷ್ಣಾಂಶ ಬೇಸಿಗೆಯಲ್ಲಿ 15 ಡಿಗ್ರಿ ಸೆಲ್ಸಿಯಸ್. ಚಳಿಗಾಲದಲ್ಲಿ ಅತ್ಯಂತ ಕಡು ಚಳಿಯಿದ್ದು, -5  ಡಿಗ್ರಿಗೆ ಕುಸಿಯುತ್ತದೆ. ಸಾಧಾರಣವಾಗಿ ನವೆಂಬರ್ನಿಂದ ಏಪ್ರಿಲ್ ತನಕ ಅಮರನಾಥ ಹಿಮಚ್ಛಾದಿತವಾಗಿರುತ್ತದೆ. ಬೇಸಿಗೆಯ ಮೂರು ತಿಂಗಳು ಮಾತ್ರ ಯಾತ್ರಾರ್ಥಿಗಳಿಗೆ   ತೆರೆದಿರುತ್ತದೆ. ಆದರೆ, ತಾಪಮಾನ ಏರಿಕೆಯ ಬಿಸಿ ಅಮರನಾಥಕ್ಕೂ ತಟ್ಟಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿ ಳು ಭೇಟಿ ನೀಡುತ್ತಿರುವುದರಿಂದ ಹಿಮಲಿಂಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಲಾರಂಭಿಸಿದೆ.

Wednesday, July 10, 2013

ಓಹೋ.... ಹಿಮಾಲಯ!

ಹಿಮಾಲಯ ತನ್ನ ಅಘಾದತೆಯಿಂದ ಗಮನ ಸೆಳೆಯುತ್ತದೆ. ಪೂರ್ವಪಶ್ಚಿಮವಾಗಿ ಭಾರತದ ಈಶಾನ್ಯ ರಾಜ್ಯಗಳ ಗಡಿಯಿಂದ ಅಫ್ಘಾನಿಸ್ಥಾನದ ಅಂಚಿನ ವರೆಗೆ, ದಕ್ಷಿಣೋತ್ತರವಾಗಿ ಭಾರತದ ಪಂಜಾಬ್ನಿಂದ ದಕ್ಷಿಣ ಚೀನಾದ ಟಿಬೇಟ್ವರೆಗೂ ಹಲವು ಶ್ರೇಣಿಗಳಲ್ಲಿ ಹಬ್ಬಿ ನಿಂತಿದೆ. ಇಂತಹ ಹಿಮಾಲಯದ ಮಡಿಲಲ್ಲೇ ಪೌರ್ವಾತ್ಯ ಪರಂಪರೆ ತನ್ನ ಹುಟ್ಟನ್ನು ಪಡೆದುಕೊಂಡಿದ್ದು. ಸುಮಾರು 2,500 ಕಿ.ಮೀ. ವಿಸ್ತಾರ ಹಾಗೂ 29,000 ಅಡಿ
ಎತ್ತರಕ್ಕೆ ಹಿಮಾಲಯ ಚಾಚಿಕೊಂಡಿದೆ.

ಆಧ್ಯಾತ್ಮಿಕ ನೆಲೆ:
ಅನೇಕ ಭೌಗೋಳಿಕ ವೈವಿಧ್ಯವನ್ನು ಹೊಂದಿರುವ ಹಿಮಾಲಯದ ಒಂದು ಭಾಗ ಉತ್ಕಟ ಹಸಿರಿನ ನೆಲೆಯಾದರೆ, ಇನ್ನೊಂದು ಭಾಗ ಹಸಿರಿನ ಹೆಸರೂ ಕಾಣದ ಶೀತಲ ಹಿಮಚ್ಛಾದಿತ ಪ್ರದೇಶ. ಜಗತ್ತಿನ ಆಧ್ಯಾತ್ಮಿಕ ಚಿಂತನೆಗೆ ಭದ್ರ ನೆಲೆಯೆನ್ನಿಸಿದ ಅದ್ವಿತೀಯ ಗಿರಿಶಿಖರಗಳು, ಪಾವಿತ್ರ್ಯದಷ್ಟೇ ತಮ್ಮ ಸೌಂದರ್ಯಕ್ಕೂ ಹೆಸರಾಗಿವೆ.
ಮಾನವ ಇತಿಹಾಸದ ಮೊದಲ ನಾಗರಿಕತೆಗಳಲ್ಲಿ ಒಂದೆನಿಸಿದ ಸಿಂಧೂ ಕಣಿವೆಯ ನಾಗರಿಕತೆ ಹುಟ್ಟಿಬೆಳೆದದ್ದು ಹಿಮಾಲಯದ ತಪ್ಪಲಿನಲ್ಲಿ. ಜಗತ್ತಿನ ಆದಿ ಧರ್ಮವೆನಿಸಿದ ಹಿಂದು, ಬೌದ್ಧ, ಜೈನ ಧರ್ಮಗಳು ಹುಟ್ಟಿಬೆಳೆದದ್ದು ಹಿಮಾಲಯದ ಹಿನ್ನೆಲೆಯಲ್ಲಿ.

ಹಿಮಾಲಯ ಅಂದರೆ...

ಸಂಸ್ಕೃತದಲ್ಲಿ ಹಿಮಾಲಯ ಅಂದರೆ, ಹಿಮದ ಮನೆ (ಹಿಮ+ ಆಲಯ) ಎಂದರ್ಥ. ಹಿಮಾಲಯದಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು.

  • ಉಪ ಹಿಮಾಲಯ: ಇದನ್ನು ಭಾರತದಲ್ಲಿ ಶಿವಾಲಿಕ್ಸ್ ಹಿಲ್ಸ್ ಎಂದು ಕರೆಯಲಾಗುತ್ತದೆ. ಇದು ಸರಾಸರಿ  1,200 ಮೀಟರ್ ಎತ್ತರವಾಗಿದೆ.
  • ಕೆಳಗಿನ ಹಿಮಾಲಯ: ಸರಾಸರಿ 2000ದಿಂದ 5000 ಮೀಟರ್ ಎತ್ತರವಾಗಿದ್ದು, ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜಿಲಿಂಗ್, ಶಿಮ್ಲಾ ನೈನಿತಾಲ್ ಮುಂತಾದ ಪ್ರಸಿದ್ಧ ಗಿರಿಧಾಮಗಳನ್ನು ಈ ಶ್ರೇಣಿ ಒಳಗೊಂಡಿದೆ.
  • ಮೇಲಿನ ಹಿಮಾಲಯ: ಈ ಶ್ರೇಣಿ ಎಲ್ಲಕ್ಕಿಂತ ಎತ್ತರದಲ್ಲಿದ್ದು, ನೇಪಾಳದ ಉತ್ತರಭಾಗಗಳು ಮತ್ತು ಟಿಬೇಟ್ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. 6000 ಮೀಟರ್ ಗಿಂತ ಹೆಚ್ಚಿನ ಎತ್ತರವಾಗಿದ್ದು, ಜಗತ್ತಿನ ಅತಿ ಎತ್ತರದ ಮೂರು ಶಿಖರಗಳಾದ ಮೌಂಟ್ ಎವರೆಸ್ಟ್, ಕೆ-2, ಕಾಂಚನಜುಂಗಾ ಶಿಖರವನ್ನು ಹೊಂದಿದೆ.
ಬೃಹತ್ ತಡೆಗೋಡೆ!
ಹಿಮಾಲಯದ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಸಿಂಧೂ, ಅಲಕನಂದಾ, ಬ್ರಹ್ಮಪುತ್ರಾ, ಯಮುನಾ ಮುಂತಾದ ನದಿಗಳಿಗೆ ತವರುಮನೆಯಾಗಿದೆ.
ಚಳಿಗಾಲದಲ್ಲಿ ಪಶ್ಚಿಮದ ಇರಾನ್ ಕಡೆಯಿಂದ ಉಂಟಾಗುವ ಹವಾಮಾನ ಪ್ರಕ್ಷುಬ್ಧತೆ ಭಾರತದತ್ತ ಮುನ್ನುಗ್ಗದ್ದಂತೆ ಹಿಮಾಲಯ ಪರ್ವತ ಶ್ರೇಣಿಗಳು ತಡೆಯತ್ತದೆ. ಈರೀತಿ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವಾಗುತ್ತದೆ ಮತ್ತು ಉತ್ತಭಾರ ಮತ್ತು ಪಂಜಾಬ್ ಭಾಗಗಳಲ್ಲಿ ಮಳೆ ಬೀಳುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವಭಾಗದಲ್ಲಿ ಮಳೆಯಾಗುವಂತೆ ಮಾಡುತ್ತದೆ. ಹಿಮಾಲಯ ಶ್ರೇಣಿಯು ಜನರ ಚಲನವಲನಗಳಿಗೆ ಸ್ವಾಭಾವಿಕವಾಗಿಯೇ ಅಡಚಣೆ ಉಂಟುಮಾಡಿದೆ. ಇದಕ್ಕೆ ಕಾರಣ, ಹಿಮಾಲಯದ ದೊಡ್ಡಗಾತ್ರ. ಎತ್ತರ ಮತ್ತು ವೈಶಾಲ್ಯತೆ. ಹೀಗಾಗಿ ಭಾರತೀಯರು ಚೀನಾ ಮತ್ತು ಮಂಗೋಲಿಯಾದ ಜನರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ.

ಜಗತ್ತಿನ ಎತ್ತದ ಶಿಖರ:

ಹಿಮಾಲಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 18000 ಅಡಿ. ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ ಮೊದಲ 10 ಅತ್ಯುನ್ನತ ಪರ್ವತ ಶಿಖರಗಳ ಪೈಕಿ 9 ಶಿಖರಗಳು ಹಿಮಾಲಯದಲ್ಲಿಯೇ ಇವೆ. ಅವುಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮೌಂಟ್ ಎವರೆಸ್ಟ್ 29,000 ಅಡಿ ಮತ್ತು 2ನೇ ಸ್ಥನದಲ್ಲಿರುವ ಕೆ-2 ಪರ್ವತ 28250 ಅಡಿ ಎತ್ತರವವಾಗಿದೆ. ಹಿಮಾಲಯ ಶ್ರೇಣಿಯಲ್ಲಿ ಅನೇಕ ಹಿಮನದಿಗಳನ್ನು ಕಾಣಬಹುದು. ದ್ರುವ ಪ್ರದೇಶವನ್ನು ಬಿಟ್ಟರೆ, ಪ್ರಪಂಚದ ಅತಿದೊಡ್ಡ ಹಿಮನದಿಯಾದ ಸಿಯಾಚೆನ್ ಇರುವುದು ಹಿಮಾಲಯದಲ್ಲಿಯೇ.

ಕರಗುತ್ತಿದೆ ಹಿಮ ಮುಕುಟ:
ಇವೆಲ್ಲದರ ನಡುವೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಮಾನವನ ಹಸ್ತಕ್ಷೇಪದಿಂದಾಗಿ ಹಿಮಾಲಯ ಕರಗುವ ಭೀತಿ ಎದುರಾಗಿದೆ. ಜಗತ್ತಿನ ಬೆರೆಲ್ಲಾ ಭಾಗದ ಹಿಮ ಪರ್ವತಗಳಿಗಿಂತ ಭಾರತದ ಮುಕುಟವಾಗಿರುವ ಹಿಮಾಲಯ ಕರಗುತ್ತಿದೆ. ಇದು ಹೀಗೆಯೇ ಮುಂದುವರಿದರೆ, 2035ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಹಿಮಾಲಯ ಬೋಳುಗುಡ್ಡವಾದರೂ ಆಶ್ಚರ್ಯಪಡಬೇಕಿಲ್ಲ.


 

Wednesday, July 3, 2013

ಮುಂಗಾರು ಮಾರುತ

ಈಗಾಗಲೇ ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮಾನ್ಸೂನ್ ಅಥವಾ ಮುಂಗಾರು ಎನ್ನುವುದು ಮಹತ್ವದ ವಿದ್ಯಮಾನ. ಭಾರತದ ಆರ್ಥಿಕತೆ ಮತ್ತು ಕೃಷಿಯೊಂದಿಗೆ ಮುಂಗಾರು ಅವಿನಾಭಾವವಾಗಿ ಬೆರತುಕೊಂಡಿದೆ. ಏನು ಈ ಮುಂಗಾರು, ಅದು ಹೇಗೆ ಹುಟ್ಟುತ್ತದೆ? ಹೇಗೆ ಮಳೆ ಸುರಿಸುತ್ತದೆ?
ಎನ್ನುವುದೇ ಅಚ್ಚರಿಯ ಸಂಗತಿ.


ಮಳೆ ಸುರಿಯುವುದು ಹೇಗೆ?
ಮಾನ್ಸೂನ್ ಪದದ ಮೂಲ ಅರಬ್ಬಿಯ "ಮಾಸಿಮ್" ಅಥವಾ "ಮೋಸಮ್", ಅಂದರೆ ಋತು ಎಂದರ್ಥ. ಮುಂಗಾರು ಅಂದರೆ ದೊಡ್ಡ ಪ್ರಮಾಣದಲ್ಲಿ ಬೀಸುವ ಗಾಳಿ. ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೆಲೇರಿದಾಗ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹೀಗೆ ಕಡಿಮೆ ಒತ್ತಡದ ಪ್ರದೇಶಕ್ಕೆ ಹೆಚ್ಚು  ಒತ್ತಡದಿಂದ ಕೂಡಿದ ಸಮುದ್ರದ ಮೇಲಿನ ತಣ್ಣಗಿನ ಗಾಳಿ  ನುಗ್ಗುತ್ತದೆ. ಹೀಗಾದಾಗ ಮಳೆ ಸುರಿಯಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ.

ಜಗತ್ತಿನ ಎಲ್ಲೆಡೆಯೂ ಇದೆ:

ಮುಂಗಾರು ಮಾರುತ ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲ ಕಡೆ ಬೀಸುತ್ತದೆ. ನಮ್ಮಲ್ಲಿ ಮುಂಗಾರು ಯಾವಾಗಲೂ ನೈಋತ್ಯ ದಿಕ್ಕಿನಿಂದ ಬೀಸುತ್ತದೆ. ಅಲ್ಲದೆ ಉತ್ತರ ಅಮೆರಿಕ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಷಿಯಾ ಆಸ್ಟ್ರೇಲಿಯಾ ಮುಂಗಾರು ಮುಖ್ಯಮಾರುತಗಳು. ಇದರ ವ್ಯವಸ್ಥಿತ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಆರಂಭವಾಯಿತು. ಮಾನ್ಸೂನನ್ನು ಪ್ರಥಮವಾಗಿ ಗುರುತಿಸಿದವರು ಅರಬ್ಬೀ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವಿಕರು.

ಇತರ ಮಾರುತಗಳ ಪ್ರಭಾವ:
ಭಾರತದ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪ್ರಭಾವ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ "ಎಲ್ ನಿನೊ" ಮಾರುತ ಉಂಟಾದ ಸಂದರ್ಭದಲ್ಲಿ ನಮ್ಮ ಮುಂಗಾರು ಕ್ಷೀಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ "ಲಾ ನಿನೋ" ಮಾರುತ ಹೆಚ್ಚು ಮಳೆ ಸುರಿಸುತ್ತದೆ. ಭಾರತದಲ್ಲಿ ಮುಂಗಾರು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದುಕಡೆ ವಿಶಾಲವಾದ ನೆಲ. ಇನ್ನೊಂದೆಡೆ ಹೆಚ್ಚು ಬಿಸಿಯಾಗುವ ಥಾರ್ ಮರುಭೂಮಿ. ಉತ್ತರದಿಕ್ಕಿಗೆ ಗೋಡೆಯಂತಿರುವ ಹಿಮಾಲಯ, ಉಳಿದ ಕಡೆ ಸುತ್ತಲೂ ಸಮುದ್ರ, ದಖ್ಖನ್ ಪ್ರಸ್ಥಭೂಮಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ ಮಳೆ ಸುರಿಸುವಲ್ಲಿ ಕೊಡುಗೆ ನೀಡುತ್ತಿದೆ.

ಮುಂಗಾರು ಅಂದರೆ ಏನು?
ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ನೈಋತ್ಯ ಮರುತ ಅಂದರೆ ಮಾನ್ಸೂನ್ ಆವಿಯಾದ ಸಮುದ್ರದ ನೀರನ್ನು ಹೊತ್ತುತಂದು ಮಳೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಇದನ್ನು ಬೇಸಿಗೆ ಮುಂಗಾರು ಅಂತಲೂ ಕರೆಯುತ್ತಾರೆ. ಜೂನ್ನಿಂದ ಆರಂಭವಾದ ಮುಂಗಾರು ಒಂದು, ಒಂದುವರೆ  ತಿಂಗಳಿನಲ್ಲಿ ಸಂಪೂರ್ಣ ದೇಶವನ್ನು ಆವರಿಸಿಕೊಳ್ಳುತ್ತದೆ. ಭಾರತದಲ್ಲಿ ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ  ಮುಂಗಾರು ಎಂದು ವಿಧವಾಗಿ ವಿಂಗಡಿಸಲಾಗಿದೆ.

ನೈಋತ್ಯ ಮುಂಗಾರು:
ನೈಋತ್ಯ ಮುಂಗಾರು ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆ ಸುರಿಸುತ್ತದೆ. ಇದರಲ್ಲಿ ಮತ್ತೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ಮಾರುತ ಎನ್ನುವ ಎರಡು ವಿಧಗಳನ್ನು ಗುರುತಿಸಬಹುದು. ಅರಬ್ಬೀ ಸಮುದ್ರವಾಗಿ ಬೀಸುವ ಮಾರುತ ಜೂನ್ ಒಂದರಂದು ಕೇರಳ ಮೂಲಕ ಭಾರತವನ್ನು  ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತಾ ಮಲೆನಾಡು, ಕನರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆಸುರಿಸುತ್ತದೆ. ಘಟ್ಟದ ತಪ್ಪಲಿನಲ್ಲಿ ಕಡಿಮೆ ಮಳೆ ಸುರಿಸುತ್ತದೆ. ಬಂಗಾಳ ಕೊಲ್ಲಿಯಭಾಗದಲ್ಲಿಯೂ ಸರಿಸುಮಾರು ಅದೇ ಸಮಯದಲ್ಲಿಯೇ ಮಳೆ ಆರಂಭವಾಗುತ್ತದೆ. ಮೊದಲು ಅಂಡಮಾನ್ನಲ್ಲಿ ಮಳೆ ಸುರಿಸುತ್ತದೆ. ಬಳಿಕ ಅದು ಪೂರ್ವಭಾಗದತ್ತ ಸಾಗುತ್ತದೆ. ಈ ಮಾರುತ ಹಿಮಾಲಯದ ವರೆಗೂ ಮಳೆಯನ್ನು ಸುರಿಸುತ್ತದೆ. ಮೇಘಾಲಯದ ಚಿರಾಪುಂಜಿ ಮತ್ತು ಮಾಸಿನ್ರಾಮ್ನಲ್ಲಿ ಜಗತ್ತಿನಲ್ಲಿಯೇ ಅತಿಹೆಚ್ಚು ಮಳೆ ಸುರಿಸುತ್ತದೆ.

ಈಶಾನ್ಯ ಮಾರುತ (ಹಿಂಗಾರು ಮಳೆ):
ಇದು ಸೆಪ್ಟೆಂಬರ್ ನಿಂದ ಆರಂಭವಾಗುತ್ತದೆ. ಇದನ್ನು  ಚಳಿಗಾಲದ ಮಳೆ ಎನ್ನುತ್ತಾರೆ. ಇದು ನೈರುತ್ಯ ಮುಂಗಾರಿನ ವಿರುದ್ಧ ದಿಕ್ಕಿನಲ್ಲಿ  ಉಂಟಾಗುವಂಥದ್ದು. ಮುಂಗಾರು ಮಾರುತ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಮಾಡಿದರೆ, ಹೀಗಾರು ಮಾರುತ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣ ಮಾಡುತ್ತದೆ. ಬಂಗಾಳ ಕೊಲ್ಲಿಯ ಮೇಲೆ ಬೀಸುವ ಹೀಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕನರ್ನಾಟಕದ ಪೂರ್ವಭಾಗ ಹಿಂಗಾರು ಮಳೆ ಸುರಿಯುತ್ತದೆ. ಮುಂಗಾರಿಗೆ ಹೋಲಿಸಿದರೆ ಹಿಂಗಾರಿನ ಮಳೆಯ ಆರ್ಭಟ ಕಡಿಮೆ.