ಜೀವನಯಾನ

Wednesday, July 3, 2013

ಮುಂಗಾರು ಮಾರುತ

ಈಗಾಗಲೇ ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮಾನ್ಸೂನ್ ಅಥವಾ ಮುಂಗಾರು ಎನ್ನುವುದು ಮಹತ್ವದ ವಿದ್ಯಮಾನ. ಭಾರತದ ಆರ್ಥಿಕತೆ ಮತ್ತು ಕೃಷಿಯೊಂದಿಗೆ ಮುಂಗಾರು ಅವಿನಾಭಾವವಾಗಿ ಬೆರತುಕೊಂಡಿದೆ. ಏನು ಈ ಮುಂಗಾರು, ಅದು ಹೇಗೆ ಹುಟ್ಟುತ್ತದೆ? ಹೇಗೆ ಮಳೆ ಸುರಿಸುತ್ತದೆ?
ಎನ್ನುವುದೇ ಅಚ್ಚರಿಯ ಸಂಗತಿ.


ಮಳೆ ಸುರಿಯುವುದು ಹೇಗೆ?
ಮಾನ್ಸೂನ್ ಪದದ ಮೂಲ ಅರಬ್ಬಿಯ "ಮಾಸಿಮ್" ಅಥವಾ "ಮೋಸಮ್", ಅಂದರೆ ಋತು ಎಂದರ್ಥ. ಮುಂಗಾರು ಅಂದರೆ ದೊಡ್ಡ ಪ್ರಮಾಣದಲ್ಲಿ ಬೀಸುವ ಗಾಳಿ. ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೆಲೇರಿದಾಗ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹೀಗೆ ಕಡಿಮೆ ಒತ್ತಡದ ಪ್ರದೇಶಕ್ಕೆ ಹೆಚ್ಚು  ಒತ್ತಡದಿಂದ ಕೂಡಿದ ಸಮುದ್ರದ ಮೇಲಿನ ತಣ್ಣಗಿನ ಗಾಳಿ  ನುಗ್ಗುತ್ತದೆ. ಹೀಗಾದಾಗ ಮಳೆ ಸುರಿಯಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ.

ಜಗತ್ತಿನ ಎಲ್ಲೆಡೆಯೂ ಇದೆ:

ಮುಂಗಾರು ಮಾರುತ ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲ ಕಡೆ ಬೀಸುತ್ತದೆ. ನಮ್ಮಲ್ಲಿ ಮುಂಗಾರು ಯಾವಾಗಲೂ ನೈಋತ್ಯ ದಿಕ್ಕಿನಿಂದ ಬೀಸುತ್ತದೆ. ಅಲ್ಲದೆ ಉತ್ತರ ಅಮೆರಿಕ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಷಿಯಾ ಆಸ್ಟ್ರೇಲಿಯಾ ಮುಂಗಾರು ಮುಖ್ಯಮಾರುತಗಳು. ಇದರ ವ್ಯವಸ್ಥಿತ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಆರಂಭವಾಯಿತು. ಮಾನ್ಸೂನನ್ನು ಪ್ರಥಮವಾಗಿ ಗುರುತಿಸಿದವರು ಅರಬ್ಬೀ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವಿಕರು.

ಇತರ ಮಾರುತಗಳ ಪ್ರಭಾವ:
ಭಾರತದ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪ್ರಭಾವ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ "ಎಲ್ ನಿನೊ" ಮಾರುತ ಉಂಟಾದ ಸಂದರ್ಭದಲ್ಲಿ ನಮ್ಮ ಮುಂಗಾರು ಕ್ಷೀಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ "ಲಾ ನಿನೋ" ಮಾರುತ ಹೆಚ್ಚು ಮಳೆ ಸುರಿಸುತ್ತದೆ. ಭಾರತದಲ್ಲಿ ಮುಂಗಾರು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದುಕಡೆ ವಿಶಾಲವಾದ ನೆಲ. ಇನ್ನೊಂದೆಡೆ ಹೆಚ್ಚು ಬಿಸಿಯಾಗುವ ಥಾರ್ ಮರುಭೂಮಿ. ಉತ್ತರದಿಕ್ಕಿಗೆ ಗೋಡೆಯಂತಿರುವ ಹಿಮಾಲಯ, ಉಳಿದ ಕಡೆ ಸುತ್ತಲೂ ಸಮುದ್ರ, ದಖ್ಖನ್ ಪ್ರಸ್ಥಭೂಮಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ ಮಳೆ ಸುರಿಸುವಲ್ಲಿ ಕೊಡುಗೆ ನೀಡುತ್ತಿದೆ.

ಮುಂಗಾರು ಅಂದರೆ ಏನು?
ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ನೈಋತ್ಯ ಮರುತ ಅಂದರೆ ಮಾನ್ಸೂನ್ ಆವಿಯಾದ ಸಮುದ್ರದ ನೀರನ್ನು ಹೊತ್ತುತಂದು ಮಳೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಇದನ್ನು ಬೇಸಿಗೆ ಮುಂಗಾರು ಅಂತಲೂ ಕರೆಯುತ್ತಾರೆ. ಜೂನ್ನಿಂದ ಆರಂಭವಾದ ಮುಂಗಾರು ಒಂದು, ಒಂದುವರೆ  ತಿಂಗಳಿನಲ್ಲಿ ಸಂಪೂರ್ಣ ದೇಶವನ್ನು ಆವರಿಸಿಕೊಳ್ಳುತ್ತದೆ. ಭಾರತದಲ್ಲಿ ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ  ಮುಂಗಾರು ಎಂದು ವಿಧವಾಗಿ ವಿಂಗಡಿಸಲಾಗಿದೆ.

ನೈಋತ್ಯ ಮುಂಗಾರು:
ನೈಋತ್ಯ ಮುಂಗಾರು ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆ ಸುರಿಸುತ್ತದೆ. ಇದರಲ್ಲಿ ಮತ್ತೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ಮಾರುತ ಎನ್ನುವ ಎರಡು ವಿಧಗಳನ್ನು ಗುರುತಿಸಬಹುದು. ಅರಬ್ಬೀ ಸಮುದ್ರವಾಗಿ ಬೀಸುವ ಮಾರುತ ಜೂನ್ ಒಂದರಂದು ಕೇರಳ ಮೂಲಕ ಭಾರತವನ್ನು  ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತಾ ಮಲೆನಾಡು, ಕನರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆಸುರಿಸುತ್ತದೆ. ಘಟ್ಟದ ತಪ್ಪಲಿನಲ್ಲಿ ಕಡಿಮೆ ಮಳೆ ಸುರಿಸುತ್ತದೆ. ಬಂಗಾಳ ಕೊಲ್ಲಿಯಭಾಗದಲ್ಲಿಯೂ ಸರಿಸುಮಾರು ಅದೇ ಸಮಯದಲ್ಲಿಯೇ ಮಳೆ ಆರಂಭವಾಗುತ್ತದೆ. ಮೊದಲು ಅಂಡಮಾನ್ನಲ್ಲಿ ಮಳೆ ಸುರಿಸುತ್ತದೆ. ಬಳಿಕ ಅದು ಪೂರ್ವಭಾಗದತ್ತ ಸಾಗುತ್ತದೆ. ಈ ಮಾರುತ ಹಿಮಾಲಯದ ವರೆಗೂ ಮಳೆಯನ್ನು ಸುರಿಸುತ್ತದೆ. ಮೇಘಾಲಯದ ಚಿರಾಪುಂಜಿ ಮತ್ತು ಮಾಸಿನ್ರಾಮ್ನಲ್ಲಿ ಜಗತ್ತಿನಲ್ಲಿಯೇ ಅತಿಹೆಚ್ಚು ಮಳೆ ಸುರಿಸುತ್ತದೆ.

ಈಶಾನ್ಯ ಮಾರುತ (ಹಿಂಗಾರು ಮಳೆ):
ಇದು ಸೆಪ್ಟೆಂಬರ್ ನಿಂದ ಆರಂಭವಾಗುತ್ತದೆ. ಇದನ್ನು  ಚಳಿಗಾಲದ ಮಳೆ ಎನ್ನುತ್ತಾರೆ. ಇದು ನೈರುತ್ಯ ಮುಂಗಾರಿನ ವಿರುದ್ಧ ದಿಕ್ಕಿನಲ್ಲಿ  ಉಂಟಾಗುವಂಥದ್ದು. ಮುಂಗಾರು ಮಾರುತ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಮಾಡಿದರೆ, ಹೀಗಾರು ಮಾರುತ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣ ಮಾಡುತ್ತದೆ. ಬಂಗಾಳ ಕೊಲ್ಲಿಯ ಮೇಲೆ ಬೀಸುವ ಹೀಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕನರ್ನಾಟಕದ ಪೂರ್ವಭಾಗ ಹಿಂಗಾರು ಮಳೆ ಸುರಿಯುತ್ತದೆ. ಮುಂಗಾರಿಗೆ ಹೋಲಿಸಿದರೆ ಹಿಂಗಾರಿನ ಮಳೆಯ ಆರ್ಭಟ ಕಡಿಮೆ.

No comments:

Post a Comment