ಜೀವನಯಾನ

Sunday, October 28, 2012

ದುರ್ವಾಸನೆಯ ಹೂವು


ಹೂವು ಸುಗಂಧವನ್ನಷ್ಟೇ ಅಲ್ಲ ಕೆಟ್ಟ ದುರ್ವಾಸನೆಯನ್ನೂ ಬೀರುತ್ತವೆ ಎಂದರೆ ನಂಬುತ್ತೀರಾ? ಹೌದು, ದುರ್ವಾಸನೆ ಬೀರುವ ಹೂವೊಂದಿದೆ. ಅದೇ ಟೈಟನ್ ಅರಂ ಅಥವಾ ಪಂಜರಗಡ್ಡೆಯ ಹೂ. ಜಗತ್ತಿನ ಅತ್ಯಂತ ದೊಡ್ಡ ಗಾತ್ರದ ಹೂವೆಂದು ಇದು ಗುರುತಿಸ್ಪಟ್ಟಿದೆ. ಈ ಹೂವು ಅರಳಿದರೆ ಮಳೆಗಾಲದ ಮುನ್ಸೂಚನೆ ಎಂದೇ ಭಾವಿಸಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರವೇ ಅರಳುವ ಟೈಟನ್ ಅರಂ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ.
ಆದರೆ ಇದರ ಹತ್ತಿರಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು!


  • ಹೂ ಅರಳುವುದು ಹೇಗೆ?
ಎಲ್ಲಾ ಕಾಲದಲ್ಲಿಯೂ ಈ ಹೂವು ಕಾಣ ಸಿಗುವುದಿಲ್ಲ. ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಿನಲ್ಲಿ ಮಳೆ ಬಿದ್ದೊಡನೆ ವಾತಾವರಣದಲ್ಲಿ ಆರ್ದ್ರತೆ ಉಂಟಾಗುತ್ತದೆ. ಈ ಸಮಯದಲ್ಲಿ ನೆಲದೊಳಗಿದ್ದ ಕಾಡು ಪಂಜರದ ಗಡ್ಡೆ ಮೊಗ್ಗಾಗಿ ಹೊರಬಂದು ಅರಳುತ್ತದೆ. 2 ವರ್ಷದಷ್ಟು ಹಳೆಯದಾದ ಕಾಡು ಪಂಜರ ಅಥವಾ ಸುವರ್ಣ ಗಡ್ಡೆಗೆ ಈ ಹೂವು ಅರಳುತ್ತದೆ. ಭೂಮಿಯ ಆಳದಲ್ಲಿ ಹೂತಿದ್ದ ಗಡ್ಡೆಗೆ ಮೊದಲ ಮಳೆಯ ಸ್ಪರ್ಶ ತಾಕಿದೊಡನೆ ಕಾಡು ಪಂಜರಗಡ್ಡೆಯಿಂದ ಹೂವು ಅರಳಿ ನಿಲ್ಲುತ್ತದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ದಿಢೀರನೆ ಎದ್ದು ನಿಲ್ಲುತ್ತದೆ. ಇದು ಕೆಲವೊಮ್ಮೆ 7ರಿಂದ 10 ಅಡಿ ಎತ್ತರದವರೆಗೂ ಬೆಳೆಯಬಲ್ಲದು. ಸುತ್ತಮುತ್ತಲೂ ಇದರ ವಾಸನೆ ಹರಡಿದಾಗಲೇ ಹೂವು ಅರಳಿದ್ದು ಅರಿವಾಗುತ್ತದೆ.  

  • ಎರಡು ದಿನದ ಬಾಳು!
ಎರಡು ವರ್ಷಗಳಕಾಲ ಗಡ್ಡೆ ಮಣ್ಣಿನೊಳಗೇ ಇದ್ದರೆ ಹೂ ಬಿಡುವ ಸಾದ್ಯತೆ ಹೆಚ್ಚು.ಎರಡು ವರ್ಷದ ಬಳಿಕ ಅರಳಿದರೂ ಇದರ ಬಾಳು ಎರಡೇ ಎರಡು ದಿನದ್ದು. ಅಂದರೆ ಕೇವಲ 48 ಗಂಟೆ ಮಾತ್ರ. ಕಾಡಿನ ಮಧ್ಯದಲ್ಲೆಲ್ಲೋ ಅರಳಿ ನಿಂತು ಸುತ್ತಮುತ್ತಲೂ ಕೊಳೆತ ಶವದ ವಾಸನೆ ಹರಡುತ್ತದೆ. ಹೀಗಾಗಿ ಇದನ್ನು ಶವದ ಹೂ (ಕಾರ್ಪ್ಸ್ ಫ್ಲವರ್) ಎನ್ನಯವ ಹೆಸರಿನಿಂದ ಕರೆಯಲಾಗುತ್ತದೆ. ಸಮದ್ರ ಮಟ್ಟದಿಂದ ಸುಮಾರು 120ರಿಂದ 365 ಮೀಟರ್ ಎತ್ತರದಲ್ಲಿ ಮಾತ್ರ ಹೂವು ಅರಳುತ್ತದೆ. 

  • ವೆಲ್ವೇಟ್ ಹೊದಿಕೆ
 ಇನ್ನೊಂದು ವಿಶೇಷತೆಯೆಂದರೆ ಈ ಗಿಡದಲ್ಲಿರುವುದು ಒಂದೇ ಒಂದು ದೈತ್ಯಾಕಾರದ ಎಲೆ ಮಾತ್ರ. ಈ ಎಲೆಯೇ ಹೂವಿನ ಆಕಾರದಲ್ಲಿ ಸುರುಳಿ ಸುತ್ತಿಕೊಂಡಿರುತ್ತದೆ. ಕೆಲವೊಂದು ಗಿಡದ ಎಲೆ ಸುಮಾರು 6 ಮೀಟರ್ (20 ಅಡಿ) ದೊಡ್ಡದಾಗಿರುತ್ತದೆ. ಈ ಹೂವು ತನ್ನ ದುರ್ವಾಸನೆಯಿಂದ ಪರಾಗಸ್ಪರ್ಶಕ್ಕೆ ನೆರವಾಗುವ ವಿಶಿಷ್ಟ ಜಾತಿಯ ಕೀಟಗಳನ್ನು ಆಕರರ್ಷಿಸುತ್ತದೆ. ಪರಾಗಸ್ಪರ್ಶದ ಬಳಿಕ ಹೂವು ಮರೆಯಾಗಿ ಅದೇ ಜಾಗದಲ್ಲಿ ಅರ್ಧ ಮೀಟರ್ ಎತ್ತರದ ಹಣ್ಣಿನಗೊಂಚಲಿನ ಗಿಡ ಎದ್ದುನಿಲ್ಲುತ್ತದೆ. ಭೂಮಿಯ ಒಳಗೆ ಸಂಗ್ರಹವಾದ ಇದರ ಗಡ್ಡೆ ಸುಮಾರು 75 ಕೇ.ಜಿಯ ತನಕವೂ ತೂಗುತ್ತದೆ. ಕೆಲವೊಂದು ಗಡ್ಡೆ (ಸುವರ್ಣ ಗಡ್ಡೆ) ತರಕಾರಿಯಾಗಿಯೂ ಬಳಸುತ್ತಾರೆ. ಹೂವಿನ ಮೇಲೆ ಕಂದು 
ವೆಲ್ವೆಟ್ ವಸ್ತ್ರವನ್ನು ಹೊದೆಸಿ ಇಟ್ಟಂತೆ ಕಾಣುತ್ತದೆ. ಈ ಹೂವು ಪೂರ್ಣ ಅರಳಿದ ಮೇಲೆ ವಾಸನೆ ಇರುವುದಿಲ್ಲ. ಈ ಹೂವು ಹೆಚ್ಚಾಗಿ ರಾತ್ರಿಯ  ವೇಳೆ ಅರಳುತ್ತದೆ. ಅಲ್ಲದೇ ಗಡ್ಡೆಯಲ್ಲಿದ್ದ ಬಿಸಿಗಾಳಿಯನ್ನು ಹೊರಹಾಕುತ್ತದೆ. 
 ಪಂಜರ ಗಡ್ಡೆಯ ಹೂವು ವಾಸನೆ ಸೂಸಿದರೂ, ಎರಡೇ ದಿನದ ಬದುಕಿದರೂ ಸಹಸ್ರಾರು ಜನರ ಗಮನ ಸೆಳೆಯುತ್ತದೆ.

Saturday, October 20, 2012

ಕೈಮುಗಿಯುವ ಸೊಗಸುಗಾರ

ಸದಾ ಮುಂಗಾಲನ್ನು ಕೈಮುಗಿಯುವಂತೆ ಎತ್ತಿ ಹಿಡಿಯುವುದರಿಂದ ಈ ಕೀಟಕ್ಕೆ ಪ್ರೇಯಿಂಗ್ ಮ್ಯಾಂಟಿಸ್ ಎನ್ನುವ ಹೆಸರು ಬಂದಿದೆ. ಅಲ್ಲದೇ ಇದನ್ನು ದೇವರ ಕೀಟ, ಕಡ್ಡಿ ಕುದುರೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ  ಕೀಟದ ವೈಜ್ಞಾನಿಕ ಹೆಸರು ಮಾಂಟೊಡಿಯಾ. ಮಾಂಟಿಸ್ ಜಿರಲೆಯ ನಿಕಟ ಸಂಬಂಧಿಗಳಾಗಿವೆ. ಕೆವೊಮ್ಮೆ ರಾತ್ರಿಯ ಬೆಳಕಿಗೆ ಆಕರ್ಷಣೆಗೊಂಡು ನಿಮ್ಮ ಮನೆಯ ಅತಿಥಿಯಾಗಿ ಈ ಕೈಮುಗಿಯುವ ಸೊಗಸುಗಾರ ಬಂದು ಬಿಡಬಹುದು.

ವಿಶಿಷ್ಟ ದೇಹ ರಚನೆ
ಇದರ ದೇಹ ರಚನೆಯನ್ನು ತಲೆ, ಎದೆಯ ಗೂಡು ಮತ್ತು ಹೊಟ್ಟೆ ಹೀಗೆ 3 ಭಾಗವಾಗಿ ವಿಂಗಡಿಸಬಹುದು. ತ್ರಿಕೋಣಾಕೃತಿಯ ತಲೆ, ಉದ್ದನೆಯ ಕುತ್ತಿಗೆ ಅದಕ್ಕೆ ಹೊಂದಿಕೊಂಡಂತೆ ದೊಡ್ಡ ಉರುಟು ಪಾರದರ್ಶಕ ಕಣ್ಣುಗಳು, ಸಪೂರ ಕೋರೆಹಲ್ಲುಗಳನ್ನು ಹೊಂದಿರುವ ಪುಟ್ಟ ಬಾಯಿ. ಗರಗಸದ ಹಲ್ಲುಗಳನ್ನು ಹೊಂದಿರುವ ಮುಂಗಾಲು ಹಾಗೆಯೇ ಉದ್ದನೆಯ ಹಿಂಗಾಲು ಇದರ ವಿಶೇಷತೆ.

ಗರಗಸದ ಹಲ್ಲಿನ ಮುಂಗೈ
ತನ್ನ ಕತ್ತನ್ನು 180 ಡಿಗ್ರಿ ತಿರುಗಿಸುವ ಸಾಮಥ್ರ್ಯವಿರುವುದು ಈ ಕೀಟಕ್ಕೆ ಮಾತ್ರ. ಇವು ಎಲೆ ಅಥವಾ ಪರಿಸರದ ಬಣ್ಣವನ್ನೇ ಹೋಲುವುದರಿಂದ ಹಕ್ಕಿಗಳಿಗೆ, ಕ್ರಿಮಿ ಕೀಟಗಳಿಗೆ ಗುರುತಿಸುವುದು ಅಷ್ಟು ಸುಲಭವಲ್ಲ. ಗಿಡದಲ್ಲಿ ಅಡಗಿ ತನ್ನ ಹತ್ತಿರ ಬರುವ ಚಿಟ್ಟೆ, ದುಂಬಿಗಳ ಕಣ್ತಪ್ಪಿಸಿ ತನ್ನ ಕದಂಭ ಬಾಹುವಿನ ಸಮೀಪಕ್ಕೆ ಬೇಟೆ ಬಂದಾಕ್ಷಣ ಮಿಂಚಿನಂತೆ ಕ್ಷಣಾರ್ಧದಲ್ಲಿ ತನ್ನ ಮುಂಗಾಲನ್ನು ಚಾಚಿ ಕಬಳಿಸಿಬಿಡುತ್ತದೆ. ಇವುಗಳ ಮುಂಗಾಲು ಮಾನವನ ಕಣ್ಣಿನ ದೃಷ್ಟಿಗಿಂತಲೂ ವೇಗವಾಗಿ ಬೇಟೆಯಾಡುತ್ತೆ. ಮುಂಗಾಲಿನಲ್ಲಿ ಸಣ್ಣ ಸಣ್ಣ ಗರಗಸದ ಹಲ್ಲಿನಂತಹ ರಚನೆಗಳು ಬೇಟೆಯನ್ನು ಮಿಸುಕಾಡದಂತೆ ಚುಚ್ಚಿ ಭದ್ರವಾಗಿ ಹಿಯುತ್ತವೆ. ಹೀಗಾಗಿ ಇದರ ಪ್ರರ್ಥನೆಗೆ ಒಲಿದು ಕೈಗೆ ಸಿಕ್ಕಿದ ಕೀಟ ನೇರವಾಗಿ ದೇವರ ಪಾದ ಸೇರುತ್ತದೆ. 

ಎಲೆಯ ಬಣ್ಣದ ಕೀಟ
ಮಿಡತೆಯಂತೆ ಈ ಅಪೂರ್ವ ಕೀಟ ಕೂಡ ರೈತ ಮಿತ್ರ! ಪ್ರಕೃತಿ ಸಮತೋಲನದಲ್ಲಿ ಇದರ ಪಾತ್ರ ಹಿರಿದು. ಇತರ ದೇಶಗಳಲ್ಲಿ ಕಪ್ಪೆ, ಚೇಳು, ಹಲ್ಲಿ ಹಾವು, ಸಣ್ಣ ಪಕ್ಷಿಗಳನ್ನೂ ಸಹ ತಿನ್ನುವ ಮ್ಯಾಂಟಿಸ್ಗಳಿವೆ. ಏಷ್ಯಾದಲ್ಲಿ ಕಂಡುಬರುವ ಮ್ಯಾಂಟಿಸ್ 10 ಇಂಚು ಇರುತ್ತವೆ. ನಮ್ಮಲ್ಲಿ ಇಷ್ಟೊಂದು ದೊಡ್ಡಗಾತ್ರದ ಮ್ಯಾಂಟಿಸ್ ಕಂಡುಬರದಿದ್ದರೂ, ಒಣಗಿದ ಎಲೆ, ಹಸಿರೆಲೆ, ಹುಲ್ಲಿನ ಬಣ್ಣ ಹೀಗೆ ಹತ್ತು ಹಲವಾರು ಬಣ್ಣದಲ್ಲಿ ಕಂಡುಬರುತ್ತವೆ. ಇವು ಅರ್ಧ ಇಂಚಿನಿಂದ 6 ಇಂಚಿನ ತನಕ ಉದ್ದವಾಗಿರುತ್ತವೆ. ಬಹುತೇಕ ಮ್ಯಾಂಟಿಸ್ ಗಳಿಗೆ ರೆಕ್ಕೆಯೂ ಇರುತ್ತದೆ ಮತ್ತು ಹಾರುವ ಸಾಮರ್ಥ್ಯ ಹೊಂದಿವೆ.  ಸಾಮಾನ್ಯವಾಗಿ ಹೆಣ್ಣು  ಕೀಟ ಗಂಡಿಗಿಂತಲೂ ದೊಡ್ಡದಾಗಿರುತ್ತದೆ.
ಪ್ರಪಂಚದಾದ್ಯಂತ ಸುಮಾರು 2, 400 ಜಾತಿಯ ಪ್ರೇ ಮ್ಯಾಂಟಿಸ್ಗಳಿವೆ ಎಂಬುದು ಕೀಟ ತಜ್ಞರ ಅಂದಾಜು. ಇವುಗಳ ಜೀವಿತಾವಧಿ ಸುಮಾರು ಒಂದು ವರ್ಷ. ಹೆಣ್ಣು ಕೀಟ ನೂರಾರು ಮೊಟ್ಟೆಗಳನ್ನು ಚೀಲದಂತಹ ರಚನೆಯಲ್ಲಿ ಇಡುತ್ತದೆ. ಮೊಟ್ಟೆಗಳು ನೊರೆಯ ರೂಪದಿಂದ ಗಟ್ಟಿಯಾಗುತ್ತವೆ.  ಬಾವಲಿ, ಕಪ್ಪೆ, ದಶಂಕಗಳು ಮತ್ತು  ಜೇಡರ ಹುಳ  ಮ್ಯಾಂಟಿಸ್ಗಳ ನೈಸರ್ಗಿಕ ಶತ್ರು.

ಗಂಡನ್ನೇ ಕಬಳಿಸುವ ಹೆಣ್ಣು!
ಹೆಣ್ಣು  ಪ್ರೇ ಮ್ಯಾಂಟಿಸ್ ತನ್ನ ಪ್ರಿಯಕರನ ಜತೆಗೆ ಮಿಲನ ಮಹೋತ್ಸವ ಆಚರಿಸಿ ನೀಡುವ ಪ್ರೀತಿಯ ಕಾಣಿಕೆ ಏನು ಗೊತ್ತೆ? ಗಂಡನ್ನು  ಹಾಗೆಯೇ ತನ್ನ ಕಮಂಭ ಬಾಹುಗಳಲ್ಲಿ ತಬ್ಬಿ ಹಿಡಿದು ಮೃತ್ಯು ಚುಂಬನ ನೀಡಿ ತಿಂದು ಬಿಡಬಹುದು. ಗಂಡನ್ನು ತಲೆ ಸಮೇತ ತಿಂದು ತೇಗಿದ ಹೆಣ್ಣಿಗೆ ಮೊಟ್ಟೆಯಿಡಲು ಅಗತ್ಯ ಪೋಷಕಾಂಶ ಸಿಕ್ಕಿ ಬಿಡುತ್ತವಂತೆ. ಅಂದರೆ ಗಂಡು ಹುಟ್ಟಿದ್ದೇ ಹೆಣ್ಣಿಗೆ ಆಹಾರವಾಗಲು! 

 

Wednesday, October 17, 2012

ನೀಲಿ ಕಂಠದ ಇಂಡಿಯನ್ ರೋಲರ್

ಆಕಾಶದಲ್ಲಿ ಗಿರಕಿ ಹೊಡೆಯುತ್ತಾ, ಎಲ್ಲೆಂದರಲ್ಲಿ ಸುತ್ತಾಡಿಕೊಂಡು ಕಾಲ ಕಳೆಯುವ ಈ ಹಕ್ಕಿ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ನೀಲಿ ಬಣ್ಣದಿಂದ ಇದಕ್ಕೆ ನೀಲಕಂಠ ಎನ್ನುವ ಹೆಸರು ಬಂದಿದೆ.  ಇಂಗ್ಲಿಷ್ನಲ್ಲಿ ಇದಕ್ಕೆ ಎರಡು ಹೆಸರುಗಳಿವೆ.  ಬ್ಲೂ ಜೇ (ನೀಲಿ ಬಣ್ಣದಿಂದ) ಮತ್ತು ಇಂಡಿಯನ್ ರೋಲರ್ (ಹಾರಾಡುವಾಗ ಪಲ್ಟಿ ಹೊಡೆಯುವ ಭಾರತೀಯ ಹಕ್ಕಿ) ಇನ್ನೊಂದು ವಿಶೇಷ ವೆಂದರೆ ಇದು ನಮ್ಮ ಕರ್ನಾಟಕ ರಾಜ್ಯದ ಪಕ್ಷಿ. ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಕ್ಕಿ ಆಂಧ್ರ ಪ್ರದೇಶ ಓಡಿಶಾ ರಾಜ್ಯಗಳ ಪಕ್ಷಿಯಾಗಿಯೂ ಗುರುತಿಸಲ್ಪಟ್ಟಿದೆ. ಈ ಹಕ್ಕಿ ರೋಲರ್ ಹಕ್ಕಿಗಳ ವಂಶಕ್ಕೆ ಸೇರಿದೆ. ನೀಲಕಂಠ ಹಿಂದು ಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಒಂದು ಪವಿತ್ರಹಕ್ಕಿಯಾಗಿ ಪರಿಗಣಿಸಲ್ಪಟ್ಟಿದೆ. 


ಲಕ್ಷಣಗಳು
ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ. ನೆತ್ತಿ, ರೆಕ್ಕೆ ತಿಳಿ ನೀಲಿಯಾಗಿದ್ದು, ಕತ್ತು, ಎದೆ ಬೆನ್ನು ಕಂದು ಬಣ್ಣವಿದೆ. ಕಂದು ಬಣ್ಣದ ಕಣ್ಣು. ಕಪ್ಪು ಕೊಕ್ಕನ್ನು ಹೊಂದಿದೆ. ಗಾತ್ರದಲ್ಲಿ 25ರಿಂದ 28 ಸೆಂ.ಮೀ ಉದ್ದವಿದೆ. ನೋಡಲು ಗಂಡು ಹೆಣ್ಣು ಒಂದೇ ರೀತಿ. ಈ ಹಕ್ಕಿಯ ಆಯಸ್ಸು 17 ವರ್ಷ. ಕುತ್ತಿಗೆ ಮತ್ತು ಗಂಟಲಿನ ಬಳಿ ನೇರಳೆ ಬಣ್ಣದ ಮುಳ್ಳಿನಂತಹ ಗರೆಗಳಿರುವಂತೆ ಕಂಡು ಬರುತ್ತದೆ. ಇಂಡಿಯನ್ ರೋಲರ್ ಗುಂಪಾಗಿ ಹಾರಾಡುವುದು ಬಹಳ ವಿರಳ. ಆದಾಗ್ಯೂ ಇವು ಕುಟುಂಬದ ಬಳಗ ಹೊಂದಿವೆ. ಗಡುಸಾದ ಧ್ವನಿಯ ಮೂಲಕ ಒಂದಕ್ಕೊಂದು ಸಂದೇಶ ರವಾನಿಸುತ್ತವೆ. ಕಾಗೆಯಂತೆ ಗಡುಸಾ ಧ್ವನಿಹೊದಿದ್ದರೂ ಮಧುರ ಸ್ವರವನ್ನು ಹೊರಡಿಸಬಲ್ಲದು.

ಸಂಗಾತಿ ಮೆಚ್ಚಿಸಲು
ಆಕಾಶದಲ್ಲಿ ಸರ್ಕಸ್ 
ಸಂಗಾತಿಯನ್ನು ಆಕರ್ಷಿಸಲು ಆಕಾಶದಲ್ಲಿ ಗಿರಕಿ ಹೊಡೆದು ಮಾಡುವ ಸರ್ಕಸ್ ರಮಣೀಯ. ತೀಕ್ಷ್ಣ ಸ್ವರದಲ್ಲಿ ಅರಚುತ್ತಾ, ಸುರಳಿ ಸುರಳಿಯಾಗಿ, ಉಂಗುರುಂಗುರವಾಗಿ, ಹಾರುವುದು, ದೊಪ್ಪನೆ ಬೀಳುವುದು ನೋಡಲು ಆಹ್ಲಾದ. ಗಂಡು ಹಕ್ಕಿ ಸಂತಾನೋತ್ಪತ್ತಿಯ ಋತುವಿನಲ್ಲಿ ವಿಶಿಷ್ಟ ಮತ್ತು ಚಕಿತಗೊಳಿಸುವ ಲೈ೦ಗಿಕ ಪ್ರದರ್ಶನಕ್ಕೆ ಹೆಸರುವಾಸಿ. ಈ ಸಂದರ್ಭದಲ್ಲಿ ಇಂಡಿಯನ್ ರೋಲರ್ ಎತ್ತರದಲ್ಲಿ ಹಾರಾಡುತ್ತಾ, ವೇಗವಾಗಿ ರೆಕ್ಕೆಬಡಿಯುತ್ತಾ ವೃತ್ತಾಕಾರವಾಗಿ ಕೆಳಕ್ಕೆ ಇಳಿಯುತ್ತದೆ. ಅಲ್ಲದೇ ಈ ಕ್ರಿಯೆ ನಡೆಯುವಾಗ ಜೋರಾಗಿ ಶಬ್ದ ಮಾಡುತ್ತದೆ. ಪೊಟರೆಗಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡು ಕಟ್ಟಿ 4 ಅಥವಾ 5 ಮೊಟ್ಟೆಗಳನ್ನು ಇಡುತ್ತವೆ. ಸುಮಾರು 12 ದಿನಗಳವರೆಗೆ ಕಾವುಕೊಟ್ಟು ಮರಿ ಮಾಡುತ್ತವೆ. ಕೆಲವು ಕಪ್ಪು ನೀಲಕಂಠ ಪಕ್ಷಿಗಳು ಮರಕುಟುಕ ಹಕ್ಕಿಯ ಪೊಟರೆಯಲ್ಲಿ ವಾಸ ಮಾಡುತ್ತವೆ. 

 ರೈತನ ಮಿತ್ರನೂ ಹೌದು
ನೀಲಕಂಠ ಪಕ್ಷಿ ಪ್ರಮುಖವಾಗಿ ಪರ್ಣಪಾತಿ ಕಾಡಿನ ಅಂಚು, ಕೃಷಿ ಭೂಮಿ ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಬೇಟೆಗಾರ ಪಕ್ಷಿಗಳು. ತಂತಿ, ಮರ, ಬಂಡೆ, ಹಾಗೂ  ಕಂಬಗಳಲ್ಲಿ  ಕುಳಿತು ಬೇಟೆಗಾಗಿ ಹೊಂಚು ಹಾಕುತ್ತದೆ. ನೆಲದ ಮೇಲೆ ಹರೆದಾಡುವ ಜಂತು, ಹಾರುವ ಕೀಟಗಳೆ ಇದರ ಆಹಾರ. ಹೀಗಾಗಿ ರೈತನ ಮಿತ್ರನೂ ಹೌದು. ಮೇಲಿನಿಂದ ಒಮ್ಮಲೇ ಇಳಿದು ಬಂದು ಆಹಾರ ಕಚ್ಚಿಕೊಂದು ಮೇಲಕ್ಕೆ ಹಾರುತ್ತದೆ. ಕೆಲವೊಮ್ಮೆ ಎಲ್ಲಾ ರೀತಿ ಕೀಟ, ಸರೀಸೃಪಗಳು, ಕಪ್ಪೆಗಳನ್ನೂ ಬೇಟೆಯಾಡುತ್ತದೆ. ಗಾಳಿಯಲ್ಲಿದ್ದಾಗಲೂ ಬೇಟೆಯಾಡಬಲ್ಲದು. ಇವು ಎತ್ತರದಿಂದ ನೀರಿಗೆ ಹಾರಿ ಸ್ನಾನ ಮಾಡುತ್ತವೆ. ಆದರೆ ಮೀನು ಹಿಡಿಯುವ ಕಲೆ ತಿಳಿದಿಲ್ಲ.
 ಇವುಗಳ ಫೋಟೊ ತೆಗೆಯುವುದೇ ಒಂದು ಸುಂದರ ಅನುಭವ.ನೀಲಿ ಕಂಠದ ಈ ಹಕ್ಕಿ ಇನ್ನೂ ಅಳಿವಿ ಅಂಚನ್ನು ತಲುಪಿಲ್ಲ ಎನ್ನುದೇ ನಮಗೆಲ್ಲಾ ಸಮಾಧಾನದ ವಿಷಯ.

Sunday, October 7, 2012

ಮುದ್ದು ಮುಖದ ಕಾಡುಪಾಪ

ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ. ಕನ್ನಡದ ಪಾಪೆ ಎಂಬುದು ಕಣ್ಣನ್ನು ಸೂಚಿಸುತ್ತದೆ. ದೊಡ್ಡ ಕಣ್ಣುಗಳ ಇದನ್ನು ಕನ್ನಡದಲ್ಲಿ ಈ ಅರ್ಥದಲ್ಲಿ
ಕಾಡುಪಾಪ ಎನ್ನುವರು. 

  
ತುಂಬಾ ಆಳಿಸಿ ಸ್ವಭಾವದವು
ಮೂಲತಃ ಶಾಂತ ಸ್ವಭಾವದ ಕಾಡು ಪಾಪ ಅಪೂರ್ವ ಲಕ್ಷಣಗಳನ್ನು ಹೊಂದಿದೆ. ದುಂಡು ತಲೆ, ಗಿಡ್ಡಮೂತಿ. ಉದ್ದನೆಯ ಮೂಗು, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಂದು ಬಣ್ಣದ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲು ಚಿಕ್ಕವು ಹಾಗೂ ಬಾಲವಿಲ್ಲ. ಇದರ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು, ಮನುಷ್ಯನ ಹೋಲಿಕೆಯನ್ನು ಕಾಡು ಪಾಪನಲ್ಲಿ ಕಾಣಬಹುದು. ಇವುಗಳಲ್ಲಿ ಕಂದು ಮತ್ತು ಕಿತ್ತಳೆ ಬಣ್ಣದ ಎರಡು ಜಾತಿಗಳಿವೆ. ಮರದ ಮೇಲೆಯೇ ತನ್ನ ಬಹುತೇಕ ಜೀವನವನ್ನು ಕಳೆಯುತ್ತದೆ. ಆದರೆ ಸ್ವಭಾವದಲ್ಲಿ  ತುಂಬಾ ಆಳಸಿ. ಮಂಗನ ಚುರುಕುತನವಾಗಲಿ, ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ಸಾಮರ್ಥ್ಯ  ಕಾಡುಪಾಪಕ್ಕೆ ಇಲ್ಲ. ಆದರೆ ತನ್ನ ಉದ್ದನೆಯ ತೋಳಿನಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಸಾಗಬಲ್ಲದು. ನಿಶಾಚರಿ ಜೀವಿಯಾಗಿದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ. 


ಕರ್ನಾಟಕದಲ್ಲೂ ಕಂಡುಬರುತ್ತದೆ
ಕಾಡುಪಾಪದ ಸಂತತಿ ಶ್ರೀಲಂಕಾ, ಜಾವಾ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡುಬರುತ್ತವೆ. ಅಲ್ಲಿಯೇ ಇದರ ಮೂಲ ನೆಲೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಾಡುಪಾಪ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದೇ ವಿಶೇಷ. ನೀಲಗಿರಿ, ಆಲದ ಮರ, ಅರಳಿಮರ, ಉಣಸೇ ಹಣ್ಣಿನ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಳೆ ಕಾಡು ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ  ಕಂಡುಬರುತ್ತವೆ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ ಹಕ್ಕಿಗಳ ಮೊಟ್ಟೆಗಳು ಹೀಗೆ ಸುಲಭದಲ್ಲಿ ದೊರೆಯುವುದನ್ನೆಲ್ಲಾ ತಿನ್ನುತ್ತವೆ.

ಆಕಾರ ಚಿಕ್ಕದು ಬಳಗವೂ ಚಿಕ್ಕದು

ಕಾಡುಪಾಪ ಆಕಾರದಲ್ಲಿ ಕೇವಲ 24 ರಿಂದ 38 ಸೆಂ.ಮೀ ದೊಡ್ಡದು ಮತ್ತು ತೂಕದಲ್ಲಿ ಎರಡು ಕೆ.ಜಿ ಗಿಂತಲೂ ಹಗುರ. ಕಾಡು ಪಾಪ ಸುಮಾರು 15 ವರ್ಷ ಬದುಕ ಬಲ್ಲದು. ಮುಂಗೈನಿಂದ ಮರದ ಕೊಂಬೆಗಳನ್ನು ಬಲವಾಗಿ ಹಿಡಿದುಕೊಳ್ಳುತ್ತವೆ. ತನ್ನದೇ ಆದ ಚಿಕ್ಕ ಬಳಗ ರಚಿಸಿಕೊಂಡಿರುತ್ತದೆ. ಆದರೆ, ಹೆಚ್ಚಾಗಿ ಏಕಾಂತದಲ್ಲಿ ಜೀವಿಸುತ್ತವೆ. ಲೈಂಗಿಕ ಕ್ರಿಯೆಯಲ್ಲಿ ಮಾತ್ರ ಸಂಗಾತಿಯೊಂದಿಗೆ ಇರುತ್ತದೆ. ಹುಟ್ಟಿದ ಮುಗು ಎರಡು ವಾರಗಳ ಕಾಲ ತಾಯಿಯನ್ನು ತಬ್ಬಿಕೊಂಡು ಬೆಳೆಯುತ್ತದೆ. ಕಾಡು ಪಾಪ ಚೆಂಡಿಂತೆ ತನ್ನನ್ನು ಸುತ್ತಿಕೊಂಡು ನಿದ್ರಿಸುತ್ತದೆ.

ಕೀಟದ ರಕ್ಷಣೆಗೆ ಸ್ವ ಮೂತ್ರ ಸ್ನಾನ
ಕಾಡುಪಾಪ ಸ್ವ ಮೂತ್ರವನ್ನು ತನ್ನ ದೇಹಕ್ಕೆ ಬಳಿದುಕೊಳ್ಳುತ್ತದೆ. ತನ್ನ ಮೂತ್ರವನ್ನು ಕೈಗಳಿಂದ ಕಾಲು ಮತ್ತು ಮುಖಗಳಿಗೆ ಉಜ್ಜಿಕೊಳ್ಳುತ್ತದೆ. ಅಪಾಯಕಾರಿ  ಕೀಟಗಳ ಕಡಿತದಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದುಭಾವಿಸಲಾಗಿದೆ.

ಅಪಾಯದ ಅಂಚಿನಲ್ಲಿರುವ ಜೀವಿ
ತಮಗೆ ಅಪಾಯ ಎದುರಾಗಿದೆ ಎಂದು ಕಂಡುಬಂದಾಗ ಎರಡೂ ಕೈಗಳನ್ನು ತಲೆಗಳಿಗಿಂತ ಮೆಲಕ್ಕೆ ಎತ್ತಿ ನಿಂತುಕೊಳ್ಳುತ್ತದೆ. ಮೊಣಕೈನಲ್ಲಿರುವ ವಿಷದ ಮಚ್ಚೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ವೈರಿಗೆ ಕಚ್ಚಲು ಪ್ರಯತ್ನಿಸುತ್ತದೆ! ಕಾಡುಪಾಪ ಔಷಧಿಯ ಗುಣ ಹೊಂದಿದೆ. ಹೀಗಾಗಿ ಸಾಂಪ್ರದಾಯಿಕ ಔಷಧಿ ಮತ್ತು ಹಣದಾಸೆಗಾಗಿ ಇವುಗಳ ಹಲ್ಲುಗಳನ್ನು ಕಿತ್ತು ಮಾರಲಾಗುತ್ತಿದೆ. ಇದರಿಂದಾಗಿ ಮುದ್ದು ಮುಖದ ಕಾಡುಪಾಪ ಅಳಿವಿನ ಅಂಚಿನಲ್ಲಿದೆ.

 

Monday, October 1, 2012

ಗಾಂಧೀಜಿಯ ಸಾಬರಮತಿ ಆಶ್ರಮ

ಗಾಂಧೀಜಿ ಸ್ಥಾಪಿಸಿದ ಸಾಬರಮತಿ ಆಶ್ರಮ ಸತ್ಯ, ಅಹಿಂಸೆಗಳ ಪ್ರಯೋಗಶಾಲೆಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಸಾಬರಮತಿ ಆಶ್ರಮ. ಅನೇಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ತರಬೇತಿ, ನಿರ್ಭಯದ ಶಿಕ್ಷಣ, ಉತ್ತಮ ಸಂಸ್ಕಾರಗಳನ್ನು ಇಲ್ಲಿ ಕಲಿಸಲಾಗುತ್ತಿತ್ತು.ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡುವ ಗರಡಿಮನೆ ಎಂದೇ ಪ್ರಸಿದ್ಧಿ ಪಡೆದಿತ್ತು. 



ಗುರುಕುಲ ಪದ್ಧತಿ ಶಿಕ್ಷಣ
ಭಾರತೀಯ ಗುರುಕುಲ ಪದ್ಧತಿಯನ್ನು  ಆಶ್ರಮದಲ್ಲಿ ಅಳವಡಿಸಲಾಗಿತ್ತು. ಪ್ರತಿಭಾವಂತ ಕಾಕಾ ಕಾಲೇಲ್ಕರ್, ಕಿಶೋರಿಲಾಲ ಮಶ್ರೂವಾಲಾ, ಮಹದೇವ ದೇಸಾಯಿ ಮಗನಲಾಲ್  ಗಾಂಧಿ, ವಿನೋಬಾ ಭಾವೆ ಮುಂತಾದವರು ಆಶ್ರಮದ ಮಕ್ಕಳಿಗೆ ಶಿಕ್ಷಕರಾಗಿದ್ದರು. ಆಶ್ರಮದಲ್ಲಿ ವಿದ್ಯಾರ್ಥಿಗಳು ಕಠಿಣ ನಿಯಮ ಪಾಲಿಸಬೇಕಾಗಿತ್ತು. ಬೀಸುವುದು, ನೀರು ತುಂಬುವುದು, ಪಾತ್ರೆ ತಿಕ್ಕುವುದು, ಕಸ ಗುಡಿಸುವುದು,  ಅಡಿಗೆ ಮಾಡುವುದು, ನೂಲು ತೆಗೆಯುವುದು ಮುಂತಾದ ಕೆಲಸಕಾರ್ಯಗಳನ್ನು ತಪ್ಪದೇ ಮಾಡಬೇಕಾಗಿತ್ತು. ಈ ಕೆಲಸದಿಂದ ಶಿಕ್ಷಕರೂ ಹೊರತಾಗಿರಲಿಲ್ಲ. ಮಕ್ಕಳ ಶಿಕ್ಷಣದ ಪೂರ್ಣ ಜವಾಬ್ದಾರಿ ವಿನೋಬಾರದು. ಬೆಳಕು ಹರಿಯುವುದಕ್ಕೂ ಮುದಲು ನಾಲ್ಕು ಗಂಟೆಯ ಮಬ್ಬುಗತ್ತಲೆಯಲ್ಲೇ ಆಶ್ರಮದ ಗಂಟೆ ಬಾರಿಸುತ್ತಿತ್ತು. ವಿನೋಬಾ ಮಕ್ಕಳನ್ನು ಎಬ್ಬಸಿ ಉಪನಿಷತ್  ಅಧ್ಯಯನಕ್ಕೆ ಕರೆದೊಯ್ಯುತ್ತಿದ್ದರು.

  ಆಶ್ರಮ ಸ್ಥಾಪನೆ
20 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಬಳಿಕ 1915ರಲ್ಲಿ ಗಾಂಧೀಜಿ ಭಾರತಕ್ಕೆ ಮರಳಿದ್ದರು. ಅದು ಆಗತಾನೆ ಸ್ವಾತಂತ್ರ್ಯ ಚಳವಳಿ ಕಾವು  ಪಡೆಯುತ್ತಿದ್ದ ಕಾಲ. ಹೀಗಾಗಿ ಗಾಂಧೀಜಿ ಆಶ್ರಮ ಸ್ಥಾಪನೆಗೆ ಮುಂದಾದರು. ಪ್ರಾರಂಭದಲ್ಲಿ ಗಾಂಧೀಜಿ ಅಹಮದಾಬಾದ್ನ ಕೊಚ್ರಬ್ನಲ್ಲಿರುವ ಸ್ನೇಹಿತ ಜೀವನ್ಲಾಲ್ ದೇಸಾಯಿಯ ಮನೆಯಲ್ಲಿ ಮೇ 25 1915ರಂದು ಆಶ್ರಮ ಸ್ಥಾಪಿಸಿದರು. ಆಗ ಆಶ್ರಮದಲ್ಲಿ 25 ವಿದ್ಯಾರ್ಥಿಗಳಿದ್ದರು. ಆದರೆ ಆಶ್ರಮದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ಲೇಗ್ ಕಾಣಿಸಿಕೊಂಡಿದ್ದರಿಂದ ಎರಡು ವರ್ಷದಲ್ಲಿ ಆಶ್ರಮವನ್ನು ಬೇರೆಡೆಗೆ ಸ್ಥಳಾಂರಿಸುವ ಅನಿವಾರ್ಯತೆ ಎದುರಾಯಿತು. ನಂತರ ಸಾಬರಮತಿ ನದಿಯ ದಂಡೆಯ ಮೇಲೆ ಆಶ್ರಮ ಸ್ಥಾಪಿಸಲು ಗಾಂಧೀಜಿ ನಿರ್ಧರಿಸಿದರು. 1917 ಜುಲೈನಲ್ಲಿ ಸಾಬರಮತಿ ಆಶ್ರಮ ಆರಂಭವಾಯಿತು.

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ.
ಸಾಬರಮತಿ ಆಶ್ರಮ ಸತ್ಯಾಗ್ರಹದ ತವರುಮನೆ ಎಂದೇ ಕರೆಸಿಕೊಳ್ಳುತ್ತದೆ. ಈ ಆಶ್ರಮಕ್ಕೆ ಹರಿಜನರಿಗೂ ಮುಕ್ತ ಪ್ರವೇಶವಿತ್ತು. ಹಿಗಾಗಿ ಗಾಂಧೀಜಿ ಸಾಂಪ್ರದಾಯಿಕ ಮೇಲ್ವರ್ಗದ ಹಿಂದುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಗಾಂಧೀಜಿ 13 ವರ್ಷಗಳ ಕಾಲ ಆಶ್ರಮದಲ್ಲಿ ವಾಸವಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಬರಮತಿ ಆಶ್ರಮ ವಿಶೇಷ ಸ್ಥಾನ ಪಡೆದುಕೊಂಡಿದೆ. ಮಾರ್ಚ್ 12 1930ರಲ್ಲಿ ಗಾಂಧೀಜಿ ಸಾಬರಮತಿ ಆಶ್ರಮದಿಂದ ಐತಿಹಾಸಿಕ ದಂಡಿಯಾತ್ರೆ ಕೈಗೊಂಡಿದ್ದರು. ಈ ಯಾತ್ರೆ ಭಾರತ ಸ್ವಾತಂತ್ರ್ಯಹೋರಾಟಕ್ಕೆ ಮುನ್ನುಡಿ ಬರೆಯಿತು. 1933ರಲ್ಲಿ ಸಾಬರಮತಿ ಆಶ್ರಮವನ್ನು ಗಾಂಧೀಜಿ ವಿಸರ್ಜಿಸಿ ಸ್ವಾತಂತ್ರ್ಯ ಚಳವಳಳಿಯಲ್ಲಿ ಧುಮುಕಿದರು.


ಆಶ್ರಮ ಈಗ ವಸ್ತುಸಂಗ್ರಹಾಲಯ
ಒಂದು ಕಾಲದಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಮಾಣ ಮಾಡಿದ್ದ ಸಾಬರಮತಿ ಆಶ್ರಮ ಈಗ ಗಾಂಧಿ ಸ್ಮಾರಕ ಸಂಗ್ರಹಾಲಯವಾಗಿ ಪರಿವರ್ತನೆಯಾಗಿದೆ. 1963ರಲ್ಲಿ ಆಶ್ರಮದ ಮೂಲ ವಸ್ತುಗಳನ್ನು ಸುಸಜ್ಜಿತವಾದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

ವಸ್ತು ಸಂಗ್ರಹಾಲಯದ ವಿಶೇಷತೆಗಳು
  •  ಗಾಂಧೀಜಿಯ ಅಪರೂಪದ 250ಕ್ಕೂ ಹೆಚ್ಚು ಛಾಯಾಚಿತ್ರ ಮತ್ತು 8 ಚಿತ್ರಪಟಗಳನ್ನು ಒಳಗೊಂಡ ''ನನ್ನ ಜೀವನವೇ ನನ್ನ ಸಂದೇಶ'' ಗ್ಯಾಲಿರಿ.
  • ಗಾಂಧೀಜಿಯ ಹೇಳಿಕೆಗಳು, ಕೃತಿಗಳು ಮತ್ತು ಇತರ ಸ್ಮಾರಕಗಳು. 
  •  ಮಹಾತ್ಮಾ ಗಾಂಧೀಜಿಗೆ ಸಂಬಂಧಿಸಿದ ಸುಮಾರು 35 ಸಾವಿರ ಪುಸ್ತಕಗಳು, ಕೃತಿಗಳು, ಭಾರತ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಘಟನೆಗಳನ್ನು ವಿವರಿಸುವ ನಿಯತಕಾಲಿಕೆಗಳನ್ನು ಒಳಗೊಂಡ ಲೈಬ್ರಿರಿ.
  •  ಗಾಂಧೀಜಿ ತಾವು ಆರಂಭಿಸಿದ ಹರಿಜನ, ಹರಿಜನ ಸೇವಕ, ಹರಿಜನಬಂಧು ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಸುಮಾರು  8,781 ಪುಟಗಳ ಹಸ್ತ ಪ್ರತಿ ಮತ್ತು ಗಾಂಧೀಜಿ ಇರುವ 6 ಸಾವಿರ ಛಾಯಾಚಿತ್ರ. ಅಲ್ಲದೇ ಗಾಂಧೀಜಿ ಬರೆದ 34, 117 ಮೂಲ ಪತ್ರಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯ.
  •  ಗಾಂಧೀಜಿ ನೂಲು ತೆಗೆಯಲುಬಳಸುತ್ತಿದ್ದ ಚರಕ ಮತ್ತು ಇನ್ನಿತರ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.