ಜೀವನಯಾನ

Monday, August 25, 2014

ಅಕ್ಬರ ಕಟ್ಟಿಸಿದ ಫತೇಪುರ್ ಸಿಕ್ರಿ

ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿರುವ ಈ ಸ್ಮಾರಕ ಪಟ್ಟಣ. ಫತೇಪುರ್ ಸಿಕ್ರಿಯ ಸುತ್ತಮುತ್ತಲಿನ ಜಾಗ ಮೂಲತಃ ರಜಪೂತ ದೊರೆಗಳಿಗೆ ಸೇರಿದ್ದಾಗಿತ್ತು. 12 ನೇ ಶತಮಾನದಲ್ಲಿ ಇಲ್ಲಿ ದೇವಾಲಯಗಳು ಇದ್ದವು. ಬಳಿಕ ಈ ಪ್ರದೇಶ ಬಾಬರನ ಕೈ ವಶವಾಯಿತು. ನಂತರದಲ್ಲಿ ಚಕ್ರವರ್ತಿ  ಅಕ್ಬರ ಇಲ್ಲಿ ತನ್ನ ರಾಜಧಾನಿಯನ್ನು ನಿರ್ಮಿಸಿದ. ಆದರೆ, ಇಲ್ಲಿ ಅಕ್ಬರನ ದರ್ಬಾರ್ ನಡೆದಿದ್ದು 
ಕೆಲವೇ ವರ್ಷಗಳು ಮಾತ್ರ!

 
ಭೂತಗಳ ನಗರ:
ಸಾಂಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸುತ್ತಿದ್ದುದರಿಂದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆ ಇರಲಿಲ್ಲ. 1571ರಲ್ಲಿ ಅಕ್ಬರ ಫತೇಪುರ್ ಸಿಕ್ರಿಯನ್ನು ಕಟ್ಟಿಸಿದ. ಈ ಪಟ್ಟಣವು ಮೂರು ಕಿ.ಮೀ. ಉದ್ದ ಮತ್ತು ಒಂದು ಕಿ.ಮೀ.  ಅಗಲವಾಗಿದೆ. ಅನೇಕ ವರ್ಷಗಳ ಶ್ರಮದಿಂದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. 1585ರಲ್ಲಿ ನೀರಿನ ಕೊರತೆಯಿಂದಾಗಿ ಅಕ್ಬರ ತನ್ನ ದೆಹಲಿಗೆ ರಾಜಧಾನಿಯನ್ನು ವಗರ್ಾಯಿಸಿದ. ಹೀಗಾಗಿ ಇಲ್ಲಿ ಯಾರೂ ವಾಸಿಸದ ಕಾರಣಕ್ಕೆ ಅನೇಕ ಶತಮಾನಗಳ ಕಾಲ ಇದು ಭೂತಗಳ ನಗರ ಎಂದೇ ಕರೆಸಿಕೊಂಡಿತು. ಇಂದು ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆನಿಸಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಫತೇಪುರ್ ಸಿಕ್ರಿ ಗುರುತಿಸಲ್ಪಟ್ಟಿದೆ.

ಇಂಡೊ- ಇಸ್ಲಾಮಿಕ್ ವಾಸ್ತು ಶಿಲ್ಪ:
ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿಂದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. 
ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಹಿಂದು, ಇಂಡೊ- ಮುಸ್ಲಿಂ ಮತ್ತು ಪಷರ್ಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. ಇಲ್ಲಿನ ಕಟ್ಟಡಗಳಲ್ಲಿ ದಿವಾನ್ ಇ ಆಮ್,  ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ, ದಿವಾನ್ ಇ ಖಾಸ್, ಬೀರಬಲ್ಲನ ಅರಮನೆ, ಪಂಚ ಮಹಲ್, ಜೋಧಾಬಾಯಿ ಅರಮನೆ, ಬುಲಂದ್ ದರ್ವಾಜಾ, ಜಾಮಾ ಮಸೀದಿ ಪ್ರಮುಖವಾದವುಗಳು.

  • ಪಂಚ ಮಹಲ್: ಸ್ತಂಬಾಕಾರದ 5 ಅಂತಸ್ತಿನ ರಚನೆಯಾಗಿದೆ. ಇದನ್ನು ರಾಜ ತನ್ನ ವಿರಾಮಕ್ಕಾಗಿ, ಮನೋರಂಜನೆಗಾಗಿ ಬಳಸುತ್ತಿದ್ದನು. ಈ ಅರಮನೆಯು ವಿಶೇಷವಾಗಿ ರಾಣಿಯರು ಮತ್ತು ರಾಜ ಕುಮಾರಿಯರಿಗೆ ಮೀಸಲಾಗಿತ್ತು.
  • ಬೀರ್ಬಲ್ಲನ ಅರಮನೆ: ಅಕ್ಬರನ ಮಂತ್ರಿ ಬೀರಬಲ್ಲನ ಅರಮನೆ ಮುಘಲರ ಮುಖ್ಯ ಅರಮನೆಗಳಲ್ಲಿ ಒಂದಾಗಿತ್ತು. ಈ ಅರಮನೆ ಹಿಂದು ಮತ್ತು ಮುಘಲ್ ಎರಡೂ ವಾಸ್ತುಶಿಲ್ಪವನ್ನು ಹೊಂದಿದೆ.
  • ಬುಲಂದ್ ದರ್ವಾಜಾ: ಜಾಮಾ ಮಸೀದಿಯ ಮುಖ್ಯ ದ್ವಾರಗಳಲ್ಲಿ ಒಂದು. ಹೊರಗಡೆಯಿಂದ ಬೃಹತ್ ಗಾತ್ರ- 55 ಮೀಟರ್ ಎತ್ತರವಾಗಿರುವ ಈ ದ್ವಾರ ಒಳಹೋದಂತೆ ಇನ್ನೊಂದು ಕಡೆಯಲ್ಲಿ ಮಾನವ ಗಾತ್ರಕ್ಕೆ ಇಳಿಯುತ್ತದೆ.
  • ಜೋಧಾಬಾಯಿ ಅರಮನೆ: ಅಕ್ಬರನ ಪಟ್ಟದ ರಾಣಿ ಜೋದಾಬಾಯಿಯ ಅರಮನೆ. ಒಂದು ಪ್ರಾಂಗಣದ ಸುತ್ತ ಕಟ್ಟಲ್ಪಟ್ಟಿರುವ ಈ ಅರಮನೆಯಲ್ಲಿ ಗುಜರಾತಿ ಪ್ರಭಾವವನ್ನು ಕಾಣಬಹುದು.
  • ಸಂತ ಸಲೀಂ ಚಿಸ್ತಿ: ಸಂತ ಶೇಕ್ ಸಲೀಂ ಚಿಸ್ತಿಯು ಅಕ್ಬರನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನವ ಪ್ರತೀತಿ ಇದೆ. ಹೀಗಾಗಿ ಫತೇಪುರ್ ಸಿಕ್ರಿಯಲ್ಲಿ ಆತನ ಸಮಾಧಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಮಕ್ಕಳಿಲ್ಲದ ನೂರಾರು ಮಹಿಳೆಯರಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
  • ಜಾಮಾ ಮಸೀದಿ: ವಿಶ್ವ ಪ್ರಸಿದ್ಧ ಜಾಮಾ ಮಸೀದಿಯೂ ಫತೇಪುರ ಸಿಕ್ರಿಯಲ್ಲಿದೆ. ಇದು ಭಾರತದಲ್ಲಿಯೇ ಅತಿ ದೊಡ್ಡ ಮತ್ತು ವ್ಯವಸ್ಥಿತವಾಗಿ ಕಟ್ಟಲಾದ ಮಸೀದಿಯಾಗಿದೆ.


Thursday, August 21, 2014

ಮಾಚು ಪಿಚು ಎಂಬ ಕಳೆದುಹೋದ ನಗರ!

ಮಾಚು ಪಿಚುವನ್ನು ಇಂಕಾ ಸಾಮ್ರಾಜ್ಯದ ಕಳೆದು ಹೋದ ನಗರ ಎಂದೇ ಕರೆಯಲಾಗುತ್ತದೆ. ಗೋಪುರದ ತುತ್ತತುದಿಗೆ ಇರುವ ಈ ನಗರವನ್ನು 1450ರ ಸುಮಾರಿನಲ್ಲಿ ಕಟ್ಟಲಾಗಿತ್ತು ಎಂದು ಅಂದಾಜಿಸಲಾಗಿದೆ. ಆದರೆ, ಒಂದೇ ಶತಮಾನದಲ್ಲಿ ಅಂದರೆ, 1572ರ ವೇಳೆಗೆ ಈ ಭವ್ಯ ನಾಗರಿಕತೆ ಜನಮಾನಸದಿಂದ ಕಣ್ಮರೆಯಾಗಿತ್ತು. ಮತ್ತೆ ಈ ನಗರದ ಅಸ್ತಿತ್ವ ಪತ್ತೆಯಾದದ್ದು 1911ರಲ್ಲಿ! 


ಮಾಚು ಪಿಚು ಅಂದರೆ ಭಾರತೀಯ ಭಾಷೆಯಲ್ಲಿ ಹಳೆಯ ಬೆಟ್ಟ ಎನ್ನುವ ಅರ್ಥವಿದೆ. 7970 ಅಡಿ ಎತ್ತರದಲ್ಲಿ ಈ ನಗರವಿದೆ. ಪೆರು ದೇಶದ ಆಂಡಿಸ್ ಪರ್ವತದ ಪೂರ್ವ ಪಾಶ್ರ್ವದ ಇಳಿಜಾರಿನಲ್ಲಿ ಈ ತಾಣವಿದೆ. ಮೆಟ್ಟಿಲುಗಳ ರೂಪದಲ್ಲಿ ಈ ನಗರವನ್ನು ನಿಮರ್ಿಸಲಾಗಿದೆ. ಕಲ್ಲಿನಿಂದ ಮಾಡಿದ ಗೋಡೆಗಳು ಮತ್ತು ಮನೆಯ ಮಹಡಿಗಳು ಇಲ್ಲಿ ಕಾಣ ಸಿಗುತ್ತವೆ. ಮನೆ, ಸ್ನಾನಗೃಹ, ದೇವಾಲಯ ಹೀಗೆ ನಾನಾ ರೀತಿಯ 150ಕ್ಕೂ ಹೆಚ್ಚಿನ ಕಟ್ಟಡ ರಚನೆಗಳು ಇಲ್ಲಿವೆ. 32,500 ಹೆಕ್ಟೇರ್ ಜಾಗಕ್ಕೆ ಮಾಚು ಪಿಚು ನಗರ ಆವರಿಸಿಕೊಂಡಿದೆ. ಈ ಜಾಗದಲ್ಲಿ ಆಭರಣ, ಬೆಳ್ಳಿ ಸಾಮಗ್ರಿ, ಪಿಂಗಾಣಿ ಸೇರಿದಂತೆ 40 ಸಾವಿರ ಕಲಾಕ್ರತಿಗಳು ದೊರೆತಿವೆ. ಲ್ಯಾಟಿನ್ ಅಮೆರಿಕದ ಅತ್ಯಂತ ಐತಿಹಾಸಿಕ ಸ್ಥಳ ಎಂದು ಮಾಚು ಪಿಚು ಪರಿಗಣಿಸಲ್ಪಟ್ಟಿದೆ.

ಏಳು ಅದ್ಭುತಗಳಲ್ಲಿ ಒಂದು:
ಪಾಳುಬಿದ್ದಿದ್ದ ಈ ನಗರವನ್ನು 1976ರಲ್ಲಿ ಪುನಃ ಕಟ್ಟಲಾಗಿದೆ. ಶೇ.30ರಷ್ಟು ಮರುನಿಮರ್ಾಣ ಕಾರ್ಯ ಪೂರ್ಣಗೊಂಡಿದ್ದು, ಪುನರುತ್ಥಾನ ಕಾರ್ಯ ಇಂದಿಗೂ ನಡೆಯುತ್ತಿದೆ. 1983ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದ್ದು, 2007ರಲ್ಲಿ ಜಗತ್ತಿನ ಹೊಸ ಏಳು ಅದ್ಭುತಗಳಲ್ಲಿ ಒಂದು ಎಂದು ಹೆಸರಿಸಲಾಗಿದೆ.


 ನಗರ ನಿರ್ಮಿಸಿದ್ದು ಹೇಗೆ?
ವಿಶೇಷವೆಂದರೆ ಈ ನಗರದಲ್ಲಿನ ಕಟ್ಟಡಗಳನ್ನು ಕಲ್ಲಿನಿಂದಲೇ ಕಟ್ಟಲಾಗಿದೆ. ಇಂಕಾಗಳು ಕಲ್ಲಿನ ಕಟ್ಟಡಗಳನ್ನು ನಿಮರ್ಿಸುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ನಗರದ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳು 22 ಕೆ.ಜಿಯಷ್ಟು ತೂಕವಿದೆ. ಅವುಗಳನ್ನು ಬೆಟ್ಟದ ಮೇಲಕ್ಕೆ ಹೊತ್ತುತರಲು ಚಕ್ರದ ಗಾಡಿಗಳನ್ನಾಗಲಿ, ಪ್ರಾಣಿಗಳನ್ನಾಗಲಿ, ಕಬ್ಬಿಣದ ಸಲಾಕೆಗಳನ್ನಾಗಲಿ ಕೆಸಲಗಾರರು ಬಳಸಿರಲಿಲ್ಲ. ಬದಲಾಗಿ ನೂರಾರು ಮಂದಿ ಒಟ್ಟಿಗೆ ಸೇರಿ ಕಲ್ಲುಗಳನ್ನು ಮೇಲಕ್ಕೆ ಸಾಗಿಸಿದ್ದಾರೆ ಎಂದು ನಂಬಲಾಗಿದೆ. ಕಲ್ಲುಗಳ ಜೋಡಣೆಗೆ ಗಾರೆಗಳನ್ನು ಬಳಸಲಾಗಿಲ್ಲ. ಕಲ್ಲುಗಳನ್ನೇ ಕಡಿದು ಒಂದಕ್ಕೊಂದು ಜೋಡಿಸಲಾಗಿದೆ.
ಮಾಚು ಪಿಚುವನ್ನು ನಗರ ಮತ್ತು ಕೃಷಿ ಪ್ರದೇಶ ಎಂದು ವಿಂಗಡಿಸಲಾಗಿತ್ತು. ಮೇಲಿನ ಪಟ್ಟಣ ಪ್ರದೇಶದಲ್ಲಿ ರಾಜರ ಮನೆಗಳು ಮತ್ತು ದೇವಾಲಯಗಳುದ್ದವು. ಕೆಳಗಿನ ಪ್ರದೇಶದಲ್ಲಿ ಕಾಮರ್ಿಕರ ಮನೆಗಳಿದ್ದವು. ಮಾಚು ಪಿಚು ಸ್ಥಳಕ್ಕೆ ತೆರಳಲು ಇಂಕಾಗಳು ರಸ್ತೆಯೊಂದನ್ನು ನಿರ್ಮಾಣ ಮಾಡಿದ್ದರು. ಇಂದು ಇದೇ ಮಾರ್ಗದಲ್ಲಿ 2ರಿಂದ 5ದಿನ ಚಾರಣಮಾಡಿ ಮಾಚು ಪಿಚುವನ್ನು ತಲುಪಬಹುದು. 

ಕಣ್ಮರೆ ಯಾಗಿದ್ದು ಹೇಗೆ?
ಯಾರಿಗೂ ಗೊತ್ತಿರದ ಪ್ರದೇಶದಲ್ಲಿ ಮಾಚು ಪಿಚು ಜನಾಂಗ ವಾಸವಿದ್ದಿತ್ತು. ಅಲ್ಲದೆ, ಸ್ಪ್ಯಾನಿಷ್ ದಾಳಿಗೂ ಮುನ್ನವೇ ಈ ನಗರ ಅವನತಿ ಹೊಂದಿತ್ತು. ಬಹುಶಃ ಯಾರಿಂದಲೋ ತಗುಲಿದ ಸಿಡುಬು ರೋಗಕ್ಕೆ ತುತ್ತಾಗಿ ಮಾಚು ಪಿಚು ಜನಾಂಗ ಅಳಿದಿರಬಹುದು ಎಂದು ಭಾವಿಸಲಾಗಿದೆ. ಆದರೂ ಈ ನಗರ ಕಾಣೆಯಾಗಿದ್ದು ಹೇಗೆ ಎಂಬುದು ಇಂದಿಗೂ ನಿಗೂಢ.

ನಗರ ನಿರ್ಮಿಸಿದ್ದು ಏಕೆ?

ರಾಜವಂಶಸ್ಥರು ವಾಸಿಸುವ ಸಲುವಾಗಿ ಏಕಾಂತ ಪ್ರದೇಶದಲ್ಲಿ ಮಾಚು ಪಿಚು ಎಂಬ ನಗರವನ್ನು ನಿಮರ್ಿಸಲಾಯಿತು ಎನ್ನುವು ಒಂದು ವಾದವಾದರೆ, ಇದೊಂದು ಧಾರ್ಮಿಕ ಸ್ಥಳವಾಗಿದ್ದರಬಹುದು ಅಥವಾ ಇದೊಂದು ಪುರಾತನ ಕೋಟೆಯಾಗಿದ್ದಿರಬಹುದು ಎಂದು ಹೇಳಲಾಗಿದೆ. ಇಂಥದ್ದೊಂದು ಪಟ್ಟಣವನ್ನು  ಏಕೆ ನಿರ್ಮಾಣ ಮಾಡಲಾಯಿತು ಎಂಬ ಬಗ್ಗೆಯೂ ಕಾರಣಗಳಿಲ್ಲ. ಕೊನೆಗೂ ಮಾಚು ಪಿಚು ಖ್ಯಾತಿಯಾಗಿರುವುದು ಕಳೆದುಹೋದ ನಗರ ಎಂದೇ.

Thursday, August 14, 2014

ಚಾಂದ್ ಬಾವರಿ ಎಂಬ ಮೆಟ್ಟಿಲು ಬಾವಿ

ರಾಜಸ್ಥಾನದ ಅಭಾನೇರಿಯಲ್ಲಿರುವ ಚಾಂದ್ ಬಾವರಿ ಭಾರತದಲ್ಲಿ ಕಾಣಸಿಗುವ ಸುಂದರ ಮೆಟ್ಟಿಲುಬಾವಿಗಳಲ್ಲಿ ಒಂದು. ಜಗತ್ತಿನ ಅತಿ ಆಳದ ಮೆಟ್ಟಿಲು ಬಾವಿ ಎಂದೇ ಪ್ರಸಿದ್ಧಿ ಪಡೆದಿದೆ. 9ನೇ ಶತಮಾನದಲ್ಲಿ  ನಿರ್ಮಾಣವಾದ ಬಾವಿ ಇದು. ರಾಜಾ ಚಾಂದ್ ಸಿಂಗ್ ಈ ಬಾವಿಯನ್ನು ನಿರ್ಮಿಸಿದ್ದರಿಂದ ಚಾಂದ್ ಬಾವರಿ ಎಂಬ ಹೆಸರು ಬಂದಿದೆ. ಹರ್ಷತ್ ಮಾತಾ ದೇವಾಲಯದ ಮುಂಭಾಗದಲ್ಲಿ ಈ ಮೆಟ್ಟಿಲಿನ ಬಾವಿಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾವಿ ನಿರ್ಮಾಣವಾಗಿ 1200 ವರ್ಷಗಳು ಕಳೆದಿದ್ದರೂ ಇಂದಿಗೂ ಸುಭದ್ರ ಸ್ಥಿತಿಯಲ್ಲಿದೆ.


ಬಿಸಿಲಿನಲ್ಲೂ ತಂಪಾದ ಸ್ಥಳ:
ಬಾವಿಯ ಕೆಳಭಾಗದಲ್ಲಿ ಉಷ್ಣಾಂಶ ಮೇಲಿಗಿಂತಲೂ 5 ರಿಂದ 6 ಡಿಗ್ರಿಯಷ್ಟು ಕಡಿಮೆ ಇರುತ್ತದೆ. ರಣಬಿಸಿಲಿನ ವೇಳೆಯಲ್ಲಿ ಇಲ್ಲಿನ ಜನರು ಬಾವಿಯ ಕೆಳಭಾಗಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. 
ಅಲ್ಲದೆ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಕಾರಣ ಮಳೆಯ ನೀರನ್ನು ಇಂಗಿಸಲು ಈ ಬಾವಿಯನ್ನು ಕೊರೆಯಲಾಗಿದೆ ಎಂದೂ ಹೇಳಾಗುತ್ತದೆ.  ಮೆಟ್ಟಿಲುಗಳನ್ನು ನಿರ್ಮಿಸಲು ರಂಧ್ರವಿರುವ ಕಪ್ಪು ಕಲ್ಲುಗಳನ್ನು ಬಳಸಲಾಗಿದೆ. ಇದು ಹೆಚ್ಚು ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಭಾವಿಯ ಕೆಳಭಾಗದಲ್ಲಿರುವ ಪುಷ್ಕರಣಿಯಲ್ಲಿ ಇಂದಿಗೂ ಹಸಿರುಗಟ್ಟಿರುವ ನೀರನ್ನು ನೋಡಬಹುದು. 


ಹಿಂದು- ಮುಸ್ಲಿಂ ವಾಸ್ತುಶಿಲ್ಪ!
ಈ ಬಾವಿ ಹಿಂದು ಮತ್ತು ಮುಸ್ಲಿಂ ಎರಡೂ ಮಾದರಿಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಮೇಲಿನ ಭಾಗದಲ್ಲಿ ಮುಸ್ಲಿಂ ಶೈಲಿಯ ವಾಸ್ತುಶಿಲ್ಪವನ್ನು ಮತ್ತು ಕೆಳಭಾಗದಲ್ಲಿ ಹಿಂದು ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಕಾಲ ಕ್ರಮೇಣ ಶಿಥಿಲಗೊಂಡ ಈ ಬಾವಿಯ ಮೇಲಿನ ಭಾಗವನ್ನು ಮುಘಲರು 18ನೇ ಶತಮಾನದಲ್ಲಿ ಮರು ನಿರ್ಮಾಣ ಮಾಡಿದರು. ಬಾವಿಗೆ ತಾಗಿಕೊಂಡು ಕಮಾನಿನ ಮೇಲ್ಚಾವಣಿಯನ್ನು ನಿರ್ಮಿಸಿದರು. ಚಾವಣಿಯ ಮೇಲೆ ನಿಂತು ಹರ್ಷತ್ ಮಾತಾ ದೇವಾಲಯದ ಸಂಪೂರ್ಣ ದೃಶ್ಯವನ್ನು ವೀಕ್ಷಿಸಬಹುದಾಗಿದೆ. 
ಹಾಲಿವುಡ್ ಚಿತ್ರ ನಿರ್ಮಾಣ:
 ಹಾಲಿವುಡ್ ಚಿತ್ರಗಳಾದ ದಿ ಫಾಲ್ ಮತ್ತು ದಿ ಡಾರ್ಕ್ ನೈಟ್ ರೈಸಸ್ ನಲ್ಲಿ ಈ ಬಾವಿಯನ್ನು ಚಿತ್ರೀಕರಿಸಲಾಗಿದೆ.

Wednesday, August 6, 2014

ಅಮೃತಸರದ ಸ್ವರ್ಣ ಮಂದಿರ

ಸಿಖ್ ಧರ್ಮೀಯರಿಗೆ ಇದು ಅತ್ಯಂತ ಪವಿತ್ರ ಮಂದಿರ. ದರ್ಬಾರ್ ಸಾಹೀಬ ಅಥವಾ ಸ್ವರ್ಣಮಂದಿರ ಎಂದು ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯ ಭರಿತ ನೋಟದಿಂದಲೇ ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ಸಿಖ್ ಕೂಡ ಅಮೃತಸರದಲ್ಲಿರುವ ಈ ದೈವಿಕ ಮಂದಿರವನ್ನು ನೋಡುವ ಅಭಿಲಾಷೆಯನ್ನು ಇಟ್ಟುಕೊಂಡಿರುತ್ತಾನೆ. ಸುಮಾರು 500 ವರ್ಷಗಳ ಇತಿಹಾಸವಿರುವ ಈ ಮಂದಿರ ಭಾರತೀಯ
ಚರಿತ್ರೆಯಲ್ಲಿ ಮೈಲಿಗಲ್ಲನ್ನು ನೆಟ್ಟಿದೆ.


 ಮಂದಿರದ ಇತಿಹಾಸ:
ಸಿಖ್ಖರ ನಾಲ್ಕನೇ ಗುರು ರಾಮದಾಸ್ ಅವರು 1579ರಲ್ಲಿ ಅಮೃತಸರವನ್ನು ಸ್ಥಾಪಿಸಿದರು. ಈ ಜಮೀನಿನಲ್ಲಿ ಒಂದು ಸರೋವರವನ್ನು ನಿರ್ಮಾಣ ಮಾಡಿದ್ದರು. ಅವರ ಪುತ್ರ, ಐದನೇ ಸಿಖ್ ಗುರುವಾದ ಗುರು ಅರ್ಜುನ್ ಸಾಹೀಬ ಅವರು ಸಿಖ್ಖರಿಗೆ ಪೂಜಿಸಲು ಒಂದು ತಾಣಬೇಕು ಎಂದು ಮನಗಂಡರು. ಅವರೇ ಈ ಮಂದಿರ ರೂಪುರೇಷೆ ಸಿದ್ಧಪಡಿಸಿದ್ದರು. 1602ರಲ್ಲಿ ದೇವ ಮಂದಿರವು ಸಂಪೂರ್ಣವಾಯಿತು. ಗುರು ಅರ್ಜುನ್ ಸಾಹೀಬ್ ಅವರು ಗುರು ಗೃಂಥ ಸಾಹೀಬರನ್ನು ಅದರೊಳಗೆ ಪ್ರತಿಷ್ಠಾಪಿಸಿದರು. 18ನೇ ಶತಮಾನದ ಮಧ್ಯಭಾಗದಲ್ಲಿ ಈ ಮಂದಿರ ಅಫ್ಘನ್ನರ ದಾಳಿಗೆ ತುತ್ತಾಯಿತು. 1803ರಲ್ಲಿ ಪಂಜಾಬ್ನ ಅರಸ ರಣಜಿತ್ ಸಿಂಗ್ ಈ ಮಂದಿರದ ಅರ್ಧಭಾಗ ಮಾರ್ಬಲ್ ನಿಂದಲೂ ಇನ್ನರ್ಧಭಾಗವನ್ನು ಶುದ್ಧ ಚಿನ್ನದಿಂದಲೂ ನಿರ್ಮಿಸಿದ. ಅಂದಿನಿಂದ ಅದನ್ನು ಸ್ವರ್ಣ ಮಂದಿರ ಎಂದು ಕರೆಯಲಾಯಿತು. ಮಂದಿರವನ್ನು ಕಲ್ಲಿನಿಂದ ಮೊದಲು ನಿರ್ಮಿಸಿ ಆ ನಂತರ ಚಿನ್ನದ ಲೇಪನವನ್ನು ಮಾಡಲಾಗಿದೆ. ಸರೋವರದ ಮಧ್ಯದಲ್ಲೇ ಇದು ನಿರ್ಮಾಣಗೊಂಡಿದ್ದು, ಮಂದಿರ ಪ್ರತಿಬಿಂಬ ನೀರಿನ ಮೇಲೆ ಬಿದ್ದು ನಯನಮನೋಹರ ದೃಶ್ಯ ನೋಡಲು ಸಿಗುತ್ತದೆ. ಮಂದಿರಕ್ಕೆ ಬಳಸಲಾದ ಚಿನ್ನದ ನಿಖರ ಮಾಹಿತಿ ಇಲ್ಲ. ಗೋಪುರಕ್ಕೆ ಸುಮಾರು 500 ಕೆ.ಜಿ. ಚಿನ್ನವನ್ನು ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಸ್ವರ್ಣ ಲೇಪನಕ್ಕೆ ಬೇಕಾದ ಚಿನ್ನವನ್ನು ರಾಜ ರಣಜಿತ್ ಸಿಂಗ್ ದೇಣಿಗೆ ರೂಪದಲ್ಲಿ ನೀಡಿದ್ದ.

ಮಂದಿರಕ್ಕೆ ಅದರದೇ ಕಟ್ಟುಪಾಡು:

ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರದಲ್ಲಿ ಸುಮಾರು 40 ಸಾವಿರ ಮಂದಿ ಮಂದಿರವನ್ನು ವೀಕ್ಷಿಸುತ್ತಾರೆ. ದೇವಾಲಯದ ಒಳ ಪ್ರವೇಶಿಸಿಲು ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
ಮಂದಿರದ ಒಳಗೆ ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸಿ ತೆರಳುವಂತಿಲ್ಲ. ನೀರಿನ ಒಂದು ಕೊಳದಲ್ಲಿ ಪಾದವನ್ನು ತೊಳೆದೇ ಒಳ ಪ್ರವೇಶಿಸಬೇಕು. ಮಂದಿರದಲ್ಲಿ  ಇರುವವರೆಗೂ ಮದ್ಯಪಾನ ಮಾಡಬಾರದು. ಧೂಮಪಾನ ಇಲ್ಲವೇ ಇತರೇ ಔಷಧಗಳನ್ನು ಸೇವಿಸಬರದು. ಒಳಗಡೆ ಪ್ರವೇಶಿಸುವಾಗ ಶಿರ ಹೊದಿಕೆಯನ್ನು ಧರಿಸುವುದು ಕಡ್ಡಾಯ. ಒಂದುವೇಳೆ ಹೊದಿಕೆ ತರದಿದ್ದರೆ ಮಂದಿರದಲ್ಲಿಯೇ ಅದನ್ನು ನೀಡಲಾಗುತ್ತದೆ.



ಮಂದಿರದಲ್ಲಿ ಉತ್ಸವ:
ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಮಂದಿರದಲ್ಲಿ ವೈಶಾಖಿ ಉತ್ಸವವನ್ನು ಆಚರಿಸಲಾಗುತ್ತದೆ. ಕಲಶ ಸ್ಥಾಪನೆಯ ದಿನವನ್ನಾಗಿ ಸಿಖ್ಖರು ಉತ್ಸವ ಆಚರಿಸುತ್ತಾರೆ. ಗುರುನಾನಕ್ ಜಯಂತಿಯಂದೂ ಸಹ ಇಲ್ಲಿ ಹಬ್ಬವನ್ನು ಆಚಚರಿಸಲಾಗುತ್ತದೆ.

ಬ್ಲ್ಯೂ ಸ್ಟಾರ್ ಕಾರ್ಯಾಚರಣೆ:

ಖಲಿಸ್ತಾನ ಪ್ರತ್ಯೇಕತಾವಾದಿಗಳು ಮಂದಿರವನ್ನು 1984ರಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು. ಮಂದಿರದಲ್ಲಿ ಖಲಿಸ್ತಾನ ಉಗ್ರರು ಅಡಗಿ ಕುಳಿತಿದ್ದರು. ಹೀಗಾಗಿ ಉಗ್ರರನ್ನು ಬಗ್ಗುಬಡಿಯಲು ಅಂದಿನ ಪ್ರಧಾನಿ ಇಂದಿರಾಗಾಂಧಿ 1984ರ ಜೂನ್ನಲ್ಲಿ ಮಂದಿರದ ಮೇಲೆ ದಾಳಿ ಮಾಡುವಂತೆ ಆದೇಶಿಸಿದ್ದರು. ಇದು ಆಪರೇಷನ್ ಬ್ಲ್ಯೂ ಸ್ಟಾರ್ ಕಾಯರ್ಾಚರಣೆ ಎಂದೇ ಕುಖ್ಯಾತಿ ಪಡೆದಿದೆ. ಈ ದಾಳಿಯ ಮೂಲಕ ಮಂದಿರದಲ್ಲಿ ಅಡಗಿದ್ದ ಎಲ್ಲ 500 ಉಗ್ರರನ್ನು ಹತ್ಯೆ ಮಾಡಲಾಯಿತು. ಆದರೆ, ದಾಳಿಯಿಂದ ಮಂದಿರಕ್ಕೆ ಹಾನಿಯೂ ಸಂಭವಿಸಿದೆ. ಇದು ಸಿಖ್ಖರ ಮನಸನ್ನು ನೋಯಿಸಿತು. ಹೀಗಾಗಿ ಮಂದಿರಕ್ಕೆ ಸರ್ಕಾರ ಭದ್ರತೆ ನೀಡುವುದನ್ನು ಸಿಖ್ಖರು ಒಪ್ಪುವುದಿಲ್ಲ. ಅಲ್ಲದೆ, ಮಂದಿರದಲ್ಲಿ ಸರ್ಕಾರ ಯಾವುದೇ ದುರಸ್ತಿಕಾರ್ಯ ಕೈಗೊಳ್ಳುವುದಕ್ಕೂ ಅವಕಾಶ ವಿಲ್ಲ.