ಜೀವನಯಾನ

Wednesday, August 6, 2014

ಅಮೃತಸರದ ಸ್ವರ್ಣ ಮಂದಿರ

ಸಿಖ್ ಧರ್ಮೀಯರಿಗೆ ಇದು ಅತ್ಯಂತ ಪವಿತ್ರ ಮಂದಿರ. ದರ್ಬಾರ್ ಸಾಹೀಬ ಅಥವಾ ಸ್ವರ್ಣಮಂದಿರ ಎಂದು ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯ ಭರಿತ ನೋಟದಿಂದಲೇ ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ಸಿಖ್ ಕೂಡ ಅಮೃತಸರದಲ್ಲಿರುವ ಈ ದೈವಿಕ ಮಂದಿರವನ್ನು ನೋಡುವ ಅಭಿಲಾಷೆಯನ್ನು ಇಟ್ಟುಕೊಂಡಿರುತ್ತಾನೆ. ಸುಮಾರು 500 ವರ್ಷಗಳ ಇತಿಹಾಸವಿರುವ ಈ ಮಂದಿರ ಭಾರತೀಯ
ಚರಿತ್ರೆಯಲ್ಲಿ ಮೈಲಿಗಲ್ಲನ್ನು ನೆಟ್ಟಿದೆ.


 ಮಂದಿರದ ಇತಿಹಾಸ:
ಸಿಖ್ಖರ ನಾಲ್ಕನೇ ಗುರು ರಾಮದಾಸ್ ಅವರು 1579ರಲ್ಲಿ ಅಮೃತಸರವನ್ನು ಸ್ಥಾಪಿಸಿದರು. ಈ ಜಮೀನಿನಲ್ಲಿ ಒಂದು ಸರೋವರವನ್ನು ನಿರ್ಮಾಣ ಮಾಡಿದ್ದರು. ಅವರ ಪುತ್ರ, ಐದನೇ ಸಿಖ್ ಗುರುವಾದ ಗುರು ಅರ್ಜುನ್ ಸಾಹೀಬ ಅವರು ಸಿಖ್ಖರಿಗೆ ಪೂಜಿಸಲು ಒಂದು ತಾಣಬೇಕು ಎಂದು ಮನಗಂಡರು. ಅವರೇ ಈ ಮಂದಿರ ರೂಪುರೇಷೆ ಸಿದ್ಧಪಡಿಸಿದ್ದರು. 1602ರಲ್ಲಿ ದೇವ ಮಂದಿರವು ಸಂಪೂರ್ಣವಾಯಿತು. ಗುರು ಅರ್ಜುನ್ ಸಾಹೀಬ್ ಅವರು ಗುರು ಗೃಂಥ ಸಾಹೀಬರನ್ನು ಅದರೊಳಗೆ ಪ್ರತಿಷ್ಠಾಪಿಸಿದರು. 18ನೇ ಶತಮಾನದ ಮಧ್ಯಭಾಗದಲ್ಲಿ ಈ ಮಂದಿರ ಅಫ್ಘನ್ನರ ದಾಳಿಗೆ ತುತ್ತಾಯಿತು. 1803ರಲ್ಲಿ ಪಂಜಾಬ್ನ ಅರಸ ರಣಜಿತ್ ಸಿಂಗ್ ಈ ಮಂದಿರದ ಅರ್ಧಭಾಗ ಮಾರ್ಬಲ್ ನಿಂದಲೂ ಇನ್ನರ್ಧಭಾಗವನ್ನು ಶುದ್ಧ ಚಿನ್ನದಿಂದಲೂ ನಿರ್ಮಿಸಿದ. ಅಂದಿನಿಂದ ಅದನ್ನು ಸ್ವರ್ಣ ಮಂದಿರ ಎಂದು ಕರೆಯಲಾಯಿತು. ಮಂದಿರವನ್ನು ಕಲ್ಲಿನಿಂದ ಮೊದಲು ನಿರ್ಮಿಸಿ ಆ ನಂತರ ಚಿನ್ನದ ಲೇಪನವನ್ನು ಮಾಡಲಾಗಿದೆ. ಸರೋವರದ ಮಧ್ಯದಲ್ಲೇ ಇದು ನಿರ್ಮಾಣಗೊಂಡಿದ್ದು, ಮಂದಿರ ಪ್ರತಿಬಿಂಬ ನೀರಿನ ಮೇಲೆ ಬಿದ್ದು ನಯನಮನೋಹರ ದೃಶ್ಯ ನೋಡಲು ಸಿಗುತ್ತದೆ. ಮಂದಿರಕ್ಕೆ ಬಳಸಲಾದ ಚಿನ್ನದ ನಿಖರ ಮಾಹಿತಿ ಇಲ್ಲ. ಗೋಪುರಕ್ಕೆ ಸುಮಾರು 500 ಕೆ.ಜಿ. ಚಿನ್ನವನ್ನು ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಸ್ವರ್ಣ ಲೇಪನಕ್ಕೆ ಬೇಕಾದ ಚಿನ್ನವನ್ನು ರಾಜ ರಣಜಿತ್ ಸಿಂಗ್ ದೇಣಿಗೆ ರೂಪದಲ್ಲಿ ನೀಡಿದ್ದ.

ಮಂದಿರಕ್ಕೆ ಅದರದೇ ಕಟ್ಟುಪಾಡು:

ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರದಲ್ಲಿ ಸುಮಾರು 40 ಸಾವಿರ ಮಂದಿ ಮಂದಿರವನ್ನು ವೀಕ್ಷಿಸುತ್ತಾರೆ. ದೇವಾಲಯದ ಒಳ ಪ್ರವೇಶಿಸಿಲು ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
ಮಂದಿರದ ಒಳಗೆ ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸಿ ತೆರಳುವಂತಿಲ್ಲ. ನೀರಿನ ಒಂದು ಕೊಳದಲ್ಲಿ ಪಾದವನ್ನು ತೊಳೆದೇ ಒಳ ಪ್ರವೇಶಿಸಬೇಕು. ಮಂದಿರದಲ್ಲಿ  ಇರುವವರೆಗೂ ಮದ್ಯಪಾನ ಮಾಡಬಾರದು. ಧೂಮಪಾನ ಇಲ್ಲವೇ ಇತರೇ ಔಷಧಗಳನ್ನು ಸೇವಿಸಬರದು. ಒಳಗಡೆ ಪ್ರವೇಶಿಸುವಾಗ ಶಿರ ಹೊದಿಕೆಯನ್ನು ಧರಿಸುವುದು ಕಡ್ಡಾಯ. ಒಂದುವೇಳೆ ಹೊದಿಕೆ ತರದಿದ್ದರೆ ಮಂದಿರದಲ್ಲಿಯೇ ಅದನ್ನು ನೀಡಲಾಗುತ್ತದೆ.



ಮಂದಿರದಲ್ಲಿ ಉತ್ಸವ:
ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಮಂದಿರದಲ್ಲಿ ವೈಶಾಖಿ ಉತ್ಸವವನ್ನು ಆಚರಿಸಲಾಗುತ್ತದೆ. ಕಲಶ ಸ್ಥಾಪನೆಯ ದಿನವನ್ನಾಗಿ ಸಿಖ್ಖರು ಉತ್ಸವ ಆಚರಿಸುತ್ತಾರೆ. ಗುರುನಾನಕ್ ಜಯಂತಿಯಂದೂ ಸಹ ಇಲ್ಲಿ ಹಬ್ಬವನ್ನು ಆಚಚರಿಸಲಾಗುತ್ತದೆ.

ಬ್ಲ್ಯೂ ಸ್ಟಾರ್ ಕಾರ್ಯಾಚರಣೆ:

ಖಲಿಸ್ತಾನ ಪ್ರತ್ಯೇಕತಾವಾದಿಗಳು ಮಂದಿರವನ್ನು 1984ರಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು. ಮಂದಿರದಲ್ಲಿ ಖಲಿಸ್ತಾನ ಉಗ್ರರು ಅಡಗಿ ಕುಳಿತಿದ್ದರು. ಹೀಗಾಗಿ ಉಗ್ರರನ್ನು ಬಗ್ಗುಬಡಿಯಲು ಅಂದಿನ ಪ್ರಧಾನಿ ಇಂದಿರಾಗಾಂಧಿ 1984ರ ಜೂನ್ನಲ್ಲಿ ಮಂದಿರದ ಮೇಲೆ ದಾಳಿ ಮಾಡುವಂತೆ ಆದೇಶಿಸಿದ್ದರು. ಇದು ಆಪರೇಷನ್ ಬ್ಲ್ಯೂ ಸ್ಟಾರ್ ಕಾಯರ್ಾಚರಣೆ ಎಂದೇ ಕುಖ್ಯಾತಿ ಪಡೆದಿದೆ. ಈ ದಾಳಿಯ ಮೂಲಕ ಮಂದಿರದಲ್ಲಿ ಅಡಗಿದ್ದ ಎಲ್ಲ 500 ಉಗ್ರರನ್ನು ಹತ್ಯೆ ಮಾಡಲಾಯಿತು. ಆದರೆ, ದಾಳಿಯಿಂದ ಮಂದಿರಕ್ಕೆ ಹಾನಿಯೂ ಸಂಭವಿಸಿದೆ. ಇದು ಸಿಖ್ಖರ ಮನಸನ್ನು ನೋಯಿಸಿತು. ಹೀಗಾಗಿ ಮಂದಿರಕ್ಕೆ ಸರ್ಕಾರ ಭದ್ರತೆ ನೀಡುವುದನ್ನು ಸಿಖ್ಖರು ಒಪ್ಪುವುದಿಲ್ಲ. ಅಲ್ಲದೆ, ಮಂದಿರದಲ್ಲಿ ಸರ್ಕಾರ ಯಾವುದೇ ದುರಸ್ತಿಕಾರ್ಯ ಕೈಗೊಳ್ಳುವುದಕ್ಕೂ ಅವಕಾಶ ವಿಲ್ಲ. 

No comments:

Post a Comment