ಜೀವನಯಾನ

Wednesday, July 23, 2014

ಭಯಾನಕ ಕಪ್ಪು ಚಿರತೆ

 ಕಪ್ಪು ಚಿರತೆ ಅಥವಾ ಬ್ಲ್ಯಾಕ್ ಪ್ಯಾಂಥರ್  ಆಕಾರ ಮತ್ತು ರೂಪದಲ್ಲಿ ಚಿರತೆಗಿಂತ ಸ್ವಲ್ಪ ಭಿನ್ನ. ತನ್ನ ಕಪ್ಪು ಬಣ್ಣದ  ದೇಹ ಮತ್ತು ಹಳದಿ ಕಣ್ಣುಗಳಿಂದ ಎಂಟೆದೆಯ ಬಂಟರನ್ನೂ ನಡುಗಿಸ ಬಲ್ಲದು. ಮರದ ಮೇಲೆ ಅಡಗಿ ಕುಳಿತು ಬೇಟೆಯ ಮೇಲೆ ಒಮ್ಮೆಲೇ ದಾಳಿ ಮಾಡುತ್ತದೆ. ಆದರೆ, ಸಾಮಾನ್ಯ ಚಿರತೆ ಮತ್ತು ಬ್ಲ್ಯಾಕ್ ಪ್ಯಾಂಥರ್ ನಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ.



ನಾನಾ ಹೆಸರು:
ಕಾಡು ಬೆಕ್ಕಿನ ಪ್ರಜಾತಿಗೆ ಸೇರಿದವು ಪ್ಯಾಂಥರ್ಗಳು. ಲ್ಯಾಟೀನ್ ಅಮೆರಿಕದಲ್ಲಿ ಬ್ಲ್ಯಾಕ್ ಪ್ಯಾಂಥರ್ ಅನ್ನು ಬ್ಲ್ಯಾಕ್ ಜಾಗ್ವಾರ್ ಎಂದು ಕರೆಯುತ್ತಾರೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದನ್ನು ಕಪ್ಪು ಚಿರತೆ ಎಂದು ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಇದನ್ನು ಬ್ಲ್ಯಾಕ್ ಕೂಗರ್ ಎಂದು ಕರೆಯಲಾಗುತ್ತದೆ. ಚಿರತೆಯಲ್ಲಿ ಹಳದಿ ಮೈ ಮೇಲೆ ಕಪ್ಪು ಚುಕ್ಕೆಗಳಿದ್ದರೆ, ಬ್ಲ್ಯಾಕ್ ಪ್ಯಾಂಥರ್ ನ ಮೈ ಸಂಪೂರ್ಣ ಕಪ್ಪಾಗಿರುತ್ತದೆ. ಚಿರತೆಗಳಿಗಿಂತ ಪ್ಯಾಂಥರ್ಗಳು ಆಕಾರದಲ್ಲಿ ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಬಿಳಿಯ ಪ್ಯಾಂಥರ್ಗಳೂ ಕಾಣಸಿಗುತ್ತವೆ. ಸಿಂಹದಂತೆ ಕಾಣುವ ಪೂಮಾಗಳು ಸಹ ಪ್ಯಾಂಥರ್ ಜಾತಿಗೆ ಸೇರಿದೆ. ಪ್ಯಾಂಥರ್ಗಳ ತಲೆ ಚಿರತೆಗಳಿಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ, ಅಗಲವಾದ ದವಡೆಯನ್ನು ಹೊಂದಿರುತ್ತದೆ. ವಿಪರೀತ ಬೇಟೆ ಮತ್ತು ಸಂತತಿ ನಾಶದಿಂದಾಗಿ ಪ್ಯಾಂಥರ್ಗಳು ಇಂದು ಅಳಿವಿನ ಅಂಚನ್ನು ತಲುಪಿವೆ.
ಒಂದು ಬಲಿತ ಕಪ್ಪು ಚಿರತೆ 7ರಿಂದ 8 ಅಡಿಯಷ್ಟು ಉದ್ದ ಮತ್ತು 50ರಿಂದ 120 ಕೆ.ಜಿ ತೂಕವಿರುತ್ತದೆ.

 ಎಲ್ಲೆಡೆ ವಾಸ:
ಬ್ಲ್ಯಾಕ್ ಪ್ಯಾಂಥರ್ಗಳು ಮಳೆ ಕಾಡು, ಅರಣ್ಯ ಪ್ರದೇಶ, ಗುಡ್ಡಗಾಡು, ಮರುಭೂಮಿ ಹೀಗೆ ನಾನಾ ಪ್ರದೇಶದಲ್ಲಿ ವಾಸಿಸುತ್ತದೆ. ಉಷ್ಣ ಮತ್ತು ಶೀತ ಎರಡೂ ಪ್ರದೇಶಕ್ಕೂ ಹೊಂದಿಕೊಳ್ಳಬಲ್ಲದು. ಇತರ ಬಿಗ್ ಕ್ಯಾಟ್ಗಳಂತಲ್ಲದೇ, ಇವು ಗರ್ಜನೆಯನ್ನೂ ಮಾಡುತ್ತವೆ. ಇವು ತಮ್ಮ ವಾಸಕ್ಕೆ ಜನವಸತಿ ಇರುವ ಸಮೀಪದ ಪ್ರದೇಶವನ್ನೂ ಆಯ್ಕೆ ಮಾಡಿಕೊಳ್ಳಬಲ್ಲದು.

ಏಕಾಂತವಾಗಿರುವದೇ ಇಷ್ಟ:

ಇವು ಹೆಚ್ಚಾಗಿ ಏಕಾಂತವಾಗಿ ಇರುವುದನ್ನೇ ಇಷ್ಟ ಪಡುತ್ತವೆ. ಸಂತಾನೋತ್ಪತ್ತಿಗೆ ಮಾತ್ರವೇ ಹೆಣ್ಣಿನೊಂದಿಗೆ ಕೂಡುತ್ತದೆ.  ಇದರ ಪಂಜುಗಳು ಅಗಲವಾಗಿದ್ದು, ಅತ್ಯಂತ ಬಲಿಷ್ಠವಾಗಿರುತ್ತವೆ. ಹೀಗಾಗಿ ಸಲೀಸಾಗಿ ಮರವನ್ನು ಏರಬಲ್ಲದು. ಬೇಟೆಯನ್ನು ಮರದ ಮೇಲೊಯ್ದು ತಿನ್ನುತ್ತದೆ. ಇವು ಶುದ್ಧ ಮಾಂಸಾಹಾರಿ. ಮರಿಗಳು ಎರಡರಿಂದ ಮೂರು ತಿಂಗಳಿನಲ್ಲಿ ತಾಯಿಯಿಂದ ಬೇಟೆಯಾಡುವುದನ್ನು ಕಲಿತುಕೊಳ್ಳುತ್ತದೆ. ತನ್ನ ಆಹಾರವನ್ನು ತಾನೇ ಬೇಟೆಯಾಡಿ ತಿನ್ನುತ್ತದೆ. ಇವು 20 ಅಡಿ ದೂರದವರಗೆ ಜಿಗಿಯುವ ಸಾಮಥ್ರ್ಯವನ್ನು ಹೊಂದಿದೆ. ಆದರೆ ಓಟದಲ್ಲಿ ಚಿರತೆಗಳಿಗಿಂತ ಸಲ್ಪ ನಿಧಾನ. ಕಪ್ಪು ಚಿರತೆ ಗಂಟೆಗೆ 58 ಕಿ.ಮೀ ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಅದೇ ಹಳದಿ ಚೀತಾ ಗಂಟೆಗೆ 113 ಕಿ.ಮೀ. ವೇಗದಲ್ಲಿ ಓಡಬಲ್ಲದು. ಬ್ಲ್ಯಾಕ್ ಪ್ಯಾಂಥರ್ ಗಳ ಕಣ್ಣಿನ ದೃಷ್ಟಿ ತೀಕ್ಷ್ಣ ಮತ್ತು ಕಿವಿಗಳು ಸೂಕ್ಷ್ಮ. ಕಪ್ಪು ಚಿರತೆಗಳು 12 ವರ್ಷ ಜೀವಿತಾವಧಿಯನ್ನು ಹೊಂದಿವೆ. ಇದು ಉತ್ತಮ ಈಜುಗಾರ ಕೂಡ ಹೌದು. ಆಗಾಗ್ಗೆ ನೀರಿಗೆ ಹಾರಿ ವಿಶ್ರಾಂತಿ ಪಡೆಯುತ್ತವೆ.

Friday, July 11, 2014

ಬ್ರಹ್ಮ ಕಮಲ

ರಾತ್ರಿ ಅರಳುವ ವಿಸ್ಮಯ

ರಾತ್ರಿ ಅರಳುವ ಹೂವು ಬ್ರಹ್ಮ ಕಮಲ. ಈ ಬ್ರಹ್ಮ ಕಮಲ ರಾತ್ರಿ 11 ಗಂಟೆಯ ಬಳಿಕ ಅರಳಿ ಬೆಳಗಾಗುವುದರ ಒಳಗೆ  ಕಮರಿಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ  ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು.


 ಎಲೆಯಿಂದಲೇ ಬೆಳೆಯುತ್ತದೆ:
ಎಲ್ಲ ಗಿಡಗಳು ಬೇರು, ಕಾಂಡ ಅಥವಾ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದಲೇ ದೊಡ್ಡದಾಗುತ್ತದೆ. ಗಿಡದ ಎಲೆಯನ್ನು ನೆಟ್ಟರೆ ಗಿಡವಾಗಿ ಬೆಳೆಯುತ್ತದೆ! ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ.
ಬ್ರಹ್ಮ ಕಮಲ ಹೂವು ಬಿಡುವುದು ಜೂನ್- ಜುಲೈ ತಿಂಗಳಿನಲ್ಲಿ. ಕೇವಲ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ ಹತ್ತು ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ.
ಹಿಮಾಲಯದ ಆಸುಪಾಸಿನಲ್ಲಿ ಈ ಗಿಡ ಹೆಚ್ಚಾಗಿ ಬೆಳೆಯುತ್ತದೆ. ಇದು ಪೊದೆಯಂತೆ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತಾ ಹೋಗುತ್ತದೆ. ಬೆಳ್ಳನೆಯ ಹೂವಿನ ದಳಗಳು ದಪ್ಪವಾಗಿರುತ್ತವೆ. ಅದೇರೀತಿ ಗಿಡದ ಎಲೆಗಳು ದಪ್ಪದಾಗಿದ್ದು, ಹಸಿರಾಗಿ ಎರಡರಿಂದ ಮೂರು ಅಡಿ ಉದ್ದಕ್ಕೆ ಬೆಳೆಯುತ್ತವೆ.
ಇದರ ಎಲೆ, ಹೂವು, ಕಾಂಡ ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತವೆ. ಬೇರನ್ನು ತೇಯುವ ಮೂಲಕ ಗಾಯಗಳಿಗೆ ಲೇಪನ ಮಾಡಿದರೆ, ಬೇಗ ಗುಣವಾಗುತ್ತದೆಯಂತೆ. ಪುಷ್ಪದ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. 


ರಾತ್ರಿ ರಾಣಿ:
ಈ ಹೂವಿನ ಸೌಂದರ್ಯ ಒಂದು ರಾತ್ರಿಗೆ ಮಾತ್ರ ಸೀಮಿತ. ಆದರೆ, ಅಪರಿಮಿತ ಪರಿಮಳವನ್ನು ಸುತ್ತಮುತ್ತಲೂ ಪಸರಿಸುತ್ತದೆ. ಈ ಹೂವಿನ ಸೌಂದರ್ಯ ಸವಿಯಬೇಕಾದರೆ, ಹೂವುಬಿಟ್ಟು ನಾಲ್ಕೈದು ದಿನಗಳವರೆಗೆ ಕಾದು ಜಾಗರಣೆ ಮಾಡಬೇಕು. ರಾತ್ರಿ ಅರಳುವುದರಿಂದ ಇದನ್ನು ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ.

ಮನೆಮಂದಿಯೆಲ್ಲಾ ಸೇರಿ ಪೂಜೆ

ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ರಾತ್ರಿಯವೇಳೆ ಈ ಹೂವುಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಹೆಸರು ಬಂದಿದ್ದು ಏಕೆ?
ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ "ಕಮಲಭವ" ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮ ಕಮಲ ಎನ್ನುವ ಹೆಸರು ಬಂದಿದೆ.

Thursday, July 3, 2014

ಗಾಜಿನ ದೇಹದ ಕಪ್ಪೆಗಳು!

ಗೋಸುಂಬೆಯಂತೆ ಮೈ ಬಣ್ಣ ಬದಲಿಸುವ, ತಾನಿರುವ ಸನ್ನಿವೇಷಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರಾಣಿ, ಕೀಟಗಳನ್ನು ನೋಡಿದ್ದೇವೆ. ಆದರೆ, ಈ ಕಪ್ಪೆಯ ಮೇಲಿನ ಚರ್ಮ ಗಾಜಿನಂತೆ ಪಾರದರ್ಶಕ. ದೇಹದ ಒಳಗೆ ಏನೆಲ್ಲಾ ಅವಯವಗಳಿವೆ ಎನ್ನುವುದನ್ನು ಹೊರಗಿನಿಂದಲೇ ನೋಡಬಹುದು. ಹೀಗಾಗಿ ಈ ಕಪ್ಪೆಗೆ ಗಾಜಿನ ಕಪ್ಪೆ ಅಥವಾ
ಗ್ಲಾಸ್ ಫ್ರಾಗ್ ಎನ್ನುವ ಹೆಸರು ಬಂದಿದೆ.


ಪಾರದರ್ಶಕ ಚರ್ಮ!
ಈ ಕಪ್ಪೆಗಳು ದಕ್ಷಿಣ ಅಮೆರಿಕ, ಮೆಕ್ಸಿಕೊದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಆದರೆ, ಇವು ನೆಲ ಅಥವಾ ನೀರಿನ ಮೇಲೆ ವಾಸಿಸುವುದು ಕಡಿಮೆ ಹೆಚ್ಚಾಗಿ ಮರದ ಮೇಲೆಯೇ ಇರುತ್ತವೆ. ಸಾಮಾನ್ಯವಾಗಿ ತಿಳಿ ಹಸಿರು ಬಣ್ಣ ಹೊಂದಿರುತ್ತವೆ. ಬೆನ್ನಮೇಲೆ ಕಪ್ಪು, ಬಿಳಿ ಮತ್ತು ಹಸಿರಿನ ಮಚ್ಚೆಗಳಿರುತ್ತವೆ. ವೈರಿಗಳಿಂದ ದೇಹವನ್ನು ಮರೆಮಾಚುವ ಸಲುವಾಗಿ ಇವು ಪಾರದರ್ಶಕ ಚರ್ಮ ಹೊಂದಿರುತ್ತವೆ. ಅಲ್ಲದೆ, ಗಾಜಿನ ಕಪ್ಪೆಗಳ ದೇಹವೂ ಹಸಿರು ಬಣ್ಣದಲ್ಲಿರುವುದರಿಂದ ಗುರುತಿಸುವುದು ಕಷ್ಟಸಾಧ್ಯ.

ಹೊರಗಿನಿಂದಲೇ ಕಾಣುತ್ತೆ ದೇಹದ ಭಾಗ!
ಇವು ತೀರಾ ಚಿಕ್ಕ ಗಾತ್ರದವು. 1ರಿಂದ 3 ಇಂಚಿನಷ್ಟು ದೊಡ್ಡದಾಗಿರುತ್ತದೆ. ಕಪ್ಪೆಯ ಚರ್ಮ ಪಾರದರ್ಶಕವಾಗಿರುವುದರಿಂದ ಪಿತ್ತಜನಕಾಂಗ, ಹೃದಯ, ಜೀರ್ಣ ಅಂಗದ ಭಾಗಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕೆಲವು ಕಪ್ಪೆಗಳಲ್ಲಿ ಮೂಳೆಗಳು ಹಸಿರು ಅಥವಾ ಬಿಳಿ ಬಣ್ಣವಿರುತ್ತದೆ. ಗಾಜಿನ ಕಪ್ಪೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಭೇದಗಳಿವೆ.
ಕೆಲವೊಮ್ಮೆ ಮರದಕಪ್ಪೆ ಮತ್ತು ಗಾಜಿನಕಪ್ಪೆ ಯಾವುದು ಎಂಬ  ಗೊಂದಲ ಉಂಟಾಗುತ್ತದೆ. ಗಾಜಿನ ಕಪ್ಪೆಗಳಿಗೆ ಹೊರಚಾಚಿದ ಬಿಳಿಯ ಬಣ್ಣದ ಕಣ್ಣುಗಳಿದ್ದು, ದೊಡ್ಡದಾಗಿರುತ್ತವೆ. ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದ್ದು, ಬೇಟೆಯನ್ನು ಸುಲಭವಾಗಿ ಪತ್ತೆಮಾಡುತ್ತದೆ. ಅನೇಕ ಬಗೆಯ ಕೀಟಗಳನ್ನು ತಿಂದು ಅವುಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 1872ರಲ್ಲಿ ಗಾಜಿನ ಕಪ್ಪೆಗಳ ಇರುವಿಕೆಯನ್ನು ಪತ್ತೆ ಮಾಡಲಾಯಿತು. ಇವು ರಾತ್ರಿಯ ವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಹಗಲಿನಲ್ಲಿ ಕದಲದಂತೆ ಎಲೆಗಳ ಮೇಲೆ ಕೂತಿರುತ್ತವೆ. ಬಹುತೇಕ ಜೀವಿತವನ್ನು ಮರದ ಮೇಲೆಯೇ ಕಳೆಯುತ್ತವೆ. ಮಿಲನಕ್ಕಾಗಿ ಮಾತ್ರವೇ ನೆಲಕ್ಕೆ ಇಳಿಯುತ್ತವೆ. ಮಳೆಗಾಲ ಮುಗಿದ ಬಳಿಕ ನೀರಿನ ಮೇಲಿರುವ ಸಸ್ಯಗಳ ಮೇಲೆ ಇವು ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ನೀರಿನಲ್ಲಿ ವೃದ್ಧಿಯಾಗುತ್ತವೆ. ಕೆಲವು ಕಪ್ಪೆಗಳು ತಮ್ಮ ಮರಿಗಳನ್ನೇ ತಿಂದರೆ, ಇನ್ನು ಕೆಲವು ಮರಿಗಳ ಪೋಷಣೆ ಮಾಡುತ್ತವೆ.

ಒಂದು ಪ್ರದೇಶಕ್ಕೆ ಸೀಮಿತ:
ಇವು ಒಂದು ಪ್ರದೇಶಕ್ಕಷ್ಟೇ ಸೀಮಿತವಾದ ಜೀವಿಗಳು. ಇತರ ಕಪ್ಪೆಗಳು ತನ್ನ ಪ್ರದೇಶವನ್ನು ಆಕ್ರಮಿಸಿದರೆ, ಗಂಡು ಕಪ್ಪೆ ಕೂಗಿನ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ತನ್ನ ಪ್ರದೇಶವನ್ನು ಆಕ್ರಮಿಸಿದ ಕಪ್ಪೆಗಳನ್ನು ಅಲ್ಲಿಂದ ಓಡಿಸುತ್ತದೆ.
ಚಿಕ್ಕಗಾತ್ರದಿಂದಾಗಿ ಇವು ಸುಲಭವಾಗಿ ಬೇಟೆ ಪ್ರಾಣಿಗಳಿಗೆ ಆಹಾರವಾಗುತ್ತವೆ. ಹಾವು, ಸಸ್ತನಿ ಮತ್ತು ಹಕ್ಕಿಗಳು ಇದರ ಪ್ರಮುಖ ವೈರಿಗಳಾಗಿವೆ. ಗಾಜಿನ ಕಪ್ಪೆಗಳ ಜೀವಿತಾವಧಿ 10ರಿಂದ 14 ವರ್ಷ. ಆದರೆ, ಜಾಗತಿಕ ತಾಪಮಾನ ಏರಿಕೆ ಇವುಗಳ ಸಂತತಿಯ ಮೇಲೆ ಪರಿಣಾಮ ಬೀರಿದೆ. ಇವುಗಳ ಸಂತತಿ ನಿಧಾನವಾಗಿ ಕ್ಷೀಣಿಸುತ್ತಿದೆ.