ಜೀವನಯಾನ

Monday, October 1, 2012

ಗಾಂಧೀಜಿಯ ಸಾಬರಮತಿ ಆಶ್ರಮ

ಗಾಂಧೀಜಿ ಸ್ಥಾಪಿಸಿದ ಸಾಬರಮತಿ ಆಶ್ರಮ ಸತ್ಯ, ಅಹಿಂಸೆಗಳ ಪ್ರಯೋಗಶಾಲೆಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಸಾಬರಮತಿ ಆಶ್ರಮ. ಅನೇಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ತರಬೇತಿ, ನಿರ್ಭಯದ ಶಿಕ್ಷಣ, ಉತ್ತಮ ಸಂಸ್ಕಾರಗಳನ್ನು ಇಲ್ಲಿ ಕಲಿಸಲಾಗುತ್ತಿತ್ತು.ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡುವ ಗರಡಿಮನೆ ಎಂದೇ ಪ್ರಸಿದ್ಧಿ ಪಡೆದಿತ್ತು. 



ಗುರುಕುಲ ಪದ್ಧತಿ ಶಿಕ್ಷಣ
ಭಾರತೀಯ ಗುರುಕುಲ ಪದ್ಧತಿಯನ್ನು  ಆಶ್ರಮದಲ್ಲಿ ಅಳವಡಿಸಲಾಗಿತ್ತು. ಪ್ರತಿಭಾವಂತ ಕಾಕಾ ಕಾಲೇಲ್ಕರ್, ಕಿಶೋರಿಲಾಲ ಮಶ್ರೂವಾಲಾ, ಮಹದೇವ ದೇಸಾಯಿ ಮಗನಲಾಲ್  ಗಾಂಧಿ, ವಿನೋಬಾ ಭಾವೆ ಮುಂತಾದವರು ಆಶ್ರಮದ ಮಕ್ಕಳಿಗೆ ಶಿಕ್ಷಕರಾಗಿದ್ದರು. ಆಶ್ರಮದಲ್ಲಿ ವಿದ್ಯಾರ್ಥಿಗಳು ಕಠಿಣ ನಿಯಮ ಪಾಲಿಸಬೇಕಾಗಿತ್ತು. ಬೀಸುವುದು, ನೀರು ತುಂಬುವುದು, ಪಾತ್ರೆ ತಿಕ್ಕುವುದು, ಕಸ ಗುಡಿಸುವುದು,  ಅಡಿಗೆ ಮಾಡುವುದು, ನೂಲು ತೆಗೆಯುವುದು ಮುಂತಾದ ಕೆಲಸಕಾರ್ಯಗಳನ್ನು ತಪ್ಪದೇ ಮಾಡಬೇಕಾಗಿತ್ತು. ಈ ಕೆಲಸದಿಂದ ಶಿಕ್ಷಕರೂ ಹೊರತಾಗಿರಲಿಲ್ಲ. ಮಕ್ಕಳ ಶಿಕ್ಷಣದ ಪೂರ್ಣ ಜವಾಬ್ದಾರಿ ವಿನೋಬಾರದು. ಬೆಳಕು ಹರಿಯುವುದಕ್ಕೂ ಮುದಲು ನಾಲ್ಕು ಗಂಟೆಯ ಮಬ್ಬುಗತ್ತಲೆಯಲ್ಲೇ ಆಶ್ರಮದ ಗಂಟೆ ಬಾರಿಸುತ್ತಿತ್ತು. ವಿನೋಬಾ ಮಕ್ಕಳನ್ನು ಎಬ್ಬಸಿ ಉಪನಿಷತ್  ಅಧ್ಯಯನಕ್ಕೆ ಕರೆದೊಯ್ಯುತ್ತಿದ್ದರು.

  ಆಶ್ರಮ ಸ್ಥಾಪನೆ
20 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಬಳಿಕ 1915ರಲ್ಲಿ ಗಾಂಧೀಜಿ ಭಾರತಕ್ಕೆ ಮರಳಿದ್ದರು. ಅದು ಆಗತಾನೆ ಸ್ವಾತಂತ್ರ್ಯ ಚಳವಳಿ ಕಾವು  ಪಡೆಯುತ್ತಿದ್ದ ಕಾಲ. ಹೀಗಾಗಿ ಗಾಂಧೀಜಿ ಆಶ್ರಮ ಸ್ಥಾಪನೆಗೆ ಮುಂದಾದರು. ಪ್ರಾರಂಭದಲ್ಲಿ ಗಾಂಧೀಜಿ ಅಹಮದಾಬಾದ್ನ ಕೊಚ್ರಬ್ನಲ್ಲಿರುವ ಸ್ನೇಹಿತ ಜೀವನ್ಲಾಲ್ ದೇಸಾಯಿಯ ಮನೆಯಲ್ಲಿ ಮೇ 25 1915ರಂದು ಆಶ್ರಮ ಸ್ಥಾಪಿಸಿದರು. ಆಗ ಆಶ್ರಮದಲ್ಲಿ 25 ವಿದ್ಯಾರ್ಥಿಗಳಿದ್ದರು. ಆದರೆ ಆಶ್ರಮದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ಲೇಗ್ ಕಾಣಿಸಿಕೊಂಡಿದ್ದರಿಂದ ಎರಡು ವರ್ಷದಲ್ಲಿ ಆಶ್ರಮವನ್ನು ಬೇರೆಡೆಗೆ ಸ್ಥಳಾಂರಿಸುವ ಅನಿವಾರ್ಯತೆ ಎದುರಾಯಿತು. ನಂತರ ಸಾಬರಮತಿ ನದಿಯ ದಂಡೆಯ ಮೇಲೆ ಆಶ್ರಮ ಸ್ಥಾಪಿಸಲು ಗಾಂಧೀಜಿ ನಿರ್ಧರಿಸಿದರು. 1917 ಜುಲೈನಲ್ಲಿ ಸಾಬರಮತಿ ಆಶ್ರಮ ಆರಂಭವಾಯಿತು.

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ.
ಸಾಬರಮತಿ ಆಶ್ರಮ ಸತ್ಯಾಗ್ರಹದ ತವರುಮನೆ ಎಂದೇ ಕರೆಸಿಕೊಳ್ಳುತ್ತದೆ. ಈ ಆಶ್ರಮಕ್ಕೆ ಹರಿಜನರಿಗೂ ಮುಕ್ತ ಪ್ರವೇಶವಿತ್ತು. ಹಿಗಾಗಿ ಗಾಂಧೀಜಿ ಸಾಂಪ್ರದಾಯಿಕ ಮೇಲ್ವರ್ಗದ ಹಿಂದುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಗಾಂಧೀಜಿ 13 ವರ್ಷಗಳ ಕಾಲ ಆಶ್ರಮದಲ್ಲಿ ವಾಸವಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಬರಮತಿ ಆಶ್ರಮ ವಿಶೇಷ ಸ್ಥಾನ ಪಡೆದುಕೊಂಡಿದೆ. ಮಾರ್ಚ್ 12 1930ರಲ್ಲಿ ಗಾಂಧೀಜಿ ಸಾಬರಮತಿ ಆಶ್ರಮದಿಂದ ಐತಿಹಾಸಿಕ ದಂಡಿಯಾತ್ರೆ ಕೈಗೊಂಡಿದ್ದರು. ಈ ಯಾತ್ರೆ ಭಾರತ ಸ್ವಾತಂತ್ರ್ಯಹೋರಾಟಕ್ಕೆ ಮುನ್ನುಡಿ ಬರೆಯಿತು. 1933ರಲ್ಲಿ ಸಾಬರಮತಿ ಆಶ್ರಮವನ್ನು ಗಾಂಧೀಜಿ ವಿಸರ್ಜಿಸಿ ಸ್ವಾತಂತ್ರ್ಯ ಚಳವಳಳಿಯಲ್ಲಿ ಧುಮುಕಿದರು.


ಆಶ್ರಮ ಈಗ ವಸ್ತುಸಂಗ್ರಹಾಲಯ
ಒಂದು ಕಾಲದಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಮಾಣ ಮಾಡಿದ್ದ ಸಾಬರಮತಿ ಆಶ್ರಮ ಈಗ ಗಾಂಧಿ ಸ್ಮಾರಕ ಸಂಗ್ರಹಾಲಯವಾಗಿ ಪರಿವರ್ತನೆಯಾಗಿದೆ. 1963ರಲ್ಲಿ ಆಶ್ರಮದ ಮೂಲ ವಸ್ತುಗಳನ್ನು ಸುಸಜ್ಜಿತವಾದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

ವಸ್ತು ಸಂಗ್ರಹಾಲಯದ ವಿಶೇಷತೆಗಳು
  •  ಗಾಂಧೀಜಿಯ ಅಪರೂಪದ 250ಕ್ಕೂ ಹೆಚ್ಚು ಛಾಯಾಚಿತ್ರ ಮತ್ತು 8 ಚಿತ್ರಪಟಗಳನ್ನು ಒಳಗೊಂಡ ''ನನ್ನ ಜೀವನವೇ ನನ್ನ ಸಂದೇಶ'' ಗ್ಯಾಲಿರಿ.
  • ಗಾಂಧೀಜಿಯ ಹೇಳಿಕೆಗಳು, ಕೃತಿಗಳು ಮತ್ತು ಇತರ ಸ್ಮಾರಕಗಳು. 
  •  ಮಹಾತ್ಮಾ ಗಾಂಧೀಜಿಗೆ ಸಂಬಂಧಿಸಿದ ಸುಮಾರು 35 ಸಾವಿರ ಪುಸ್ತಕಗಳು, ಕೃತಿಗಳು, ಭಾರತ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಘಟನೆಗಳನ್ನು ವಿವರಿಸುವ ನಿಯತಕಾಲಿಕೆಗಳನ್ನು ಒಳಗೊಂಡ ಲೈಬ್ರಿರಿ.
  •  ಗಾಂಧೀಜಿ ತಾವು ಆರಂಭಿಸಿದ ಹರಿಜನ, ಹರಿಜನ ಸೇವಕ, ಹರಿಜನಬಂಧು ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಸುಮಾರು  8,781 ಪುಟಗಳ ಹಸ್ತ ಪ್ರತಿ ಮತ್ತು ಗಾಂಧೀಜಿ ಇರುವ 6 ಸಾವಿರ ಛಾಯಾಚಿತ್ರ. ಅಲ್ಲದೇ ಗಾಂಧೀಜಿ ಬರೆದ 34, 117 ಮೂಲ ಪತ್ರಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯ.
  •  ಗಾಂಧೀಜಿ ನೂಲು ತೆಗೆಯಲುಬಳಸುತ್ತಿದ್ದ ಚರಕ ಮತ್ತು ಇನ್ನಿತರ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.


No comments:

Post a Comment