ಜೀವನಯಾನ

Saturday, October 20, 2012

ಕೈಮುಗಿಯುವ ಸೊಗಸುಗಾರ

ಸದಾ ಮುಂಗಾಲನ್ನು ಕೈಮುಗಿಯುವಂತೆ ಎತ್ತಿ ಹಿಡಿಯುವುದರಿಂದ ಈ ಕೀಟಕ್ಕೆ ಪ್ರೇಯಿಂಗ್ ಮ್ಯಾಂಟಿಸ್ ಎನ್ನುವ ಹೆಸರು ಬಂದಿದೆ. ಅಲ್ಲದೇ ಇದನ್ನು ದೇವರ ಕೀಟ, ಕಡ್ಡಿ ಕುದುರೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ  ಕೀಟದ ವೈಜ್ಞಾನಿಕ ಹೆಸರು ಮಾಂಟೊಡಿಯಾ. ಮಾಂಟಿಸ್ ಜಿರಲೆಯ ನಿಕಟ ಸಂಬಂಧಿಗಳಾಗಿವೆ. ಕೆವೊಮ್ಮೆ ರಾತ್ರಿಯ ಬೆಳಕಿಗೆ ಆಕರ್ಷಣೆಗೊಂಡು ನಿಮ್ಮ ಮನೆಯ ಅತಿಥಿಯಾಗಿ ಈ ಕೈಮುಗಿಯುವ ಸೊಗಸುಗಾರ ಬಂದು ಬಿಡಬಹುದು.

ವಿಶಿಷ್ಟ ದೇಹ ರಚನೆ
ಇದರ ದೇಹ ರಚನೆಯನ್ನು ತಲೆ, ಎದೆಯ ಗೂಡು ಮತ್ತು ಹೊಟ್ಟೆ ಹೀಗೆ 3 ಭಾಗವಾಗಿ ವಿಂಗಡಿಸಬಹುದು. ತ್ರಿಕೋಣಾಕೃತಿಯ ತಲೆ, ಉದ್ದನೆಯ ಕುತ್ತಿಗೆ ಅದಕ್ಕೆ ಹೊಂದಿಕೊಂಡಂತೆ ದೊಡ್ಡ ಉರುಟು ಪಾರದರ್ಶಕ ಕಣ್ಣುಗಳು, ಸಪೂರ ಕೋರೆಹಲ್ಲುಗಳನ್ನು ಹೊಂದಿರುವ ಪುಟ್ಟ ಬಾಯಿ. ಗರಗಸದ ಹಲ್ಲುಗಳನ್ನು ಹೊಂದಿರುವ ಮುಂಗಾಲು ಹಾಗೆಯೇ ಉದ್ದನೆಯ ಹಿಂಗಾಲು ಇದರ ವಿಶೇಷತೆ.

ಗರಗಸದ ಹಲ್ಲಿನ ಮುಂಗೈ
ತನ್ನ ಕತ್ತನ್ನು 180 ಡಿಗ್ರಿ ತಿರುಗಿಸುವ ಸಾಮಥ್ರ್ಯವಿರುವುದು ಈ ಕೀಟಕ್ಕೆ ಮಾತ್ರ. ಇವು ಎಲೆ ಅಥವಾ ಪರಿಸರದ ಬಣ್ಣವನ್ನೇ ಹೋಲುವುದರಿಂದ ಹಕ್ಕಿಗಳಿಗೆ, ಕ್ರಿಮಿ ಕೀಟಗಳಿಗೆ ಗುರುತಿಸುವುದು ಅಷ್ಟು ಸುಲಭವಲ್ಲ. ಗಿಡದಲ್ಲಿ ಅಡಗಿ ತನ್ನ ಹತ್ತಿರ ಬರುವ ಚಿಟ್ಟೆ, ದುಂಬಿಗಳ ಕಣ್ತಪ್ಪಿಸಿ ತನ್ನ ಕದಂಭ ಬಾಹುವಿನ ಸಮೀಪಕ್ಕೆ ಬೇಟೆ ಬಂದಾಕ್ಷಣ ಮಿಂಚಿನಂತೆ ಕ್ಷಣಾರ್ಧದಲ್ಲಿ ತನ್ನ ಮುಂಗಾಲನ್ನು ಚಾಚಿ ಕಬಳಿಸಿಬಿಡುತ್ತದೆ. ಇವುಗಳ ಮುಂಗಾಲು ಮಾನವನ ಕಣ್ಣಿನ ದೃಷ್ಟಿಗಿಂತಲೂ ವೇಗವಾಗಿ ಬೇಟೆಯಾಡುತ್ತೆ. ಮುಂಗಾಲಿನಲ್ಲಿ ಸಣ್ಣ ಸಣ್ಣ ಗರಗಸದ ಹಲ್ಲಿನಂತಹ ರಚನೆಗಳು ಬೇಟೆಯನ್ನು ಮಿಸುಕಾಡದಂತೆ ಚುಚ್ಚಿ ಭದ್ರವಾಗಿ ಹಿಯುತ್ತವೆ. ಹೀಗಾಗಿ ಇದರ ಪ್ರರ್ಥನೆಗೆ ಒಲಿದು ಕೈಗೆ ಸಿಕ್ಕಿದ ಕೀಟ ನೇರವಾಗಿ ದೇವರ ಪಾದ ಸೇರುತ್ತದೆ. 

ಎಲೆಯ ಬಣ್ಣದ ಕೀಟ
ಮಿಡತೆಯಂತೆ ಈ ಅಪೂರ್ವ ಕೀಟ ಕೂಡ ರೈತ ಮಿತ್ರ! ಪ್ರಕೃತಿ ಸಮತೋಲನದಲ್ಲಿ ಇದರ ಪಾತ್ರ ಹಿರಿದು. ಇತರ ದೇಶಗಳಲ್ಲಿ ಕಪ್ಪೆ, ಚೇಳು, ಹಲ್ಲಿ ಹಾವು, ಸಣ್ಣ ಪಕ್ಷಿಗಳನ್ನೂ ಸಹ ತಿನ್ನುವ ಮ್ಯಾಂಟಿಸ್ಗಳಿವೆ. ಏಷ್ಯಾದಲ್ಲಿ ಕಂಡುಬರುವ ಮ್ಯಾಂಟಿಸ್ 10 ಇಂಚು ಇರುತ್ತವೆ. ನಮ್ಮಲ್ಲಿ ಇಷ್ಟೊಂದು ದೊಡ್ಡಗಾತ್ರದ ಮ್ಯಾಂಟಿಸ್ ಕಂಡುಬರದಿದ್ದರೂ, ಒಣಗಿದ ಎಲೆ, ಹಸಿರೆಲೆ, ಹುಲ್ಲಿನ ಬಣ್ಣ ಹೀಗೆ ಹತ್ತು ಹಲವಾರು ಬಣ್ಣದಲ್ಲಿ ಕಂಡುಬರುತ್ತವೆ. ಇವು ಅರ್ಧ ಇಂಚಿನಿಂದ 6 ಇಂಚಿನ ತನಕ ಉದ್ದವಾಗಿರುತ್ತವೆ. ಬಹುತೇಕ ಮ್ಯಾಂಟಿಸ್ ಗಳಿಗೆ ರೆಕ್ಕೆಯೂ ಇರುತ್ತದೆ ಮತ್ತು ಹಾರುವ ಸಾಮರ್ಥ್ಯ ಹೊಂದಿವೆ.  ಸಾಮಾನ್ಯವಾಗಿ ಹೆಣ್ಣು  ಕೀಟ ಗಂಡಿಗಿಂತಲೂ ದೊಡ್ಡದಾಗಿರುತ್ತದೆ.
ಪ್ರಪಂಚದಾದ್ಯಂತ ಸುಮಾರು 2, 400 ಜಾತಿಯ ಪ್ರೇ ಮ್ಯಾಂಟಿಸ್ಗಳಿವೆ ಎಂಬುದು ಕೀಟ ತಜ್ಞರ ಅಂದಾಜು. ಇವುಗಳ ಜೀವಿತಾವಧಿ ಸುಮಾರು ಒಂದು ವರ್ಷ. ಹೆಣ್ಣು ಕೀಟ ನೂರಾರು ಮೊಟ್ಟೆಗಳನ್ನು ಚೀಲದಂತಹ ರಚನೆಯಲ್ಲಿ ಇಡುತ್ತದೆ. ಮೊಟ್ಟೆಗಳು ನೊರೆಯ ರೂಪದಿಂದ ಗಟ್ಟಿಯಾಗುತ್ತವೆ.  ಬಾವಲಿ, ಕಪ್ಪೆ, ದಶಂಕಗಳು ಮತ್ತು  ಜೇಡರ ಹುಳ  ಮ್ಯಾಂಟಿಸ್ಗಳ ನೈಸರ್ಗಿಕ ಶತ್ರು.

ಗಂಡನ್ನೇ ಕಬಳಿಸುವ ಹೆಣ್ಣು!
ಹೆಣ್ಣು  ಪ್ರೇ ಮ್ಯಾಂಟಿಸ್ ತನ್ನ ಪ್ರಿಯಕರನ ಜತೆಗೆ ಮಿಲನ ಮಹೋತ್ಸವ ಆಚರಿಸಿ ನೀಡುವ ಪ್ರೀತಿಯ ಕಾಣಿಕೆ ಏನು ಗೊತ್ತೆ? ಗಂಡನ್ನು  ಹಾಗೆಯೇ ತನ್ನ ಕಮಂಭ ಬಾಹುಗಳಲ್ಲಿ ತಬ್ಬಿ ಹಿಡಿದು ಮೃತ್ಯು ಚುಂಬನ ನೀಡಿ ತಿಂದು ಬಿಡಬಹುದು. ಗಂಡನ್ನು ತಲೆ ಸಮೇತ ತಿಂದು ತೇಗಿದ ಹೆಣ್ಣಿಗೆ ಮೊಟ್ಟೆಯಿಡಲು ಅಗತ್ಯ ಪೋಷಕಾಂಶ ಸಿಕ್ಕಿ ಬಿಡುತ್ತವಂತೆ. ಅಂದರೆ ಗಂಡು ಹುಟ್ಟಿದ್ದೇ ಹೆಣ್ಣಿಗೆ ಆಹಾರವಾಗಲು! 

 

No comments:

Post a Comment