ಜೀವನಯಾನ

Friday, July 22, 2016

ವರ್ಷವಿಡೀ ಮಳೆಯಾಗುವ ಚಿರಾಪುಂಜಿ

ಭೂಮಿಯ ಮೇಲೆ ಅತ್ಯಧಿಕ ಮಳೆ ಬೀಳುವ ಸ್ಥಳವೆಂದರೆ ಅದು ಚಿರಾಪುಂಜಿ. ಈ ಹಿಂದೆ ಹಲವು ಸಲ ಅತಿಹೆಚ್ಚು ಮಳೆಯನ್ನು ಪಡೆಯುವ ಮೂಲಕ ಭೂಗ್ರಹದ ಮೇಲಿನ ಅತ್ಯಂತ ತೇವ ಪ್ರದೇಶ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಈ ಪ್ರದೇಶವಿದೆ. ಮುಂಗಾರು ಮಾರುತಗಳು ಇಲ್ಲಿನ ಬೆಟ್ಟ ಪ್ರದೇಶಗಳಿಗೆ ಅಪ್ಪಳಿಸಿ ಈ ಭಾಗಕ್ಕೆ ಭಾರೀ ಪ್ರಮಾಣದ ಮಳೆಯನ್ನು ಸುರಿಸುತ್ತವೆ. ನೈಋತ್ಯ ಮತ್ತು ಈಶಾನ್ಯ  ಮುಂಗಾರು ಚಿರಾಪುಂಜಿಯನ್ನು ಮಳೆಯಿಂದ  ನೆನೆಯುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಬ್ರಹ್ಮಪುತ್ರ ಕಣಿವೆಯಿಂದ ಬೀಸುವ ಈಶಾನ್ಯ ಮಾರುತಗಳು ಇಲ್ಲಿ ಮಳೆಯನ್ನು ಸುರಿಸುತ್ತವೆ. ಹೀಗಾಗಿಯೇ ಜಗತ್ತಿನ ಅತ್ಯಧಿಕ ಪ್ರಮಾಣದ ಮಳೆ ಸುರಿಯುವ ಪ್ರದೇಶ ಎಂಬ ಖ್ಯಾತಿ ಪಡೆದಿದೆ.



ಕರಾವಳಿಯ ವಾತಾವರಣ:

ಇದು ಸಮುದ್ರ ಮಟ್ಟದಿಂದ 4500 ಅಡಿ  ಎತ್ತರದಲ್ಲಿ ಇದ್ದರೂ, ಇಲ್ಲಿ ಕರಾವಳಿಯ ವಾತಾವರಣವಿದೆ. ಬೇಸಿಗೆಯ ಸಮಯದಲ್ಲಿ ಬೆಚ್ಚನೆಯ ಹಾಗೂ ಚಳಿಗಾಲದಲ್ಲಿ ಅತಿಯಾದ ಚಳಿ ಇಲ್ಲದ ತಂಪನ್ನು ಹೊಂದಿರುತ್ತದೆ. ಅನೇಕ ಗಿರಿ ಶಿಖರಗಳು, ಅರಣ್ಯ ಪ್ರದೇಶಗಳು ಹಾಗೂ ಜಲಪಾತಗಳು ಇಲ್ಲಿನ ಆಕರ್ಷಣೆ.  ಚಿರಾಪುಂಜಿಯಲ್ಲಿ ವಾಷರ್ಿಕ ಸರಾಸರಿ 11,777 ಮಿಲಿಮೀಟರ್ ಮಳೆ ಸುರಿಯುತ್ತದೆ.
ಇನ್ನು ಚಿರಾಪುಂಜಿಯ ಪಕ್ಕದಲ್ಲಿರುವ ಮಾಸಿನ್ರಾಂನಲ್ಲಿ ಕೂಡ ಹೀಗೆಯೇ ಮಳೆಸುರಿಯುತ್ತದೆ. ಸದ್ಯ ಜಗತ್ತಿನ ಅತಿ ತೇವದ ಪ್ರದೇಶ ಎಂಬ ಖ್ಯಾತಿಗೆ ಅದು ಪಾತ್ರವಾಗಿದೆ. ಇಲ್ಲಿ ವಾರ್ಷಿಕ ಸರಾಸರಿ 11,873 ಮಿ.ಮೀ. ಮಳೆಯಾಗುತ್ತಿದೆ.
ಚಿರಾಪುಂಜಿಯ ಮೂಲ ಹೆಸರು ಸೋಹ್ರಾ ಎಂದು. ಆದರೆ, ಬ್ರಿಟೀಷರು ಚುರ್ರಾ ಎಂದು ಹೇಳುತ್ತಿದ್ದರು. ಹೀಗೆ ಅದಕ್ಕೆ ಚಿರಾಪುಂಜಿ ಎಂಬ ಹೆಸರು ಬಂತು. ಚಿರಾಪುಂಜಿ ಅಂದರೆ ಕಿತ್ತಳೆ ಭೂಮಿ ಎಂಬ ಅರ್ಥವಿದೆ. ಚಿರಾಪುಂಜಿಯ ಕಣಿವೆಗಳು ಹಲವು ಸ್ಥಳೀಯ ಪ್ರಭೇದದ ಗಿಡಮರಗಳ ಆಶ್ರಯ ತಾಣವಾಗಿದೆ. ಮೇಘಾಲಯದ ಉಪ ಉಷ್ಣವಲಯದ ಕಾಡುಗಳು ಇಲ್ಲಿ ಕಂಡು ಬರುತ್ತವೆ. ಚಿರಾಪುಂಜಿ ಹಲವಾರು ಜಲಪಾತಗಳ  ತವರೂರು. ಇಲ್ಲಿಗೆ ಸಮೀಪದ 1,035 ಅಡಿ ಎತ್ತರವಿರುವ ಮಾಸ್ಮೈ ಫಾಲ್ಸ್ ದೇಶದ 4ನೇ ಅತಿದೊಡ್ಡ ಜಲಪಾತ. 


ಮಳೆಯಲ್ಲಿ ದಾಖಲೆ ನಿರ್ಮಾಣ
ಚಿರಾಪುಂಜಿ ಸದ್ಯಕ್ಕೆ ಎರಡು ಗಿನ್ನೆಸ್ ದಾಖಲೆಗಳನ್ನು ಹೊಂದಿದೆ. 1860 ಆಗಸ್ಟ್ 1ರಿಂದ 1861 ಜು. 31ರ ನಡುವಿನ ಅವಧಿಯಲ್ಲಿ 22,987 ಮಿ.ಮೀ. ಮಳೆಯಾಗಿತ್ತು. ಇನ್ನು 1861ರ ಜುಲೈ ಒಂದರಲ್ಲೇ  9,300 ಮಿಲಿಮೀಟರ್ ಮಳೆ ಸುರಿದು ದಾಖಲೆ ನಿಮರ್ಮಾಣವಾಗಿತ್ತು.


ಮಳೆ ಸುರಿದರೂ ನೀರಿಗೆ ಬರ!
ದೇಶದಲ್ಲಿ ಮಳೆಗಾಲ ಮಾತ್ರ ಇರುವ ಪ್ರದೇಶವೆಂದರೆ ಅದು ಚಿರಾಪುಂಜಿ. ಇಲ್ಲಿ ಮಳೆ ಇಲ್ಲದ ತಿಂಗಳೇ ಇಲ್ಲ. ಅಚ್ಚರಿಯೆಂದರೆ  ಭಾರೀ ಮಳೆ ಬೀಳುವ ಪ್ರದೇಶವಾದರೂ ಇಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಅತಿಯಾದ ಅರಣ್ಯ ಒತ್ತುವರಿಯಿಂದ ಫಲವತ್ತಾದ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿಹೋಗುವ ಸಮಸ್ಯೆಯನ್ನು ಎದುರಿಸುತ್ತಿದೆ.
ಚಿರಾಪುಂಜಿಯ ಇನ್ನೊಂದು ವಿಶೇಷವೆಂದರೆ ಲಿವಿಂಗ್ ಬ್ರಿಡ್ಜ್. ಇಲ್ಲಿನ ಜನರು ಮರದ ಬೇರುಗಳನ್ನು ಉಪಯೋಗಿಸಿ ಸೇತುವೆಗಳನ್ನು ನಿರ್ಮಿಸುತ್ತಾರೆ. ಈ ಕಾರ್ಯಕ್ಕೆ 10 ರಿಂದ 15 ವರ್ಷಗಳು ತಗುಲುತ್ತವೆ. ಆದರೆ, ಅವು ದೀರ್ಘ ಸಮಯ ಬಾಳಿಕೆ ಬರುತ್ತವೆ. ಸುಮಾರು 500 ವರ್ಷ ಹಳೆಯದಾದ ಇಂಥದ್ದೊಂದು ಸೇತುವೆ ಇಲ್ಲಿದೆ.


No comments:

Post a Comment