ಜೀವನಯಾನ

Friday, July 22, 2016

ನೆಕ್ ಚಾಂದ್ ನಿರ್ಮಿಸಿದ ರಾಕ್ ಗಾರ್ಡನ್!

ಗಾರ್ಡನ್ ಎಂದಾಕ್ಷಣ ಬಣ್ಣದ ಹೂವುಗಳು, ಹಸಿರು ಹುಲ್ಲುಹಾಸುಗಳು ನೆನಪಿಗೆ ಬರುತ್ತವೆ.  ಆದರೆ, ನಿರುಪಯುಕ್ತ ವಸ್ತುಗಳನ್ನು ಬಳಸಿ ನಿರ್ಮಿಸಿದ ರಾಕ್ ಗಾರ್ಡನ್ (ಕಲ್ಲಿನ ಉದ್ಯಾನವನ)ದ ಬಗ್ಗೆ ಕೇಳಿದ್ದೀರಾ? ನೋಡುಗರನ್ನು ನಿಬ್ಬೆರಗಾಗಿಸಬಲ್ಲ ರಾಕ್ ಗಾರ್ಡನ್ ಇರುವುದು ಚಂಡೀಗಢದಲ್ಲಿ. ಇಲ್ಲಿ ಕಲ್ಲಿನ ಚೂರು, ತುಂಡಾದ ಟೈಲ್ಸ್, ಬಳೆ, ಗಾಜು, ಮರ, ಕಪ್ಪೆ ಚಿಪ್ಪು, ಹಾಳಾದ ಬಲ್ಬ್, ತಲೆಗೂದಲೂ ಹೀಗೆ ನಾವು ನಿರುಪಯುಕ್ತ ಎಂದು ಬೀಸಾಡುವ ವಸ್ತುಗಳು ಕಲಾಕೃತಿಯ ರೂಪ ಪಡೆದುಕೊಂಡಿದೆ. ಇದೆಲ್ಲಾ ಸಾಧ್ಯವಾಗಿದ್ದು ದಿ.ನೆಕ್ ಚಾಂದ್ ಎಂಬ ಮಾತ್ರಿಕ ನಿಂದ.



ಗಾರ್ಡನ್ ನಿರ್ಮಿಸಿದ ಕಥೆ:
ಪಂಜಾಬ್ ಸರ್ಕಾರದಲ್ಲಿ ರಸ್ತೆ ಯೋಜನೆಗಳ ನಿರೀಕ್ಷಕರಾಗಿದ್ದ ನೆಕ್ ಚಾಂದ್ ಅವರು, ಸುಖ್ನಾ ಸರೋವರದ ಸಮೀಪದ ಅರಣ್ಯದಲ್ಲಿ ಒಂದು ಸಣ್ಣ ಜಾಗವನ್ನು ಸಮತಟ್ಟುಗೊಳಿಸಿ ಸಣ್ಣ ಉದ್ಯಾನವನವೊಂದನ್ನು 1960ರ ವೇಳೆಯಲ್ಲಿ ನಿರ್ಮಿಸಿದ್ದರು. ಸುಲಭವಾಗಿ ದೊರಕುವ ವಸ್ತುಗಳನ್ನು ಮರು ಬಳಕೆ ಮಾಡಿಕೊಂಡು ಕೆಲವು ಆಕೃತಿಗಳನ್ನು ನಿರ್ಮಿಸಿದರು. ಈ ಅರಣ್ಯವನ್ನು ಸರ್ಕಾರ 1902ರಲ್ಲಿ ಸುರಕ್ಷಿತ ಅರಣ್ಯ ಎಂಬುದಾಗಿ ಘೋಷಿಸಿತ್ತು. ಹೀಗಾಗಿ ತಾವು ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆ ಎಂಬ ಅರಿವಿದ್ದ ಅವರು, 18 ವರ್ಷಗಳ ಕಾಲ ತಮ್ಮ ಶಿಲ್ಪಕಲೆಗಳನ್ನು ಮುಚ್ಚಿಟ್ಟಿದ್ದರು. ಹಗಲಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದ ಅವರು ರಾತ್ರಿಯಲ್ಲಿ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು. ಆದರೆ, 1975ರಲ್ಲಿ ಇದು ಅಧಿಕಾರಿಗಳ ಕಣ್ಣಿಗೆ ಬಿತ್ತು. ಆ ವೇಳೆಗ ಆ ಸ್ಥಳ 13  ಎಕರೆ ಪ್ರದೇಶಕ್ಕೆ ವ್ಯಾಪಿಸಿತ್ತು. ಈ ಉದ್ಯಾನವನ ಧ್ವಂಸಗೊಳ್ಳುವ ಭೀತಿ ಎದುರಾಗಿತ್ತು. ಆದರೆ, ಅವರ ಪರವಾಗಿ ಜನಾಭಿಪ್ರಾಯ ರೂಪಗೊಂಡಿತು. ಉದ್ಯಾನವನದ ಕನಸನ್ನು ಸಾಕಾರಗೊಳಿಸಲು ಅಧಿಕಾರಿಗಳು ಅವಕಾಶ ನೀಡಿದರು. 1976ರಲ್ಲಿ ಉದ್ಯಾನವನ್ನು ಉದ್ಘಾಟಿಸಲಾಯಿತು. ಆ ಬಳಿಕ ಚಾಂದ್ ಅವರ ಶಿಲ್ಪಕಲೆ ವಿಶ್ವವಿಖ್ಯಾತಿ ಪಡೆಯಿತು. ಚಾಂದ್ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಆದರೆ, ಅವರ ರಾಕ್ ಗಾರ್ಡನ್, ಮೊಲಾಯಿಕ್ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿದೆ.
 
ಕಸದಿಂದ ಮೂಡಿದ ಶಿಲ್ಪ:

ಕೃತಕ ಜಲಪಾತಗಳು ಬಣ್ಣ ಬಣ್ಣದ ಮೀನುಗಳ ಕೊಠಡಿ, ಗುಹೆಗಳು, ಒಣ ಮರದಲ್ಲಿ ಮೂಡಿದ ಕಲಾತ್ಮಕ ಕೆತ್ತನೆಗಳು, ಮಕ್ಕಳ ಆಟಕ್ಕೇಂದೇ ಮೀಸಲಾದ ಪ್ರದೇಶಗಳು ರಾಕ್ ಗಾರ್ಡನ್ನಲ್ಲಿವೆ. ಕೈಗಾರಿಕೆ ಮತ್ತು ನಗರದ ತ್ಯಾಜ್ಯಗಳನ್ನು ಮರುಬಳಕೆ ಮಾಡಿಕೊಂಡು ಸಾವಿರಾರು ಕಲಾಕೃತಿಗಳನ್ನು ಚಾಂದ್ ಅವರು ನಿರ್ಮಿಸಿದ್ದಾರೆ. ಒಡೆದ ಪಿಂಗಾಣಿ ಸಾಮಗ್ರಿಗಳು, ವಿದ್ಯುತ್ ಉಪಕರಣಗಳು, ಪೈಪುಗಳು, ಬೆಣಚು ಕಲ್ಲುಗಳು, ಮಡಿಕೆ- ಕುಡಿಕೆಗಳು ಇತ್ಯಾದಿ ಕಸಗಳು ಇಲ್ಲಿ ಗಾರೆಯೊಂದಿಗೆ ಸೇರಿ ಸುಂದರವಾದ ಪ್ರಾಣಿ, ಪಕ್ಷಿ, ಗೊಂಬೆ, ಗೋಪುರಗಳಾಗಿ ಕಂಗೊಳಿಸುತ್ತಿವೆ. ಈ ರಾಕ್ ಗಾರ್ಡನ್ 40 ಎಕರೆಯಷ್ಟು ವಿಶಾಲವಾದ ಪ್ರದೇಶಕ್ಕೆ ವ್ಯಾಪಿಸಿದೆ. ಪ್ರತಿವರ್ಷ ದೇಶವಿದೇಶಗಳ 2.5 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಟಿಕೆಟ್ ಮಾರಾಟದಿಂದಲೇ 1.8 ಕೋಟಿ ರೂ. ಸಂಗ್ರಹವಾಗುತ್ತಿದೆ. ಕಸದಿಂದ ರಸವನ್ನು ಹೇಗೆ ತೆಗೆಯಬಹುದು ಎಂಬುದಕ್ಕೆ ರಾಕ್ ಗಾರ್ಡನ್ ಒಂದು ಉತ್ತಮ ಉದಾಹರಣೆ.


2 comments: