ಜೀವನಯಾನ

Friday, January 27, 2012

ಬೊನ್ಸಾಯ್

ಆಕಾರ ಚಿಕ್ಕದು, ಆಯಸ್ಸು ದೊಡ್ಡದು !
ಬೊನ್ಸಾಯ್, ದೊಡ್ಡ ಮರಗಳ ಚಿಕ್ಕ ಪ್ರತಿರೂಪ. ಇದೊಂದು ಕಲಾತ್ಮಕವಾಗಿ ಸಸ್ಯಗಳನ್ನು ಬೆಳೆಸುವ ವಿಧಾನ. ಇದನ್ನು ಮನೆಯ ಒಳಗಡೆ ಸಹ ಬೆಳೆಸಬಹುದು. ಸಸ್ಯಗಳ ಬೆಳವಣಿಗೆಗಿಂತಲೂ ಸಸ್ಯಗಳ ಸೌಂದರ್ಯ ಸವಿಯುವ ಸಲುವಾಗಿ ಇವುಗಳನ್ನು ಬೆಳೆಸಲಾಗುತ್ತದೆ. ನೋಡಲು ಕುರುಚಲು ಗಿಡದಂತೆ ಕಾಣುವ ಬೊನ್ಸಾಯ್ ಸಸ್ಯಗಳು ಅಬ್ಬಬ್ಬಾ ಅಂದರೂ ಒಂದು ಮೀಟರ್ಗಿಂತ ಜಾಸ್ತಿ ಎತ್ತರಕ್ಕೆ ಬೆಳೆಯಲಾರವು. ನೈಸರ್ಗಿಕವಾಗಿ ಬೆಳೆಯುವ ಸ್ವತಂತ್ರ ಮರಗಳಿಗೆ ಹೋಲಿಸಿದರೆ ಇವು ಪರಾವಲಂಬಿಗಳು. ಇವು ಸಾಮಾನ್ಯ ಮರಗಳಂತೆ ನೂರಾರು ವರ್ಷ ಬದುಕಬಲ್ಲವು. ಆದರೆ, ಮನುಷ್ಯನ ಆರೈಕೆ ಇಲ್ಲದಿದ್ದರೆ ಇವುಗಳ ಆಯಸ್ಸ ಅಂದಿಗೇ ನಿಂತು ಹೋಗುತ್ತವೆ.

ಇತಿಹಾಸ: ಬೊನ್ಸಾಯ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದನ್ನು ಮೊದಲು ಕಂಡುಹಿದದ್ದು ಚೀನಿಯರು. ನಂತರ 12ನೇ ಶತಮಾನದಲ್ಲಿ ಜಪಾನೀಯರು ಇದನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪರಿಚಯಿಸಿದರು. ಜಪಾನ್ ಭಾಷೆಯಲ್ಲಿ ಬೊನ್ ಅಂದರೆ ಕುಂಡ ಮತ್ತು ಸಾಯ್ ಅಂದರೆ ಸಸ್ಯ. ಬೊನ್ಸಾಯ್ ಅಂದರೆ ಕುಂಡದಲ್ಲಿ ಬೆಳೆಸುವ ಸಸ್ಯ ಎನ್ನುವ ಅರ್ಥ ನೀಡುತ್ತದೆ.

ಹವ್ಯಾಸ : ಇಂದು ಬೊನ್ಸಾಯ್ ಕಲೆ ಹವ್ಯಾಸವಾಗಿ ಬೆಳೆಯುತ್ತಿದೆ. ಯುರೋಪಿಯನ್ ದೇಶಗಳ ಪ್ರತಿ ಮನೆಯಲ್ಲಿಯೂ ಒಂದು ಬೊನ್ಸಾಯ್ನ್ನು ಕಾಣಬಹುದು. ಇವು ಕೇವಲ ಮನೆಯ ಸೌಂದರ್ಯಕಷ್ಟೇ ಅಲ್ಲ ಸಸ್ಯಶಾಸ್ತ್ರವನ್ನು ಅಧ್ಯಯನ ಮಾಡುವವರಿಗೂ ಮಾದರಿ. ಉದ್ಯಾನವನ, ವಸ್ತು ಸಂಗ್ರಹಾಲಯ, ಆಸ್ಪತ್ರೆ, ವಾಣಿಜ್ಯಮಳಿಗೆ ಹೀಗೆ ಅನೇಕ ಕಡೆಗಳಲ್ಲಿ ಇದು ಸಾಮಾನ್ಯ.

ಬೆಳೆಸುವುದುಹೇಗೆ ? ಒಂದು ಬೊನ್ಸಾಯ್ ಮರಬೆಳೆಯಲು ಅನೇಕ ವರ್ಷ ತೆಗೆದುಕೋಳ್ಳುತ್ತದೆ. ಇದನ್ನು ಬೆಳೆಸುವುದು ಸಹ ಒಂದು ಕಲೆ. ಒಂದು ಚಿಕ್ಕ ತೆಗೆದುಕೊಂಡು ಅದರ ಬೇರು ಮತ್ತು ಕೊಂಬೆಗಳನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಬೇಕು. ನಂತರ ರಂದ್ರವಿರುವ ಚಿಕ್ಕ ಕುಂಡದಲ್ಲಿ ಅದನ್ನು ಇಟ್ಟು ಉತ್ತಮ ಮಣ್ಣು ಗೊಬ್ಬರ ಹಾಕಿ ಬೆಳೆಸಬೇಕು. ತೇವಾಂಶವನ್ನು ಹಿಡಿದಿಟ್ಟುಕೋಳ್ಳುವ ಮಣ್ಣನ್ನು ಕುಂಡಕ್ಕೆ ಬಳಸಬೇಕು. ಸಸಿ ಬೆಳೆದಂತೆಲ್ಲಾ ಅದನ್ನು ಕುಂಡದಿಂದ ತೆಗೆದು ಬಲಿತ ಬೇರು ಮತ್ತು ಕೊಂಬೆಗಳನ್ನು ಆಗಾಗ ಕತ್ತರಿಸಿ ನಮಗೆ ಬೇಕಾದ ರೂಪವನ್ನು ನೀಡಬಹುದು. ಇವುಗಳ ರಚನೆ ಸೂಕ್ಷ್ಮವಾಗಿರುವುದರಿಂದ ಅತ್ಯಂತ ಕಾಳಜಿಯಿಂದ ಇವುಗಳನ್ನು ಬೆಳೆಸಬೇಕು. ಉತ್ತಮ ಗಾಳಿ, ಬೆಳಕಿನ ವಾತಾವರಣ ಕಲ್ಪಿಸಬೇಕು. ಇವುಗಳ ಆಯಸ್ಸು ಹೆಚ್ಚಾದಂತೆಲ್ಲಾ ಸೌಂದರ್ಯವೂ ಹೆಚ್ಚುತ್ತಾ ಹೋಗುತ್ತದೆ. ಇವುಗಳ ಸಂಪೂರ್ಣ ಸೌಂದರ್ಯ ಸವಿಯಬೇಕಾದರೆ 15 ರಿಂದ 20 ವರ್ಷಗಳದರೂ ಅಗತ್ಯ.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ: ಬೊನ್ಸಾಯ್ ಮರಗಳು ಸೌಂದರ್ಯಕ್ಕೆ ಹೆಸರುವಾಸಿ. ಇದು ಮಾನವನ ಕ್ರತಕ ಸೃಷ್ಟಿ. ಬೆಳೆಸುವವನ ಸೃಜನಶೀಲತೆಗೆ ತಕ್ಕಂತೆ ಇವು ಆಕಾರ ಪಡೆಯುತ್ತವೆ. ಬೃಹದಾಕಾರವಾಗಿ ಬೆಳಯುವ ಮರಗಳನ್ನು ಅಂಗೈ ಅಳತೆಗೆ ಮೊಟಕು ಗೊಳಿಸಿದ ಬೊನ್ಸಾಯ್ಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ. 15 ವರ್ಷದ ಒಂದು ಬೊನ್ಸಾಯ್ ಮರಸಾವಿರಾರು ರೂ. ಬೆಲೆಬಾಳುತ್ತದೆ. ಹೀಗಾಗಿ ಇದೊಂದು ಕೃಷಿ ಉದ್ಯಮವಾಗಿಯೂ ಬೆಳೆಯುತ್ತಿದೆ.

ಬೊನ್ಸಾಯ್ ಅರಣ್ಯ ಗೊತ್ತಾ ? : ವಿವಿಧ ಜಾತಿಯ ಬೊನ್ಸಾಯ್ ಮರಗಳನ್ನು ಒಂದೆಡೆ ಸಂಗ್ರಹಿಸಿದ ಬೊನ್ಸಾಯ್ ಅರಣ್ಯಗಳು ಇಂದು ಪ್ರಸಿದ್ಧಿ ಪಡೆಯುತ್ತಿವೆ. ಕಣ್ಮರೆಯಾಗುತ್ತಿರುವ ಉಪಯುಕ್ತ ಸಸ್ಯ ಸಂಕುಲಗಳನ್ನು ಮುಂದಿನ ಪೀಳೀಗೆಗೆ ಕಾಯ್ದಿರಿಸಲು ಬೊನ್ಸಾಯ್ ಅರಣ್ಯಗಳು ಸಹಾಯಕ. ಮಕ್ಕಳಿಗೆ ಸಸ್ಯಗಳ ಕುರಿತು ಪಾಠ ಹೇಳಲು ಇವು ಉಪಯುಕ್ತ. ಬೊನ್ಸಾಯ್ ಅರಣ್ಯ ಬೆಳೆಸಲು ಮನೆಯ ಮುಂದಿನ ಪುಟ್ಟ ಅಂಗಳವೇ ಸಾಕು. ಆದರೆ ಅದನ್ನು ಬೆಳೆಸಲು ಬೆಟ್ಟದಷ್ಟು ತಾಳ್ಮೆ ಬೇಕು.

No comments:

Post a Comment