ಜೀವನಯಾನ

Sunday, May 13, 2012

ಮಾಂಸ ಭಕ್ಷಕ ಸಸ್ಯಗಳ ಮಾಯಾ ಜಾಲ

ಹೊರನೋಟಕ್ಕೆ ಇತರ ಸಸ್ಯಗಳಂತಹದೇ ರೂಪ. ಹಸಿರು ತುಂಬಿದ, ಹೂ ಅರಳಿನಿಂತ ಗಿಡ. ಹಾಗೆಂದು ಇವು ನಮ್ಮ ಸುತ್ತಮುತ್ತಲಿನ ಗಡಗಳಂತೆ ಅಲ್ಲ. ಈ ಸಸ್ಯಗಳ ಜೀವನ ಕ್ರಮ ತೀರಾ ವಿಭಿನ್ನ, ವಿಚಿತ್ರ, ವಿಲಕ್ಷಣ  ಮತ್ತು ಭಯಾನಕ.  ಪರೊಕ್ಷವಾಗಿ ಇಡೀ ಜೀವ ಸಂಕುಲಕ್ಕೇ ಆಹಾರ ಒದಗಿಸುವ ಸಸ್ಯ ಸಾಮ್ರಾಜ್ಯದಲ್ಲಿ ಈ ಸಸ್ಯಗಳು ಮಾತ್ರ ಪ್ರಾಣಿ ಪೋಷಕವಲ್ಲ ಬದಲಾಗಿ ಮಾಂಸ ಭಕ್ಷಕಗಳು!

ಹಾಗೆಂದೊಡನೆ ಮಾಂಸಾಹಾರಿ ಸಸ್ಯಗಳು ಪ್ರಾಣಿಗಳನ್ನೆಲ್ಲಾ ಬೇಟೆಯಾಡಿ ತಿಂದು ಹಾಕುತ್ತವೆ ಎಂದು ಭಾವಿಸಬೇಕಾಗಿಲ್ಲ. ವಾಸ್ತವವಾಗಿ ಈ ಸಸ್ಯಗಳು ಹಿಡಿಯುವ ಜೀವಿಗಳೆಲ್ಲಾ ತೀರಾ ಸಣ್ಣ ಗಾತ್ರದವು. ಪ್ರಮುಖವಾಗಿ ನೊಣ, ದುಂಬಿ, ಜಿರಲೆ,  ಮಿಡತೆ ಇತ್ಯಾದಿ.  ಆದರೆ ಕಪ್ಪೆ,  ಹಲ್ಲಿ, ಓತಿಕ್ಯಾತ  ಮುಂತಾದ ಮಧ್ಯಮ ಗಾತ್ರದ ಪ್ರಾಣಿಗಳನ್ನೂ ತಿನ್ನಬಲ್ಲ ಸಸ್ಯಗಳು ಸಹ ಇವೆ. ಬಹುಮಟ್ಟಿಗೆ ಈ ಸಸ್ಯಗಳು ಕೀಟಗಳನ್ನೇ ಸರೆಹಿಡಿದು ಸೇವಿಸುವುದರಿಂದ ಇವುಗಳಿಗೆ ಕೀಟಾ ಹಾರಿ ಸಸ್ಯ ಎನ್ನುವ ಹೆಸರೂ ಇದೆ. 
ಇವು ಒಂದೇ ಜಾತಿಯ ಪ್ರಭೇದಗಳಿಗೆ ಸೇರಿಲ್ಲ. ಇಬ್ಬನಿಗಿಡ, ಹೂಜಿಗಿಡ, ವೀನಸ್ ಫ್ಲೈಟ್ರಾಪ್, ಬ್ಲಾಡರ್ ವರ್ಟ್ ಇತ್ಯಾದಿ ಆರುನೂರಕ್ಕೂ ಹೆಚ್ಚು ಜಾತಿಯ ಮಾಂಸಾಹಾರಿ ಸಸ್ಯಗಳ ವಿಶಿಷ್ಟ ವರ್ಗಗಳಿವೆ. ಈ ವಿಲಕ್ಷಣ ಸ್ವಭಾವದಿಂದಲೇ ಅವು  ಕುಖ್ಯಾತ. ಮಾಂಸಾಹಾರಿ ಸಸ್ಯಗಳು ಪ್ರಾಣಿ ಬೇಟೆಯ ಕ್ರಮ ಎಂಥವರನ್ನೂ ಬೆರಗುಗೊಳಿಸುತ್ತದೆ.
   ಏಕೆ ಹೀಗೆ?

ಮಣ್ಣು ತುಂಬಾ ನಿಸ್ಸಾರವಾಗಿರುವ ಅಥವಾ ಪೌಷ್ಟಿಕಾಂಶವಿಲ್ಲದ. ನಿಸ್ಸಾರವಾಗಿರುವ, ಅದರಲ್ಲೂ ಸಾರಜನಕದ ಅಂಶವಿಲ್ಲದಿರುವ ಜೌಗು ಪ್ರದೇಶದಲ್ಲಿ ಮಾಸಾಹಾರಿ ಸಸ್ಯಗಳು ಕಂಡುಬರುತ್ತವೆ. ಈ ರೀತಿಯ ಮಾಂಸಾಹಾರಿ ಸಸ್ಯಗಳ ಕುರಿತು ಮೊದಲ ಬಾರಿಗೆ ಅಧ್ಯಯನ ಮಾಡಿ ಪುಸ್ತಕ ಬರೆದ ವಿಜ್ಞಾನಿ ಚಾಲ್ಸ್ ಡಾರ್ವಿನ್.  ಈ ವರ್ಗದ ಸಸ್ಯಗಳು ಕೀಟಗಳ ಮಾಂಸವನ್ನು ಆಹಾರವಾಗಿ ಸೇವಿಸುವುದಿಲ್ಲ. ಇತರ ಸಸ್ಯಗಳಂತೆ ಇವೂ ಸಹ ದ್ಯುತಿ ಸಂಶ್ಲೇಷಣೆಯಿಂದಲೇ ಆಹಾರ ಉತ್ಪಾದಿಸುತ್ತವೆ. ಆದರೆ ಮಾಂಸಾಹಾರಿ  ಸಸ್ಯಗಳು ಅವು ಪಡೆದ ಮಾಂಸಾಹಾರದಿಂದ ಸಾರಜನಕ ಮತ್ತು ರಂಜಕ ಅಂಶಗಳನ್ನು ಸೆಳೆದು ದ್ಯುತಿ ಸಂಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. 

ನಿಂತಲ್ಲೇ  ವೈರಿಗಳನ್ನು ಆಕರ್ಶಿಸಿ ಕೊಂದು ಹಾಕುವ ಇವುಗಳ ತಂತ್ರವೇ ಸೋಜಿಗ. ಆಶ್ಚರ್ಯವೆಂದರೆ ಪ್ರತಿಯೊಂದು ಜಾತಿಯ ಸಸ್ಯವೂ ವಿಭಿನ್ನ ರೀತಿಯಲ್ಲಿ ಬೇಟೆಯಾಡುತ್ತವೆ. ಇವುಗಳಿಗೆ ಕೆಲವು ಉದಾಹರಣೆ ಇಲ್ಲಿದೆ.
 
ಇಬ್ಬನಿ ಗಿಡ.

ಈ ಮಾಂಸಾಹಾರಿ ಗಿಡದ ಎಲೆಗಳ ತುಂಬ ತಂತುಗಳು ಚಾಚಿನಿಂತಿರುತ್ತವೆ. ಪ್ರತಿ ತಂತುವಿನ ತುದಿಯಲ್ಲೂ ದ್ರವರೂಪದ ಅಂಟು ಹನಿ ತಾಕಿಕೊಂಡಿರುತ್ತದೆ.  ಇಬ್ಬನಿಯ  ಹನಿಯಂತೆ ಕಾಣುವ ಈ ಜಲದ ಸೆಲೆಯ ಸುತ್ತ ಹಾರಿಬರುವ, ಬಾಯಾರಿದ ಕೀಟಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲೇ ಬಂಧಿಯಾಗಿ ಇಬ್ಬನಿ ಗಿಡಕ್ಕೆ  ಆಹಾರ ವಾಗುತ್ತವೆ.

ಹೂಜಿ ಗಿಡ.
ಈ ಗಿಡದ ಎಲೆಗಳು ನೋಡಲು  ಕೊಳವೆಯಾಕಾರದ ಉದ್ದ ಕತ್ತಿನ ಮುಚ್ಚಳವಿರುವ  ಹೂಜಿಯಂತೆ ಕಾಣುತ್ತವೆ. ಹೂಜಿಯ  ತೆರೆದ ಅಂಚಿನ ಆಸುಪಾಸಿನಿಂದ ಆಕರ್ಶಕ ದೃವ್ಯ ಹೊರಸೂಸುತ್ತದೆ.  ಇದನ್ನು ಸವಿಯಲು ಬರುವ ಕೀಟಗಳು ಹೂಜಿಯಲ್ಲಿ  ಸಿಕ್ಕಿಹಾಕಿಕೊಳ್ಳುತ್ತವೆ. ಹೂಜಿಯಲ್ಲಿ ಜಾರಿ ಬೀಳುವ ಕಪ್ಪೆಗಳನ್ನೂ ಜೀಣರ್ಿಸಿಕೊಳ್ಳುತ್ತದೆ ಈ ಸಸ್ಯ.

ವೀನಸ್ ಫ್ಲೈಟ್ರಾಪ್.

 ಇಬ್ಬಾಗಗೊಂಡ ರಚನೆಯ, ಮಡಿಸಿಕೊಳ್ಳಬಲ್ಲ ವಿನ್ಯಾಸದ ಎಲೆಗಳನ್ನು ಹೊಂದಿದೆ. ಪ್ರತೀ ಎಲೆಯ  ಅಂಚಿನುದ್ದಕ್ಕೂ ಸೂಕ್ಷ್ಮ  ಸಂವೇದಿ ತಂತುಗಳು ಇರುತ್ತವೆ. ಬಲಿಯೊಂದು  ಈ ತಂತುನ್ನು  ಸ್ಪರ್ಶಿಸಿದಾಗ ಸಸ್ಯದಲ್ಲಿ ವಿದ್ಯುತ್ ಆವೇಶ ವಿಸರ್ಜನೆಗೊಂಡು ಕ್ಷಣಾರ್ಧದಲ್ಲಿ ಎಲೆಗಳನ್ನು ಭದ್ರವಾಗಿ ಮಡಿಸಿಕೊಳ್ಳುತ್ತವೆ. ಬಲಿಪ್ರಾಣಿ ಅದರೊಳಗೆ ಬಂಧಿಯಾಗುತ್ತದೆ.

ಗಾಳಿಗುಳ್ಳೆಯ ಗಿಡ.

ನೀರು ಕುಡಿದ ನಿಷ್ಪ್ರಯೋಜಕ ನೆಲದಲ್ಲಿ ಬೆಳೆಯುತ್ತವೆ. ಈ  ಸಸ್ಯಗಳು ಹೀರಿಕೊಳ್ಳುವ ನೀರಿನಿಂದ ನಿರ್ವಾತ ಗುಳ್ಳೆಗಳನ್ನು ಸೃಷ್ಟಿಸುತ್ತವೆ. ಕೀಟಗಳನ್ನು ಈ ಗುಳ್ಳೆಗಳು ತನ್ನೊಳಗೆ ಎಳೆದು ಕೊಳ್ಳುತ್ತವೆ. 
ಮಾಂಸಾಹಾರಿ ಗಿಡಗಳ ವಿವಿಧ ರೀತಿಯ ಬೇಟೆಯಾಡುವ ತಂತ್ರಗಳಿಗೆ ಇವು ನಿದರ್ಶನಗಳಷ್ಟೇ. ಇಂಥಹ ಅನೇಕ ರೋಚಕ ವಿಧಾನಗಳನ್ನು ಈ ಸಸ್ಯಗಳು ಅನುಸರಿಸುತ್ತವೆ.
  

No comments:

Post a Comment