ಜೀವನಯಾನ

Tuesday, May 1, 2012

ಎಂಥವರನ್ನೂ ತೇಲಿಸುವ ಮೃತ ಸಮುದ್ರ


ಇಲ್ಲಿ ಸಮುದ್ರಕ್ಕೂ ಸಾವು ಬಂದಿದೆ. ಲಕ್ಷಾಂತರ ಜಲಚರಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿರುತ್ತದೆ ಸಮುದ್ರ. ಆದರೆ ಇಲ್ಲಿ ಒಂದೇ ಒಂದು ಜೀವಿಯೂ ಇಲ್ಲ. ಬದುಕಲು ಸಾಧ್ಯವೂ ಇಲ್ಲ. ಈ ಸಮುದ್ರ ಸತ್ತು 30 ಲಕ್ಷ ವರ್ಷಗಳಾಗಿದೆ. ಇಂಥ ಸಮುದ್ರವನ್ನು ನೋಡಬೇಕಾದದರೆ ಇಸ್ರೇಲ್ ಮತ್ತು ಜೋರ್ಡನ್ ದೇಶಕ್ಕೆ ಹೋಗಬೇಕು. ಈ ಎರಡು ದೇಶಗನ್ನು ಹಂಚಿ ಹಾಕಿರುವ ಈ ಸಮುದ್ರ ತನ್ನ ಮಟ್ಟಕ್ಕಿಂತಲೂ 400 ಮೀಟರ್ನಷ್ಟು ಕೆಳಗೆ ಇದೆ. 


  • ಹಿಂದಕ್ಕೆ ಸರಿಯುತ್ತಿರುವ ಸಮುದ್ರ
ನಿಜ ಹೇಳಬೇಕೆಂದರೆ ಇದು ಸಮುದ್ರವೇ ಅಲ್ಲ. ಇದೊಂದು ಉಪ್ಪು ನೀರಿನ ಬೃಹತ್ ಸರೋವರ. ಇದು 67 ಕಿ.ಮೀ. ಉದ್ದ ಮತ್ತು 18 ಕಿ.ಮೀ ಅಗಲವಾಗಿದೆ. ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಈ ತಾಣದಲ್ಲಿ ನೀರು ಮುಂದೆ ಹರಿದು ಹೋಗಲು ಅವಕಾಶವೇ ಇಲ್ಲ. ಚಲನೆ ಇಲ್ಲದ ನೀರು ಆವಿಯಾದಂತೆಲ್ಲಾ ಲವಣಾಂಶ ದಟ್ಟವಾಗುತ್ತಾ ಹೋಗುತ್ತದೆ. ಇಲ್ಲಿನ ನೀರು ಮನುಷ್ಯನನ್ನು ತೇಲಿಸುವಷ್ಟು ದಪ್ಪ. ಕೈಯಲ್ಲಿ ಹಿಡಿದರೆ ಕೈಯೆಲ್ಲಾ ಎಣ್ಣೆ ಎಣ್ಣೆ. ಬಾಯಿ ಕತ್ತರಿಸುವಷ್ಟು ಉಪ್ಪು. ಇದರ ನೀರು ಸಾಗರಗಳ ನೀರಗಿಂತ 8.6 ರಷ್ಟು ಹೆಚ್ಚು ಉಪ್ಪಾಗಿದೆ.  ಇಲ್ಲಿ ನೀರು ಇಂಗುವುದಿಲ್ಲ. ಬದಲಾಗಿ ಪ್ರತಿನಿತ್ಯ 7 ಮಿಲಿಯನ್ ಟನ್ನಷ್ಟು ನೀರು ಆವಿಯಾಗುತ್ತದೆ.  ಆದರೆ ಲವಣದ ಅಂಶ ಹಾಗೆಯೇ ಉಳಿದುಕೊಳ್ಳುತ್ತದೆ. ನೀರು ಆವಿಯಾಗುವ ಪ್ರಮಾಣ ಹೆಚ್ಚುತ್ತಿದ್ದು, ವರ್ಷಕ್ಕೆ ನಾಲ್ಕು ಮೀಟರನಷ್ಟು ಸಮುದ್ರ ಹಿಂದಕ್ಕೆ ಸರಿಯುತ್ತಿದೆ.  ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮೃತ ಸಮುದ್ರ ಪೂರ್ಣವಾಗಿ ಬತ್ತಿಹೋಗಿ ಭೂಮಿಯ ಮೇಲಿಂದ ಮಾಯವಾಗುವ ಭೀತಿ ಇದೆ.   
  • ಬಿದ್ದು ಕೊಂಡರೆ ತೇಲಿಸುತ್ತದೆ
ಈ ನೀರಿಲ್ಲಿ ಖನಿಜಾಂಶಗಳು ಹೇರಳವಾಗಿವೆ. ಕ್ಯಾಲ್ಸಿಯಂ, ಐಯೋಡೀನ್, ಪೊಟ್ಯಾಶಿಯಂ, ಸಲೈನ್ ಮುಂತಾದವುಗಳು ಕರಗಿಕೊಂಡಿವೆ. ಈಜಿಪ್ತಿಯನ್ನರು ಈ ಸಮುದ್ರದ ಮಣ್ಣನ್ನು ಮೃತ ದೇಹಗಳನ್ನು ಕೆಡದಂತೆ ಇಡಲು ಬಳಸುತ್ತಿದ್ದರು. ಸತ್ತ ಸಮುದ್ರದಲ್ಲಿ ತೇಲುವುದು, ಸಮುದ್ರದ ಆಳದಿಂದ ತೆಗೆದ ಕಪ್ಪು ಮಣ್ಣಿನ್ನು ಮೈಗೆಲ್ಲಾ ಮೆತ್ತಿಕೊಳ್ಳುವುದರಿಂದ ಮೈಕಾಂತಿ ಹೆಚ್ಚುತ್ತಂತೆ. ಆದರೆ ನೀರಿಗೆ ಇಳಿಯುವಾಗ ಎಚ್ಚರ. ಒಂದು ಸಾರಿ ನೀರಿಗೆ ಇಳಿದರೆ ಮೇಲೆ ಬರಬೇಕು ಅನ್ನಿಸುವುದಿಲ್ಲ. ಈ ನೀರಿನಲ್ಲಿ 20 ನಿಮಿಷಕ್ಕಿಂತ ಹೆಚ್ಚುಹೊತ್ತು ಇರುವುದು ಕೂಡಾ  ಅಪಾಯ. ತೇಲಿಸುವ ಸಮುದ್ರ ದಂಡೆಯಲ್ಲಿ ಕೇವಲ 13 ಅಡಿಯಷು ಆಳವಿದ್ದರೆ ಸ್ವಲ್ಪ ದೂರ ಸಾಗಿದರೂ ಸಾಕು 1320 ಅಡಿಯಷ್ಟು ಆಳವಿದೆ. ಈ  ವೈಶಿಷ್ಟ್ಯದಿಂದಾಗಿ ಮೃತ ಸಮುದ್ರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕಶರ್ಶಿಸುತ್ತದೆ. ಲವಣಾಂಶ ಅಷ್ಟು ದಟ್ಟವಾಗುತ್ತಿರುವುದರಿಂದ ಕೇವಲ ಬಿದ್ದು ಕೊಂಡರೆ ಸಾಕು ಮನುಷ್ಯ ತೇಲುತ್ತಾನೆ. ನೀರಿನಮೇಲೆ ಸರಾಗವಾಗಿ ತೇಲುತ್ತಾ ಕಾಲಕಳೆಯುವುದು ಪ್ರವಾಸಿಗರಿಗೊಂದು ಮೋಜು.
  • ದಡದಲ್ಲಿ ಕಲ್ಲಿನ ಮೂಟೆ
ಮೃತ ಸಮುದ್ರ ಇರುವ ಪ್ರದೇಶ ಒಂದು ಮರುಭೂಮಿ. ಇಲ್ಲಿ ಯಾವಾಗಲೂ ಶುಷ್ಕ ಹವೆ. ಬೇಸಿಗೆಯಲ್ಲಿ ಉಷ್ಣಾಂಶ 34 ರಿಂದ 51 ಡಿಗ್ರಿ ಇರುತ್ತದೆ. ಇಲ್ಲಿ ಮಳೆಯ ಪ್ರಮಾಣ ಅತ್ಯಲ್ಪ. ವರ್ಷಕ್ಕೆ ಸರಾಸರಿ 100 ಮಿಲಿ ಮೀಟರ್ನಷ್ಟು ಮಳೆಯಾದರೆ ಹೆಚ್ಚು. ಹೀಗಾಗಿ ಮೃತ ಸಮುದ್ರಕ್ಕೆ ಸಿಹಿನೀರು ಹರಿದು ಬರುವುದು ತೀರಾವಿರಳ. ಇದರ ಕಠು ಉಪ್ಪುನೀರು ಬಂಡೆಗಳನ್ನು ಕೊರೆದು ದಡದತ್ತ ಸಾಗಿಸುತ್ತದೆ. ಹೀಗಾಗಿ ದಡದ ಸುತ್ತಲೂ ಕಲ್ಲುಗಳ ರಾಶಿಯೇ ಬಿದ್ದಿರುತ್ತದೆ. ಅವುಗಳಿಗೆ ಮೆತ್ತಿಕೊಂಡಿರುವ ಉಪ್ಪು ಬಿಸಿಲಿಗೆ ಮತ್ತಿನಂತೆ ಹೊಳೆಯುತ್ತದೆ.
  • ಪ್ರಕೃತಿ  ಚಿಕಿತ್ಸಾಲಯ
ಇದರ ನೀರಿಗೆ ಔಷಧಿಯ ಗುಣವಿದೆ. ಮಾಲಿನ್ಯವಿಲ್ಲದ  ಶುಭ್ರವಾತಾವರಣ, ಕಡಿಮೆ ಇರುವ ನೇರಳಾತೀತ ಕಿರಣ,  ತಗ್ಗಿನಲ್ಲಿರುವುದರಿಂದ ಅತಿಯಾದ ಗಾಳಿಯ ಒತ್ತಡ ಮಾನವರ  ಕಲವು ವ್ಯಾಧಿಗಳನ್ನು ಶಮನಮಾಡಬಲ್ಲವು. ಮೃತ ಸಮುದ್ರದ ಪರಿಸರದಲ್ಲಿ ದೊಡ್ಡ ಸಂಖ್ಯೆಯ ಪ್ರಕೃತಿ ಚಿಕಿತ್ಸಾಲಯಗಳು ನಿಮರ್ಮಾಣಗೊಳ್ಳುತ್ತಿವೆ. ಉಳಿದಂತೆ ಉಪ್ಪು ಮತ್ತು ಇತರ  ಲವಣಗಳ  ಉತ್ಪಾದನೆ ಮೃತ ಸಮುದ್ರ ಪ್ರದೇಶದ ಮುಖ್ಯ ಉದ್ದಿಮೆ. ಒಂದು ಕಾಲದಲ್ಲಿ ಜನವಸತಿಯೇ ಇಲ್ಲದ ಪ್ರದೇಶ ಇಂದು ಪ್ರವಾಸಿಗರಿಂದ ಗಿಜಿಗುಟ್ಟುತ್ತಿದೆ.

 

No comments:

Post a Comment