ಜೀವನಯಾನ

Sunday, February 2, 2014

ಹೂ ಬಿಟ್ಟು ಸಾವನ್ನಪ್ಪುವ ಬಿದಿರು!

ಶತಮಾನಕ್ಕೊಮ್ಮೆ ಸಂಭವಿಸುವ ವಿದ್ಯಮಾನ

ಬಿದಿರು ಹೂ ಬಿಡುವುದು ತೀರಾ ಅಪರೂಪದ ವಿದ್ಯಮಾನ. ಶತಮಾನದಲ್ಲಿ ಒಮ್ಮೆ ಅಥವಾ ಎರಡುಬಾರಿ ಮಾತ್ರ ಬಿದಿರು ಹೂ ಬಿಟ್ಟ ಸನ್ನಿವೇಶ ನೋಡಲು ಸಿಗುತ್ತದೆ. ಏಕೆಂದರೆ ಬಿದಿರು ಹೂ ಬಿಡುವುದು 40 ರಿಂದ 60 ವರ್ಷಕ್ಕೊಮ್ಮೆ ಮಾತ್ರ! ಆದರೆ ಅದು ಬಿದಿರಿನ ಅಂತ್ಯಕಾಲ. ಹೂ ಬಿಟ್ಟು ಕಾಯಿ ಆದ ಬಳಿಕ ಕಾಡಿನಲ್ಲಿದ್ದ ಬಿದಿರೆಲ್ಲಾ ಯಾವುದೋ ಸಾಂಕ್ರಾಮಿಕ ರೋಗಬಂದಂತೆ ಸತ್ತುಹೋಗುತ್ತದೆ. ಹೀಗಾಗಿಯೇ ಬಿದಿರಕ್ಕಿ  ಬಂದಿದೆ ಅಂದರೆ, ಅದನ್ನು ಬಿದಿರಿನ ಕ್ಷಾಮ ಅಂತಲೇ ಹೇಳಲಾಗುತ್ತದೆ. ಇದೊಂದು ಸಹಜ ನೈಸರ್ಗಿಕ ವಿದ್ಯಮಾನವಾಗಿದ್ದರೂ, ಇಡೀ ಕಾಡು ಕಂಗಾಲಾಗುತ್ತದೆ. ಬಿದಿರು ಅಳಿದರೆ ಅರ್ಧ ಕಾಡಿಗೆ ಕಾಡೇ ಖಾಲಿ ಖಾಲಿ! ನೆಲಕ್ಕೆ ಬಿದ್ದ ಬೀಜ ಮೊಳೆತು ಬೆಳೆಯಲು ಇನ್ನು ಕನಿಷ್ಠ ಹತ್ತಾರು ವರ್ಷಗಳೇ ಬೇಕು. ಅಲ್ಲಿಯವರೆಗೂ ಕಾಡಿನಲ್ಲಿ ಸೂತಕದ ಕಳೆ. 



ಹೂ ಬಿಡುವ ಸಾಂಕ್ರಾಮಿಕ ರೋಗ!

ಬಿದಿರು ಹೂಬಿಟ್ಟು  ಸಾಯುವ ಪ್ರಕ್ರಿಯೆಯಲ್ಲಿ ಮೂರು ಪ್ರಕಾರವನ್ನು ಗುರುತಿಸಬಹುದು. 60ರಿಂದ 130 ವರ್ಷದ ನಡುವಿನ ಅವಧಿಯಲ್ಲಿ ಹೂ ಕಾಣಿಸಿಕೊಂಡರೆ ಅದು ಇಡೀ ಕಾಡನ್ನೂ ವ್ಯಾಪಿಸುತ್ತದೆ. ಸಾಂಕ್ರಾಮಿಕವಾಗಿ  ಪ್ರತಿಯೊಂದು ಗಿಡದಲ್ಲಿಯೂ ಹೂ ಕಾಣಿಸಿಕೊಳ್ಳುತ್ತದೆ. ಹೂವು ಮತ್ತು ಬಿದಿರಕ್ಕಿ (ಬೀಜ)ಯಿಂದಲೇ  ಕಾಡೆಲ್ಲಾ ತುಂಬಿಹೋಗುತ್ತದೆ. ಇದರ ಒತ್ತಡಕ್ಕೆ ಸಂಪೂರ್ಣ ಬಿದಿರಿನ ಕಾಡೇ ನಾಶವಾಗುತ್ತದೆ. ವಿಚಿತ್ರವೆಂದರೆ ಒಂದು ನಿರ್ದಿಷ್ಟ ಪ್ರಭೇದದ ಬಿದಿರಿನಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಈ  ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಏಷ್ಯಾದಲ್ಲಿ ಸಾವನ್ನಪ್ಪಿದ ಬಿದಿರಿನ ಪ್ರಭೇದ ಅಮೆರಿಕ ಅಥವಾ ಆಫ್ರಿಕಾದಲ್ಲಿಯೂ ಅದೇಕಾಲಕ್ಕೆ ಸಾವನ್ನಪ್ಪುತ್ತದೆ. ಇಂತಹ ವಿದ್ಯಮಾನ ಅಪರೂಪದಲ್ಲಿ ಅಪರೂಪಕ್ಕೊಮ್ಮೆ ಸಂಭವಿಸುತ್ತದೆ.
ಇನ್ನೊಂದು ಪ್ರಕ್ರಿಯೆಯಲ್ಲಿ ಹೂ ಬಿಟ್ಟ ಬಳಿಕ ಸಂಪೂರ್ಣ ಕಾಡಿಗೆ ವ್ಯಾಪಿಸದೇ ಒಂದು ಬಿದಿರಿನ ಹಿಂಡು ಅಥವಾ ಜಾತಿ ಮಾತ್ರ ನಾಶಹೊಂದುತ್ತದೆ. ಇದನ್ನು  ವಿರಳವಾಗಿ  ಹೂ ಬಿಡುವ ಪ್ರಕ್ರಿಯೆ ಎನ್ನಲಾಗುತ್ತದೆ. ಇದು ಪ್ರತಿ 10  ವರ್ಷಕ್ಕೊಮ್ಮೆ ನಡೆಯುತ್ತದೆ. ಇನ್ನು ಕೆಲವು ಬಿದಿರು ಗಿಡಗಳು ಪ್ರತಿವರ್ಷವೂ ಹೂ ಬಿಡುತ್ತವೆ. ಆದರೆ ಇದರಿಂದ ಮರಕ್ಕೆ ಯಾವುದೇ ಹಾನಿ ಅಥವಾ ಸಾವು ಸಂಭವಿಸುವುದಿಲ್ಲ.

ಬರಗಾಲದೊಂದಿಗೆ ನಂಟು!
ಬಿದಿರು ಹೂ ಬಿಟ್ಟರೆ ಅದನ್ನು ಬರಗಾಲಕ್ಕೆ ಹೋಲಿಸಲಾಗುತ್ತದೆ. ಉತ್ತರದ ಮಿಜೋರಂ, ಅರುಣಾಚಲ ಪ್ರದೇಶಗಳಲ್ಲಿ ಈ ಕ್ಷಾಮ ಆಗಾಗ ಸಂಭವಿಸುತ್ತಲೇ ಇರುತ್ತದೆ. ಏಕೆಂದರೆ ಮಿಜೋ ಬೆಟ್ಟಗಳ ತುಂಬೆಲ್ಲಾ ಬಿದಿರೇ ತುಂಬಿದೆ. ಇಲ್ಲಿ ಕೇವಲ ಎರಡು ಪ್ರಭೇದಗಳು ಮಾತ್ರ ಇವೆ. ಒಂದು ಪ್ರಭೇವು 30 ವರ್ಷಕ್ಕೊಮ್ಮೆ ಹೂ ಬಿಟ್ಟು ಬೀಜವಾಗುತ್ತದೆ. ಮತ್ತೊಂದು 50 ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಇಲ್ಲಿ 1959ರಲ್ಲಿ ಭೀಕರ ಕ್ಷಾಮ ಕಾಣಿಸಿಕೊಂಡಿತ್ತು. ಬಳಿಕ 2002ರಲ್ಲಿ ಇಲ್ಲಿ ಬಿದಿರು ಕ್ಷಾಮ ಉಂಟಾಗಿತ್ತು. ಬಿದಿರು ಹೊಲದ ಇಂತಹುದೇ ಕಾಡು ಸುಗ್ಗಿ 45 ವರ್ಷಗಳ ಹಿಂದೆ ಕನರ್ನಾಟದಲ್ಲಿಯೂ ಆದ ಉದಾಹರಣೆಗಳಿವೆ. ಜಪಾನ್ ಮತ್ತು ಮ್ಯಾನ್ಮಾರ್ಗಳಂತ ಪೂರ್ವ ರಾಷ್ಟ್ರಗಳಲ್ಲಿ ಈ ಕ್ಷಾಮ ಕಾಣಿಸುತ್ತಿರುತ್ತವೆ. 


ಅಪಾಯದ ಮುನ್ಸೂಚನೆ?
ಹಿಂದೆಲ್ಲಾ ಕಾಡಿನಲ್ಲಿ ಬಿದಿರು ಹೂವರಳಿಸಿದಂತೆ ಇತ್ತ ಕಾಡಿನ ಜನ ವಿವಿಧ ರೋಗರುಜಿನೆಗಳಿಗೆ ತುತ್ತಾಗುತ್ತಿದ್ದರು. ಹೀಗಾಗಿ ಬಿದಿರು ಹೂ ಭವಿಷ್ಯದ ಅಪಾಯದ ಸಂಕೇತ ಎನ್ನುವ ನಂಬಿಕೆ. ಹೀಗೆ ಹೂ ಬಿಟ್ಟಾಗ ಕ್ವಿಂಟಾಲ್ಗಟ್ಟಲೆ ಬೀಜ ಉದುರುತ್ತದೆ. ಬಿದರಕ್ಕಿ ತಿಂದು ಇಲಿಗಳು ಬೆಳೆಯುತ್ತವೆ, ನಂತರ ಪ್ಲೇಗ್ ಬರುತ್ತಿದ್ದ ಕತೆಗಳನ್ನು ನಾವು ಕೇಳಿದ್ದೇವೆ. ರೋಗದಿಂದ ಹಳ್ಳಿಗಳೇ ಖಾಲಿಯಾಗುತ್ತಿದ್ದವು. ಅಪಾರ ಸಾವುನೋವುಗಳು ಉಂಟಾಗುತ್ತಿದ್ದವು. ಆದರೆ, ಬಿದಿರು ಹೂವರಳಿಸಿದ್ದಕ್ಕೆ ಬರಗಾಲ ಬಂದ ಅಧಿಕೃತ ದಾಖಲೆಗಳು ತೀರಾ ಅಪರೂಪ. 1963ರಲ್ಲಿ ಬಿದಿರು ಹೂವರಳಿದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಅನಾಹುತವಾಗಿತ್ತು. ಹೀಗಾಗಿ ಬಿದಿರು ಹೂವರಳುವ  ಪೂರ್ವದಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿದಿರನ್ನು ಕಡಿಯಲಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.


 

No comments:

Post a Comment