ಜೀವನಯಾನ

Wednesday, February 26, 2014

ಹಾರುವ ಹಾವು!

ನೆಲದ ಮೇಲೆ ತೆವಳುತ್ತಾ ಸಾಗುವ ಹಾವುಗಳು ಎಂದಾದರೂ ಹಾರುವುದನ್ನು ನೋಡಿದ್ದೀರಾ? ನಿಜ, ಹಾವುಗಳಿಗೆ ಹಾರಲು ಬರುವುದಿಲ್ಲ. ಆದರೆ, ಪೃಕೃತಿ ಹಾವುಗಳಿಗೆ ಹಾರುವುದನ್ನೂ ಕಲಿಸಿದೆ! ಕ್ರಿಸೋಪೆಲಿ ಎನ್ನುವ ಹಾವುಗಳಿಗೆ ಗಾಳಿಯಲ್ಲಿ ಹಾರುವ ಸಾಮಥ್ರ್ಯವಿದೆ. ಇವು ಹಾರುವ ಹಾವುಗಳು ಎಂದೇ ಗುರುತಿಸಲ್ಪಟ್ಟಿವೆ. ಇವು ಮರದಿಂದ ಮರಕ್ಕೆ ಹಾರಬಲ್ಲವು. ಇದನ್ನು ಮರದ ಹಾವು ಎಂತಲೂ ಕರೆಯುತ್ತಾರೆ. ಮರದ ಎತ್ತರದ ಕೊಂಬೆಯನ್ನು ಏರಿ ಅದರ ತುದಿಯಿಂದ ಇನ್ನೊಂದು ಮರಕ್ಕೆ ಜಿಗಿಯುತ್ತವೆ! 

 


  • ಗುಣ ಲಕ್ಷಣಗಳು:

ಕ್ರಿಸೋಪೆಲಿ ಇತರ ಹಾವುಗಳಂತೆ ಇರುತ್ತವೆ. ಹಾರುವ ಹಾವುಗಳು ಅಷ್ಟೇನು ಉದ್ದವಿರುವುದಿಲ್ಲ. ಇವುಗಳ ಉದ್ದ ನಾಲ್ಕು ಅಡಿ. ಉದ್ದನೆಯ ಬಾಲವನ್ನು ಹೊಂದಿರುತ್ತದೆ. ಮೈ ಮೇಲೆ ಕಪ್ಪು ಮತ್ತು ಹಳದಿ ಪಟ್ಟಿಗಳಿರುತ್ತವೆ. ಇಲಿ, ಹಲ್ಲಿ ಕಪ್ಪೆ, ಪಕ್ಷಿಗಳು, ಬಾವಲಿಗಳು ಇದರ ಪ್ರಮುಖ ಆಹಾರ. ಈ ಹಾವುಗಳಿಗೆ ವಿಷ ಇರುವುದಿಲ್ಲ. ಹೀಗಾಗಿ ಮನುಷ್ಯರಿಗೆ ಇವುಗಳಿಂದ ಯಾವುದೇ ಅಪಾಯವಿಲ್ಲ.  ಕ್ರಿಸೋಪೆಲಿ ಗುಂಪಿನ ಹಾವುಗಳಲ್ಲಿ 5 ರೀತಿಯ ಪ್ರಭೇದಗಳನ್ನು  ಗುರುತಿಸಲಾಗಿದ್ದು, ಅವುಗಳಲ್ಲಿ ಪ್ಯಾರಡೈಸಿ ಟ್ರೀ ಸ್ನೇಕ್, ಗೋಲ್ಡನ್ ಟ್ರೀ ಸ್ನೇಕ್ ಪ್ರಮುಖವಾದವುಗಳು.  ಈ ಹಾವುಗಳು ಆಗ್ನೇಯ ಏಷ್ಯಾದ ದೇಶಗಳಾದ ಇಂಡೋನೇಷ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ ಮತ್ತು ದಕ್ಷಿಣ ಥೈಲ್ಯಾಂಡ್ನಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅಲ್ಲದೆ ಭಾರತದಲ್ಲಿಯೂ ಕಂಡುಬರುತ್ತದೆ.
  • ಹಾರುವುದು ಕಲಿತಿದ್ದು ಏಕೆ?

ದಟ್ಟವಾದ ಕಾಡುಗಳಲ್ಲಿ ನೆಲದ ಮೇಲೆ ವೇಗವಾಗಿ ಓಡಾಡಲು ಹಾವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲದೆ,  ಬೇಟೆಗಾಗಿ ಹೆಚ್ಚಾಗಿ ಮರವನ್ನೇ ಆಶ್ರಯಿಸ ಬೇಕಾಗುತ್ತದೆ. ಹಿಗಾಗಿ ಎಷ್ಟೇ ಎತ್ತರದ ಮರವಾದರೂ ಸರಾಗವಾಗಿ ಏರಿ, ತುದಿಯನ್ನು ತಲುಪಬಲ್ಲದು. ಮರದಲ್ಲಿರುವ ವೈರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ಹಲ್ಲಿ, ಬಾವಲಿ, ಪಕ್ಷಿಗಳನ್ನು ಹಿಡಿಯುವ ಸಲುವಾಗಿ ಹಾರುವ ತಂತ್ರಗಾರಿಕೆಯನ್ನು ಇವು ರೂಢಿಸಿಕೊಂಡಿವೆ.
  • ಏನು ಲಾಭ? ಈ ಕುರಿತು ವಿಜ್ಞಾನಿಗಳು ಇನ್ನೂ ಅಧ್ಯಯನ ನಡೆಸುತ್ತಲೇ ಇದ್ದಾರೆ. ಹಾರುವುದರಿಂದ ಈ ಹಾವಿಗೆ ಎರಡು ರೀತಿಯಿಂದ ಲಾಭವಿದೆ. ನೆಲದ ಮೇಲೆ ತೆವಳುವುದರಿಂದ ನಷ್ಟವಾಗುವ ಶಕ್ತಿಯನ್ನು ಉಳಿಸಬಹುದು. ಜತೆಗೆ ಭೂಮಿಯ ಮೇಲಿನ ವೈರಿಗಳ ಕಾಟದಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು.
  • ಹಾರಾಟ ಹೇಗಿರುತ್ತೆ?
ಮೊದಲು ಮರದ ತುದಿ ಕೊಂಬೆಯನ್ನು  ತಲುಪುತ್ತದೆ. ಕೊಂಬೆಗೆ ಬಾಲದ ತುದಿಯನ್ನು ಸುತ್ತಿಕೊಂಡು ಇನ್ನೊಂದು ಮರಕ್ಕೆ ಅಥವಾ ನೆಲದತ್ತ ಜಿಗಿಯುತ್ತದೆ. ರೆಕ್ಕೆ ಅಥವಾ ಇತರ ಯಾವುದೇ ಅವಯವಗಳು ಇಲ್ಲದ ಕಾರಣ ಹಕ್ಕಿಯಂತೆ ಮೇಲ್ಮುಖವಾಗಿ ಹಾರಲು ಬರುವುದಿಲ್ಲ. ಹಾರಲು ಅನುಕೂಲವಾಗುವಂತೆ ತನ್ನ ದೇಹದ ಆಕಾರವನ್ನು ಪರಿವರ್ತಿಸಿಕೊಳ್ಳುತ್ತದೆ. ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಒಮ್ಮಲೇ ಜಿಗಿಯುತ್ತದೆ. ಹಾರಿದ ಬಳಿಕ ತಲೆಯಿಂದ ಬಾಲದವರೆಗೆ ಮೈ ಮೂಳೆಗಳನ್ನು ಚಪ್ಪಟೆ (ಅಗಲ) ಗೊಳಿಸಿಕೊಳ್ಳುತ್ತದೆ. ಹೀಗಾಗಿ ಗಾಳಿಯಲ್ಲಿ ಜಾರಲು ಅನುಕೂಲ. ಹಾರುವಾಗ ಇವುಗಳ ದೇಹ ನೇರವಾಗಿ ಇರುವುದಿಲ್ಲ. ಬದಲಿಗೆ  ಅರ್ಧ  ವೃತ್ತಾಕಾರದಲ್ಲಿ ದೇಹವನ್ನು ಬಾಗಿಸಿ ತನಗೆ ಬೇಕಾದ ದಿಕ್ಕಿಗೆ ಸಾಗುತ್ತದೆ. ಬಾಲದ ಮೂಲಕ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುತ್ತದೆ. ತಾನು ಸಾಗಬೇಕಾದ ದಿಕ್ಕಿನೆಡೆಗೆ ತಲೆಯನ್ನು ನೆಟ್ಟಿರುತ್ತದೆ. ಒಂದು ಸೆಕೆಂಡಿಗೆ 26ರಿಂದ 33 ಅಡಿ ದೂರವನ್ನು ಇವು ಕ್ರಮಮಿಸಬಲ್ಲವು. ಕೆಲವೊಂದು ಹಾವುಗಳು 100 ಮೀಟರ್ ದೂರದವರೆಗೆ ಸಾಗಬಲ್ಲವು. ಸಾಮಾನ್ಯವಾಗಿ ಇವು ಮರದಿಂದ ಮರಕ್ಕೆ ಜಿಗಿಯುತ್ತವೆ. ಮರಗಳು ಇಲ್ಲದಿದ್ದಾಗ ನೆಲಕ್ಕೆ ಬೀಳುತ್ತವೆ. ಗಾಳಿಯಲ್ಲಿ ಪ್ಯಾರಾಚ್ಯೂಟ್ನಂತೆ ಇಳಿಯುವ ಇವು, ನೆಲಕ್ಕೆ ರಪ್ಪೆನೆ ಅಪ್ಪಳಿಸುತ್ತವೆ. ಇಲ್ಲವೇ ಮರಕ್ಕೆ ತನ್ನ ಮೈಯನ್ನು ಸುತ್ತಿಕೊಂಡು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.

No comments:

Post a Comment