ಜೀವನಯಾನ

Tuesday, November 1, 2016

ಲೇಹ್- ಮನಾಲಿ ಹೆದ್ದಾರಿ

  • ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ

ಹೆದ್ದಾರಿ ಅಂತಿಂಥ ಹೆದ್ದಾರಿಯಲ್ಲ. ಸ್ವಲ್ಪ ಆಯ ತಪ್ಪಿದರೂ ಸಾವು ಗ್ಯಾರೆಂಟಿ. ಪ್ರಕೃತಿ ಸೌಂದರ್ಯದ ಜತೆ ಎದೆ ನಡುಗುವ ಕಿರಿದಾದ ಕಣಿವೆಗಳು, ಬೆಟ್ಟ ಕೊರೆದು ನಿರ್ಮಿಸಿದ ರಸ್ತೆಗಳು, ಏರು ತಗ್ಗು, ಅಪಾಯಕಾರಿ ಸೇತುವೆಗಳನ್ನು ದಾಟಿದರಷ್ಟೇ ಮುಂದೆ ಹೋಗಲು ಸಾಧ್ಯ. ಈ ಕಾರಣಕ್ಕೆ ಲೇಹ್- ಮನಾಲಿ ಹೆದ್ದಾರಿ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಸ್ತೆ ಎನಿಸಿಕೊಂಡಿದೆ.

ಹಿಮಾಲಯ ಶಿಖರಗಳ ಸಂದುಗೊಂದಿನಲ್ಲಿ ಸಾಗುವ ಈ ಹೆದ್ದಾರಿ ದೇಶದ ಅತ್ಯಂತ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ. 479 ಕಿ.ಮೀ. ದೂರ ಇರುವ ಈ ಹೆದ್ದಾರಿಯನ್ನು ಭಾರತೀಯ ಸೇನೆ ನಿರ್ಮಿಸಿ ನಿರ್ವಹಣೆ ಮಾಡುತ್ತಿದೆ.
ಜೂನ್ ಮತ್ತು ಮಧ್ಯ ಸೆಪ್ಟೆಂಬರ್ವರಗೆನ ನಾಲ್ಕೂವರೆ ತಿಂಗಳು ಮಾತ್ರ ಈ ಹೆದ್ದಾರಿ ಸಂಚಾರಕ್ಕೆ ತೆರೆದುಕೊಳ್ಳುತ್ತದೆ. ಉಳಿದ ಸಂದರ್ಭದಲ್ಲಿ ಇಲ್ಲಿ ವಾಹನ ಸಂಚಾರವೇ ಇರುವುದಿಲ್ಲ. ಅಕ್ಟೋಬರ್ನಲ್ಲಿ ಇಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುವುದರಿಂದ ರಸ್ತೆ ಹಿಮದಲ್ಲಿ ಮುಚ್ಚಿಹೋಗುತ್ತದೆ. ಕೆಲವೊಮ್ಮೆ 40 ಅಡಿಯಷ್ಟು ಹಿಮ ಆವರಿಸುತ್ತದೆ. ಅಲ್ಲದೆ, ರಸ್ತೆಯ ಮೇಲೆ ಹಿಮ ಬಿದ್ದಿರುವುದರಿಂದ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಕ್ಷಣ ಕ್ಷಣಕ್ಕೂ ಇಲ್ಲಿನ ವಾತಾವರಣ ಬದಲಾಗುತ್ತಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಮುನ್ನು ಹತ್ತು ಬಾರಿ ಯೋಚಿಸಬೇಕು. ಹೆಚ್ಚುವರಿಯಾಗಿ ಪ್ರೆಟ್ರೋಲ್ ಅಥವಾ ಡೀಸೆಲ್ ಒಯ್ಯದಿದ್ದರೆ ಮುಂದೆ ಸಂಚರಿಸಲು ಆಗದೇ ಹಿಂತಿರುಗಲೂ ಆಗದೆ ಪೇಚಿಗೆ ಸಿಲುಕಬೇಕಾಗುತ್ತದೆ.

ಪ್ರಯಾಣ ತುಂಬಾ ನಿಧಾನ:
ಜಮ್ಮು- ಕಾಶ್ಮೀರದ ಲಡಾಖ್ನ  ಲೇಹ್ನಿಂದ ಹಿಮಾಚಲ ಪ್ರದೇಶದ ಮನಾಲಿಯನ್ನು ಈ ಹೆದ್ದಾರಿ ಸಂಪರ್ಕಿಸುತ್ತದೆ. ಈ ಹೆದ್ದಾರಿಯ ಮಧ್ಯೆ ಬರುವ ಟಗ್ಲಾಂಗ್ ಲಾ ಮೌಂಟೇನ್ ಪಾಸ್ 17,480 ಎತ್ತದಲ್ಲಿದೆ. ಚೀನಾ ಮತ್ತು ಪಾಕಿಸ್ತಾನದ ಲಡಾಖ್ ಮೂಲಕ ಈ ಹೆದ್ದಾರಿ ಹಾದು ಹೋಗುವುದರಿಂದ ಭಾರತದ ಮಟ್ಟಿಗೆ ರಾಜತಾಂತ್ರಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಇಲ್ಲಿ ವಾಹನ ಸಂಚಾರ ಎಷ್ಟು ನಿಧಾನವೆಂದರೆ ಜೀಪಿನಲ್ಲಾದರೆ ಮನಾಲಿಯಿಂದ ಲೇಹ್ಗೆ ಪೂರ್ತಿ ಒಂದು ದಿನದ ಬೇಕಾಗುತ್ತದೆ. ಬಸ್ನಲ್ಲಿ ಪ್ರಯಾಣಿಸಿದರೆ ಎರಡು ದಿನಗಳಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಹಿಮಾಲಯದ ಹತ್ತಿರ ದರ್ಶನ:
ಈ ಹೆದ್ದಾರಿ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸಲು ಇಷ್ಟ ಪಡುತ್ತಾರೆ. ಹಿಮಾಲಯದ ಗಿರಿಶಿಖರಗಳನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಇರುವುದು ಈ ಹೆದ್ದಾರಿ ಮೂಲಕ ಮಾತ್ರ. ಇಲ್ಲಿ ಕಾರು ಜೀಪುಗಳು ಅಷ್ಟೇ ಅಲ್ಲ, ಸರಕುಗಳನ್ನು ತುಂಬಿದ ಭಾರೀ ತೂಕದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಿರಿಸುತ್ತವೆ. ಮಳೆ ಬಂದರಂತೂ ರಸ್ತೆಯಲ್ಲಿ ಓಡಾಡುವುದೇ ದುಸ್ತರ. ಕೆಸರುಗದ್ದೆಯಂತಾಗಿ ಲಾರಿ ಚಕ್ರಗಳು ಹೂತು ಹೋಗುತ್ತವೆ. ನದಿ ತೊರೆಗಳು ರಸ್ತೆಯಲ್ಲೇ ಹರಿಯುತ್ತಿರುತ್ತವೆ.
ಈ ಹೆದ್ದಾರಿ ಸಾವಿರಾರು ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯೂ ಉಂಟಾಗಬಹುದು. ಸಿರ್ ಭೂಮ್ ಚೂಮ್ ಎಂಬಲ್ಲಿ ಸಲ್ಪಮಟ್ಟಿನ ಸಮತಟ್ಟಾದ ಪ್ರದೇಶವಿದ್ದು, ರಾತ್ರಿಯ ವೇಳೆ ಟೆಂಟ್ ಹಾಕಿಕೊಂಡು ವಿಶ್ರಾಂತಿ ಪಡೆದು ಮರುದಿನ ಪ್ರಾಣ ಮುಂದುವರಿಸಬಹುದು.

No comments:

Post a Comment