ಜೀವನಯಾನ

Saturday, November 12, 2016

ಇಳಿಜಾರಿನಲ್ಲಿದ್ದರೂ ಉರುಳಲ್ಲ ಈ ಬೃಹತ್ ಬಂಡೆ

ಬೃಹದಾಕಾರದ ಬಂಡೆಯ ಮುಂದೆ ನಿಂತುಕೊಳ್ಳುವುದಕ್ಕೆ ಎಂಥವರಿಗೂ ಭಯವಾಗುತ್ತದೆ. ಅದೇನಾದರೂ ಉರುಳಿದರೆ ಎಂಬ ಭಯ. ಆದರೆ, ಇಲ್ಲೊಂದು ಕಲ್ಲು ಬಂಡೆ ಇಳಿಜಾರಿನಲ್ಲಿ ಅಲುಗಾಡದೇ ನಿಂತುಕೊಂಡಿದೆ! ಅದೂ ಅಂತಿಂಥ ಬಂಡೆಯಲ್ಲ. 20 ಅಡಿ ಎತ್ತರ ಮತ್ತು 5 ಮೀಟರ್ ಅಗಲವಾಗಿರುವ ಬೃಹತ್ ಬಂಡೆ. ಈ ಬಂಡೆ ಇಳಿಜಾರಿನಲ್ಲಿಯೂ ನಿಂತಿರುವುದು ಹೇಗೆ ಎನ್ನುವುದು ಇಂದಿಗೂ ನಿಗೂಢ. 
 

ಶ್ರೀಕೃಷ್ಣನ ಬೆಣ್ಣೆಯ ಉಂಡೆ:
ಈ ಬಂಡೆ ಇರುವುದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹಾಬಲಿಪುರಂನಲ್ಲಿ. ಇಲ್ಲಿ 250 ಟನ್ ತೂಕದ ಬೃಹತ್ ಬಂಡೆಯೊಂದು ಕದಲದೇ ಇಳಿಜಾರಿನಲ್ಲಿ ನಿಂತುಕೊಂಡಿದೆ. ಅದೂ 1200 ವರ್ಷಗಳಿಂದಲೂ ಅಲ್ಲಿಯೇ ಇದೆ ಎಂದು ಹೇಳಲಾಗಿದೆ. ಇಷ್ಟೊಂದು ಸುದೀರ್ಘ ವರ್ಷಗಳಿಂದ ಬಂಡೆ ಎಂತಹ ಮಳೆ, ಗಾಳಿಗೂ ಜಗ್ಗದೇ ಇರುವುದಕ್ಕೆ ವೈಜ್ಞಾನಿಕವಾಗಿಯೂ ಕಾರಣ ಸಿಕ್ಕಿಲ್ಲ. ಈ ಬಂಡೆಗೆ ತಮಿಳಿನ ಮೂಲ ಹೆಸರು "ವಾಣಿರೈ ಕಲ್". ಅಂದರೆ ಆಕಾಶ ದೇವತೆಯ ಬಂಡೆ ಎಂದು ಅರ್ಥವಿದೆ.

ಇದೊಂದು ನೈಸರ್ಗಿಕ ರಚನೆಯೇ?
ಈ ಬೃಹತ್ ಬಂಡೆ ನೋಡಲು ಗೋಲಾಕಾರದಲ್ಲಿದ್ದು, ತಳದಲ್ಲಿರುವ ಸ್ಪಲ್ಪವೇ ಸ್ವಲ್ಪ ಜಾಗದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಈ ಬಂಡೆ ಕೃಷ್ಣನ ಬೆಣ್ಣೆಯ ಉಂಡೆ ಎಂದೇ ಪ್ರಖ್ಯಾತಿಗಳಿಸಿದೆ. ಹಿಂದು ಪುರಾಣದಲ್ಲಿ ಇದಕ್ಕೊಂದು ಕಥೆಯೇ ಇದೆ. ಕೆಲವರು ಹೇಳುವ ಪ್ರಕಾರ ಇದೊಂದು ನೈಸರ್ಗಿಕ ರಚನೆ. ಆದರೆ, ಎಷ್ಟೇ ರಭಸದ ಮಳೆ, ಗಾಳಿ, ಪ್ರವಾಹ ಬಂದರೂ ಭೂ ರಚನೆ ಬಂಡೆಯ ರೂಪದಲ್ಲಿರುವುದಕ್ಕೆ  ಸಾಧ್ಯವೇ ಇಲ್ಲ. ಹಾಗೆ ಆಗಿದ್ದೇ ಆದರೆ, ಅಕ್ಕ ಪಕ್ಕದಲ್ಲಿಯೂ ಇದೇ ರೀತಿಯ ಬಂಡೆಗಳು ಇರಬೇಕಾಗಿತ್ತು. ಆದರೆ,  ಸುತ್ತಲೆಲ್ಲಾ ಬೋಳಾದ ಗುಡ್ಡಗಳಿವೆ. ಇದು ನೈಸರ್ಗಿಕ ರಚನೆಯಲ್ಲ ಬಂಡೆಯನ್ನು ಯಾರೋ ಅಲ್ಲಿ ತಂದು ನಿಲ್ಲಿಸಿದ್ದಾರೆ ಎಂದು ಭಾವಿಸುವುದಾದರೆ, 250 ಟನ್ ಭಾರದ ಬಂಡೆಯನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ. ಶಕ್ತಿಶಾಲಿ ಆಧುನಿಕ ಕ್ರೇನ್ಗಳಿಂದ ಮಾತ್ರ ಬಂಡೆಗಳನ್ನು ತಳ್ಳಬಹುದು.

ಕೇವಲ 4 ಅಡಿಯ ಮೇಲೆ ನಿಂತಿದೆ
ಇನ್ನು ಈ ಬಂಡೆ ಕೇವಲ 4 ಅಡಿ ಜಾಗದಲ್ಲಿ ನಿಂತುಕೊಂಡಿದೆ. ಅದೇ ಸಮತಟ್ಟಾದ ನೆಲದ ಮೇಲೆ ಬಂಡೆ ನಿಂತಿದ್ದರೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ, ಬಂಡೆ ಇರುವುದು ಇಳಿಜಾರಿರುವ ಗುಡ್ಡದ ಮೇಲೆ. ಇಂದಿನ ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನದಿಂದಲೂ ಅಷ್ಟೊಂದು ಗಾತ್ರದ ಬಂಡೆಯನ್ನು 4 ಪಾಯದ ಮೇಲೆ ನಿಲ್ಲಿಸುವುದು ಅಸಾಧ್ಯ.  ಒಮ್ಮೆ  ಊಹಿಸಿಕೊಳ್ಳಿ: ಆ ಜಾಗದಲ್ಲಿ ಚಿಕ್ಕದೊಂದು ಚಂಡು ಇಟ್ಟರೂ ವೇಗವಾಗಿ ಉರುಳಿ ಹೋಗುತ್ತದೆ. ಇನ್ನು 250 ಟನ್ ಭಾರದ ಬಂಡೆಯನ್ನು ಇಟ್ಟರೆ ಉರುಳಿ ಹೋಗದೇ ಇರಲು ಹೇಗೆ ಸಾಧ್ಯ ಎಂದು.

ಏಳು ಆನೆಗಳು ಎಳೆದರೂ ಉರುಳಲಿಲ್ಲ!
1908ರಲ್ಲಿ ಮದ್ರಾಸ್ ಗವರ್ನರ್ ಆರ್ಥರ್ ಲಾವ್ಲಿ, ಈ ಬಂಡೆ ಹೀಗೆಯ ಇದ್ದರೆ  ಜನರಿಗೆ ಅಪಾಯ ಎಂಬುದನ್ನು ಅರಿತು  ಅದನ್ನು ಉರುಳಿಸಲು ಮುಂದಾಗಿದ್ದರು. ಅದಕ್ಕಾಗಿ  ಏಳು ಆನೆಗಳನ್ನು ಬಂಡೆಗೆ ಕಟ್ಟಿ  ಎಳೆಸುವ ಯತ್ನ  ಮಾಡಲಾಯಿತು.  ಆದರೆ, ಬಂಡೆ ಒಂದಿಚೂ ಕದಲಲಿಲ್ಲ. ಕೊನೆಗೆ ಗವರ್ನರ್ ಬಂಡೆಯನ್ನು  ಉರುಳಿಸುವ ಪ್ರಯತ್ನವನ್ನು ಕೈಬಿಡಬೇಕಾಯಿತು. ಪಲ್ಲವ ದೊರೆ ನರಸಿಂಹವರ್ವನ್ ಬಂಡೆಯನ್ನು ಉರುಳಿಸಲು ಯತ್ನಿಸಿದ್ದ. ಹೀಗಾಗಿ ಬಂಡೆ ಪಲ್ಲವರ  ಕಾಲ (7ನೇ ಶತಮಾನ)ಕ್ಕಿಂತಲೂ ಪೂರ್ವದಿಂದಲೂ ಅಲ್ಲಿಯೇ ಇದೆ. ಆದರೆ, ಆ ಬಂಡೆ ಅಲ್ಲಿ ಬಂದಿದ್ದು ಹೇಗೆ?  ಅದನ್ನು ಯಾರಾದರೂ ತಂದಿಟ್ಟಿದ್ದಾರೆಯೇ? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಅದೇನೇ ಇರಲಿ ಮಹಾಬಲಿಪುರಂಗೆ ಭೇಟಿ ನೀಡುವ ಪ್ರವಾಸಿಗರು ಈ ಬಂಡೆಯನ್ನು ನೋಡಲು ಮರೆಯುವುದಿಲ್ಲ. ಅದರ ಕೆಳಗಡೆ ನಿಂತು ಫೋಟೋ ತೆಗೆಸಿಕೊಂಡು ಆನಂದ ಅನುಭವಿಸುತ್ತಾರೆ.  

No comments:

Post a Comment