ಜೀವನಯಾನ

Friday, November 11, 2016

ವಿಶ್ವದ ಅತಿ ಎತ್ತರದ ಏಂಜಲ್ ಜಲಪಾತ

ನೀವೆಲ್ಲಾ ಜೋಗ ಜಲಪಾತವನ್ನು ನೋಡಿರುತ್ತೀರಾ ಅಥವಾ ಅದರ ಬಗ್ಗೆ ಕೇಳಿರುತ್ತೀರಾ. ಆದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರವಿರುವ ಏಂಜಲ್ ಜಲಪಾತದ ಬಗ್ಗೆ ಕೇಳಿದ್ದೀರಾ? ಅದು ಎಷ್ಟು ಎತ್ತರವಿದೆಯೆಂದರೆ, ಜಲಪಾತದ ತುದಿಯಿಂದ ಭೂಮಿಯ ಮೇಲೆ ಬೀಳುವ ಮುನ್ನವೇ ಹೆಚ್ಚಿನ ಪ್ರಮಾಣದ ನೀರು ಆವಿಯಾಗಿ ಹೋಗುತ್ತದೆ. ದಕ್ಷಿಣ ಅಮೆರಿಕ ಖಂಡದ ತುತ್ತತುದಿಯಲ್ಲಿರುವ ವಿನಿಜುವೆಲಾದಲ್ಲಿ ಈ ರಮಣೀಯ ಜಲಪಾತವಿದೆ.
 

ಜೋಗಕ್ಕಿಂತ ನಾಲ್ಕುಪಟ್ಟು ಎತ್ತರ:
ಏಂಜಲ್ ಜಲಪಾತ ಒಟ್ಟು 979 ಮೀ.(3,212 ಅಡಿ) ಎತ್ತರವಿದೆ. ಸುಮಾರು 807 (2,648 ಅಡಿ)ಯಿಂದ ನೀರು ಧುಮ್ಮಿಕ್ಕುತ್ತದೆ. ಕನೈಮ ರಾಷ್ಟ್ರೀಯ ಉದ್ಯಾನದ ಆಯನ್-ಟೆಪು  ಪರ್ವತದ ತುದಿಯಿಂದ ಬೀಳುತ್ತದೆ. ಗೌಜಾ ನದಿ ಜಲಪಾತಕ್ಕೆ ನೀರಿನ ಮೂಲ. ಜಲಪಾತದ ನೀರು ಕೆರಪ್ ನದಿಗೆ ಪೂರೈಕೆಯಾಗುತ್ತದೆ. ಜಲಪಾತವು ತಳದಲ್ಲಿ 150 ಮೀಟರ್ ಅಗಲವಾಗಿದೆ. ಪ್ರಮುಖ ಜಲಪಾತದ ತಳದಲ್ಲಿ ಚಿಕ್ಕದಾದ ಇನ್ನೆರಡು ಜಲಪಾತಗಳಿವೆ. ಜೋಗ ಜಲಪಾತವನ್ನು ಹೋಲಿಕೆ ಮಾಡುವುದಾದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಏಂಜಲ್ ಜಲಪಾತದ ನೀರಿನ ಭೋರ್ಗರೆತ ಯಾವಮಟ್ಟಿಗೆ ಇದೆ ಅಂದರೆ, 1 ಕಿ.ಮೀ. ದೂರದ ವರೆಗೂ ಪ್ರವಾಸಿಗರು ನೀರಿನ ತುಂತುರು ಹನಿಗಳ ಸ್ಪರ್ಶವನ್ನು ಅನುಭವಿಸಬಹುದು.  ಆಫ್ರಿಕಾದ ವಿಕ್ಟೋರಿಯಾ ಜಲಪಾತ, ಉತ್ತರ ಅಮೆರಿಕದ ನಯಾಗರ ಫಾಲ್ಸ್, ದಕ್ಷಿಣ ಅಮೆರಿದ ಇಗುವಾಜು ಫಾಲ್ಸ್ ಬಳಿಕ ಜಗತ್ತಿ ಅತ್ಯಂತ ಸುಂದರ ಜಲಪಾತ ಎಂಬ ಹೆಗ್ಗಳಿಕೆಗೆ ಏಂಜಲ್ ಫಾಲ್ಸ್ ಪಾತ್ರವಾಗಿದೆ.

ಹೆಸರು ಬಂದಿದ್ದು ಹೇಗೆ?
ಸ್ಥಳೀಯ ಜನರು ಈ ಜಲಪಾತವನ್ನು ಕೆರೆಪಾಕುಪೈ ಎಂದು ಹೆಸರಿಸುತ್ತಾರೆ. 1937ರಲ್ಲಿ ಅಮೆರಿಕದ ವಿಮಾನ ಚಾಲಕ ಜಿಮ್ಮಿ ಎಂಜಲ್ ಎಂಬಾತ  ಆಯನ್-ಟೆಪು  ಪರ್ವತದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಆತನ ವಿಮಾನ ಪತನಗೊಂಡಿತ್ತು. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸದ ವೇಳೆ ಪರ್ವತದ ತುದಿಯಲ್ಲಿ ಜಲಪಾತ ಇರುವುದನ್ನು ಆತ ಪತ್ತೆ  ಮಾಡಿದ್ದ. ಅಂದಿನಿಂದ ಏಂಜಲ್ ಜಲಪಾತ ಅಂತಲೇ ಪ್ರಸಿದ್ಧಿ ಪಡೆದಿದೆ. ಕನೈಮ ರಾಷ್ಟ್ರೀಯ ಉದ್ಯಾನದಲ್ಲಿರುವ ಮ್ಯೂಸಿಯಂನಲ್ಲಿ ವಿಮಾನವನ್ನು ಪ್ರದರ್ಶನಕ್ಕೆ ಇಡಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಜಲಪಾತ ಸ್ಥಾನಪಡೆದಿದೆ.

ಜಲಪಾತ ವೀಕ್ಷಣೆ ಇಂದಿಗೂ ಕಷ್ಟ:
ಏಂಜಲ್ ಜಲಪಾತದಿಂದ ವರ್ಷಪೂರ್ತಿ ನೀರು ಧುಮ್ಮಿಕ್ಕುತ್ತದೆ. ವರ್ಷದ ಸದಾಕಾಲ ಈ ಜಲಪಾತದಲ್ಲಿ ನೀರಿರುತ್ತದೆ. ಮಳೆಗಾಲದಲ್ಲಿ ನೀರಿನ ಭೋರ್ಗರೆತ ಜಾಸ್ತಿ. ಮಳೆಗಾಲದಲ್ಲಿ ಎರಡು ಭಾಗವಾಗಿ ನೀರು ಪರ್ವತದ ಮೇಲಿಂದ ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚಿನ ನೀರಿದ್ದರೆ ಜಲಪಾತ ವೀಕ್ಷಣೆಗೆ ಬೋಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಏಂಜಲ್ ಜಲಪಾತ ವೆನಿಜುವೆಲಾದ ಪ್ರಸಿದ್ಧ ಪ್ರಸಿದ್ಧ ಪ್ರವಾಸಿ ತಾಣ ಎನಿಸಿಕೊಂಡಿದೆ. ಆದರೆ, ಇಂದಿಗೂ ಜಲಪಾತಕ್ಕೆ ಪ್ರವಾಸ ಕೈಗೊಳ್ಳಲು ಪರಿಶ್ರಮ ಪಡಬೇಕು. ದುರ್ಗಮವಾದ ಕಾಡನ್ನು ದಾಟಿ ಜಲಪಾತದ ಸಮೀಪ ತಲುಪುವುದು ಅಷ್ಟು ಸುಲಭದ ಮಾತಲ್ಲ.



No comments:

Post a Comment