ಜೀವನಯಾನ

Friday, November 11, 2016

ಬೆಟ್ಟಕೊರೆದು ನಿರ್ಮಿಸಿದ ಬೃಹತ್ ಬುದ್ಧ

ಪ್ರಪಂಚದಲ್ಲಿ ಹಲವಾರು ಬುದ್ಧನ ಮೂರ್ತಿಗಳನ್ನು ನೋಡಿರುತ್ತೀರಿ. ಆದರೆ, ಈ ಬುದ್ಧನ ಮೂತರ್ಿಯನ್ನು ಬೃಹತ್ ಗುಡ್ಡವನ್ನು ಕೊರೆದು ನಿರ್ಮಿಸಲಾಗಿದೆ. ಇದು ಬರೋಬ್ಬರಿ 233 ಅಡಿ ಎತ್ತರವಾಗಿದೆ. ಚೀನಾದ ಟಾಂಗ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಲೇಷನ್ನ ಬೃಹತ್ ಬುದ್ಧ ಜಗತ್ತಿನ ಅತಿ ಎತ್ತರದ ಕಲ್ಲಿನ ಬುದ್ಧನ ಶಿಲ್ಪ ಎಂದು ಹೆಸರು ಪಡೆದಿದೆ. ಈ ಬೃಹತ್ ಮೂರ್ತಿಯ ಅಗಾಧತೆಯ ಮುಂದೆ ಮನುಷ್ಯ ಏನೇನೂ ಅಲ್ಲ. 1200 ವರ್ಷಗಳಿಂದ ಬಿಸಿಲು ಮಳೆಗೆ ಮೈಯೊಡ್ಡಿ ಈಗಲೂ ಅಸ್ತಿತ್ವ ಕಾಯ್ದುಕೊಂಡಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಇದು ಆಕರ್ಷಿಸುತ್ತಿದೆ. 
 


ಬುದ್ಧನ ಮೂರ್ತಿ ನಿರ್ಮಿಸಿದ್ದು ಏಕೆ?
ಚೀನಾದ ಸಿಚುವಾನ್ ಪ್ರಾಂತದ ಮಿಂಜಿಯಾಂಗ್, ದಾಡು ಮತ್ತು ಕ್ವಿಂಗೈ ನದಿಗಳು ಒಂದನ್ನೊಂದು ಸೇರುವ ಕಡೆ ಲೇಷನ್ ಎಂಬಲ್ಲಿ ಬುದ್ಧನ ಮೂರ್ತಿ ಇದೆ. ಈ ನದಿಯಗಳು ಪದೇ ಪ್ರವಾಹಕ್ಕೆ ತುತ್ತಾಗಿ ದೋಣಿಗಳು ಮುಳುಗಿ  ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇದರಿಂದ ಪಾರಾಗುವ ಉಪಾಯ ಹುಡುಕಿದ ಚೀನಾದ ಬೌದ್ಧ ಸನ್ಯಾಸಿ ಹೈಟೊಂಗ್ ಎಂಬಾತ ನದಿಗಳ ಕೋಪವನ್ನು ಶಾಂತಗೊಳಿಸಲು ನದಿಯ ದಂಡೆಯ ಮೇಲಿದ್ದ ಕಲ್ಲಿನ ಬಂಡೆಯನ್ನು ಕೊರೆದು ಬುದ್ಧನ ಮೂರ್ತಿ ಯನ್ನು ನಿರ್ಮಿಸುವ ಸಲಹೆ ನೀಡುತ್ತಾನೆ. ಹೀಗೆ ನಿರ್ಮಾಣವಾಗಿದ್ದೇ ಲೇಷನ್ನ ಬೃಹತ್ ಬುದ್ಧ. 713ರಲ್ಲಿ ಈ ಬುದ್ಧನ ಮೂರ್ತಿಯನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತದೆ. ಆದರೆ, ಹಣಕಾಸಿನ ಕೊರತೆಯಿಂದಾಗಿ ಬುದ್ಧನ ಕೆತ್ತನೆ ಕಾರ್ಯ ಅರ್ಧದಲ್ಲೇ ನಿಂತು ಹೋಗುತ್ತದೆ. ಹೀಗಾಗಿ ಹೈಟೊಂಗ್ನ ಶಿಷ್ಯರು 20 ವರ್ಷ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಾರೆ. ಬರೋಬ್ಬರಿ 80 ವರ್ಷಗಳ ಬಳಿಕ ಅಂದರೆ 803ರಲ್ಲಿ ಆತನ ಶಿಷ್ಯಂದಿರು  ಬುದ್ಧನ ಮೂರ್ತಿ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ. ಬೌದ್ಧರ ಪವಿತ್ರ ಬೆಟ್ಟವೆನಿಸಿದ ಮೌಂಟ್ ಎಮಿಗೆ ಎದುರಾಗಿ ನಿಂತಿರುವ ಬೆಟ್ಟದಲ್ಲಿ ಇದನ್ನು ನಿರ್ಮಿಸಲಾಗಿದೆ. ಗುಡ್ಡವನ್ನು ಕರೆಯುವ ವೇಳೆ ಸಂಗ್ರಹವಾದ ಅಪಾರ ಪ್ರಮಾಣದ ಕಲ್ಲಿನ ಚೂರುಗಳನ್ನು ನದಿಯಲ್ಲಿ ತುಂಬಿ ಪ್ರವಾಹದ ದಿಕ್ಕನ್ನು ಬದಲಿಸಲಾಯಿತು. ಇದರಿಂದ ದೋಣಿಗಳ ಸಂಚಾರಕ್ಕೆ ಸುಗಮವಾಯಿತು. ಜತೆಗೆ ಪ್ರವಾಹವೂ ತಗ್ಗಿತು.

ವಿರಾಟ ಮೂರ್ತಿಯ ವಿಶೇಷತೆ:
ತನ್ನ ನೀಳವಾದ ಕೈಗಳನ್ನು ಮಂಡಿಯ ಮೇಲೆ ಇಟ್ಟು ಕುಳಿತು ಶಾಂತ ಚಿತ್ತದಿಂದ ನದಿಯನ್ನು ನೋಡುತ್ತಿರುವ ಸ್ಥಿತಿಯಲ್ಲಿ ಬುದ್ಧನ ಮೂರ್ತಿಯನ್ನು ಕೆತ್ತಲಾಗಿದೆ. ಕುಳಿತ ಮೈತ್ರೇಯ ಬುದ್ಧನ ಮೂರ್ತಿಯನ್ನು ಇದು ಹೋಲುತ್ತದೆ. ಮೂರ್ತಿಯ ಬುಜಗಳು 28 ಮೀಟರ್ ಅಗಲವಾಗಿವೆ. ಬುದ್ಧನ ಕೈಗಳು 50 ಅಡಿ ಎತ್ತರವಾಗಿವೆ. ಮೂಗು 20 ಅಡಿ ಉದ್ದವಾಗಿದ್ದು, ಎಲ್ಲ ಕೈ ಬೆರಳುಗಳು 10 ಅಡಿ ಉದ್ದವಿವೆ. ಬುದ್ಧನ ಸಂಪೂರ್ಣ ರಚನೆಯನ್ನು ಕಲ್ಲಿನಿಂದಲೇ ಕೆತ್ತಲಾಗಿದೆ. ಆದರೆ, ಮರದಿಂದ ಮಾಡಿದ ಕಿವಿಯನ್ನು ಅಳವಡಿಸಲಾಗಿದೆ. ಬುದ್ಧನ ತಲೆಯ ಮೇಲೆ ಗುಂಗುರು ಕೂದಲಿನ ರಚನೆಯನ್ನು ಮಾಡುವ ಸಲುವಾಗಿ 1,021 ಉಬ್ಬುಗಳನ್ನು ಕೊರಯಲಾಗಿದೆ. ಅದಕ್ಕೆ ಕರಿಯ ಬಣ್ಣ ಬಳಿಯಲಾಗಿದ್ದು, ಕೆತ್ತನೆಗಳಿವೆ. ಮೂರ್ತಿಯ ಮೇಲೆ ನೀರು ಸಂಗ್ರಹಗೊಂಡು ಅದು ಕುಸಿದು ಬೀಳಬಾರದು ಎಂಬ ಕಾರಣಕ್ಕೆ ಗುಪ್ತವಾದ ಕಾಲುವೆಗಳನ್ನು ಕೊರೆಯಲಾಗಿದೆ. ಕೈ ಮತ್ತು ತಲೆಯ  ಭಾಗದಲ್ಲಿ ಈ ಕಾಲುವೆಗಳಿವೆ. ಇನ್ನೊಂದು ವಿಶೇಷವೆಂದರೆ ಬುದ್ಧನ ಮೂರ್ತಿಯನ್ನು ನೈಸಗರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಮೆಟ್ಟಿಲುಗಳನ್ನು ಏರಿ ಮೂರ್ತಿಯ ತಲೆಯವರೆಗೂ ತಲುಪಬಹುದು. ಇದಕ್ಕಾಗಿ ಪಕ್ಕದಲ್ಲಿ 3500 ಕಿರಿದಾದ ಮೆಟ್ಟಿಲುಗಳನ್ನು ಕೊರಯಲಾಗಿದೆ. ಜತೆಗೆ ನದಿಯಲ್ಲಿ ದೋಣಿ ಸವಾರಿ ಮಾಡುತ್ತಾ ಬುದ್ಧನ ಭವ್ಯ ರೂಪವನ್ನು ನೋಡಬಹುದು. 

ಪಾರಂಪರಿಕ ತಾಣ:
ಗಾಳಿ ಮಳೆಗೆ ಶಿಥಿಲಗೊಂಡಿದ್ದ ಈ ಮೂರ್ತಿಯನ್ನು ಚೀನಾ ಸರ್ಕಾರ 1963ರಲ್ಲಿ ಪುನರುತ್ಥಾನ ಮಾಡಿತ್ತು. 1966ರ  ಬಳಿಕ ಇದನ್ನು ವಿಶ್ವ ಪಾರಂಪರಿಕ ತಾಣವಾಗಿ ಸಂರಕ್ಷಿಸಲಾಗುತ್ತಿದೆ.

No comments:

Post a Comment