ಜೀವನಯಾನ

Sunday, April 6, 2014

ದರ್ಜಿಹಕ್ಕಿಯ ಟುವ್ವಿ.. ಟುವ್ವಿ.. ಹಾಡು

ಈ ಹಕ್ಕಿ ಗೂಡುಕಟ್ಟಲು ಹಸಿರು ಗಿಡವನ್ನೇ ಆರಿಸಿಕೊಳ್ಳುತ್ತದೆ. ಎಲೆಗಳನ್ನು ಜೋಳಿಗೆ ಆಕಾರದಲ್ಲಿ ಹೊಲಿದು ಗೂಡನ್ನು ಕಟ್ಟುತ್ತದೆ. ಅದರಲ್ಲಿ ಹತ್ತಿ, ನಾರಿನಂತಹ ಮೆತ್ತನೆಯ ಪದಾರ್ಥ ತುಂಬಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ವಿಶ್ವದಲ್ಲಿ  ತನ್ನ ಕಲಾತ್ಮಕತೆಯಿಂದ ಗೂಡುಕಟ್ಟುವುದರಲ್ಲಿ ಪ್ರಸಿದ್ಧಿ ಪಡೆದಿರುವ ಎರಡು ಹಕ್ಕಿಗಳಲ್ಲಿ ಒಂದು  ಗೀಜಗವಾದರೆ, 
ಇನ್ನೊಂದು ಟುವ್ವಿ ಹಕ್ಕಿ.  


ದರ್ಜಿ ಹಕ್ಕಿ ಎಂಬ ಬಿರುದು:
ಮನೆಯ ಮುಂದಿನ ಹೂದೋಟ ಉದ್ಯಾನವನಗಳಲ್ಲಿ ಇವು ಕಣ್ಣಿಗೆ ಬೀಳುತ್ತವೆ. ಈ ಹಕ್ಕಿ  ಗಿಡಮರಗಳ ಎಲೆಯೊಂದನ್ನು ತೊಟ್ಟಿಲಿನಾಕಾರದಲ್ಲಿ ಬಾಗಿಸಿ, ಗಿಡ ಮರಗಳ ನಾರು, ಜೇಡರ ಬಲೆಗಳನ್ನು ಜೋಡಿಸುತ್ತದೆ. ಆ ಎಲೆಯ ತೊಟ್ಟಿಲಿನೊಳಗೆ ನಾರು, ಒಣ ಕಡ್ಡಿಗಳನ್ನು ಬಳಸಿ ಪುಟ್ಟ ಕಪ್ ಆಕಾರದ ಗೂಡನ್ನು ನಿಮರ್ಿಸುತ್ತದೆ. ಅದು ನಿರ್ಮಿಸುವ ಅಂತಹ ಗೂಡು ಹೊಲಿದಂತೆ ಕಾಣುವುದರಿಂದ ಇದಕ್ಕೆ ದರ್ಜಿ ಹಕ್ಕಿ ಅಥವಾ ಸಿಂಪಿಗ ಎನ್ನುವ ಹೆಸರು ಬಂದಿದೆ. ಸಂಸ್ಕೃತದಲ್ಲಿ ಇದಕ್ಕೆ ಪತ್ರ ಪುಟ ಎಂದು ಕರೆಯುತ್ತಾರೆ.

ಮಕರಂದವೂ ಇಷ್ಟ!
ಗಾತ್ರದಲ್ಲಿ ಗುಬ್ಬಿಗೆ ಸಮಾನವಾದ ಈ  ಹಕ್ಕಿಯ ಬೆನ್ನು, ರೆಕ್ಕೆ, ತಲೆಯ ಮೇಲೆ ಗಾಢ ಹಸರು ಬಣ್ಣ. ಕಡ್ಡಿಯಂತಹ ತೆಳುವಾದ ಕಾಲುಗಳು. ಹಣೆಯಲ್ಲಿ ನಸುಗೆಂಪು ಬಣ್ಣದ ಪಟ್ಟಿ,  ಸೂಕ್ಷ್ಮಾಕಾರದ ರೆಕ್ಕೆಗಳು. ಕೂತಲ್ಲಿ ಕೂರದೇ ರೆಂಬೆಯಿಂದ ರೆಂಬೆಗೆ ಜಿಗಿಯುವ ಸ್ವಭಾವದ ಟುವ್ವಿ ಹಕ್ಕಿಗೆ ಕೀಟಗಳೆಂದರೆ ಪಂಚಪ್ರಾಣ. ಕೆಲ ಹೂವುಗಳ ಮಕರಂದವನ್ನೂ ಹೀರುತ್ತವೆ.

ಟುವ್ವಿ.. ಟುವ್ವಿ.. ಹಾಡು
 ಸದಾ ಹಸಿರು ಎಲೆಗಳ ಮಧ್ಯೆ ಅಡಗಿಕೂರುವ ನಾಚಿಕೆ ಸ್ವಭಾವದ ಇವು ಟುವ್ವಿ.. ಟುವ್ವಿ.. ಟುವ್ವಿ ಎಂದು ಹಾಡುವ ದನಿಯಿಂದಲೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತದೆ. ಈ ಚಿಕ್ಕ ಹಕ್ಕಿಯ ಕೊರಳಿನಿಂದ ಹೊರಬರುವ ರಾಗಾಲಾಪನೆ ಮೋಡಿ ಮಾಡುತ್ತದೆ.

ಗೂಡು ಕಟ್ಟುವ ಸೋಜಿಗ
ಇದಕ್ಕೆ ಚಿಮ್ಮಟದಂತಹ ಕೊಕ್ಕಿದೆ. ಅದನ್ನು ಬಳಸಿಕೊಂಡು ಗೂಡು ಕಟ್ಟುವ ಇದರ ಕಲೆಗಾರಿಕೆ ಇಂದಿನ ವಿಜ್ಞಾನ ತಂತ್ರಜ್ಞಾನಕ್ಕೂ ಸವಾಲಾಗಿದೆ. ಈ ಪಕ್ಷಿಗಳು ಅತಿಹೆಚ್ಚು ಉಷ್ಣದೇಹಿಗಳು. ದೇಹದ ಉಷ್ಣತೆ ಕಾಯ್ದುಕೊಂಡು ಮೊಟ್ಟೆಗಳಿಗೆ ಬೆಚ್ಚನೆಯ ಕಾವುಕೊಡಲು ಹಾಗೂ ಮರಿಗಳ ರಕ್ಷಣೆಗಾಗಿ ಗೂಡುಕಟ್ಟಿಕೊಳ್ಳುತ್ತವೆ. ಸೂರು ಭದ್ರವಾಗಿದ್ದರಷ್ಟೇ ಸಂತಾನಾಭಿವೃದ್ಧಿ ಸಾಧ್ಯ ಎನ್ನುವ ತಿಳುವಳಿಕೆ ಅವುಗಳದ್ದು.

ಭಾರತದೆಲ್ಲೆಡೆ ಕಾಣಿಸುವ ಹಕ್ಕಿ
ಈ ಹಕ್ಕಿ ಭಾರತದಾದ್ಯಂತ ಕಾಣಸಿಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾದಲ್ಲೂ ಇವುಗಳನ್ನು ಕಾಣಸಲು ಸಾಧ್ಯ. 
ಈ ಪುಟ್ಟ ಹಕ್ಕಿಯ ದೇಹದ ಗಾತ್ರ ಕೇವಲ 10ರಿಂದ 14 ಸೆ.ಮೀ. ಮತ್ತು 6 ರಿಂದ 10 ಗ್ರಾಂ ತೂಕವಿರುತ್ತವೆ.  ಮಾರ್ಚ್-ಸೆಪ್ಟೆಂಬರ್ ಅವಧಿಯಲ್ಲಿ ಇವು ಮರಿ ಮಾಡುತ್ತವೆ. ಮರಿ  ಮಾಡುವ ಸಮಯದಲ್ಲಿ ಗಂಡು ಹಕ್ಕಿಗಳು ಟೊಂಗೆಯ ಮೇಲೆ ಕುಳಿತು ಉತ್ತೇಜಿತವಾಗಿ ನಿನಾದ ಮಾಡುತ್ತವೆ. ಅಕಸ್ಮಾತ್ ಅವುಗಳಿಗೆ ತೊಂದರೆಯಾದಲ್ಲಿ ಅವುಗಳ ಜಾತಿಯ ಇತರ ಹಕ್ಕಿಗಳೊಂದಿಗೆ ಕಿಟ್- ಕಿಟ್- ಕಿಟ್ ಎಂಬ ಶಬ್ದವನ್ನು ಮಾಡುತ್ತವೆ.

ಮನೆಯ ಸಮೀಪ ಗೂಡು
ಇವು ಜನವಸತಿ ಪ್ರದೇಶ, ಕುರುಚಲು ಕಾಡು ಮುಂತಾದ ಕಡೆ ಪೊದೆಗಳಲ್ಲಿ ವಾಸಿಸುತ್ತವೆ. ಒಂಟಿಯಾಗಿ ಅಥವಾ ಜೋಡಿಯಾಗಿ  ಕಾಣಸಿಗುತ್ತವೆ.  ಇದರ ಮೊಟ್ಟೆಗಳಿಗೆ ಬಹುದೊಡ್ಡ ಶತ್ರು ಹಾವು.  ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವು ಸಾಧ್ಯವಾದಷ್ಟು ಮನೆಗಳ ಸಮೀಪವೇ ಗೂಡುಕಟ್ಟುತ್ತವೆ. ಭೂಮಿಗೆ ಸಮೀಪವಿರುವ ಪೊದೆಗಳ ಮೇಲೆ ಕೂತು ಚಿಕ್ಕ ಕೀಟಗಳಿಗಾಗಿ ಹುಡುಕಾಟ ನಡಸುತ್ತವೆ.

 

No comments:

Post a Comment