ಜೀವನಯಾನ

Sunday, April 20, 2014

ಅಸಂಬದ್ಧ ದೇಹ ರಚನೆಯ ಐ-ಐ ಸಸ್ತನಿ!

ಇದು ತನ್ನ ಅಸಂಬದ್ಧ ದೇಹ ರಚನೆಗೆ ಹೆಸರುವಾಸಿ. ಜಗತ್ತಿನಲ್ಲಿರುವ ಅತಿ ವಿಚಿತ್ರ ಪ್ರಾಣಿಗಳಲ್ಲಿ ಇದು ಕೂಡ ಒಂದು. ಜಗತ್ತಿನ ಅತಿ ಕುರೂಪ ಪ್ರಾಣಿ ಎನ್ನುವ ಪಟ್ಟವನ್ನೂ ಇದಕ್ಕೇ ಹೊರಿಸಲಾಗಿದೆ. ಈ ಪ್ರಾಣಿಯ ಹೆಸರು ಕೂಡ ಅಷ್ಟೇ ವಿಚಿತ್ರ. ಅದು ಐ-ಐ (aye-aye ) ಸಸ್ತನಿ!


ಅನೇಕ ಪ್ರಾಣಿಗಳ ಹೋಲಿಕೆ
 ಮೂಲತಃ ಹೆಗ್ಗಣಗಳ ಜಾತಿಗೆ ಸೇರಿದ್ದಾದರೂ, ದೇಹದ ಲಕ್ಷಣಗಳು ಮಾತ್ರ ಹಾಗಿಲ್ಲ. ಅನೇಕ ತಳಿಯ ಪ್ರಾಣಿಗಳನ್ನು ಒಟ್ಟುಗೂಡಿಸಿ ಮಾಡಿದಂತಿದೆ. ಮಂಗನಂತಹ ದೇಹ, ಮುಂಗೂಸಿಯಂತಹ ಮುಖ. ಕಾಡುಪಾಪಗಳಂತಹ ಉದ್ದನೆಯ ಉಗುರುಗಳನ್ನು  ಹೊಂದಿದ ವಿಚಿತ್ರ ದೇಹ ರಚನೆ ಇದರದ್ದು.
ದೇಹದ ಗಾತ್ರಕ್ಕಿಂತ ಎರಡು ಪಟ್ಟು ದೊಡ್ಡ ಬಾಲ. ಮೊರದಗಲದ ಕಿವಿ. ದೊಡ್ಡದಾದ  ಕಣ್ಣು, ಅದರ ಸುತ್ತಲೂ ಕಪ್ಪು ಬಣ್ಣದ ಹುಬ್ಬು. ಕಂದು ಬಣ್ಣದ ಚರ್ಮದ ಹೊದಿಕೆಯ ಮೇಲೆ ಅಲ್ಲಲ್ಲಿ  ಬೆಳ್ಳನೆಯ ಕೂದಲು! ಆಯೆ ಆಯೆಯ ಈ ಕುರೂಪ ನೋಟವನ್ನು ಕಂಡರೆ ಜನ ದಿಗಿಲುಬೀಳುತ್ತಾರೆ. 

ಜನರಿಗೆ ಶಾಪಹಾಕುತ್ತಂತೆ!

ಆಫ್ರಿಕಾ ಖಂಡದ ಪಕ್ಕದಲ್ಲಿರುವ ಮಡಗಾಸ್ಕರ್ ದ್ವೀಪದಲ್ಲಿ ಮಾತ್ರ ಐ-ಐ ಸಸ್ತನಿಗಳು ಕಂಡುಬರುತ್ತವೆ. ಇವು ಕೆಟ್ಟ ಶಕುನವನ್ನು ನುಡಿಯುತ್ತದೆ ಎನ್ನುವುದು ಸ್ಥಳೀಯ ಜನರ ನಂಬಿಕೆ. ಕೃಷಿ ಬೆಳೆಗಳಿಗಳಿಗೂ ಇವು ಮಾರಕ ಎಂದು ಪರಿಗಣಿಸಲಾಗಿದೆ. ಹೀಗಾಗಿ ಐ-ಐ ಕಣ್ಣಿಗೆ ಬಿದ್ದರೆ, ಕೊಲ್ಲಲು ಮುಂದಾಗುತ್ತಾರೆ. ನಿರಂತರವಾದ ಬೇಟೆಯಿಂದ ಅತಿ ವಿಚಿತ್ರ ಪ್ರಾಣಿ ಎನಿಸಿರುವ ಐ-ಐ ಇಂದು ಅಳಿವಿನ ಅಂಚಿಗೆ ಬಂದು ತಲುಪಿದೆ.

 ದೇಹದ ಲಕ್ಷಣಗಳು
ಮಳೆಕಾಡುಗಳಲ್ಲಿ ಸುಮಾರು 700 ಮೀಟರ್ ಎತ್ತರದಲ್ಲಿ ಇವು ವಾಸಿಸುತ್ತವೆ. ಇದೊಂದು  ಸಣ್ಣ ಸಸ್ತನಿಯಾಗಿದ್ದು, 14ರಿಂದ 17 ಇಂಚಿನಷ್ಟು ದೊಡ್ಡದಾಗಿ ಬೆಳೆಯುತ್ತದೆ. ಒಂದೂವರೆ ಕೆ.ಜಿ. ತೂಕವಿರುತ್ತದೆ. 
ಇದರ ಮುಂದಿನ ಕಾಲಿನ ಮಧ್ಯದ ಬೆರಳು ತೀರಾ ತೆಳುವಾಗಿದೆ. ಚರ್ಮ ಮತ್ತು ಎಲುಬಷ್ಟೇ ಇದ್ದಂತೆ ಕಾಣಿಸುತ್ತದೆ. ಅದು ಇತರ ಬೆರಳುಗಳಿಗಿಂತ ಮೂರು ಪಟ್ಟು ಉದ್ದವಾಗಿರುತ್ತದೆ. ಈ ಬೆರಳಿನಿಂದ ಮರದ ರೆಂಬೆಗೆ ಬಡಿದು, ಅದರೊಳಗೆ ಇರುವೆಗಳು ಗೂಡು ಕಟ್ಟಿದ್ದನ್ನು ತಿಳಿದುಕೊಳ್ಳುತ್ತದೆ. ಬಳಿಕ ಕಿರಿದಾದ ಬೆರಳಿನಿಂದ ರಂದ್ರ ಕೊರೆದು ಆಹಾರವನ್ನು ಪಡೆದುಕೊಳ್ಳುತ್ತದೆ. ಇವು ಹೆಚ್ಚಿನ ಸಮಯ ಮರದ ತುದಿಯಲ್ಲಿಯೇ ಇರುತ್ತವೆ. ಕೆಳಗೆ ಬರುವುದು ಅಪರೂಪ. ಇವುಗಳಿಗೆ ಮರದಿಂದ ಮರಕ್ಕೆ ಜಿಗಿಯಲು ಬರುವುದಿಲ್ಲ. ಹೀಗಾಗಿ, ನಾಲ್ಕು ಕಾಲಿನಿಂದ ನಡೆದುಕೊಂಡೇ ಒಂದು ಮರದಿಂದ ಇನ್ನೊಂದು ಮರಕ್ಕೆ ಚಲಿಸುತ್ತದೆ.

ಮರಗಳಲ್ಲಿ ಗೂಡು: 

ಇವು ರಾತ್ರಿಯವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಇದರ ದೊಡ್ಡ ಕಣ್ಣುಗಳು ರಾತ್ರಿಯ ವೇಳೆ ನೋಡಲು ಸಹಕಾರಿ. ಇವು ಇಡೀ  ರಾತ್ರಿಯನ್ನು ಆಹಾರ ಹುಡುಕುವುದರಲ್ಲಿಯೇ ಕಳೆಯುತ್ತವೆ. ಬಾಳೆಗೊನೆ ಮತ್ತು ಹೂವಿನ ಮಕರಂದವನ್ನು ಹೀರುತ್ತವೆ. ಐ-ಐ ಮರದ ಗೂಡಿನಲ್ಲಿ ದಿನವನ್ನು ಕಳೆಯುತ್ತದೆ. ಎಲೆ ಮತ್ತು ಮರದ ಕೊಂಬೆಗಳನ್ನು ಬಳಸಿಕೊಂಡು ತನಗೆ ಬೇಕಾದ ಗೂಡನ್ನು ಕಟ್ಟಿಕೊಳ್ಳುತ್ತದೆ. ವೈರಿಗಳಿಂದ ಪಾರಾಗಲು ಪದೇ ಪದೇ ಸ್ಥಳವನ್ನು ಬದಲಿಸುತ್ತದೆ.

ಏಕಾಂತ ವಾಸ:
ಇದು ಏಕಾಂತವನ್ನು ಇಷ್ಟಡುವ ಪ್ರಾಣಿಯಾಗಿದ್ದು, ಮಿಲನಕ್ಕಾಗಿ ಹೆಣ್ಣಿನೊಂದಿಗೆ ಬೆರೆಯುತ್ತದೆ. ಸಂತಾನೋತ್ಪತ್ತಿಗೆ ಸಿದ್ಧವಾದ ಹೆಣ್ಣು ಧ್ವನಿಯ ಮೂಲಕ ಒಪ್ಪಿಗೆ ನೀಡುತ್ತದೆ. ಮರಿಗಳು ತಾಯಿಯ ಎದೆಹಾಲಿನ ಮೇಲೆಯೇ ಅವಲಂಬಿತವಾಗಿವೆ. ಹೀಗಾಗಿ ಮರಿ ಎರಡು ವರ್ಷದ ವರೆಗೂ ತಾಯಿಯೊಂದಿಗೇ ಇರುತ್ತದೆ. ಐ-ಐ 20ರಿಂದ 23 ವರ್ಷವರೆಗೆ ಬದುಕುತ್ತದೆ.     

No comments:

Post a Comment