ಜೀವನಯಾನ

Sunday, April 6, 2014

ಕಂಬಳಿ ಹುಳ

ಸುಂದರ ಚಿಟ್ಟೆಯ ಹಿಂದಿನ ಕರಾಳ ರೂಪ!

ಹೂವಿಂದ ಹೂವಿಗೆ ಹಾರುವ ಸುಂದರ ಚಿಟ್ಟೆ ಬಾಲ್ಯದಲ್ಲಿ ಕಂಬಳಿ ಹುಳುವಿನ ಆಕಾರದಲ್ಲಿರುತ್ತದೆ. ಚಿಟ್ಟೆಯಾಗಲು ರೆಕ್ಕೆ ದಕ್ಕಿಸಿಕೊಳ್ಳುವ ಅದರ ಸ್ವರೂಪ ಮಾತ್ರ ಭಯಂಕರ. ಚಿಟ್ಟೆಯಾದಾಗ ಅದನ್ನು ಮುಟ್ಟಲು ಕಾತರಿಸುವ ನಾವು, ಅದು ಕಂಬಳಿ ಹುಳವಾಗಿದ್ದಾಗ ಮಾರುದ್ದ ಸರಿಯುತ್ತೇವೆ. ಕಾರಣ ಅದರ ಮೈ ಸ್ಪರ್ಶಿಸಿದರೆ ತುರಿಕೆ ಆರಂಭವಾಗುತ್ತದೆ. ಸೂಜಿಯಂತಹ ನೂರಾರು ಕೂದಲುಗಳು ಮೈಗೆ ಅಂಟಿಕೊಳ್ಳುತ್ತವೆ.  


ವಿಷದ ಸೂಜಿ!
ಕಂಬಳಿ ಹುಳದ ಮೈಯಲ್ಲಾ ಇರವ ಇಂಥ ಮೊನಚು ಕೂದಲನ್ನು ಹೈಪೋಡರ್ಮಿಕ್ ನೀಡಲ್ ಅರ್ಥಾಥ್ ಅತಿ ಸೂಕ್ಷ್ಮ ಸೂಜಿ ಎಂದೇ ಕರೆಯುತ್ತಾರೆ. ಇವು ಬರೀ ಕೂದಲಲ್ಲ ವಿಷವನ್ನೇ ನಮ್ಮ ದೇಹದ ಒಳಕ್ಕೆ ನುಗ್ಗಿಸುವ ವಿಷ ಪದಾರ್ಥವನ್ನು ದಾಸ್ತಾನು ಹೊಂದಿರುವ ಕೊಳವೆಗಳು! ಸೂಕ್ಷ್ಮಾಕಾರದ ಫಿರಂಗಿಗಳು ಎಂದರೂ ತಪ್ಪಿಲ್ಲ.
ಕಂಬಳಿ ಹುಳಗಳು ತಾವಾಗಿಯೇ ಕಚ್ಚುವುದಿಲ್ಲ. ತಣ್ಣಗೆ ಗಿಡ, ಮರ, ಎಲೆಗಳನ್ನು ತಿಂದುಕೊಂಡು ಹಾಯಾಗಿ ಇರುತ್ತವೆ. ಚಳಿಗಾಲ, ತೇವದ ಕಾಲದಲ್ಲಿ ಎಲ್ಲೆಲ್ಲೋ ಓಡಾಡುತ್ತಾ ಮನೆಯ ಮೂಲೆಯನ್ನು ಸೇರಿಕೊಳ್ಳುವುದೂ ಉಂಟು. ಅದಕ್ಕೆ ನಮ್ಮ ಮೈ ತಾಕಿದರೆ ಮಾತ್ರ ಅಪಾಯವೇ ವಿನಃ ಅದಾಗಿ ಅದರಿಂದ ಅಪಾಯವಿಲ್ಲ. ಕಂಬಳಿ ಹುಳ ಸೋಕಿದರೆ ವಿಪರೀತ ನೋವಿನ ಜೊತೆಗೆ ಊತ ಕಾಣಿಸಿಕೊಳ್ಳುತ್ತದೆ. ಉಸಿರಾಡಲೂ ತೊಂದರೆ ಆಗಬಹುದು.


ರೈತರಿಗೆ ಉಪದ್ರವ:
ಕಂಬಳಿ ಹುಳುಗಳು ಚಿಟ್ಟೆಯಾಗಿ ಪರಿರ್ವನೆಗೊಳ್ಳುತ್ತವೆ. ತಾನು ಚಿಟ್ಟೆಯಾಗಿ ಪರಿವರ್ತನೆಯಾಗುವುದಕ್ಕೆ ಬೇಕಾದ ಶಕ್ತಿಯನ್ನು ಪಡೆದುಕೊಳ್ಳಲು ತನ್ನ ಬಹುತೇಕ ಸಮಯವನ್ನು ತಿನ್ನುವುದರಲ್ಲಿಯೇ ಕಳೆಯುತ್ತದೆ. ಇವು ಯಥೇಚ್ಚವಾಗಿ ತಿಂದು ಬೆಳೆಗಳಿಗೆ ಹಾನಿಯನ್ನು ಉಂಟು ಮಾಡಬಲ್ಲದು. ರೈತರು ಕಂಬಳಿ ಹುಳುವಿನ ಕಾಟದಿಂದ ಪಾರಾಗಲು ಕೀಟ ನಾಶಕಗಳನ್ನು ಪ್ರಯೋಗಿಸಬೇಕಾಗಿ ಬರುತ್ತದೆ.

ಇದೊಂದು ರಕ್ಷಣಾ ತಂತ್ರ:
ಇವು ತಮ್ಮ ರಕ್ಷಣೆಗಾಗಿ ಮೈಮೆಲೆ ಸೂಜಿಯಂತಹ ಕೂದಲನ್ನು ಹೊಂದಿರುತ್ತವೆ. ಕಂಬಳಿ ಹುಳುವಿಗೆ ಐದು ಜೊತೆ ಕಾಲುಗಳಿರುತ್ತವೆ. ಆರು ಕಣ್ಣುಗಳನ್ನು ಹೊಂದಿರುತ್ತವೆ. ಒಂದರಿಂದ ಮೂರು ಇಂಚು ಬೆಳೆಯುತ್ತವೆ. ಸುಮಾರು ಇಪ್ಪತ್ತು ಬಗೆಯ ಕಂಬಳಿ ಹುಳಗಳು ಇವೆ ಎಂದು ಅಂದಾಜಿಸಲಾಗಿದೆ. ಕಪ್ಪು, ನಸುಗೆಂಪು, ಕಂದು ಬಣ್ಣದಲ್ಲಿ ಇವು ಕಾಣಸಿಗುತ್ತವೆ. ಪರಿಸರದಲ್ಲಿರುವ ತನ್ನ ವಾಸಸ್ಥಳಕ್ಕೆ ತಕ್ಕಂತೆ ದೇಹವನ್ನು ಹೊಂದಿಸುವ ತಾಕತ್ತು ಒಂದು ಜಾತಿಯ ಕಂಬಳಿ ಹುಳುವಿನಲ್ಲಿದೆ. ಇವು ಹೆಚ್ಚಾಗಿ ಹಸಿರು ಎಲೆಯ ಕಾಡುಗಳಲ್ಲಿ ಕಂಡುಬರುತ್ತದೆ. ಅವು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಅದರ ಮೈ ಸೋಕಿದಾಗಲೇ ಅದರ ಇರುವಿಕೆ ಅರಿವಿಗೆ ಬರುತ್ತದೆ.

ಕೋಮಲ ದೇಹ:

ಇವು ಹೊರನೋಟಕ್ಕೆ ಭಯಂಕರವಾಗಿ ಕಂಡರೂ, ದೇಹ ಕೋಮಲ ವಾಗಿರುತ್ತದೆ. ಕಂಬಳಿ ಹುಳುವಿನ  ಆಕಾರಲ್ಲಿದ್ದಕೊಂಡು ಎಲ್ಲರಿಗೂ ಉಪದ್ರವ ಕೊಡುವ ಇವು ಪತಂಗವಾಗಿ ಪರಿವರ್ತನೆ ಗೊಳ್ಳುವ ಪ್ರಕ್ರಿಯೇ ಸೋಜಿಗ. ಪಾತರಗಿತ್ತಿಯಾಗಿದ್ದು ಕಂಬಳಿ ಹುಳವೇ ಎನ್ನುವ ಅಚ್ಚರಿ ಮೂಡುತ್ತದೆ.

 ಚಿಟ್ಟೆಯಾಗುವುದಕ್ಕೂ ಮುನ್ನ:
ಕಂಬಳಿ ಹುಳ ಬಹುಬೇಗ ಬೆಳವಣಿಗೆ ಹೊಂದುತ್ತದೆ. ಎರಡೇ ವಾರದಲ್ಲಿ ದೇಹದ ಆಕಾರ ದುಪ್ಪಟ್ಟುಗೊಳಿಸಿಕೊಳ್ಳುತ್ತದೆ. ದೇಹದ ಬೆಳವಣಿಗೆ ಸ್ಥಗಿತಗೊಂಡಾಗ ತಿನ್ನುವುದನ್ನು ನಿಲ್ಲಿಸಿ ತನ್ನ ಸುತ್ತಲೂ ಪೊರೆನ್ನು ಹೆಣೆದುಕೊಳ್ಳುತ್ತದೆ. ತನ್ನ ಗೂಡಿನಲ್ಲಿ ತಾನೇ ಬಂದಿಯಾಗುತ್ತದೆ. ಈ ವೇಳೆ ಕಂಬಳಿ ಹುಳುವಿನ ದೇಹ ಆಶ್ಚರ್ಯಕರ ರೀತಿಯಲ್ಲಿ ಪರಿವರ್ತನೆಗೊಂಡು ಪತಂಗವಾಗಿ ಹೊರಬರುತ್ತದೆ.  

1 comment: