ಜೀವನಯಾನ

Saturday, April 12, 2014

ಇಲಿಗಳ ದೇವಾಲಯ!

ವಿವಿಧ ಸಂಸ್ಕೃತಿ ಸಂಪ್ರದಾಯಗಳು ನೆಲೆಯೂರಿರುವ ಭಾರತದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾಣಬಹುದು. ಅಷ್ಟೇ ಏಕೆ ಜನಪ್ರಿಯ ಸಿನಿಮಾ ತಾರೆಯರಿಗೂ ಒಂದು ದೇವಾಲಯ ನಿರ್ಮಿಸಿದ್ದನ್ನು ನೋಡಿದ್ದೇವೆ. ಆದರೆ, ಮನೆಯಲ್ಲಿ ದಿನನಿತ್ಯ ಉಪದ್ರವ ಕೊಡುವ ಇಲಿಗಳಿಗೂ ಒಂದು ದೇವಾಲಯವಿದೆ. ಅಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ ಅಂದರೆ ನಂಬಲೇಬೇಕು!
--------------------------------------------------------------

20 ಸಾವಿರಕ್ಕೂ ಅಧಿಕ ಇಲಿಗಳು ವಾಸ


ಹೌದು. ಈ  ದೇವಾಲಯವಿರುವುದು ರಾಜಸ್ಥಾನದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ. ದೂರವಿರುವ ದೇಶ್ನೋಕ್ ಎಂಬಲ್ಲಿ. ಇದು ಕರ್ಣಿಮಾತಾಗೆ ಮೀಸಲಾದ ದೇವಾಲಯವಾಗಿದ್ದು, ಇಲಿಗಳ ದೇವಸ್ಥಾನ ಎಂತಲೂ ಹೆಸರುವಾಸಿಯಾಗಿದೆ. ಸುಮಾರು 20 ಸಾವಿರಕ್ಕೂ ಅಧಿಕ ಇಲಿಗಳು ಈ ದೇವಸ್ಥಾನದಲ್ಲಿ ನೆಲೆಸಿವೆ. ಇವುಗಳ  ದರ್ಶನ ಪಡೆಯಲು ದೂರ ದೂರದಿಂದ ಸವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಸ್ಥಾನದಲ್ಲಿ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗಿದ್ದು, ಅವುಗಳಿಗೆ  ಪ್ರತ್ಯೇಕವಾಗಿ ಪ್ರಸಾದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.
ವಿವಿಧ ನಂಬಿಕೆಗಳು ಗಾಢವಾಗಿ ತಳವೂರಿರುವ ನಮ್ಮ ದೇಶದಲ್ಲಿ ಕೋತಿಯನ್ನು ಪ್ರತಿನಿಧಿಸುವ ಆಂಜನೇಯನ ದೇವಸ್ಥಾನವಾಗಿರಲಿ ಅಥವಾ ಸರ್ಪಗಳಿಗೆ ಮೀಸಲಾದ ದೇವಾಲಯಗಳಿರುವುದು ಸಾಮಾನ್ಯ ಆದರೆ, ವಿಘ್ನೇಶ್ವರನ ವಾಹನವಾದ ಮೂಷಿಕ ಅಥವಾ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗುವ ದೇವಾಲಯವಿರುವುದು ಅತ್ಯಂತ ವಿರಳ.

ಇಲಿಗಳಿಗೆ ಖಾದ್ಯಗಳ ನೈವೇದ್ಯ
ಇಲ್ಲಿರುವ ಇಲಿಗಳಲ್ಲಿ ಕೇವಲ ಕೆಲವೇ ಕೆಲವು ಶ್ವೇತವರ್ಣದ ಇಲಿಗಳಿದ್ದು, ಅವುಗಳನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಅಷ್ಟೇಅಲ್ಲ.ಅವುಗಳ ದರ್ಶನವಾದರೆ ದೇವಿ ಕೃಪೆ ತೋರುತ್ತಾಳೆ ಎಂಬುದು ಇಲ್ಲಿಯ ಜನರ ನಂಬಿಕೆ. ಇಲಿಗಳು ಓಡಾಡುವಾಗ ಕಾಲಿಗೆ ಸ್ಪರ್ಶಿಸಿದಲ್ಲಿ ಒಳ್ಳೆಯ  ಬೆಳವಣಿಗೆ ಎಂದು ನಂಬಲಾಗುತ್ತದೆ. ಈ ಇಲಿಗಳು ಭಕ್ತರು ಕೊಡುವ ಪ್ರಸಾದವನ್ನು ತಿಂದು ಬದುಕುತ್ತವೆ. ದೇವಿಯ ಪೂಜೆಯ ವೇಳೆಗೆ ಇಲಿಗಳಿಗೆ ದೊಡ್ಡ ಬಟ್ಟಲಿನಲ್ಲಿ ಹಾಲನ್ನು ನೀಡಲಾಗುತ್ತದೆ. ಅವುಗಳಿಗಾಗಿ ಬಗೆ ಬಗೆಯ ಖಾದ್ಯಗಳನ್ನು ಮಾಡಿ ಬಡಿಸಲಾಗುತ್ತದೆ!
ಸ್ಥಳೀಯವಾಗಿ ಈ ಇಲಿಗಳನ್ನು ಕಬ್ಬಾಗಳೆಂದು ಕರೆಯಲಾಗುತ್ತದೆ. ಇಲ್ಲಿನ  ನಂಬಿಕೆಯ ಪ್ರಕಾರ ಈ ಇಲಿಗಳು ದೇವಿಯ ಭವಿಷ್ಯದ ಮಕ್ಕಳ ಆತ್ಮಗಳನ್ನು ತಮ್ಮಲ್ಲಿ ಹೊಂದಿವೆ. ಹೀಗಾಗಿ ಈ ಇಲಿಗಳ ಬಗ್ಗೆ ಪವಿತ್ರ ಭಾವನೆಯನ್ನು ಹೊಂದಿರುವ ಇಲ್ಲಿನ ಜನರು ಅವುಗಳನ್ನು ಭಕ್ತಿಯಿಂದ ಕಾಣುತ್ತಾರೆ. 

ಇಲಿಗಳನ್ನು ಸಾಯಿಸಿದರೆ ಪಾಪ!
ಇಲಿಗಳು ದೇವಾಲಯದ ತುಂಬೆಲ್ಲಾ ಮುಕ್ತವಾಗಿ ಓಡಾಡಿಕೊಂಡಿರುತ್ತವೆ. ಅವುಗಳನ್ನು ವೈರಿಗಳಿಂದ ರಕ್ಷಿಸಲು ದೇವಾಲಯದ ಸುತ್ತ ತಂತಿಯ ಜಾಳಿಗೆಯನ್ನು ಹಾಕಲಾಗಿದೆ. ಅಕಸ್ಮಾತ್ ನಡೆದಾಡುವಾಗ ಇಲಿಗಳನ್ನು ತುಳಿದು ಸಾಯಿಸಿದರೆ ಅದನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ಪಾಪದ ಪರಿಹಾರವಾಗಿ ಚಿನ್ನದ ಅಥವಾ ಬೆಳ್ಳಿಯ ಇಲಿಯ ಮೂರ್ತಿಯನ್ನು ಮಾಡಿ ದೇವಾಲಯಕ್ಕೆ ನೀಡುವ ಸಂಪ್ರದಾಯ ಬೆಳೆದುಬಂದಿದೆ. ಮಕ್ಕಳು ಇಲ್ಲಿನ ಇಲಿಗಳೊಂದಿಗೆ ಆಟವಾಡುತ್ತಾರೆ. ಅವುಗಳಿಂದ ರೋಗಗಳು ಹರಡುವ ಭೀತಿ ಇಲ್ಲ. 
 
ದೇವಾಲಯದ ಇತಿಹಾಸ: 
ಕರ್ಣಿಮಾತಾ ಚರಣ್ ಜಾತಿಯಲ್ಲಿ ಜನಿಸಿದ ಒಬ್ಬ ಹಿಂದು ತಪಸ್ವಿಣಿಯಾಗಿದ್ದು, ದುರ್ಗಾ ಮಾತೆಯ ಅವತಾರವೆಂದು ಆಕೆಯ ಭಕ್ತರ ಅಚಲ ನಂಬಿಕೆ. ಬಿಕಾನೇರ್ ಸಾಮ್ರಾಜ್ಯದ ರಾಜವಂಶಸ್ಥರು ಕರ್ಣಿ ಮಾತೆಯನ್ನು ಪೂಜಿಸತೊಡಗಿದರು. ಗಂಗಾ ಸಿಂಗ್ ರಾಜನು 20ನೇ ಶತಮಾನದಲ್ಲಿ ಈ ದೇವಾಲಯವನ್ನು ಕಟ್ಟಿಸಿದ. ಮಾರ್ಬಲ್ ಕಲ್ಲಿನ ಕೆತ್ತನೆಗಳಿಂದ ಸಿಂಗರಿಸಲ್ಪಟ್ಟ ದೇವಾಲಯವು ಪ್ರವೇಶ ದ್ವಾರದಲ್ಲಿ ದೊಡ್ಡದಾದ ಬೆಳ್ಳಿಯ ಬಾಗಿಲನ್ನು ಹೊಂದಿದೆ. ಬಾಗಿಲಿನ ಮೇಲೆ ಇಲಿಗಳ ಆಕೃತಿಗಳನ್ನು ಕೆತ್ತಲಾಗಿದೆ.  

1 comment: