ಜೀವನಯಾನ

Sunday, March 23, 2014

ಎಲೆ ಕೀಟ ಎಲೆಯದ್ದೇ ತದ್ರೂಪ!

ಭೂಮಿಯ ಮೇಲಿನ ಯಶಸ್ವಿ ಜೀವಿಗಳೆಂದರೆ ಕೀಟಗಳು. ಅದು ಮರಳುಗಾಡಾಗಿರಲಿ, ಅರಣ್ಯವಾಗಿರಲಿ ತಾವಿರುವ ಪರಿಸರಕ್ಕೆ ಪರಿಸರದಲ್ಲೊಂದಾಗಿ ಜೀವಿಸುವ ಕಲೆ ಅವಕ್ಕೆ  ಸಿದ್ಧಿಸಿದೆ. ಕೆಲವು ಕೀಟಗಳು ಕಡ್ಡಿಯಂತೆ ಕಾಣುತ್ತವೆ. ಇನ್ನು ಕೆಲವು ಕೀಟಗಳು ಗಿಡದ ಕಾಂಡಗಳು ಮತ್ತು ಮುಳ್ಳುಗಳನ್ನು ಅನುಸರಿಸುತ್ತವೆ. ಆದರೆ, ಎಲೆಗಳನ್ನು ನಕಲುಹೊಡೆಯುವುದರಲ್ಲಿ ಈ ಕೀಟಗಳನ್ನು ಮೀರಿಸಲು ಸಾಧ್ಯವಿಲ್ಲ.



  • ಹಸಿರು ಎಲೆಯದ್ದೇ ತದ್ರೂಪ!
ಇವು ಎಲೆಗಳ ಆಕೃತಿ ಬಣ್ಣವಷ್ಟೇ ಅಲ್ಲದೆ, ಎಲೆಗಳ ನಡುವೆ ಇರುವ ನರಗಳನ್ನು, ಹುಳಗಳು ಕಚ್ಚಿದ ಗಾಯದ ಗುರುತುಗಳನ್ನೂ ಕೂಡ ಅಕ್ಷರಶಃ ನಕಲುಹೊಡೆಯುತ್ತವೆ! ಹಸಿರು ಎಲೆಗಳದ್ದೇ ಇನ್ನೊಂದು ತದ್ರೂಪದಂತೆ ಕಾಣುತ್ತವೆ. ಹೀಗಾಗಿಯೇ ಈ ಕೀಟಗಳಿಗೆ ಎಲೆ ಕೀಟ ಎನ್ನುವ ಹೆಸರು ಬಂದಿದೆ. ಇಂಗ್ಲಿಷ್ನಲ್ಲಿ ಇದಕ್ಕೆ ವಾಕಿಂಗ್ ಲೀಫ್ ಎನ್ನುತ್ತಾರೆ.
ಇವು ಹಸಿರು ಎಲೆಗಳಾಗಿ ಗಿಡಕ್ಕೆ ಜೋತು ಬೀಳುತ್ತವೆ. ಒಣ ಎಲೆಗಳಂತೆ ಗಾಳಿಯಲ್ಲಿ ತೇಲುತ್ತವೆ.  ಎಲೆಗಳಂತೆ ಗಿಡಗಳ ಮೇಲೆ ಕುಳಿತುಕೊಳ್ಳುತ್ತವೆ. ಇವು ನೆಲದ ಮೇಲೆ ನಡೆದಾಡುವಾಗಲೂ ಗಾಳಿಗೆ ತೂಗುವ ಎಲೆಗಳಂತೆ ಅತ್ತಿಂದಿತ್ತ ತೂಗುತ್ತಾ ನಡೆಯುತ್ತವೆ. ಯಾವ ಪ್ರಾಣಿಗಳ ಕಣ್ಣಿಗೂ ಕಾಣದಷ್ಟು ನೈಜವಾಗಿರುತ್ತವೆ ಅವುಗಳ ಅಣಕು ಕಲೆ.

ಒಣಗಿದ ಎಲೆಯಂತೆ ಕಾಣುವ ರೆಕ್ಕೆ!

ಉಷ್ಣವಲಯದ ಪ್ರದೇದಲ್ಲಿ ಕಂಡುಬರುವ ಇವು ದಕ್ಷಿಣ ಏಷ್ಯಾದಿಂದ ಆಸ್ಟ್ರೇಲಿಯಾದ ವರೆಗೆ ಇವುಗಳ ಸಂತತಿ ವ್ಯಾಪಿಸಿವೆ. ಫಿಲಿಇಡೇ ಕುಟುಂಬಕ್ಕೆ ಸೇರಿದ ಎಲೆ ಕೀಟಗಳು ಕಡ್ಡಿ ಕೀಟಗಳ ಹತ್ತಿರದ ಸಂಬಂಧಿಯಾಗಿವೆ. ಇವುಗಳ ಹೊಟ್ಟೆ ಅಗಲವಾಗಿದ್ದು ಎಲೆಗಳ ಆಕಾರವನ್ನು ಹೊಂದಿವೆ. ಹೀಗಾಗಿ  ಎಲೆಗಳಿಗೂ ಇವಕ್ಕೂ ವ್ಯತ್ಯಾಸ ತಿಳಿಯುವುದಿಲ್ಲ. ಕೆಲವು ಕೀಟಗಳಿಗೆ ರೆಕ್ಕೆಗಳಿದ್ದು, ಕಂದು ಬಣ್ಣ ಮತ್ತು ಓರೆಕೋರೆಯಾದ ಅಂಚನ್ನು ಹೊಂದಿವೆ. ಇವು ಎಲೆಯ ಮೇಲಿನ ಕಲೆಗಳಂತೆ ಕಾಣುತ್ತವೆ. ಈ ಕಾರಣದಿಂದಾಗಿ ಕೀಟಗಳು ಒಣಗಿದ ಮತ್ತು ಕೊಳೆಯುತ್ತಿರುವ ಎಲೆಗಳನ್ನು  ಹೋಲುತ್ತವೆ. ಆದರೆ, ಹೆಣ್ಣು ಕೀಟಗಳಿಗೆ ರೆಕ್ಕೆಗಳಿದ್ದರೂ ಹಾರಲು ಬರುವುದಿಲ್ಲ. 

ಎಲೆಗಳನ್ನು ತಿನ್ನುತ್ತಾ ಹಸಿರು ಬಣ್ಣ!
ಎಲೆ ಕೀಟಗಳಲ್ಲಿ  ಸುಮಾರು 30 ಪ್ರಭೇದಗಳನ್ನು  ಗುರುತಿಸಲಾಗಿದೆ. ಅವುಗಳಲ್ಲಿ ಹಸಿರು ಎಲೆ ಕೀಟ ಪ್ರಮುಖವಾದುದು.  ಇವು ಜೀವಿತಾವಧಿಯಲ್ಲಿ ನೂರಾರು ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಮರಿಯಾಗಬೇಕಾದರೆ, ಮರಳು ಮತ್ತು ಜಲ್ಲಿ ಮಿಶ್ರಿತ ಮಣ್ಣಿನಲ್ಲಿ ಬೀಳಬೇಕು. ಮೂರರಿಂದ ಆರು ತಿಂಗಳ ಬಳಿಕ ಮರಿಗಳು ಜನಿಸುತ್ತವೆ. ಚಿಕ್ಕಂದಿನಲ್ಲಿ ಕೆಂಪು ಬಣ್ಣದಲ್ಲಿರುವ ಮರಿಗಳು ಎಲೆಗಳನ್ನು ತಿನ್ನುತ್ತಾ ಹಸಿರು ಬಣ್ಣಕ್ಕೆ ತಿರುಗುತ್ತವೆ.

ಒಣಗಿದ ಎಲೆಗಳಂತೆ ನಟನೆ:
ಇವುಗಳು ತಮಗೆ ಅಪಾಯ ಎದುರಾದಾಗ ಸತ್ತಂತೆ ನಟಿಸುತ್ತವೆ. ಆಗ ವೈರಿಗಳು ಇದೊಂದು ಒಣಗಿದ ಎಲೆ ಇರಬಹುದೆಂದು ತಿನ್ನದೇ ಬಿಟ್ಟುಹೋಗುತ್ತವೆ. ಇವು ನಡೆಯುವಾಗಲೂ ಅಷ್ಟೇ, ಎಲೆಗಳು ಚಲಿಸಿದಂತೆ ಭಾಸವಾಗುತ್ತದೆ. ತನ್ನ ಈ ಸ್ವಭಾವದಿಂದಾಗಿಯೇ ವೈರಿಯನ್ನು ಸುಲಭವಾಗಿ ಮೋಸಗೊಳಿಸಬಲ್ಲದು. ಈ ಕೀಟಗಳು ಕಡ್ಡಿ ಕೀಟಗಳಂತೆ ಕಳೆದುಹೋದ ತನ್ನ ದೇಹದ ಭಾಗಗಳನ್ನು ಪುನಃ ಗಳಿಸಿಕೊಳ್ಳಬಲ್ಲದು. ಆದರೆ, ಪ್ರೌಢಾವಸ್ಥೆಯ ಬಳಿಕ ಕಳೆದುಕೊಂಡ ದೇಹದ ಭಾಗಗಳನ್ನು ಮರಳಿ ಪಡೆಯಲಾರದು.   

  ಎಲೆಗಳೇ ಇದರ ಆಹಾರ:
ಎಲೆಗಳಂತೆ ಕಾಣುವುದು ಈ ಕೀಟಗಳು ಆಹಾರವಾಗಿ ಎಲೆ ಮತ್ತು ಹೂವುಗಳನ್ನೇ ತಿನ್ನುತ್ತವೆ. ರಾಸ್ಬೆರಿ, ಗುಲಾಬಿ, ನೀಲಗಿರಿ, ಪ್ರೊಟಿನಿಯ, ಬ್ಲಾಕ್ಬೆರ್ರಿ ಮುಂತಾದ ಸಸ್ಯಗಳೇ ಇವುಗಳ ಪ್ರಮುಖ ಆಹಾರ. ಕೆಲ ಕೀಟಗಳು ಜೀವನ ಪರ್ಯಂತ ಬ್ಲಾಕ್ಬೆರ್ರಿ ಸಸ್ಯದ ಎಲೆಗಳನ್ನು ಮಾತ್ರ ತಿನ್ನುತ್ತವೆ. ಇವುಗಳಿಗೆ ನೀರನ್ನು ಕುಡಿಯಬೇಕು ಎನ್ನುವ ಚಿಂತೆ ಇಲ್ಲ. ದೇಹಕ್ಕೆ ಬೇಕಾದ ನೀರನ್ನು  ಈ ಕೀಟಗಳು ಸಸ್ಯದಿಂದಲೇ ಪಡೆಯುತ್ತವೆ.


ತನ್ನವರನ್ನೇ ಗುರುತಿಸಲಾರದು: 
ಈ  ಕೀಟಗಳು ನಯವಂಚನೆ ಗೊಳಿಸುವ ಆಕಾರವನ್ನು ತಾಳುವುದರಿಂದ, ತನ್ನದೇ ಜಾತಿಯ ಇನ್ನೊಂದು ಕೀಟವನ್ನು ಇವಕ್ಕೆ ಗುರುತಿಸುವುದು ಸಾಧ್ಯವಾಗುವುದಿಲ್ಲ. ಇದರ ಸ್ವಭಾವಗಳೆಲ್ಲವೂ ಕಡ್ಡಿ ಕೀಟಗಳಂತಯೇ ಇವೆ. ಹೆಣ್ಣು ಕೀಟಗಳು ಗಂಡಿನೊಂದಿಗೆ ಮಿಲನವಾಗದೇ ಸಂತಾನವನ್ನು ಉತ್ಪತ್ತಿ ಮಾಡಬಲ್ಲವು!



 

No comments:

Post a Comment