ಜೀವನಯಾನ

Wednesday, March 19, 2014

ಹಾಲಕ್ಕಿ ಹಬ್ಬ

 ಹೋಳಿ ಬಂದರೆ ಸುಗ್ಗಿ ಬಂದ ಹಾಗೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಂಡುಬರುವ ಈ ಸುಗ್ಗಿಯ ಹಿಗ್ಗನ್ನು ನೋಡಿಯೇ ನಲಿಯಬೇಕು.  

ಮೊನ್ನೆಯಷ್ಟೇ ಮುಗಿದ ಹಬ್ಬ ಏಸೊಂದು ಮುದವಿತ್ತ.

 

"ಸುಗ್ಗಿಯ ಕಾಲ ಬಂತಣ್ಣ ಹಿಗ್ಗುವ ದಿನವೂ ಬಂತಣ್ಣ" ಎಂದು ಹಾಡಿ ಕುಣಿಯುವ ಹಾಲಕ್ಕಿ ಸಮುದಾಯ ಐದು ದಿನಗಳ ಕಾಲ ಆಚರಿಸುವ ಹೋಳಿಹುಣ್ಣಿಮೆಯೇ ಸುಗ್ಗಿ ಹಬ್ಬ. ಸುಗ್ಗಿ ಕಾಲ ಬಂದರೆ ಹಾಲಕ್ಕಿಗಳ ಮನೆಯೊಳಗೆ ಹರ್ಷದ ಹೊನಲು ಹರಿಯುತ್ತದೆ. ಜೀವನಕ್ಕೆ ಕೃಷಿಯನ್ನೇ ನಂಬಿರುವ ಹಾಲಕ್ಕಿ ಒಕ್ಕಲಿಗರು ತಮ್ಮ ಇಷ್ಟುದಿನದ ಆಯಾಸ ಕಳೆಯಲು ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಂಡುಬರುವ ಹಾಲಕ್ಕಿ ಒಕ್ಕಲಿಗರ ಈ ಸುಗ್ಗಿ ಕುಣಿತ ಹಬ್ಬದ ಆಚರಣೆಯ ಕೇಂದ್ರ ಬಿಂದು. ಸುಗ್ಗಿ ಅಂದರೆ ಬಣ್ಣದ ಸಂಕೇತವೂ ಹೌದು. ಪಾತ್ರಧಾರಿಗಳ ಮುಖಕ್ಕೆ ಕೆಂಪು, ಹಳದಿ, ಬಿಳಿ ಬಣ್ಣವನ್ನು ಬಳಿಯಲಾಗುತ್ತದೆ. 



 ಸುಗ್ಗಿ ಆಚರಣೆಯ ಹಿಂದೆಯೂ ಒಂದು ಸಂಪ್ರದಾಯವಿದೆ. ಹಾಲಕ್ಕಿ ಸಮುದಾಯ ತಮ್ಮನ್ನು  ಶಿವನ ವಂಶಸ್ಥರು ಎಂದು ಕರೆಸಿಕೊಳ್ಳುತ್ತಾರೆ. ವರ್ಷವಿಡೀ ತಮ್ಮ ಒಡೆಯನ ಹೊಲದಲ್ಲಿ ಶ್ರಮವಹಿಸಿ ದುಡಿದುದಕ್ಕೆ ಭೂಮಿತಾಯಿ ನೀಡಿದ ಉಡುಗೊರೆಯನ್ನು ಸ್ಮರಿಸುವ ಹಾಗೂ ಅದರ ಪ್ರತಿಫಲವಾಗಿ ತಮ್ಮ ಒಡೆಯನನ್ನು ರಂಜಿಸುವ ಸಲುವಾಗಿ ಆಚರಿಸುವುದೇ ಸುಗ್ಗಿ ಹಬ್ಬ. ವಸಂತಕಾಲದಲ್ಲಿ ಚೈತ್ರ ಶುದ್ಧ ಏಕಾದಶಿಯಿಂದ ಹುಣ್ಣಿಮೆಯ ತನಕ ಐದು ದಿನ ಹೋಳಿ ಹಬ್ಬವನ್ನು ಸುಗ್ಗಿ ಕುಣಿತದಿಂದ ಸಂಭ್ರಮಿಸುತ್ತಾರೆ.

ಕಿರಿ ಸುಗ್ಗಿ ಮತ್ತು ಹಿರಿ ಸುಗ್ಗಿ
ಸುಗ್ಗಿ ಆಚರಿಸುವುದು ಪ್ರತಿವರ್ಷ ಸಾಮಾನ್ಯವಾದರೂ, ಪದ್ಧತಿಯಂತೆ ಒಂದು ವರ್ಷ ಹಿರಿ ಸುಗ್ಗಿ- ವೇಷ ಧರಿಸಿ ಕುಣಿಯುವುದು. ಮರುವರ್ಷ ಕಿರಿ ಸುಗ್ಗಿ, ವೇಷ ಧರಿಸದೇ, ಕಂಬಳಿಯನ್ನು ಹೊದ್ದುಕೊಂಡು ಮನೆಗಳಿಗೆ ತೆರಳಿ ಕಾಯಿ ಹಾಗೂ ಹಣವನ್ನು ಒಡೆಯನಿಂದ ಸ್ವೀಕರಿಸುತ್ತಾರೆ. ಇವರು ಊರ ಗೌಡರ ಮನೆಯಲ್ಲಿ ಮಾತ್ರ ಗುಮಟೆ ವಾದ್ಯವನ್ನು ಬಾರಿಸುತ್ತಾರೆ. ಹಿರಿ ಸುಗ್ಗಿ ಇರುವ ವರ್ಷ ಮೊದಲು ಊರ ದೇವರನ್ನು ಪೂಜಿಸಿ ಹಿರಿಯ ಗೌಡರ ಮನೆಯಲ್ಲಿ ಮೊದಲ ಸುಗ್ಗಿ ಕುಣಿತ ಆಡುತ್ತಾರೆ. ನಂತರ ಸುಗ್ಗಿಯ ವೇಷಧಾರಿಗಳು ತಮ್ಮ ಒಡೆಯನ ಮನೆಗಳಿಗೆ ತೆರಳಿ ವಿವಿಧ ರೀತಿಯ ಜಾನಪದ ಹಾಡುಗಳನ್ನು ಹಾಡುತ್ತಾ, ಸುಗ್ಗಿ ಕುಣಿಯಲು ಆರಂಭಿಸುತ್ತಾರೆ. ಅಲ್ಲಿಂದ ಐದು ದಿನಗಳ ಸುಗ್ಗಿ ಹಬ್ಬಕ್ಕೆ ಚಾಲನೆ ದೊರೆಯುತ್ತದೆ.

ಊರಿಂದ ಊರಿಗೆ ವೇಷಧಾರಿಗಳ ಸಂಚಾರ
ಹೀಗೆ ತಮ್ಮ ಮನೆಗಳಿಗೆ ಬಂದ ಸುಗ್ಗಿಯನ್ನು ಯಜಮಾನರು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕುಣಿಸುತ್ತಾರೆ. ಸುಗ್ಗಿ ಕುಣಿದಾದ ನಂತರ ಅವರಿಗೆ ಕಾಣಿಕೆರೂಪದಲ್ಲಿ ಕಾಯಿ, ಆಹಾರ ಧಾನ್ಯ ಹಾಗೂ ಹಣವನ್ನು ನೀಡುತ್ತಾರೆ. ಹೀಗೆ ಪ್ರತಿಯೊಂದು ಒಡೆಯನ ಮನೆಯಲ್ಲೂ ಕುಣಿದು ಕಾಣಿಕೆ ಸ್ವೀಕರಿಸಿದ ಬಳಿಕ ಇನ್ನೊಂದು ಕೇರಿ(ಊರು)ಗಳಿಗೆ ತೆರಳುತ್ತಾರೆ. ಪರ ಊರಿಗೆ ಹೋದಾಗ ಆ ಊರಿನಿಂದ ಹೆಣ್ಣನ್ನು ತಂದಿದ್ದರೆ, ಆ ಊರಿನಲ್ಲಿ ವಿಶೇಷವಾಗಿ ಸುಗ್ಗಿ ಕುಣಿಯುತ್ತಾರೆ. ಅಳಿಯನ ಊರಿನವರಿಗೆ ಮಾವನ ಮನೆಯಲ್ಲಿ ಆದರಾತಿಥ್ಯ ನೀಡಿ ಸನ್ಮಾನಿಸಲಾಗುತ್ತದೆ. ಸುಗ್ಗಿಯ ವೇಷಧಾರಿಗಳು ಮನೆಯ ಒಳಗೆ ಪ್ರವೇಶ ಮಾಡುವಂತಿಲ್ಲ. ರಾತ್ರಿಯ ವೇಳೆ ಪರ ಊರಿನ ಗೌಡರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿ ಅವರಿಗೆ ಊಟವನ್ನು ಆ ಊರಿನವರು ವ್ಯವಸ್ಥೆ ಮಾಡುತ್ತಾರೆ. ಮರುದಿನ ಅಲ್ಲಿಯೇ ವೇಷಭೂಷಣ ತೊಟ್ಟುಕೊಳ್ಳುತ್ತಾರೆ. ಊರದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಮನೆ ಮನೆಗೆ ತೆರಳಿ ಸುಗ್ಗಿ ಕುಣಿಯುತ್ತಾ ಮುಂದೆ ಸಾಗುತ್ತಾರೆ. ಐದು ದಿನದಲ್ಲಿ ಸರಾಸರಿ 50-60 ಕಿ.ಮೀ. ದೂರವನ್ನು, ಬೆಟ್ಟಗುಡ್ಡಗಳ ಹಾದಿಯನ್ನು ಸುಗ್ಗಿವೇಷಧಾರಿಗಳು ಕ್ರಮಿಸುತ್ತಾರೆ. ನೂರಾರು ಮನೆಗಳಿಗೆ ತೆರಳುತ್ತಾರೆ. ಅವರ ಶ್ರದ್ಧೆ ಮತ್ತು ಸಮರ್ಪಣೆ ನಿಜಕ್ಕೂ ಅದ್ಭುತ! ಕೊನೆಯ ದಿನ ಅಂದರೆ, ಹೋಳಿ ಹುಣ್ಣಿಮೆಯ ದಿನ ತಮ್ಮ ಕೊಪ್ಪ (ಗ್ರಾಮ)ಕ್ಕೆ ಮರಳಿ ಬರುತ್ತಾರೆ. ಅಂದು ಊರ ಗೌಡನ ಮನೆಯಲ್ಲಿ ರಾತ್ರಿಯಿಡೀ ಕುಣಿತ ನಡೆಯುತ್ತದೆ. ತಮ್ಮ ಎಲ್ಲ ಸಾಮಥ್ರ್ಯವನ್ನು ಪ್ರದಶರ್ಿಸಿ ಕುಣಿಯುತ್ತಾರೆ. ಕಾಣಿಕೆ ರೂಪದಲ್ಲಿ ಬಂದ ಹಣವನ್ನು  ಹಬ್ಬದ ಕೊನೆಯ ದಿನದ ದೇವರ ಪೂಜೆಗೆ ಬಳಸುತ್ತಾರೆ. ಮುಂಜಾನೆ ಕರಿ ಸ್ನಾನ ಮಾಡಿ ಮನೆಯ ಒಳಕ್ಕೆ ಪ್ರವೇಶಿಸುತ್ತಾರೆ.

ಕಟ್ಟು ನಿಟ್ಟಿನ ನಿಯಮಾವಳಿ:

ಸುಗ್ಗಿಯ ವೇಷತೊಟ್ಟವರಿಗೆ ಕೆಲವೊಂದು ನಿಬಂಧನೆಗಳನ್ನೂ ವಿಧಿಸಲಾಗಿದೆ. ವೇಷಧಾರಿಗಳು ಐದು ದಿನವೂ ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಪಾಲಿಸಬೇಕು. ಇದನ್ನು ಪಾಲಿಸಲು ವಿಫಲವಾದರೆ, ಆತನನ್ನು ತಂಡದಿಂದ ಬಹಿಷ್ಕರಿಸಲಾಗುತ್ತದೆ. ಒಮ್ಮೆ ವೇಷತೊಟ್ಟ ಮೇಲೆ ಅದನ್ನ ರಾತ್ರಿಯಾದ ಮೇಲೆಯೇ ಕಳಚಬೇಕು. ವೇಷಧಾರಿಗಳು ಚಪ್ಪಲಿ ತೊಟ್ಟು ನಡೆಯುವಂತಿಲ್ಲ. ವಾಹನ ಹತ್ತುವಂತಿಲ್ಲ. ಇವರಿಗೆ ಐದು ದಿನಗಳ ಕಾಲ ಮನೆಯೊಳಕ್ಕೆ ಸೇರಿಸಿಕೊಳ್ಳುವಂತಿಲ್ಲ. ಮದ್ಯ ವ್ಯಸನ ನಿಷೇಧಿಸಬೇಕು. 


ಸುಗ್ಗಿಯೆಂದರೆ ಮಕ್ಕಳಿಗೆ ಅಚ್ಚು ಮೆಚ್ಚು

ಸುಗ್ಗಿಯ ಕಾಲವೆಂದರೆ ಶಾಲಾ ಮಕ್ಕಳಿಗಂತೂ ಅಚ್ಚುಮೆಚ್ಚು. ಶಾಲೆ ಮುಗಿದ ಕೂಡಲೇ ಎಲ್ಲೇ ಸುಗ್ಗಿ ಕುಣಿತದ ಶಬ್ದ ಕೇಳಿದರೂ, ಅಲ್ಲಿ ಮಕ್ಕಳು ಹಾಜರ್. ಏಕೆಂದರೆ, ಸುಗ್ಗಿ ವೇಷಧಾರಿಗಳ ಪಾತ್ರವೇ ಹಾಗಿರುತ್ತದೆ. ತಲೆಯ ಮೇಲೆ ತುರಾಯಿ ಕಟ್ಟಿಕೊಂಡು ಕೈಯಲ್ಲಿ ನವಿಲುಗರಿ ಹಿಡಿದುಕೊಂಡ ವೇಷಧಾರಿಗಳು, ಯಕ್ಷಗಾನದ ಪಾತ್ರಗಳು, ಸ್ತ್ರೀ ವೇಷದವರು, ಹಾಸ್ಯಗಾರರು ಅವರ ಜತೆಗೊಬ್ಬ ಹನುಮಂತ! ಆದರೆ, ಇವರ ತಂಡದಲ್ಲಿ ಮಹಿಳೆಯರು ಭಾಗವಹಿಸುವುದಿಲ್ಲ. ಸ್ತ್ರೀ ಪಾತ್ರವನ್ನು ಪುರುಷರೇ ನಿಭಾಯಿಸುತ್ತಾರೆ.


ಹನುಮಂತನನ್ನು ಕಂಡರೆ ಮಕ್ಕಳಿಗೆ ಭಯ!
ಈ ವೇಷಧಾರಿಗಳಲ್ಲಿ ಹನುಮಂತನ ವೇಷ ವಿಶೇಷವಾದದ್ದು. ಹನುಮಂತನ ಹತ್ತಿರಕ್ಕೆ ಹೋಗಲು ಮಕ್ಕಳು ಹೆದರುತ್ತಾರೆ. ಅವನ ಕಣ್ಣಿಗೆ ಬೀಳದಂತೆ ಮರೆಯಲ್ಲಿ ನಿಂತು ಸುಗ್ಗಿ  ವೀಕ್ಷಿಸುತ್ತಾರೆ. ಇಲ್ಲಿ ಹನುಮಂತನಲ್ಲದೆ ಬೇರೆ ಬೇರೆ ದೇವತೆಗಳನ್ನೂ ಕಾಣಬಹುದು. ಗುಮಟೆಯ ನಾದದ ಹಿನ್ನೆಲೆ ಕುಣಿತಕ್ಕೆ ಮತ್ತಷ್ಟು ರಂಗು ಕೊಡುತ್ತದೆ. ಹನುಮಂತನಿಲ್ಲದೆ ಸುಗ್ಗಿ ಹಬ್ಬವೇ ಅಪೂರ್ಣ.

ಕೋಲಾಟ ನೋಡುವುದೇ ಚಂದ
ಸುಗ್ಗಿಯ ವೇಷಭೂಷಣ ಧರಿಸಿದ ಕೋಲು ಮೇಳದ ಕಲಾವಿದರು. ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗೆ ಅನುಗುಣವಾಗಿ ಪದಗಾರರು ಹಾಡಿದ ಪದವನ್ನು ಪುನರಾವರ್ತನಗೊಳಿಸುತ್ತಾ ಕೋಲಾಡಿ ಕುಣಿಯುತ್ತಾರೆ.  ಹಿಮ್ಮೇಳದ ತಾಳ- ಲಯಗತಿಗನುಗುಣವಾಗಿ ಕುಣಿಯುವವರ ಕುಣಿತ ಹಾಗೂ ಅಂಗಾಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಹೆಚ್ಚಾಗಿ ಕೋಲಾಟದ ತಂಡದಲ್ಲಿ ಯುವಕರೇ ಹೆಚ್ಚಾಗಿ ಇರುತ್ತಾರೆ. ಅವರು ವೇಷ ಕಟ್ಟುವುದಿಲ್ಲ. ಸಮವಸ್ತ್ರ ತೊಟ್ಟು ಕೋಲಾಟ ಆಡುತ್ತಾರೆ.

ಬೋಹೋಚೊ ಕುಣಿತ
ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ ಕುಂಚವನ್ನು ಕೈಯಲ್ಲಿ ಹಿಡಿದು ಬಲಗೈ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲಗೆ ಲಯಬದ್ಧವಾಗಿ ಕುಟ್ಟುತ್ತ ವಾದ್ಯಮೇಳದ ಹಿನ್ನೆಗೆ ತಕ್ಕಂತೆ, ಬೋಹೋಸೊ, ಸೋಹೋಸೋ ಬೋ.. ಬೋಹೋಸೋ ಮುಂತಾಗಿ ಹೊಯ್ಲ ಹಾಕುತ್ತಾ ವಿವಿಧ ಭಂಗಿಯಲ್ಲಿ ಕುಣಿಯುತ್ತಾರೆ. ಪದದ ಏರಿಳಿತ, ಹೊಯ್ಲಗಾರನ ಸಂಜ್ಞೆಗೆ ಅನುಗುಣವಾಗಿ ಕುಣಿತ ಭಿನ್ನ ಸ್ವರೂಪವನ್ನು ಪಡೆಯುತ್ತದೆ. ಕಲಾವಿದರು ಸರಪಳಿಯಂತೆ ಹೆಣೆದುಕೊಂಡೋ, ವರ್ತುಲ ಉಪ ವರ್ತುಲಗಳಲ್ಲಿ ನಿಂತೋ, ತಾಳ-ಮದ್ದಳೆ, ಗುಮಟೆಗಳ ತಾರಕ, ಮಂದ್ರ ಸ್ವರಕ್ಕೆ ತಕ್ಕಂತೆ ಹೊಯ್ಲಹಾಕಿ ಕುಣಿಯುತ್ತಾರೆ.

ಸುಗ್ಗಿಗೂ ಬಂತು ಆಧುನಿಕತೆಯ ಟಚ್
ಇಂದಿನ ಕಾಲದ ಜಾಯಮಾನಕ್ಕೆ ತಕ್ಕಂತೆ ಸುಗ್ಗಿವೇಷದಲ್ಲಿಯೂ ಕೆಲವೊಂದು ಬದಲಾವಣೆಯಾಗಿದೆ. ಯಕ್ಷಗಾನದ ಮೇಳದವರ ಜೊತೆ, ಆಧುನಿಕ ವೇಷಭೂಷಣಗಳು ಸ್ಥಾನ ಪಡೆದಿವೆ. ಮಿಡಿ ಸ್ಕರ್ಟ್  ತೊಟ್ಟ ಪೇಟೆ ಹುಡುಗಿ, ಹ್ಯಾಟು ಬೂಟು ತೊಟ್ಟ ಪೇಟೆ ಹೈದ. ಸಿನಿಮಾ ನಟ ನಟಿಯರ ವೇಷವೂ ಸೇರಿಕೊಂಡು ಸಾಂಪ್ರದಾಯಿಕ ಸುಗ್ಗಿಗೆ ಹೊಸ ಉಮೇದನ್ನು ತಂದುಕೊಟ್ಟಿದೆ. ಇವರಿಗೆ ತಕ್ಕಂತೆ ಸಿನಿಮಾ ಹಾಡುಗಳನ್ನು ಜಾನಪದ ಗೀತೆಗಳೊಂದಿಗೆ ಹಾಡುಗಾರರು ಸೇರಿಸಿಕೊಂಡಿದ್ದಾರೆ.

ಹಾಡುಗಾರರ ಬಾಯಲ್ಲಿ ನಲಿದಾಡುವ ಪದ
ಸುಗ್ಗಿ ವೇಷಧಾರಿಗಳಿಗೆ ಹಿನ್ನೆಲೆಯಲ್ಲಿ ಹಾಡುಗಾರರು ಇರುತ್ತಾರೆ. ಅವರು ಗುಮಟೆ ಬಾರಿಸುತ್ತಾ ಹಾಡನ್ನು ಹಾಡುತ್ತಾರೆ. ಅವರ ಬಾಯಲ್ಲಿ ಜಾನಪದ ಗೀತೆಗಳು ಸಲೀಸಾಗಿ  ಹರಿದಾಡುತ್ತದೆ. ಒಂದಾದ ಮೇಲೆ ಇನ್ನೊಂದರಂತೆ ಹಾಡುತ್ತಲೇ ಹೋಗುತ್ತಾರೆ. ಕೆಲವೊಮ್ಮೆ ಸ್ಥಳದಲ್ಲೇ ಹೊಸ ಪದ್ಯಗಳನ್ನು ಕಟ್ಟಿ ಹಾಡುತ್ತಾರೆ.

ಕಳೆ ಕಳೆದುಕೊಂಡ ಸುಗ್ಗಿ
ಹಾರ, ತುರಾಯಿ, ಕುಂಚದೊಂದಿಗೆ 4ರಿಂದ 5ದಿನ ಊರಿಂದ ಊರಿಗೆ ಸಾಗುವ ಇವರ ಮೆರವಣಿಗೆ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಆದರೆ, ಒಂದು ಜಾನಪದ ಸಂಪ್ರದಾಯವಾಗಿ ಮುಂದುವರೆದುಕೊಂಡು ಬಂದಿರುವ ಸುಗ್ಗಿ ಆಧುನಿಕ ಮನೋರಂಜನಾ ಸಾಧನಗಳಿಂದಾಗಿ ಸೊರಗುತ್ತಿದೆ. ನಗರದ ಮಕ್ಕಳು ಸುಗ್ಗಿಹಬ್ಬ ಅಂದರೆ ಏನು ಎಂದು ಕೇಳುವ ಮಟ್ಟಿಗೆ ಬಂದು ನಿಂತಿರುವುದು ವಿಪರ್ಯಾಸ. ಈಗ ಹಾಲಕ್ಕಿಗಳಲ್ಲದೇ ಉಳಿದ ಜನಾಂಗದವರೂ ತಂಡ ಕಟ್ಟಿಕೊಂಡು ಅಥವಾ ಒಬ್ಬಿಬ್ಬರು ಸೇರಿ ಸುಗ್ಗಿಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದೂ ವಿಷಾದನೀಯ.
 

 

 

No comments:

Post a Comment