ಜೀವನಯಾನ

Sunday, March 16, 2014

ಇಂಡಿಯನ್ ವಾಕಿಂಗ್ ಸ್ಟಿಕ್

  • ಕಡ್ಡಿಕೀಟ!

ಹುಲ್ಲುಕಡ್ಡಿಯಂತೆ ಕಾಣುವ ಇವು ಚಲಿಸಿದಾಗಲೇ ಗೊತ್ತಾಗುವುದು ಇವುಗಳಿಗೂ ಜೀವ ಇದೆ ಎಂದು. ಅಲ್ಲಿಯವರೆಗೆ ಅವುಗಳಿಗೂ ಕಸಕಡ್ಡಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ. ಹೀಗಾಗಿಯೇ ಇವುಗಳಿಗೆ "ವಾಕಿಂಗ್ ಸ್ಟಿಕ್" ಎಂದು ಹೆಸರು ಬಂದಿದೆ. ಕನ್ನಡದಲ್ಲಿ ಇದನ್ನು ಕಡ್ಡಿ ಕೀಟ ಎನ್ನುತ್ತಾರೆ. ನಿಶಾಚರ ಜೀವಿಯಾದ ಇದು ಹಗಲಿನಲ್ಲಿ ಸಂಚರಿಸುವುದು ತೀರಾ ಕಡಿಮೆ. ಕದಲದೇ ಒಂದೆಡೆ ನಿಲ್ಲುವುದರಿಂದ ಹುಲ್ಲೆಂದು ಮೋಸಹೋಗುವುದು ಸಹಜ.



ಹಗಲಿನಲ್ಲಿ ನಿಶ್ಚಲ:
ಕಡ್ಡಿ ಕೀಟ ರಾತ್ರಿ ವೇಳೆಯಲ್ಲಿ ಎಲೆ, ಹೂವಿನ ಎಸಳುಗಳನ್ನು  ಆಹಾರವಾಗಿ ಸೇವಿಸುತ್ತದೆ. ತೀರಾ ಹತ್ತಿರದಿಂದ ಗಮನಿಸಿದರೆ, ಗರಗಸದಂತಹ ಕೈಗಳು, ಜಗಿಯಲು ಹಲ್ಲುಗಳು, ಉದ್ದದ ಕಾಲುಗಳು, ಹೊರಚಾಚಿದ ಕಣ್ಣುಗಳನ್ನು ಗುರುತಿಸಬಹುದು. ವಿದೇಶಗಳಲ್ಲಿ ನಾಯಿ ಬೆಕ್ಕು ಮೀನುಗಳಂತೆ ಈ ಕೀಟವನ್ನು ಸಾಕುವ ಹವ್ಯಾಸವಿದೆ! ಸಾಮಾನ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.

ಸಂತಾನಕ್ಕೆ ಗಂಡು ಬೇಕಾಗಿಯೇ ಇಲ್ಲ!
ಈ ಕೀಟಗಳಲ್ಲಿ ಹೆಚ್ಚಿನವು ಹೆಣ್ಣುಗಳೇ. ಗಂಡು ತೀರಾ ಕಡಿಮೆ. ಸಾವಿರ ವಾಕಿಂಗ್ ಸ್ಟಿಕ್ಗಳಲ್ಲಿ ಕೇವಲ ಒಂದೇ ಒಂದು ಮಾತ್ರ ಗಂಡು. ಇದಕ್ಕೆ ಕಾರಣ ಸಂತಾನೋತ್ಪತ್ತಿಯು ಈ ಜೀವಿಗಳಲ್ಲಿ ಗಂಡಿನ ಅಗತ್ಯತೆ ಇಲ್ಲದೇ ನಡೆಯುತ್ತದೆ. ಇವುಗಳ ಜೀವಿತಾವಧಿ ಕೇವಲ ಒಂದು ಋತು ಮಾತ್ರ. ಅಂದರೆ, ಸುಮಾರು  ಆರು ತಿಂಗಳಿಂದ ಒಂದು ವರ್ಷ. ಈ ಕೀಟಗಳ ನಾಲ್ಕರಿಂದ ಐದು ಇಂಚು ಉದ್ದವಿರುತ್ತವೆ. ಇವು ಯಾವ ಗಿಡದ ಮೇಲೆ ಇರುತ್ತದೆಯೋ ಅದೇ ಗಿಡದ ರೆಂಬೆಗಳಂತೆ ಕಾಣುತ್ತವೆ. ಮರ ಅಥವಾ ಸಸ್ಯದ ಒಂದು ಭಾಗವೋ ಎಂಬಂತೆ ಭಾಸವಾಗುತ್ತದೆ. ಛದ್ಮವೇಷ, ಮೈ ಬಣ್ಣ ಬದಲಾವಣೆ ಇದಕ್ಕೆ ಕರಗತವಾದ ಗುಣ. ಇದನ್ನು ಒಮ್ಮೆಲೇ ಗುರುತಿಸುವುದು ಯಾರಿಂದಲೂ ಸಾಧ್ಯವಿಲ್ಲ. 

ರಕ್ಷಣೆಗೆ ನಾನಾ ತಂತ್ರ:
  • ಒಂದು ವೇಳೆ ಇದರ ಇರುವಿಕೆಯನ್ನು ಗುರುತಿಸಿ ವೈರಿಗಳು ದಾಳಿ ಮಾಡಿ ಅಂಗಾಂಗವನ್ನು ತುಂಡರಿಸಿದರೆ, ಕಳೆದುಕೊಂಡ ಅಂಗವನ್ನು ಒಂದು ತಿಂಗಳಿನಲ್ಲಿ ಪುನಃ ಪಡೆದುಕೊಳ್ಳುತ್ತದೆ.
  •  ಕೆಲವು ಕೀಟಗಳು ತಮ್ಮ ರಕ್ಷಣೆಗೆ ಒಂದು ಬಗೆಯ ರಾಸಾಯನಿಕವನ್ನು ಚುಮುಕಿಸುತ್ತವೆ. ಇದು ವೈರಿಯನ್ನು ತಾತ್ಕಾಲಿಕವಾಗಿ ಕುರುಡಾಗಿಸುತ್ತದೆ.
  •  ಕೆಲವೊಮ್ಮೆ ಅವು ವೈರಿಗಳಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸುತ್ತವೆ. ಇನ್ನು ಕೆಲವೊಂದಕ್ಕೆ ಕಾಲಿನಲ್ಲಿ ಚೂಪಾದ ಮುಳ್ಳುಗಳಿದ್ದು,  ಅವು ಚುಚ್ಚಿದರೆ ವಿಪರೀತ ನೋವಾಗುತ್ತದೆ. 
  • ಮತ್ತೆ ಕೆಲ ವಾಕಿಂಗ್ ಸ್ಟಿಕ್ ಗಳಿಗೆ ರೆಕ್ಕೆಗಳು ಮೂಡಿ, ಹಾರುವ ಸಾಮಥ್ರ್ಯವೂ ಇದೆ!

ಇರುವೆ ಗೂಡಿನಲ್ಲಿ ಜನನ!
ಜಗತ್ತಿನಾದ್ಯಂತ ಕಡ್ಡಿ ಕೀಟಗಳಿಗೆ ಸೇರಿದ 2500 ಪ್ರಭೇದಗಳಿವೆ. ಅವುಗಳಲ್ಲಿ ಇಂಡಿಯನ್ ವಾಕಿಂಗ್ ಸ್ಟಿಕ್ ಕೂಡ ಒಂದು. ಕೀಟವು ಮೊಟ್ಟೆಯಿಂದ ಹೊರಬಂದ ಮೇಲೆ, ಆರು ಹಂತದಲ್ಲಿ ಬೆಳೆದು ಪ್ರೌಢಾವಸ್ಥೆ ತಲುಪುತ್ತದೆ. ಒಂದೊಂದು ಬಾರಿಯೂ ಅದು ಹಾವು ಕಳಚಿದಂತೆ ಪೊರೆ ಕಳಚುತ್ತಾ ಬೆಳೆಯುತ್ತದೆ. ಪ್ರೌಢಾವಸ್ಥೆ ತಲುಪಿದ ಬಳಿಕ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಒಂದರ ನಂತರ ಒಂದರಂತೆ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಗಟ್ಟಿಯಾದ ಬೀಜದಂತೆ ಇರುತ್ತದೆ. ನೆಲಕ್ಕೆ ಬಿದ್ದ ಮೊಟ್ಟೆಗಳನ್ನು ಇರುವೆಗಳು ಹೊತ್ತೊಯ್ದು ಗೂಡಿನಲ್ಲಿ ಆಹಾರ ರೂಪದಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಮೊಟ್ಟೆಯಲ್ಲಿನ ಪೋಷಕಾಂಶಗಳನ್ನು ಇರುವೆಗಳು ಸೇವಿಸಿದ ಬಳಿಕ ಮೊಟ್ಟೆಗಳನ್ನು ಕಸದ ರಾಶಿಗೆ ಎಸೆಯುತ್ತವೆ. ಅಲ್ಲಿ ಸುರಕ್ಷಿತವಾಗಿ ಕಡ್ಡಿ ಕೀಟದ ಮೊಟ್ಟೆಗಳು ಬೆಳೆದು ಇರುವೆಗಳ ಗೂಡಿನಿಂದ ಹೊರಬರುತ್ತವೆ.

No comments:

Post a Comment