ಜೀವನಯಾನ

Saturday, March 8, 2014

ಕತ್ತಿನ ಬಣ್ಣ ಬದಲಿಸುವ ಟರ್ಕಿ ಕೋಳಿ!

ನೋಡಲು ಕೋಳಿಯ ತರಹ ಕಂಡರೂ ಇದು ಕೋಳಿಯಲ್ಲ.ಟರ್ಕಿ ಹೆಸರಿನ ಈ ಕೋಳಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿ ಸಾಕುತ್ತಾರೆ. ಯುರೋಪಿಯನ್ ರಾಷ್ಟ್ರಗಳಿಗೆ ಈ ಕೋಳಿಯನ್ನು ಟರ್ಕಿ ವ್ಯಾಪಾರಿಗಳು ಮಾರಾಟ  ಮಾಡುತ್ತಿದ್ದರು. ಹೀಗಾಗಿ, ಇದಕ್ಕೆ ಟರ್ಕಿ ಎಂಬ ಹೆಸರು ಬಳುವಳಿಯಾಗಿ ಬಂದಿದೆ. ಇವು ಕೆಲ ವಿಚಿತ್ರ ದೇಹ ರಚನೆಯಿಂದ ಗಮನ ಸೆಳೆಯುತ್ತದೆ. ಕತ್ತಿಗೆ ಜೋತು ಬಿದ್ದಿರುವ ಚರ್ಮದ ಪದರ, ತಲೆಯ ಮೇಲಿರುವ ಜುಟ್ಟು, ಮೈತುಂಬ ಗರಿಗಳು ಇದರ ವೈಶಿಷ್ಟ್ಯ. ಏನನ್ನಾದರೂ ತಿನ್ನಲು ಈ ಹಕ್ಕಿ ಬಗ್ಗಿದಾಗ ಚರ್ಮದ ಹೊದಿಕೆಯು ಸಂಕುಚಿತವಾಗಿ ಕೊಕ್ಕು ಹೊರಚಾಚುತ್ತದೆ. ಇದರ ಮೈ ಸುಮಾರು 5500 ಗರಿಗಳಿಂದ ಕೂಡಿದೆ. 

ಭಾವನೆಗೆ ತಕ್ಕಂತೆ ಬಣ್ಣ ಬದಲು:
ಟರ್ಕಿ ಕೋಳಿ ತನ್ನ ಭಾವನೆಗಳಿಗೆ ತಕ್ಕಂತೆ ಕೊಕ್ಕು ಮತ್ತು ತಲೆಯ ಬಣ್ಣ ಬದಲಾಗುತ್ತದೆ! ಸಿಟ್ಟು, ಹಸಿವು, ಭಯ ಮುಂತಾದ ಭಾವನೆಗಳನ್ನು ಕೆಂಪು, ಹಸಿರು, ನೀಲಿ ಮತ್ತು ಬಿಳಿ ಬಣ್ಣಗಳ ಮೂಲಕ ವ್ಯಕ್ತಪಡಿಸುತ್ತದೆ.
ಗಂಡು ಟರ್ಕಿ ಕೋಳಿ ಥೇಟ್ ನವಿಲಿನಂತೆ ಗರಿಗಳನ್ನು ಬಿಚ್ಚಿ ನಿಂತು ಹೆಣ್ಣನ್ನು ಆಕರ್ಷಿಸುತ್ತದೆ. ಹಣ್ಣು ಹುಟ್ಟಿದ 30ನೇ ವಾರದಿಂದ ಮೊಟ್ಟೆ ಇಡಲು ಆರಂಭಿಸುತ್ತದೆ. ವರ್ಷಕ್ಕೆ ಸುಮಾರು 70 ರಿಂದ 100 ಮೊಟ್ಟೆಗಳನ್ನು ಇಡಬಲ್ಲದು.

ಸಾಕಿದ ಕೋಳಿಗೆ ಹಾರಲು ಬರಲ್ಲ:

ಟರ್ಕಿ ಕೋಳಿಯ ಸಾಮಾನ್ಯ ಜೀವಿತಾವಧಿ 3-5 ವರ್ಷ. ಪೂರ್ಣ ಪ್ರಮಾಣದಲ್ಲಿ ಬೆಳೆದ ಹಕ್ಕಿಯ ತೂಕ ಸುಮಾರು 15 ಕೆಜಿ. ಸಾಕಿದ ಕೋಳಿಗಳು ಹೆಚ್ಚಿನ ಭಾರದಿಂದಾಗಿ ಹಾರಲು ಆಗುವುದಿಲ್ಲ. ಆದರೆ, ಕಾಡು ಕೋಳಿಗಳು ಕಡಿಮೆ ಅಂತರಕ್ಕೆ 89 ಕಿ.ಮೀ. ವೇಗದಲ್ಲಿ ಹಾರಬಲ್ಲದು. ಅದರ ಕಾಲುಗಳೂ ಬಲಿಷ್ಠವಾಗಿದ್ದು, ಗಂಟೆಗೆ 55 ಮೈಲಿ ವೇಗದಲ್ಲಿ ಓಡುವ ಸಾಮಥ್ರ್ಯ ಹೊಂದಿದೆ. ಇವು ಹೆಚ್ಚಾಗಿ ನೆಲದ ಮೇಲೆ ಓಡಾಡಿಕೊಂಡಿದ್ದರೂ, ಮರದ ಮೇಲೆ ನಿದ್ರಿಸುತ್ತದೆ.

ಕಿರುಚುವುದಕ್ಕೆ ಫೇಮಸ್:
ಗಂಡು ಹಕ್ಕಿಗಳು ವಿಚಿತ್ರವಾದ ಧ್ವನಿಯಲ್ಲಿ ಕೂಗುತ್ತವೆ. ಇದರ ಸದ್ದು ಮೈಲಿಗಟ್ಟಲೆ ದೂರಕ್ಕೆ ಕೇಳಿಸುತ್ತದೆ. ಪ್ರತಿಯೊಂದು ಹಕ್ಕಿಯೂ ತನ್ನದೇ ಅದ ರೀತಿಯಲ್ಲಿ ಕೂಗುತ್ತದೆ. ಸಂವಾದಕ್ಕಾಗಿ ಕೂಗು ಹಾಕುತ್ತವೆ. ಆದರೆ, ಹೆಣ್ಣು ಕೋಳಿ ಕೂಗುವುದಿಲ್ಲ. ಇವು ವಿಸ್ತಾರವಾದ ದೃಷ್ಟಿ ಸಾಮಥ್ರ್ಯಹೊಂದಿವೆ. ಕತ್ತನ್ನು ತಿರುಗಿಸಿ 360 ಡಿಗ್ರಿ ನೋಟವನ್ನು ಬೀರಬಲ್ಲದು. ಆದರೆ, ರಾತ್ರಿ ಇವುಗಳಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ.

ಮಾಂಸ ತಿಂದರೆ ನಿದ್ರೆ ಬರುತ್ತೆ!
ಟರ್ಕಿ  ಕೋಳಿಯನ್ನು ಮಾಂಸಕ್ಕಾಗಿ ಸಾಕಲಾಗುತ್ತದೆ. ಅಮೆರಿಕದಲ್ಲಿ ಇವುಗಳ ಮಾಂಸಕ್ಕೆ ಭಾರೀ ಬೇಡಿಕೆ. ಇವುಗಳ ಮಾಂಸದಲ್ಲಿ ಅಮೈನೋ ಆಮ್ಲದ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಅದು ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ. ಇವುಗಳ ಮಾಂಸದಲ್ಲಿ ಕಡಿಮೆ ಕೊಬ್ಬು ಮತ್ತು  ಹೆಚ್ಚಿನ ಪೋಷಕಾಂಶವಿರುತ್ತದೆ. ಟರ್ಕಿ ಕೋಳಿಗಳ ಸಾಕಣಿಕೆ ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿದೆ. ಭಾರತದಲ್ಲಿಯೂ ಇವುಗಳನ್ನು ಸಾಕಲಾಗುತ್ತದೆ. ಕ್ರಿಸ್ಮಸ್ ಸಂದರ್ಭದಲ್ಲಿ ಟರ್ಕಿ ಕೋಳಿಯನ್ನು ದೇವರಿಗೆ ಬಲಿ ನೀಡಲಾಗುತ್ತದೆ.



ಹೊಟ್ಟೆಯಲ್ಲಿ ಕಲ್ಲು!

ಕೋಳಿಯಂತೆಯೇ ಇವು ಕಾಳು, ಬೀಜ, ಹುಳ ಹಪ್ಪಟೆಗಳನ್ನು ಗಬಗಬನೆ ತಿನ್ನುತ್ತವೆ. ಮರಿಗಳು ಹುಟ್ಟಿದ ಸ್ವಲ್ಪಹೊತ್ತಿನಲ್ಲಿಯೇ ಆಹಾರ ಹುಡುಕಿ ಗೂಡಿನಿಂದ ಹೊರಬರಬಲ್ಲವು. ಇವುಗಳಿಗೆ ಹಲ್ಲುಗಳು ಇಲ್ಲದೆ ಇರುವುದರಿಂದ ಆಹಾರವನ್ನು  ತನ್ನುವುದಕ್ಕಿಂತ ಮೊದಲು ಕೆಲವು ಕಲ್ಲುಗಳನ್ನು ತಿನ್ನುತ್ತವೆ. ದೇಹದಲ್ಲಿ ಎರಡು ಹೊಟ್ಟೆಗಳಿದ್ದು, ಒಂದರಲ್ಲಿ ಕಲ್ಲನ್ನು ಸಂಗ್ರಹಿಸಿ ಆಹಾರವನ್ನು ಪಚನಗೊಳಿಸಿಕೊಳ್ಳುತ್ತದೆ.  

No comments:

Post a Comment