ಜೀವನಯಾನ

Saturday, January 28, 2017

ಕೆಂಪು ಕಡಲ ತೀರ!

ಸಮುದ್ರ ತೀರ ಎಂದಾಕ್ಷಣ ವಿಶಾಲವಾಗಿ ಹರಡಿರುವ ಮರಳಿನ ರಾಶಿಯೇ ಕಣ್ಣಮುಂದೆ ಬರುತ್ತದೆ. ಆದರೆ, ಇಲ್ಲೊಂದು ಕಡಲ ತೀರದಲ್ಲಿ ಮರಳಿನ ಬದಲು ಕೆಂಪು ಬಣ್ಣದ ಸಮುದ್ರ ಕಳೆಗಳು ಆವರಿಸಿಕೊಂಡಿವೆ. ಇದರಿಂದಾಗಿ ಸಮುದ್ರ ತೀರವೆಲ್ಲಾ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಹೀಗಾಗಿ ಇದು ರೆಡ್ ಬೀಚ್ ಎಂದೇ ಪ್ರಸಿದ್ಧವಾಗಿದೆ. ಇಂಥದ್ದೊಂದು ಕಡಲ ತೀರ ಇರುವುದು ಚೀನಾದ ಲಿಯನಿಂಗ್ ಪ್ರಾಂತ್ಯದ ಪಂಜಿನ್ನಲ್ಲಿ. ಲಿಯಾವೋ ನದಿ ಮುಖಜ ಭೂಮಿಯಲ್ಲಿ ರೆಡ್ ಬೀಚ್ ಹರಡಿಕೊಂಡಿದೆ. 

 
 ಕೆಂಪು ಕಡಲ ತೀರ ನೋಡೋದೇ ಚಂದ:
ಪಂಜಿನ್ ಕಡಲ ತೀರದ ಲವಣಯುಕ್ತ ಮಣ್ಣಿನಲ್ಲಿ ಸುಯೇದಾ ಸಾಲ್ಸಾ ಎಂಬ ಜಾತಿಯ ಸಸ್ಯವೊಂದು ಬೆಳೆಯುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ಸಸ್ಯ ಬೆಳೆಯಲು ಆರಂಭವಾಗುತ್ತದೆ. ಬೇಸಿಗೆ ವೇಳೆಯಲ್ಲಿ ಅದು ನೋಡಲು ಹಸಿರಾಗಿಯೇ ಇರುತ್ತದೆ. ಬಳಿಕ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೆಡ್ ಬೀಚ್ 100 ಚದರ ಕಿ.ಮೀ.ಗೆ ವ್ಯಾಪಿಸಿಕೊಂಡಿದೆ. ಇದು ವಿಶ್ವದ ಅತಿ ವಿಶಾಲವಾದ ತೇವ ಪ್ರದೇಶ ಮತ್ತು ಕೆಂಪು ಜವಗುಭೂಮಿ ಎನಿಸಿಕೊಂಡಿದೆ. ಇಲ್ಲಿ ಎತ್ತ ಕಣ್ಣು  ಹಾಯಿಸಿದರೂ ಬರೀ ಕೆಂಪು ಬಣ್ಣವೇ ಕಾಣಸಿಗುತ್ತದೆ. ಆದರೆ, ಪ್ರವಾಸಿಗರು ಇಲ್ಲಿ ಎಲ್ಲೆಂದರಲ್ಲಿ ಓಡಾಡುವಂತಿಲ್ಲ. ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ಪ್ರವಾಸಿಗರಿಗೆ ಅವಕಾಶ  ಕಲ್ಪಿಸಲಾಗಿದೆ.  ಮರದ ಅಟ್ಟಣಿಗೆಯ ಮೇಲೆ ನಿಂತು ಕೆಂಪು ಕಡಲ ತೀರವನ್ನು ನೋಡುವುದೇ ಸೊಗಸು. 1988ರಲ್ಲಿ ಈ ಕಡಲ ತೀರವನ್ನು ರಾಷ್ಟ್ರೀಯ ನೈಸರ್ಗಿಕ ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಚೀನಾ ಸಕರ್ಾರವೇ ಈ ಕಡಲ ತೀರಕ್ಕೆ ರಕ್ಷಣೆ ಒದಗಿಸುತ್ತಿದೆ.

ಪಕ್ಷಿ ಸಂಕುಲಗಳ ತವರು
ರೆಡ್ ಬೀಚ್ 260 ಬಗೆಯ ಪಕ್ಷಿಗಳಿಗೆ ತವರು ಮನೆಯಾಗಿದೆ. ಪಕ್ಷಿಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಕೆಂಪು ತಲೆಯ ಕೊಕ್ಕರೆಗಳು ಇಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅಳಿವಿನ ಅಂಚಿನಲ್ಲಿರುವ ಹಲವಾರು ವಲಸೆ ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ. ಅಷ್ಟೇ ಅಲ್ಲ 399 ಬಗೆಯ ವನ್ಯ ಜೀವಿಗಳು ಇಲ್ಲಿ ವಾಸವಾಗಿವೆ. ಫೋಟೋಗ್ರಫಿಗೂ ಇದೊಂದು ನೆಚ್ಚಿನ ತಾಣ.

ವಿಶೇಷತೆ ಏನು?

ಕಡಲ ತೀರದಲ್ಲಿ ಬೆಳೆಯುವ ಸುಯೇದಾ ಸಾಲ್ಸಾ ಸಸ್ಯದಿಂದ ರೆಡ್ ಬೀಚ್ ಎಂಬ ಹೆಸರು ಬಂದಿದೆ. ಈ ಸಸ್ಯ ಬೆಳೆಯುವಾಗ ಹಸಿರು ಬಣ್ಣದಲ್ಲಿದ್ದು, ಬಳಿಕ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ನಂತರ ಗುಲಾಬಿ ಬಣ್ಣಕ್ಕೆ ತಿರುಗಿ ಕೊನೆಯಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತದೆ. ಇಲ್ಲಿ ಹಲವು  ಬಗೆಯ ಜೊಂಡು ಹುಲ್ಲುಗಳು ಬೆಳೆಯುತ್ತವೆ. ಅದನ್ನು ಪೇಪರ್ ತಯಾರಿಸಲು ಬಳಸಲಾಗುತ್ತದೆ. ಈ ಕಾರಣಕ್ಕಾಗಿ ಪಂಜಿನ್ ಬೀಚ್ನ ಹೆಚ್ಚಿನ ಪ್ರದೇಶದಲ್ಲಿ ಜೊಂಡು ಹುಲ್ಲಿನ ಕೃಷಿಯನ್ನು ಮಾಡಲಾಗುತ್ತದೆ.

No comments:

Post a Comment