ಜೀವನಯಾನ

Saturday, January 28, 2017

ಕಣ್ಣೆದುರೇ ಮಾಯವಾಗುವ ಸಮುದ್ರ!

ಸಮುದ್ರ ಅಂದರೆ ಅಗಾಧ. ಕಣ್ಣು ಹಾಯಿಸಿದಷ್ಟು ಜಲರಾಶಿ. ಯಾವ ಕಾಲಕ್ಕೂ ಸಮುದ್ರದ ನೀರು ಖಾಲಿಯಾಯಿತು ಎಂಬ ಮಾತೇ ಇಲ್ಲ. ಅಂಥ ಸಮುದ್ರ ನೋಡ ನೋಡುತ್ತಿದ್ದಂತೆ ಅದೃಶ್ಯವಾದರೆ?! ಅರೇ ಇದು ಹೇಗೆ ಸಾಧ್ಯ. ಪದೇ ಪದೇ ಬಂದು ತೆರೆಗೆ ಅಪ್ಪಳಿಸುವ ಅಲೆಗಳು ಇದ್ದಕ್ಕಿದ್ದಂತೆ ಹೇಗೆ ಮಾಯವಾಗುತ್ತದೆ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಒಡಿಶಾದ ಚಾಂಡಿಪುರ ಸಮುದ್ರ ತೀರ ಇಂಥದ್ದೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸಮುದ್ರದ ನೀರು ಇದ್ದಕ್ಕಿದ್ದಂತೆ 5-6 ಕಿ.ಮೀ.ಗಳಷ್ಟು ಹಿಂದೆ ಸರಿಯುತ್ತದೆ. ಈ ರೀತಿ ಸಮುದ್ರವೇ ಮಾಯವಾಗುವ ವಿದ್ಯಮಾನ ವಿಶ್ವದ ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಹೀಗಾಗಿ ಇದನ್ನು ಕಣ್ಣಾ ಮುಚ್ಚಾಲೆ ಆಡುವ ಕಡಲತೀರ ಎಂದು ಕರೆಯಲಾಗುತ್ತದೆ.



ಇಲ್ಲೇನು ಜಾದೂ ನಡೆಯುತ್ತಾ?

ಚಾಂಡಿಪುರ ಸಮುದ್ರ ಇರುವುದು ಒಡಿಶಾ ರಾಜಧಾನಿ ಭುವನೇಶ್ವರದಿಂದ 200 ಕಿ.ಮೀ. ದೂರದಲ್ಲಿ. ಬಾಲಾಸೋರ್ ಜಿಲ್ಲೆಂದ 10 ಕಿ.ಮೀ. ಪ್ರಯಾಣಿಸಿದರೆ ಈ ಜಾಗವನ್ನು ತಲುಪಬಹುದು. ನೀರು ಇದ್ದಕ್ಕಿಂದ್ದಂತೆ ಮಾಯವಾಗುವ ವಿದ್ಯಮಾನದಿಂದಾಗಿ ಚಂಡಿಪುರ ಸಮುದ್ರ ತೀರ ಜಗತ್ತಿನ ಗಮನ ಸೆಳೆದಿದೆ. ದಡಕ್ಕೆ ಬಂದು ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು ನೋಡ ನೋಡುತ್ತಿದ್ದಂತೆ 5-6 ಕಿ.ಮೀ. ಹಿಂದೆ ಸರಿಯುತ್ತವೆ. ಸಮುದ್ರದ ಉಬ್ಬರ ಮತ್ತು ಇಳಿತದ ವೇಳೆ ಪ್ರತಿನಿತ್ಯವೂ ಇಂಥದ್ದೊಂದು ವಿದ್ಯಮಾನ ನಡೆಯುತ್ತದೆ. ಇಳಿತದ ವೇಳೆ ಸಮುದ್ರ ಬಯಲಿನಂತಾಗುತ್ತದೆ. ಆಗ ಅಲ್ಲಿ ಅಕ್ಷರಶಃ ನಡೆದಾಡಬಹುದು. ಅಷ್ಟೇ ಅಲ್ಲ ಸಮುದ್ರದಲ್ಲಿ ಬೈಕನ್ನೂ  ಓಡಿಸಬಹುದು. ಹೀಗೆ ಮಾಯವಾದ ಸಮುದ್ರದ ನೀರು ಉಬ್ಬರದ ಸಮಯದಲ್ಲಿ ಮರಳಿ ಬರುತ್ತದೆ. ಬರಿದಾಗಿದ್ದ ಸಮುದ್ರದ ಒಡಲು ಮತ್ತೆ ತುಂಬಿಕೊಳ್ಳುತ್ತದೆ. ಅಲೆಗಳು ವಾಪಸ್ ಬರುವುದನ್ನು ನೋಡುವುದೂ ಕೂಡ ಅಷ್ಟೇ ಕುತೂಹಲ. ಸ್ಥಳಿಯರಿಗೆ ಇದೊಂದು ನಿತ್ಯದ ವಿದ್ಯಮಾನದಂತೆ  ಕಂಡರೂ ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡುತ್ತದೆ.

ಸಮುದ್ರದಲ್ಲಿ ನಡೆದಾಡಿ!
ನೀರು ಇಳಿಮುಖವಾದಾಗ ಸಮುದ್ರದಲ್ಲಿ ಹಾಯಾಗಿ ನಡೆದಾಡಿ ಆನಂದ ಅನುಭವಿಸಬಹುದು. ಅಷ್ಟೇ ಅಲ್ಲ ಕಾರು, ಬೈಕು ಸವಾರಿಯನ್ನೂ ಮಾಡಬಹುದು. ಉಬ್ಬರದ ಅವಧಿಯ ವರೆಗೂ ಅಲೆಗಳು ಬಂದು ಅಪ್ಪಳಿಸುತ್ತವೆ ಎಂಬ ಭಯವಿಲ್ಲದೇ ಓಡಾಡಬಹುದಾದ ಕಾರಣ ಚಾಂಡಿಪುರ ಕಡಲ ತೀರ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸೂಯಾಸ್ತದ ವೇಳೆ ಈ ಸಮುದ್ರ ತೀರ ನಯನ ಮನೋಹರವಾಗಿ ಗೋಚರಿಸುತ್ತದೆ.

ಕಾರಣ ನಿಗೂಢ:
ಉಬ್ಬರ ಮತ್ತು ಇಳಿತದ ವೇಳೆ ಸಮುದ್ರದ ನೀರಿನ ಮಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುವುದು  ಸಾಮಾನ್ಯ. ಆದರೆ, ಕಿಲೋಮೀಟರ್ಗಟ್ಟಲೆ ಹಿಂದೆ ಸರಿಯುವುದನ್ನು ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. ಈ ರೀತಿ ಆಗುವುದಕ್ಕೆ ಏನು ಕಾರಣ ಎನ್ನುವುದಕ್ಕೆ ಇದುವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಸಮತಟ್ಟಾದ ಪ್ರದೇಶವಾದ ಕಾರಣ ಸಮುದ್ರದ ನೀರು ಅಷ್ಟೊಂದು ಪ್ರಮಾಣದಲ್ಲಿ ಹಿಂದೆ ಸರಿಯುತ್ತದೆ ಎಂದು ಭಾವಿಸಲಾಗಿದೆ. ಆದರೆ, ಪ್ರತಿನಿತ್ಯ ಈ ವಿದ್ಯಮಾನ ನಡೆಯುತ್ತಲೇ ಇದೆ.

ಜೀವ ವೈವಿಧ್ಯ:
ಕಣ್ಣಾಮುಚ್ಚಾಲೆ ಆಟದಿಂದಷ್ಟೇ ಅಲ್ಲ, ಈ ಸಮುದ್ರ ತೀರ ಜೀವ ವೈವಿಧ್ಯತೆಗೂ ಹೆಸರಾಗಿದೆ. ಗಾಳಿ ಮರದ ತೋಪುಗಳು ಮತ್ತು ಬಿಳಿ ಮರಳಿನ ದಿಬ್ಬಗಳು ಇನ್ನಷ್ಟು ಮೆರಗು ನೀಡುತ್ತವೆ. ಹಲವಾರು ಬಗೆಯ ಮೀನುಗಳು, ಕುದುರೆಲಾಳದ ಏಡಿಗಳು, ಕೆಂಪು ಬಣ್ಣದ ಏಡಿಗಳು ಕಾಣಸಿಗುತ್ತವೆ. ಸಮುದ್ರದ  ಖಾದ್ಯಗಳನ್ನು ಸವಿಯಲು  ಇಷ್ಟಪಡುವವರಿಗೆ ಇದೊಂದು ಹೇಳಿ ಮಾಡಿಸಿದ ತಾಣ.

ಕ್ಷಿಪಣಿ ಉಡಾವಣೆ:

ಭಾರತೀಯ ಸೇನೆ ಅಥವಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ದ ಕ್ಷಿಪಣಿ ಪರೀಕ್ಷೆಗೆ ಇದೇ ಸಮುದ್ರವನ್ನು ಬಳಸಲಾಗುತ್ತದೆ. ಅಣ್ವಸ್ತ್ರ  ಸಾಮಥ್ರ್ಯದ ಆಕಾಶ್, ಪೃಥ್ವಿ,  ಅಗ್ನಿ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ಕೈಗೊಳ್ಳಲಾಗುತ್ತದೆ.

No comments:

Post a Comment