ಜೀವನಯಾನ

Sunday, June 9, 2013

ಪ್ಯಾರಿಸ್ ನ ಐಫೆಲ್ ಗೋಪುರ

ಪ್ಯಾರಿಸ್ ನಗರದ ಹೆಗ್ಗುರುತಾಗಿ ಕಳೆದ ನೂರಾರು ವರ್ಷಗಳಿಂದ ಐಫೆಲ್ ಗೋಪುರ ತಲೆಎತ್ತಿ ನಿಂತಿದೆ. 1889ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಐಫೆಲ್ ಗೋಪುರ ನಿರ್ಮಾಣ ಮಾಡಲಾಗಿದೆ. ಇದು ಯುರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಹೌದು. ನಗರದ ಮಧ್ಯೆ ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಿರುವ ಈ ಗೋಪುರ ಪ್ಯಾರಿಸ್ನ ಎಲ್ಲೇ ನಿಂತು ನೋಡಿದರೂ ಕಾಣಸಿಗುತ್ತದೆ. ಸಂಪೂರ್ಣ ಕಬ್ಬಿಣದಿಂದಲೇ ಮಾಡಲ್ಪಟ್ಟಿರುವುದು
ಈ ಗೋಪುರದ ವಿಶೇಷತೆ.
 

ಶತಮಾನೋತ್ಸವ:
ಫ್ರಾನ್ಸ್ ಮಹಾಕ್ರಾಂತಿಯ ಶತಮಾನೋತ್ಸವದ ಸಂಭ್ರಮಾಚರಣೆಗಾಗಿ ನಡೆದ ವಸ್ತುವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಡರ್ ಗುಸ್ತಾವ್ ಐಫೆಲ್ ನಿರ್ಮಿಸಿದ ವಿನ್ಯಾಸದ ಮಾದರಿ ಬಹುಮಾನ ಗಳಿಸಿತ್ತು. ಹೀಗಾಗಿ ವಿನ್ಯಾಸಕರ್ತ ಗುಸ್ತಾವ್ ಐಪೆಲ್ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಗಿದೆ. ನ್ಯೂಯಾರ್ಕ್ ನಲ್ಲಿರುವ ಲಿಬರ್ಟಿ ಪ್ರತಿಮೆಯ ನಿಮಾತೃನೂ  ಈತನೇ ಆಗಿದ್ದಾನೆ. ಇವೆರಡೂ ಶತಮಾನೋತ್ಸವ ಆಚರಿಸಿವೆ.
ಐಫೆಲ್ ಗೋಪುರ 324 ಮೀಟರ್ (1064 ಅಡಿ) ಎತ್ತರವಿದೆ. ಗೋಪುರದ ಮೇಲೆ 20.25 ಮೀಟರ್ ಉದ್ದದ ಟೀವಿ ಟ್ರಾನ್ಸ್ ಮೀಟರ್ ಅಳವಡಿಸಲಾಗಿದೆ. ಅಂದರೆ ಈ ಗೋಪುರ 81 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿ ನಿಲ್ಲುತ್ತದೆ. ಇದರ ಒಟ್ಟು ತೂಕ 10 ಸಾವಿರ ಟನ್ನಷ್ಟಿದ್ದು, 7,500 ಟನ್ ಕಬ್ಬಿಣ ಬಳಕೆ ಮಾಡಲಾಗಿದೆ. 1887 ಜನವರಿ 26ರಂದು ಐಫೆಲ್ ಗೋಪುರ ನಿರ್ಮಾಣ ಕಾರ್ಯ ಆರಂಭವಾಯಿತು. ಇದನ್ನು ಕಟ್ಟಿ ಮುಗಿಸಲು 2 ವರ್ಷ ಆರು ತಿಂಗಳು ಬೇಕಾಯಿತು. ಅನೇಕ ವರ್ಷಗಳ ಕಾಲ ಇದು  ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.

ಮೂರು ವೀಕ್ಷಣಾ ಅಂತಸ್ತು:
ನಾಲ್ಕು ಕಡೆ ಭಾರೀ ಕಮಾನಿನಾಕಾರದ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕುಕಡೆ ಜನರು ನಿಂತು ಪ್ಯಾರಿಸ್ ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ನೆಲದಿಂದ 57 ಮೀಟರ್ ಎತ್ತರದಲ್ಲಿ ಮೊದಲ ಅಂತಸ್ತಿದೆ. 115 ಮೀ. ಎತ್ತರದಲ್ಲಿ ಎರಡನೇ ಅಂತಸ್ತು ಮತ್ತು 247 ಮೀಟರ್ ಎತ್ತರದಲ್ಲಿ ಮೂರನೇ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೆರುತ್ತಾ ಹೋದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಲೆ 63 ಜನರನ್ನು ಒಯ್ಯಬಲ್ಲ ಮೂರು ಲಿಫ್ಟುಗಳಿವೆ. ಹತ್ತುಹೋಗಬೇಕೆಂದರೆ 1269 ಮೆಟ್ಟಿಲುಗಳನ್ನು ಹತ್ತಬೇಕು. ನಿರ್ಮಾಣ ಸಮಯದಲ್ಲಿ 20 ವರ್ಷಗಳ ನಂತರ ಗೋಪುರವನ್ನು ಕಳಚಿಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ ಮೊದಲನೇ ಮಹಾಯುದ್ಧ ಆರಂಭವಾಯಿತು. ಇದರಿಂದ ಐಫೆಲ್ ಗೋಪುರ ಮಿಲಿಟರಿ ಸಂಪರ್ಕ ಕೇಂದ್ರವಾಗಿ ಸಹಾಯಕವಾಯಿತು ಹೀಗಾಗಿ ಅದನ್ನು ಕಳಚಿಹಾಕುವ ಪ್ರಶ್ನೆಯೇ ಬರಲಿಲ್ಲ. ಬಳಿಕ ನೂರಕ್ಕೂ ಹೆಚ್ಚು ವರ್ಷಗಳ ಕಾಲ ತಲೆಎತ್ತಿನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.


ರಾಷ್ಟ್ರೀಯ ಸ್ಮಾರಕ:
1967ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಫ್ರೆಂಚರಿಗೆ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ನಲ್ಲಿ ನಡೆಯುವ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ದೀಪಾಲಂಕಾರಗೊಂಡ ರಾತ್ರಿ ಸುಮಾರು 40 ಕಿ.ಮೀ.ಆಚೆಗೂ ಇದರ ಬೆಳಕು ಪಸರಿಸುತ್ತಾ ಚಿನ್ನದ ಆಕಾರದಲ್ಲಿ ಹೊಳೆಯುತ್ತದೆ. ಪ್ರತಿ 7 ವರ್ಷಕ್ಕೊಮ್ಮೆ ಗೋಪುರಕ್ಕೆ ಬಣ್ಣ ಬಳಿಯಲಾಗುತ್ತದೆ. ಇದಕ್ಕಾಗಿ 50 ಟನ್ ಬಣ್ಣ ಬೇಕಾಗುತ್ತದೆ.

ಪ್ರಸಿದ್ಧ ಪ್ರವಾಸಿತಾಣ: 
ಐಫೆಲ್ ಗೋಪುರ ವಿಶ್ವದಲ್ಲಿಯೇ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ  ಒಂದೆನಿಸಿದೆ. ಲಕ್ಷಾಂತರ ಪ್ರವಾಸಿಗರು ಇದರ ವೀಕ್ಷಣೆಗೆ ಆಗಮಿಸುತ್ತಾರೆ. ಇದುವರೆಗೆ ಸುಮಾರು ಒಂದು ಕೋಟಿಗೂ ಅಧಿಕ ಪ್ರವಾಸಿಗರು ಈ ಗೋಪುರವನ್ನು ವೀಕ್ಷಿಸಿದ್ದಾರೆ.

No comments:

Post a Comment