ಜೀವನಯಾನ

Sunday, March 3, 2013

ಕತ್ತಲ ಜಗತ್ತಿನ ಕುಬ್ಜ ಆಕ್ಟೊಪಸ್

ಉದ್ದನೆಯ ಎಂಟು ಕಾಲುಗಳುಳ್ಳ ಆಕ್ಟೊಪಸ್ ನಮಗೆಲ್ಲಾ ಗೊತ್ತು. ಆದರೆ, ಅದರಲ್ಲಿ ಕುಬ್ಜವೆನಿಸಿದ ರೆಕ್ಕೆಗಳ ಮೂಲಕ ನೀರಿನಲ್ಲಿ ಈಜುವ ಆಕ್ಟೊಪಸ್ ಒಂದಿದೆ. ಅದೇ ಡಂಬೊ ಆಕ್ಟೊಪಸ್. ಆದರೆ, ಇದು ಇರುವುದು ಯಾರೂ ಹೋಗಲಾಗದ ಕತ್ತಲ ಜಗತ್ತಿನಲ್ಲಿ. ತಲೆಯ ಮೇಲ್ಭಾಗದಲ್ಲಿ ಕಿವಿಯಂತಿರುವ ರೆಕ್ಕೆಗಳು ಮತ್ತು ಕಾರ್ಟೂನ್ ಗಳಲ್ಲಿನ ಕಾಲ್ಪನಿಕ ಹಾರುವ ಆನೆಯ ಆಕೃತಿಯಿಂದಾಗಿ ಇವುಗಳಿಗೆ ಡಂಬೊ ಆಕ್ಟೊಪಸ್ ಎನ್ನುವ ಹೆಸರು ಬಂದಿದೆ. 
 
 ಬಹುತೇಕ ಸಮುದ್ರದ ಆಳದಲ್ಲಿ ವಾಸಿಸುವುದರಿಂದ ಇದರ ಪರಿಚಯ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಸಮುದ್ರದ ಸುಮಾರು 400 ಮೀಟರ್ನಿಂದ 7 ಕಿ.ಮೀ. ಆಳದಲ್ಲಿ ಇವು ಕಂಡುಬರುತ್ತದೆ. ಸಮುದ್ರ ತಳದಿಂದ ಸ್ವಲ್ಪ ಮೇಲ್ಭಾದಲ್ಲಿ ಇವು ಹೆಚ್ಚಾಗಿರುತ್ತವೆ. ಡಂಬೊ ಆಕ್ಟೊಪಸ್ನ್ನು ಪ್ರತ್ಯಕ್ಷವಾಗಿ ನೋಡ ಬಯಸುವವರು ಸಮುದ್ರದ ಕನಿಷ್ಠ 6.600 ಅಡಿಯಷ್ಟಾದರೂ ಆಳಕ್ಕೆ ಇಳಿಯುವ ಸಾಹಸಮಾಡಬೇಕು. ಏಕೆಂದರೆ ಈ ಆಕ್ಟೊಪಸ್ ಎಂದಿಗೂ ಮೇಲೆ ಬರುವುದಿಲ್ಲ. ಇಷ್ಟೊಂದು ಗುಪ್ತವಾಗಿ ವಾಸಿಸುವ ಇವು ಸೂರ್ಯನ ಬೆಳಕನ್ನೇ ನೋಡುವುದಿಲ್ಲ!


ಕಿವಿಯಿಂದ ಈಜಾಡುತ್ತೆ:
ಇದರ ವಿಶಿಷ್ಟತೆಯೆಂದರೆ ತಲೆಯ ಮೇಲಿರುವ ಕಿವಿಯಂತಿರುವ ಎರಡು ರೆಕ್ಕೆ. ಹಕ್ಕಿಯಂತೆ ಈ ರೆಕ್ಕೆಗಳನ್ನು ಬಡಿಯುತ್ತಾ ನೀರಿನಲ್ಲಿ ಸರಾಗವಾಗಿ ಈಜಾಡುವುದನ್ನು ವೀಕ್ಷಿಸುವದೇ ಒಂದು ಸುಂದರ ಅನುಭವ. ಇದರ ತಲೆ ದೇಹಕ್ಕಿಂಲೂ ದೊಡ್ಡದು. ಜತೆಗೆ ಒಂದಕ್ಕೊಂದು ಹೊಂದಿಕೊಂಡಿರುವ ಅಷ್ಟಪಾದಗಳನ್ನು ಸಂಕುಚನ-ವಿಕಸನಗೊಳಿಸುತ್ತಾ ಅಥವಾ ಮೂಗಿನ ಮೂಲಕ ನೀರು ಹೊರಬಿಟ್ಟು ಮುಂದಕ್ಕೆ ಸಾಗುತ್ತವೆ. ಡಂಬೊ ಆಕ್ಟೊಪಸ್ ಗಾತ್ರದಲ್ಲಿ 8 ಇಂಚಿನಷ್ಟು ದೊಡ್ಡದಿರುತ್ತದೆ. ಇವು ಮೃದುವಾದ ದೇಹ ಹೊಂದಿರುವುದರಿಂದ ಆಳ ಸಮುದ್ರದಲ್ಲಿ ವಾಸಿಸಲು ಸಾಧ್ಯವಾಗಿದೆ. ಡಂಬೊ ಆಕ್ಟೊಪಸ್ ನಲ್ಲಿ 37 ವೈವಿಧ್ಯಮಯ ಪ್ರಜಾತಿಗಳಿದ್ದು, ಆಕಾರ  ಮತ್ತು ಬಣ್ಣದಲ್ಲಿ ಒಂದಕ್ಕೊಂದು ವಿಭಿನ್ನ. ಅಷ್ಟೇಅಲ್ಲ ಗಂಡು ಮತ್ತು ಹೆಣ್ಣಿನ ಆಕಾರದಲ್ಲಿ ಸಂಪೂರ್ಣ ವ್ಯತ್ಯಾಸವಿದೆ.

 
ಇಡಿಯಾಗಿಯೇ ನುಂಗುತ್ತದೆ:
ಜಗತ್ತಿನ ಎಲ್ಲಾ ಏಳು ಮಹಾಸಾಗರಗಳಲ್ಲಿಯೂ ಇವು ಕಂಡುಬರುತ್ತವೆ. ಸಂಪೂರ್ಣ ಅಂಧಕಾರದಲ್ಲಿ ಬದುಕು ನಡೆಯುವುದರಿಂದ ಇದರ ಕಣ್ಣಿನ ದೃಷ್ಟಿ ಮಂದವಾಗಿರುತ್ತದೆ. ಇಲ್ಲಿ ಆಹಾರ ದೊರಕುವುದೇ ಅಪರೂಪವಾಗಿರುವುದರಿಂದ ಸಿಕ್ಕಿದ ಆಹಾರವನ್ನು ಬಹುಬೇಗನೆ ತಿನ್ನಬೇಕು. ಆದರೆ, ಆಹಾರ ಜೆಗೆದು ತಿನ್ನಲು ಈ ಆಕ್ಟೊಪಸ್ ಬಾಯಿಯಲ್ಲಿ ಹಲ್ಲುಗಳೇ ಇಲ್ಲ. ಹೀಗಾಗಿ ಇವು ಬೇಟೆಯನ್ನು ಇಡಿಯಾಗಿಯೇ ನುಂಗುತ್ತದೆ. ಇದರ ಅಷ್ಟ ಪಾದಗಳು ಪುಟ್ಟದಾಗಿದ್ದು, ಒಂದಕ್ಕೊಂದು ಜೋಡಣೆಯಾಗಿರುತ್ತದೆ. ಇದು ಈಜಾಡಲು ಮತ್ತು ಬೇಟೆಯನ್ನು ಹಿಡಿದುಕೊಳ್ಳಲು ನೆರವಾಗುತ್ತದೆ. ಡಂಬೋ ಆಕ್ಟೊಪಸ್ ಕುಬ್ಜವಾಗಿದ್ದರೂ ಉತ್ತಮ ಈಜುಗಾರ. 
ಇವು ಪಾರದರ್ಶಕವಾದ ತಮ್ಮ ಮೈಯನ್ನು ಬೇಕೆಂದಾಗ ತೊಳೆದುಕೊಳ್ಳತ್ತವೆ. ಇದರ ಸಂತಾನ ಕ್ರಮವೇ ವಿಚಿತ್ರ. ವರ್ಷದ ಎಲ್ಲಾ ಋತುವಿನಲ್ಲೂ ಮೊಟ್ಟೆ ಇಡುತ್ತಲೇ ಇರುತ್ತದೆ. ಗಂಡು ಆಕ್ಟೊಪಸ್ ವೀರ್ಯದ ಚೀಲವನ್ನು ಹೆಣ್ಣಿಗೆ ರವಾನಿಸುತ್ತದೆ. ಹೆಣ್ಣು ಅವುಗಳನ್ನು ಫಲಗೊಳಿಸಿ ಒಂದೊಂದೆ ಮೊಟ್ಟೆಗಳನ್ನು ಸಮುದ್ರದ ತಳದಲ್ಲಿ ಇಟ್ಟು ಬರುತ್ತದೆ.

No comments:

Post a Comment