ಜೀವನಯಾನ

Friday, March 15, 2013

ಹೆಂಡಗುಡುಕ ಪ್ರಾಣಿ ಪೆನ್ ಟೇಲ್ಡ್ ಟ್ರೀ ಶ್ರೂ!


ಮನುಷ್ಯರಂತೆ ಪ್ರಾಣಿಯೂ ಹೆಂಡ ಕುಡಿಯುತ್ತೆ. ಜಗತ್ತಿನಲ್ಲಿಯೇ ಮಹಾನ್ ಹೆಂಡಗುಡುಕನೆಂಬ ಬಿರುದನ್ನೂ ಸಹ ಪಡೆದುಕೊಂಡಿದೆ. ಈ ಹೆಂಡಗುಡುಕನ ಹೆಸರು ಪೆನ್ ಟೇಲ್ಡ್ ಟ್ರೀ ಶ್ರೂ! ಇದರೊಂದಿಗೆ ಪೈಪೋಟಿಗೆ ನಿಂತರೆ ಮನುಷ್ಯರು ಕೂಡಾ ಹಿಂದೆ ಬೀಳುವುದು ಖಂಡಿತ. ಇಲಿಯ ಆಕಾರದ ಈ ಸಸ್ತನಿಗೆ ರಾತ್ರಿಯ ಹೊತ್ತು ಹೆಂಡ ಕುಡಿಯದೇ ನಿದ್ದೆಯೇ ಬರುವುದಿಲ್ಲವಂತೆ. 


ದೇವರು ಮಾಡಿದ ಬಾರು!
ಪ್ರತಿದಿನ ಕನಿಷ್ಠವೆಂದರೂ ಎರಡು ತಾಸನ್ನು ಹೆಂಡ ಕುಡಿಯುವುದಕ್ಕೆ ಮೀಸಲಿಡುತ್ತವೆ ಪೆನ್ ಟೇಲ್ಡ್ ಟ್ರೀ ಶ್ರೂ. ಹಾಗಂತ ಇವು ಬಿಯರ್ ಬಾಟಲಿಗೆ ಕೈ ಹಾಕುವುದಿಲ್ಲ. ಇವುಗಳಿಗಾಗಿ ದೇವರೇ ಬಾರನ್ನು ನಿರ್ಮಿಸಿಕೊಟ್ಟಿದ್ದಾನೆ! ಬೆರ್ಟೆಮ್ ಜಾತಿಯ ತಾಳೆ ಮರಗಳಲ್ಲಿ ನೈಸರ್ಗಿಕವಾಗಿ ಮಕರಂದದ ರೂಪದಲ್ಲಿ ಮದ್ಯ ಶೇಖರಣೆಗೊಂಡಿರುತ್ತದೆ. ಟ್ರೀ ಶ್ರೂ ರಾತ್ರಿಯಾಗುತ್ತಿದಂತೆ ತಾಳೆಮರಗಳ ಮೊಗ್ಗಿನಲ್ಲಿ ಅಡಗಿರುವ ಮದ್ಯ ಹೀರಲು ಶುರುಹಚ್ಚಿಕೊಳ್ಳುತ್ತವೆ. ಈ ತಾಳೆ ಮರಗಳ ಹೂವಿನ ಮಕರಂದ 8.3ರಷ್ಟು ಮದ್ಯದ ತಾಕತ್ತು ಹೊಂದಿರುತ್ತದೆ. ಅಂದರೆ ಇದರ ಪ್ರಮಾಣ ಅನೇಕ ಬಿಯರ್ ಬಾಟಲಿಗೆ ಸಮ. ಮನುಷ್ಯ ಕಂಟಗಟ್ಟಲೆ ಕುಡಿಯುವಷ್ಟೇ ಮದ್ಯವನ್ನು ಇವು ಕೂಡಾ ಸೇವಿಸುತ್ತವೆ. ಆದರೆ ಬಾಟಲಿಯ ಲೆಕ್ಕದಲ್ಲಿ ಅಲ್ಲ. ಎಷ್ಟೇ ಹೆಂಡ ಕುಡಿದರೂ ಟ್ರೀ ಶ್ರೂಗಳಳಿಗೆ ಅಮಲು ಏರುವದೇ ಇಲ್ಲ. ಮನುಷ್ಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಜೀರ್ಣಿಸಿಕಕೊಳ್ಳುವ ತಾಕತ್ತು ಟ್ರೀ ಶ್ರೂಗಳಿಗೆ ಇದೆ. ಪ್ರತಿದಿನ ರಾತ್ರಿ ಕನಿಷ್ಠವೆಂದರೂ 12 ಗ್ಲಾಸಿನಷ್ಟು ವೈನ್ ಗಳನ್ನು ತಾಳೆ ಮರದಿಂದ ಹೀರುತ್ತವೆ. ಹೀಗೆ ಮದ್ಯಪಾನ ಮಾಡಿದಾಗ ಇವು ತಮ್ಮ ತೂಕ ಹೆಚ್ಚಿಸಿಕೊಳ್ಳುತ್ತದೆ.



ಶಾಯಿ ಪೆನ್ನಿನ ಆಕಾರದ ಬಾಲ
ಈ ವಿಶಿಷ್ಟ ಹೆಂಡಗುಡುಕ ಪ್ರಾಣಿಯನ್ನು ಇಂಡೋನೇಷಿಯಾ, ಮಲೆಷಿಯಾ ಮತ್ತು ಥೈಲ್ಯಾಂಡ್ ನ ಅರಣ್ಯಗಳಲ್ಲಿ ಕಾಣಬಹುದಾಗಿದೆ. ಇವು ಹಳೆಯ ಸ್ಕಾಂಡೆಂಟಿಯಾ ಪ್ರಭೇದಕ್ಕೆ ಸೇರಿದೆ. ಇದರಲ್ಲಿ ಸುಮಾರು 20 ಜಾತಿಗಳಿವೆ. ಇವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತವೆ. ನದಿ ಕೆರೆಗಳು ಕಂಡರೆ ಪದೇ ಪದೇ ಸ್ನಾನ ಮಾಡುತ್ತವೆ. ದೇಹಕ್ಕಿಂತಲೂ ದೊಡ್ಡದಾಗಿರುವ ಇದರ ಬಾಲ 7 ವರೆ ಇಂಚಿನಷ್ಟು  ಉದ್ದವಾಗಿರುತ್ತದೆ. ಇದರ ಬಾಲ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಶಾಯಿಬಾಟಲಿಯಲ್ಲಿ ಅದ್ದಿದ ಗರಿಗಳುಳ್ಳ ಲೇಖನಿಯ ರೀತಿಯಲ್ಲಿ ಇರುವುದರಿಂದ ಪೆನ್ ಟೇಲ್ಡ್ ಎನ್ನುವ ಹೆಸರು ಬಂದಿದೆ. ಅದೇರೀತಿ ಮರಗಳಮೇಲೆಯೇ ಹೆಚ್ಚಾಗಿ ವಾಸಮಾಡುವುದರಿಂದ ಟ್ರೀ ಶ್ರೂ ಎಂದು ಕರೆಸಿಕೊಂಡಿದೆ. ಚೋಟುದ್ದ ಇರುವ ಇದಕ್ಕೆ ಮಾರುದ್ದದ ಬಾಲ ಯಾತಕ್ಕೆ ಎಂದು ಕೇಳಬೇಡಿ. ಬಾಲದಿಂದಲೂ ಉಪಯೋಗವಿದೆ. ಟ್ರೀ ಶ್ರೂ ಮರ ಹತ್ತುವುದರಲ್ಲಿ ಭಲೇ ನಿಪುಣ. ಉದ್ದನೆಯ ಬಾಲವನ್ನು ಬೆಲೆನ್ಸ್ ಮಾಡುತ್ತಾ ಎಂಥಾ ಮರವನ್ನಾದರೂ ಹತ್ತಿ ಹೆಂಡ ಕುಡಿಯುತ್ತದೆ.

ಹೆಂಡ ಹೀರಲು ಮರಗಳೇ ಸಿಗುತ್ತಿಲ್ಲ
ಬರಿ ಹೆಂಡ ಕುಡಿಯುವುದರಿಂದ ಇದರ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ಕೀಟ, ಇಲಿ, ಸಣ್ಣಹಕ್ಕಿ, ಹಲ್ಲಿಗಳನ್ನೂ ಇವು ತಿನ್ನುತ್ತವೆ. ಇವು ಹೆಚ್ಚಾಗಿ ಗುಂಪಾಗಿ ವಾಸಿಸುತ್ತವೆ. ತಮಗೆ ಅಪಾಯ ಎದುರಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮೊಳಗೇ ಜಗಳವಾಡಿಕೊಳ್ಳುತ್ತವೆ.  ಇವುಗಳ ದೃಷ್ಟಿ, ಕೇಳಿಸಿಕೊಳ್ಳುವ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಅತ್ಯುತ್ತಮವಾಗಿದೆ. ಇವುಗಳ ತಲೆ ಮತ್ತು ದೇಹ ಸುಮಾರು 20 ಸೆಂ.ಮೀ ನಷ್ಟು ದೊಡ್ಡದಾಗಿರುತ್ತದೆ. ಆವಾಸ ಸ್ಥಾನಗಳ ನಾಶ ಮತ್ತು ಅರಣ್ಯ ನಾಶದಿಂದಾಗಿ ಇಂದು ಈ ವಿಶಿಷ್ಟ ಪ್ರಾಣಿ ಅಳಿವಿನ ಅಂಚಿನಲ್ಲಿದೆ. ಇವು ತಮ್ಮ ದಿನಿತ್ಯದ ಚಟುವಟಿಕೆಯಾದ ಹೆಂಡ ಹೀರುವುದಕ್ಕೆ ಮರಗಳೇ ಸಿಗದೆ ಚಡಪಸುತ್ತಿವೆ.

 

No comments:

Post a Comment