ಜೀವನಯಾನ

Tuesday, February 5, 2013

ರಣ ಹದ್ದು ಎಂಬ ಆಕಾಶದ ಕಾವಲುಗಾರ

ರಣ ಹದ್ದು! ಈ ಹೆಸರು ಕೇಳಿದರೇ ಮಕ್ಕಳಾದಿಯಾಗಿ ಎಲ್ಲರಿಗೂ ಭಯ. ಆಕಾಶದಲ್ಲಿ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಶವಗಳ ಸುತ್ತ ದಿಢೀರನೆ ಪ್ರತ್ಯಕ್ಷವಾಗುತ್ತಿದ್ದ, ನಮ್ಮ ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತಿದ್ದ ರಣ ಹದ್ದುಗಳು ಈಗ ನಿಧಾನವಾಗಿ ನಮ್ಮಿಂದ ಕಣ್ಮರೆಯಾಗುತ್ತಿವೆ. ಹಿಂದೊಮ್ಮೆ ಭಾರತದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳು ತಲೆಯ ರಣ ಹದ್ದುಗಳು ಕಾಣ ಸಿಗುವದೇ ಅಪರೂಪ.



ಲಕ್ಷಣಗಳು:

  • ಬೋಳು ತಲೆ, ಉದ್ದನೆಯ ಕತ್ತು, ಚಿಕ್ಕ ಬಾಲ, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲವಾದ ರೆಕ್ಕೆ. ಭಯ ಹುಟ್ಟಿಸುವ ಕಣ್ಣು ಇವಿಷ್ಟು ಬಿಳಿ ಹಿಂತಲೆಯ ರಣ ಹದ್ದಿನ ವಿಶೇಷತೆ. 
  • ಆಫ್ರಿಕಾದಲ್ಲಿ ಕಂಡುರುವ ಹದ್ದುಗಳಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ ಬಿಳಿ ಹಿಂತಲೆಯ ರಣ ಹದ್ದು. ಇದನ್ನು ಹಳೆ ಜಗತ್ತಿನ ಹದ್ದು ಎಂದು ಗುರುತಿಸಲಾಗಿದೆ. ಈ ತಲೆಮಾರಿನ ಹದ್ದುಗಳ ತಲೆ ಗರಿಗಳಿಂದ ತುಂಬಿರುತ್ತದೆ.
  •  ಜತೆಗೆ ಗಾತ್ರದಲ್ಲಿಯೂ ಚಿಕ್ಕದು. ಆದರೆ, ಬೋಳು ತಲೆಯ ರಣ ಹದ್ದು 4ರಿಂದ 7 ಕೇಜಿ ಭಾರ ಮತ್ತು 94 ಸೆ.ಮೀ.ನಷ್ಟು ಉದ್ದ ಮತ್ತು 218 ಸೆ.ಮೀ ನಷ್ಟು ಅಗಲವಾದ ರೆಕ್ಕೆ ಹೊಂದಿದೆ. 
  • ಈ ಜಾತಿಯ ಹದ್ದುಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ಜಾತಿಗೆ ಸೇರಿದ ಬಿಳಿ ಪೃಷ್ಠದ ರಣ ಹದ್ದು ಭಾರತದಲ್ಲಿಯೂ ಕಂಡು ಬರುತ್ತದೆ. ಬೋಳು ತಲೆ ರಣ ಹದ್ದು ಕೇವಲ ಮಾಂಸವನ್ನು ಮಾತ್ರ ತಿನ್ನುತ್ತವೆ.

ಮಾನವನೇ ಶತ್ರು:

 ಮಾನವನನ್ನು ಬಿಟ್ಟರೆ ಹುಲಿಯಿಂದ ಮಾತ್ರ ಇವುಗಳನ್ನು ಬೇಟೆಯಾಡಲು ಸಾಧ್ಯ. ಉಳಿದಂತೆ ಇವಕ್ಕೆ ಯಾರೂ ವೈರಿಗಳಿಲ್ಲ. ವೈರಿಗಳಿಂದ ಪಾರಾಗುವ ಸಲುವಾಗಿ ಇವು ಈಗತಾನೇ ತಿಂದ ಆಹಾರವನ್ನು ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಬ್ಬು ವಾಸನೆ ಸೂಸುವ ವಾಂತಿ ಮಾಡುತ್ತವೆ. ಹೀಗಾಗಿ ಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ.  


ಆಕಾಶದಲ್ಲಿ ಗಸ್ತು:
ಹದ್ದು ಶ್ರಮವಿಲ್ಲದೇ ಹಾರಾಟ ನಡೆಸುತ್ತವೆ. ರೆಕ್ಕೆ ಬಡಯದೇ ಒಂದು ತಾಸುಗಳ ಕಾಲ ಆಕಾಶದಲ್ಲಿ ಸುತ್ತುಹೊಡೆಯಬಲ್ಲದು. ಈ ತಲೆಮಾರಿನ ಹದ್ದುಗಳು ವಾಸನೆಯ ಮೂಲಕ ಆಹಾರ ಹುಡುಕುವ ಸಾಮರ್ಥ್ಯ ಹೊಂದಿದ್ದರೆ, ಹಳೆ ಜಗತ್ತಿನ ಹದ್ದು ಎಂದು ಗುರುತಿಸಿಕೊಂಡಿರುವ ಬೋಳು ತಲೆಯ ರಣ ಹದ್ದು ಕಣ್ಣಿನ ಸಹಾಯದಿಂದ ಆಹಾರ ಹುಡುಕುತ್ತದೆ. ಇದರ ದೃಷ್ಟಿ ಮಾನವನಿಗಿಂತ 8 ಪಟ್ಟು ಸೂಕ್ಷ್ಮ. ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲದು. ಆಕಾಶದಲ್ಲಿ ಇವು ಸುತ್ತು ಹೊಡೆಯುತ್ತಾ ಕ್ರಮೇಣ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ. ಗುಂಪಾಗಿಯೇ ದಾಳಿ ನಡೆಸುತ್ತವೆ. ಸತ್ತ ಪ್ರಾಣಿಗಳ ಮುಂದೆ ನೂರಕ್ಕೂ ಹೆಚ್ಚು ಹದ್ದು ಜಮಾವಣೆಗೊಂಡು ಹಂಚಿಕೊಂಡು ಆಹಾರ ತಿನ್ನುತ್ತವೆ.

ಹಾರಾಟಕ್ಕೆ ಕೊನೆಯೇ ಇಲ್ಲ:

ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. 12 ಕಿಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿಮೀ ವೇಗದಲ್ಲಿ ಸಾವಿರಾರು ಕಿಮೀ ಸುತ್ತಳತೆಯನ್ನು ಗಸ್ತು ಹೊಡೆಯುತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ. ಎತ್ತರದ ಮರಗಳ ತತ್ತತುದಿಯಲ್ಲಿ ಇವು ಗೂಡು ಕಟ್ಟುತ್ತದೆ. ಆದರೆ ಈ ದೊಡ್ಡ ಹದ್ದುಗಳ ಗೂಡು ಕಾಗೆ ಗೂಡಿನಷ್ಟೇ ಚಿಕ್ಕದು.

ಪರಿಸರ ಸ್ನೇಹಿ:
ಹದ್ದು ಕೊಳೆತ ಪ್ರಾಣಿಗಳ ದೇಹವನ್ನು ತನ್ನುವುದರಿಂದ ಹರಡಬಹುದಾದ ರೋಗ-ರುಜಿನೆಗಳಿಂದ ಊರನ್ನು ರಕ್ಷಿಸುತ್ತಿದ್ದವು. ಪಾರ್ಸಿ ಜನಾಂಗದವರ ದೇಹ ತಿನ್ನಲೂ ರಣ ಹದ್ದುಗಳೇ ಬೇಕು. ಆದರೆ ಬೋಳು ತಲೆಯ ರಣ ಹದ್ದು ಕ್ರಮೇಣ ಅಳಿವಿನ ಅಂಚಿಗೆ ತಲುಲಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ.

 

No comments:

Post a Comment