ಜೀವನಯಾನ

Sunday, January 20, 2013

ಘೋರ ವಿಷಕಾರಿ ಡಾರ್ಟ್ ಕಪ್ಪೆ

ಹುಳಹಪ್ಪಟೆಗಳನ್ನು ತಿಂದು ಬದುಕುವ ಕಪ್ಪೆಗಳನ್ನು ಉಪದ್ರವಕಾರಿಯಲ್ಲದ ಒಂದು ಸಾದು ಪ್ರಾಣಿ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ, ಹಾವಿಗಿಂತಲೂ ವಿಷಕಾರಿಯಾದ, ಒಂದೇ ಒಂದು ತೊಟ್ಟು ವಿಷದಿಂದ ವೈರಿಗಳನ್ನು ಸಾಯಿಸುವ ತಾಕತ್ತು ಕಪ್ಪೆಗಳಲ್ಲಿಯೂ ಇದೆ! ಈ ಸಾಮಥ್ರ್ಯ ಇರುವುದು ದಕ್ಷಿಣ ಅಮೆರಿಕದ ಕಾಡುಗಳಲ್ಲಿ 
ಮಾತ್ರ ಕಂಡುಬರುವ  ಡಾರ್ಟ್ ಕಪ್ಪೆಗಳಿಗೆ. 

ಡಾರ್ಟ್ ಕಪ್ಪೆಯನ್ನು ಜಗತ್ತಿನಲ್ಲಿಯೇ ಅತ್ಯಂತ ವಿಷಕಾರಿ ಪ್ರಾಣಿ ಎಂದು ಗುರುತಿಸಲಾಗಿದೆ. ಇವು ಚರ್ಮದ ಮೂಲಕ ವಿಷ ಹೊರ ಸೂಸುತ್ತವೆ. ಹೀಗಾಗಿ ಇಲ್ಲಿನ ಆದಿವಾಸಿ ಜನರು ಈ ಕಪ್ಪೆಗಳ ಚರ್ಮವನ್ನು ಬಾಣದ ತುದಿಗೆ ಅಂಟಿಸಿ ಬೇಟೆಗೆ ಬಳಸುತ್ತಿದ್ದರು. ಡಾರ್ಟ್  ಕಪ್ಪೆ ಕೇವಲ ಒಂದು ಇಂಚಿನಷ್ಟು (2.5 ಸೆ.ಮೀ.) ದೊಡ್ಡದಾಗಿರುತ್ತದೆ. ಕೇವಲ 28 ಗ್ರಾಮ್ ನಷ್ಟು ತೂಕವಿರುತ್ತದೆ. ಆದರೆ, ಇವುಗಳಲ್ಲಿಯೇ ಅತ್ಯಂತ ವಿಷಕಾರಿ ಎನಿಸಿಕೊಂಡಿರುವ ಗೋಲ್ಡನ್
ಡಾರ್ಟ್ ಕಪ್ಪೆಯ ಒಂದು ಹನಿ ವಿಷ 20, 000 ಇಲಿಗಳನ್ನು ಸಾಯಿಸಬಲ್ಲದು.


ಆಕರ್ಷಕ ಮೈಬಣ್ಣ: 
ಡಾರ್ಟ್ ಕಪ್ಪೆಗಳು ಡೆಂಡ್ರೊಬಾಟಿಡಾಯೆ ವಂಶಕ್ಕೆ ಸೇರಿದ್ದಾಗಿದೆ. ಆಕರ್ಷಕ ಬಣ್ಣಗಳಿಗೆ ಡಾರ್ಟ್ಕಪ್ಪೆಗಳು ಪ್ರಸಿದ್ಧಿ. ಇವುಗಳ ಮೈ- ಹಳದಿ, ಕಿತ್ತಳೆ, ಕೆಂಪು, ಹಸಿರು, ಕಪ್ಪು ಅಥವಾ ಕಡು ನೀಲಿ ಬಣ್ಣದಿಂದ ಕೂಡಿರುತ್ತದೆ. ಬಣ್ಣದಿಂದಲೇ ಇವು ವಿಷಕಾರಿ ಎನ್ನುವ ಸಂದೇಶ ವೈರಿಗಳಿಗೆ ರವಾನೆಯಾಗುತ್ತದೆ. ಅಲ್ಲದೇ ಚರ್ಮದಿಂದ ಕೆಟ್ಟ ವಾಸನೆ ಹೊರ ಸೂಸುತ್ತದೆ. ಇವುಗಳಲ್ಲಿ ಅನೇಕ ಪ್ರಜಾತಿಗಳಿದ್ದು, ಅವಗಳಲ್ಲಿ ಗೋಲ್ಡನ್ ಡಾರ್ಟ್ ಕಪ್ಪೆ 10 ಮನುಷ್ಯನನ್ನು ಸಾಯಿಸುವಷ್ಟು ವಿಷವನ್ನು ಹೊಂದಿರುತ್ತದೆ.

ಬೆನ್ನಿನಲ್ಲಿರುತ್ತೆ ಅಪಾಯಕಾರಿ ವಿಷ:
ಡಾರ್ಟ್ ಕಪ್ಪೆಗಳಿಗೆ ಅಪಾಯಕಾರಿ ವಿಷ ಬೆನ್ನಿನಲ್ಲಿರುವ ಗ್ರಂಥಿಗಳಲ್ಲಿ ಸಂಗ್ರಹವಾಗಿರುತ್ತದೆ. ಅಪಾಯ ಎದುರಾದಾಗ ಗ್ರಂಥಿಗಳ ಮೂಲಕ ವಿಷ ಹೊರಹಾಕುತ್ತದೆ. ಆದರೆ, ಈ ವಿಷ ದೇಹದ ಒಳಕ್ಕೆ ಪ್ರವೇಶಿಸುವುದಿಲ್ಲ. ಗಾಯವಾದ ಭಾಗಕ್ಕೆ ವಿಷ ತಗುಲಿದಾಗ ಮಾತ್ರ ಪ್ರಾಣಕ್ಕೆ ಸಂಚಕಾರ ಉಂಟಾಗುತ್ತದೆ. ಹೀಗಾಗಿ ಇವುಗಳನ್ನು ಬರಿಗೈಯಿಂದ ಮುಟ್ಟಿದರೂ ಏನೂ ಆಗುವುದಿಲ್ಲ. ಆದರೆ ವಿಷ ಒಮ್ಮೆ ರಕ್ತಕ್ಕೆ ಸೇರಿದರೆ ಸಾವಿನಿಂದ ಪಾರು ಮಾಡಲು ಯಾವುದೇ ಚಿಕಿತ್ಸೆ ಇಲ್ಲ. ವಿಷ ದೇಹದ ಒಳಗೆ ಇಳಿಯುವ ಮೊದಲೇ ಸೋಪಿನಿಂದ ತೊಳೆದುಕೊಳ್ಳುವುದರಿಂದ ಅಪಾಯದಿಂದ ಪಾರಾಗಬಹುದು.
ಡಾರ್ಟ್ ಕಪ್ಪೆಗಳ ಇನ್ನೊಂದು ವಿಶೇಷವೆಂದರೆ, ಮೊಟ್ಟೆಗಳನ್ನು ಇವು ಬೆನ್ನಿನ ಮೇಲೆ ಇಟ್ಟುಕೊಂಡು ಪೋಷಿಸುತ್ತವೆ. ಮೊಟ್ಟೆಗಳನ್ನು ಬೀಳದಂತೆ ನೋಡಿಕೊಳ್ಳುತ್ತವೆ. ಮೊಟ್ಟೆಗಳನ್ನು  ಬೆನ್ನಿನ ಮೇಲೆ ಇಟ್ಟುಕೊಂಡು ಹೋಗಿ ಗಿಡಗಳ ಸುಳಿಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಬಿಟ್ಟು ಬರುತ್ತವೆ. 

ವಿಷಕಾರಿಯಾಗಿದ್ದು ಹೇಗೆ?
ಡಾರ್ಟ್ ಕಪ್ಪೆಗಳು ಸೇವಿಸುವ ಕೆಲವೊಂದು ವಿಷಕಾರಿ ಇರುವೆಗಳು, ಕ್ರಿಮಿಕೀಟ ಮತ್ತು ಸಸ್ಯಗಳಿಂದ ಇವುಗಳ ದೇಹದಲ್ಲಿ ವಿಷ ಸಂಗ್ರಹವಾಗುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇವು ತಮ್ಮ ಅಂಟಾದ ನಾಲಿಗೆಯ ಮೂಲಕ ಬೇಟೆಯಾಡುತ್ತವೆ. ಇತರ ಉಭಯಚರಿ ಕಪ್ಪೆಗಳಂತೆ  ಡಾರ್ಟ್ ಕಪ್ಪೆಗಳಿಗೆ ಈಜಾಡಲು ಬರುವುದಿಲ್ಲ. ಇವು ಬಹುತೇಕ ಸಮಯ ನೆಲದ ಮೇಲೆ ಅಥವಾ ಮರದ ಮೇಲೆಯೇ ವಾಸಿಸುತ್ತವೆ. 

ವಿಷಕ್ಕೆ ಭಾರೀ ಬೇಡಿಕೆ:
ಡಾರ್ಟ್ ಕಪ್ಪೆಯ ವಿಷಕ್ಕೆ ಔಷಧಿಯ ಗುಣವಿದೆ. ನೋವು ನಿವಾರಕವಾಗಿ, ಸ್ನಾಯುಗಳ ಸಡಿಲಿಕೆಗೆ ಮತ್ತು ಹಸಿವು ಕಡಿಮೆ ಮಾಡಲು ಇವುಗಳ ವಿಷ ಬಳಸಲಾಗುತ್ತದೆ. ವಿಷಕ್ಕೆ ಭಾರೀ ಬೇಡಿಕೆ ಇರುವುದರಿಂದ ಮತ್ತು ಆವಾಸ ಸ್ಥಾನದ ನಾಶದಿಂದಾಗಿ
ಡಾರ್ಟ್ ಕಪ್ಪೆ ಅಳಿವಿನಂಚಿಗೆ ತಲುಪಿವೆ. ಔಷಧಿಯ ಬಳಕೆಗಾಗಿ ಈ ಕಪ್ಪೆಗಳನ್ನು ಸಾಕಲಾಗತ್ತದೆ. ಉತ್ತಮವಾಗಿ ನೋಡಿಕೊಂಡರೆ 6 ರಿಂದ 10 ವರ್ಷಗಳ ಕಾಲ ಇವು ಜೀವಂತವಾಗಿರುತ್ತವೆ. 70 ರಿಂದ 80 ಡಿಗ್ರಿಯಷ್ಟು ಉಷ್ಣಾಂಶದಲ್ಲಿಯೂ ಡಾರ್ಟ್ ಕಪ್ಪೆ ಬದುಕುಳಿಯುತ್ತವೆ.

No comments:

Post a Comment