ಜೀವನಯಾನ

Saturday, January 12, 2013

ಇಂಪಾಗಿ ಹಾಡುವ ಹಕ್ಕಿಗೆ ಮೈತುಂಬಾ ವಿಷ!

ಇದು ಪಕ್ಷಿ ಲೋಕದ ಏಕೈಕ ವಿಷಕಾರಿ ಹಕ್ಕಿ! ಪ್ರಾಣಿಗಳಲ್ಲಾದರೂ ಹಾವು, ಚೇಳು, ಎಂದೆಲ್ಲಾ ಒಂದಿಷ್ಟು ವಿಷಕಾರಿ ಪ್ರಾಣಿಗಳು ಸಿಗುತ್ತವೆ. ಕೀಟಗಳಲ್ಲಿ ನೋಡಿದರೂ ವಿಷಕಾರಿ ಕೀಟಗಳು ಸಾಕಷ್ಟಿವೆ. ಆದರೆ ಪಕ್ಷಿಲೋಕದಲ್ಲಿ ಹುಡುಕಿದರೆ ಸಿಕ್ಕುವುದು ಒಂದೇ ಒಂದು ವಿಷಕಾರಿ ಹಕ್ಕಿ. ಅದು ಹೂಡೆಡ್ ಪಿಟೊ ಹುಯಿ. 


ಇಂಪು ದನಿ, ಮೈಯೆಲ್ಲಾ ವಿಷ!
1990ರಲ್ಲಿ ಈ ವಿಷಕಾರಿ ಹಕ್ಕಿಯನ್ನು ಕಂಡುಹಿಡಿಯಲಾಯಿತು. ಈ ತನಕ ಇದನ್ನು ಪಕ್ಷಿಲೋಕದ ಏಕೈಕ ವಿಷಕಾರಿ ಹಕ್ಕಿ ಎಂದು ಪಕ್ಷಿತಜ್ಞರು ಗುರುತಿಸಿದ್ದಾರೆ. ಅಲ್ಲದೇ ಗಿನ್ನೆಸ್ ಬುಕ್ ಆಫ್ ವರ್ಲ್ದ್  ರೆಕಾರ್ಡ್ ನಲ್ಲಿ ಅತ್ಯಂತ  ವಿಷಕಾರಿ ಹಕ್ಕಿ ಎನ್ನುವ ಮಾನ್ಯತೆಗೆ ಪಾತ್ರವಾಗಿದೆ. ಈ ಹಕ್ಕಿ ಆಸ್ಟ್ರೇಲಿಯಾದ ಮೇಲ್ಭಾದಲ್ಲಿರುವ ನ್ಯೂಗಿನಿಯಾ ದ್ವೀಪದಲ್ಲಿ ಮಾತ್ರ ಕಂಡುಬರುತ್ತದೆ. ಮೈತುಂಬಾ ವಿಷವನ್ನೇ ತುಂಬಿಕೊಂಡಿರುವ ಈ ಹಕ್ಕಿಯ ವಿಶೇಷವೆಂದರೆ, ಬಾಯಿ ತೆರೆದರೆ ದನಿ ಮಾತ್ರ ಇಂಪು! ಹೂಡೆಡ್ ಪಿಟೊ ಹುಯಿಗಳು ಇಂಪಾಗಿ ಹಾಡಬಲ್ಲವು. ಚಿಕ್ಕ ಗಾತ್ರದ್ದಾಗಿರುವ ಇವುಗಳ ರೆಕ್ಕೆ, ತಲೆ, ಬಾಲದ ಪುಕ್ಕಗಳೆಲ್ಲಾ ಕಪ್ಪಾಗಿರುತ್ತವೆ. ಕೊಕ್ಕು ಸಹ ಕಪ್ಪಾಗಿದ್ದು, ಗಟ್ಟಿಯಾಗಿದ್ದಷ್ಟೇ ಹರಿತವಾಗಿಯೂ ಇರುತ್ತದೆ. ಆದರೆ ಈ ಹಕ್ಕಿಯ ಹಿಂಭಾಗ ಮಾತ್ರ ಕೇಸರಿ ಬಣ್ಣದಿಂದ ಕೂಡಿರುತ್ತದೆ.
ಹೂಡೆಡ್ ಪಿಟೊ ಹುಯಿಯಲ್ಲಿ ಒಟ್ಟು ಆರು ತಳಿಗಳಿವೆ. ಅವುಗಳಲ್ಲಿರುವ  ವಿಷದ ಪ್ರಮಾಣ ಒಂದು ತಳಿಯಿಂದ ಇನ್ನೊಂದು ತಳಿಗೆ ಭಿನ್ನವಾಗಿರುತ್ತದೆ. ಇದ್ದಿದ್ದರಲ್ಲಿ ಪಿಟೊ ಹುಯಿ ಕಿರೋಸಿಫಲಸ್ ಎಂಬ ತಳಿಯ ಹಕ್ಕಿ ಅತ್ಯಂತ ಹೆಚ್ಚು ವಿಷಕಾರಿ. ಈ ಪಿಟೊ ಹುಯಿ ಹಕ್ಕಿಗಳಲ್ಲಿ ಗಂಡು, ಹೆಣ್ಣುಗಳಲ್ಲಿ ಅಷ್ಟೇನೂ ವ್ಯತ್ಯಾಸ ಕಾಣುವುದಿಲ್ಲ. ಇವು ತಮಗೆ ಅಪಾಯ ಎದುರಾದರೆ ತಲೆಯ ಮೇಲಿನ  ಗರಿಗಳನ್ನು ನಿಮಿರಿಸಿ ಕೀಟದ ಹಾಗೆ ಮಾಡಿಕೊಳ್ಳುತ್ತವೆ.

ತಂಟೆಗೆ ಹೋದರೆ ಹುಷಾರ್!
ಇಂಪಾಗಿ ಹಾಡುತ್ತದೆಂದು ಇದನ್ನು ಹಿಡಿಯಲು ಹೊರಟರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಹೋಮೋಬಿಟಿಎಕ್ಸ್ ಎಂಬ ವಿಷಕಾರಿ ಅಂಶ ಈ ಹಕ್ಕಿಗಳ ಚರ್ಮ, ರೆಕ್ಕೆ, ಪುಕ್ಕಗಳಲ್ಲಿ, ಎದೆಯ ಹಾಗೂ ಮೇಲಿನ ಗರಿಗಳಲ್ಲಿ ಸಂಗ್ರಹವಾಗಿರುತ್ತದೆ. ಆದ್ದರಿಂದಲೇ ಈ ಹಕ್ಕಿಗಳನ್ನು ಮುಟ್ಟಿದ ಕೂಡಲೇ ಚರ್ಮದ ಉರಿ, ಚರ್ಮದ ರೋಗಗಳಿಗೆ ತುತ್ತಾಗುವುದರಿಂದ ಎಲ್ಲರೂ ಇದರಿಂದ ದೂರವೇ ಉಳಿದಿದ್ದಾರೆ. ಹೂಡೆಡ್ ಪಿಟೊ ಹುಯಿಗಳು ಗಿಡದ ಟೊಂಗೆಗಳಲ್ಲಿ ಕಪ್ ಆಕಾರದ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಡುತ್ತವೆ. ಮರಿಗಳಲ್ಲಿ ಸಹಜವಾಗಿಯೇ ವಿಷದ ಪ್ರಮಾಣ ಕಡಿಮೆ ಇರುತ್ತವೆ. ಮರಿಗಳು ಬೆಳೆದಂತೆಲ್ಲಾ ಅವುಗಳಲ್ಲಿನ ವಿಷದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಇವು ವೈರಿಗಳಿಂದ ರಕ್ಷಣೆ ಪಡೆಯಲು ವಿಷ ಹೊಂದಿರುತ್ತವೆ. ಹೀಗಾಗಿ ಈ ಹಕ್ಕಿಯನ್ನು ತಿನ್ನಲು ಸ್ಥಳೀಯರು ಹಿಂಜರಿಯುತ್ತಾರೆ.

 ವಿಷಕಾರಿ ಯಾಗಿದ್ದು ಹೇಗೆ?
ಈ ಹಕ್ಕಿಗಳು ವಿಷಕಾರಿಯಾಗಿದ್ದರ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಸತತ ಅಧ್ಯಯನದಿಂದ ತಿಳಿದುಬಂದಿದ್ದೇನೆಂದರೆ, ಹೂಡೆಡ್ ಪಿಟೊ ಹುಯಿಗಳು ತಾವಾಗಿಯೇ ವಿಷ ಉತ್ಪತ್ತಿ ಮಾಡುವುದಿಲ್ಲ. ಬದಲಾಗಿ ಇವು ತಿನ್ನುವ ವಿಷಕಾರಿ ಕೀಟಗಳಿಂದಲೇ, ಅವುಗಳ ದೇಹದಲ್ಲಿ ವಿಷ ಸಂಗ್ರಹವಾಗುತ್ತದೆ! ಕ್ರೋಸೈನ್ ತಳಿಯ ಕೀಟಗಳನ್ನು ಇವು ಹೆಚ್ಚಾಗಿ ತಿನ್ನುತ್ತವಂತೆ. ಇವುಗಳಿಂದ ಹೂಡೆಡ್ ಪಿಟೊ ಹುಯಿ ಮೈಯೆಲ್ಲಾ ವಿಷವಾಗುವ ಸಾಧ್ಯತೆಯನ್ನು ಪಕ್ಷಿ ತಜ್ಞರು ಕಂಡುಕೊಂಡಿದ್ದಾರೆ. ಇವು ಅಮೇಜಾನ್ ಕಾಡುಗಳಲ್ಲಿ ಕಂಡುಬರುವ ವಿಷಕಾರಿ ಡರ್ಟ್  ಕಪ್ಪೆಗಳಷ್ಟೇ ಪ್ರಮಾಣದ ವಿಷ ಹೊಂದಿವೆ. ಈ ಹಕ್ಕಿಗಳು ಹೊರಸೂಸುವ ವಿಷಕಾರಿ ರಾಸಾಯನಿಕ ವೈರಿಗಳಿಂದ ರಕ್ಷಣೆ ಒದಗಿಸುತ್ತದೆ. ಹೀಗಾಗಿ ಹಾವು ಮುಂತಾದ ವೈರಿಗಳೂ ಇದರ ತಂಟೆಗೆ ಬರುವುದಿಲ್ಲ.

No comments:

Post a Comment