ಜೀವನಯಾನ

Thursday, January 10, 2013

ಮರದಲ್ಲಿ ಗೂಡು ಕಟ್ಟುವ ಇರುವೆ

ನೆಲದ ಅಡಿಯಲ್ಲಿ ವಾಸಿಸುವ ಇರುವೆಗಳೂ ಹಕ್ಕಿಗಳಂತೆಯೇ ಗೂಡು ಹೆಣೆಯುತ್ತವೆ. ಪುಟ್ಟ ಇರುವೆಯಿಂದ ಗೂಡು ಹೆಣೆಯುವುದು ಸಾಧ್ಯವೇ? ಎಂದು ಆಶ್ಚರ್ಯವಾಗಬಹುದು. ಒಟ್ಟಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಚಿಗಳಿಗಳು ಕಟ್ಟುವ ಗೂಡು ಒಂದು ಉದಾಹರಣೆ. ಚಿಗಳಿ ಗೂಡು ಹೆಣೆಯುವ ಕರಕುಶಲತೆಯಿಂದಲೇ ಪ್ರಸಿದ್ಧಿ ಪಡೆದಿದೆ.

ಗೂಡು ಕಟ್ಟುವ ಪರಿ:
ಇರುವೆಗಳು ಕಟ್ಟುವ ಗೂಡುಗಳಲ್ಲಿಯೇ ಅತ್ಯಂತ ಜಟಿಲ ಮತ್ತು ಕ್ಲಿಷ್ಟಕರ ಗೂಡನ್ನು ಚಿಗಳಿಗಳು ಹೆಣೆಯುತ್ತವೆ. ಸಾವಿರಾರು ಇರುವೆಗಳು ಕೂಡಿ ಪರಿಶ್ರಮಪಟ್ಟು ಜೀವಂತ ಎಲೆಗಳಿಂದ ಗೂಡು ಕಟ್ಟುವ ಪರಿ ನಿಜಕ್ಕೂ ಅನನ್ಯ. ಗೂಡನ್ನು ಕಟ್ಟಲು ದೃಢವಾದ ಎಲೆಗಳನ್ನು ಆಯ್ದುಕೊಳ್ಳುತ್ತವೆ. ಮೊದಲಿಗೆ ಎಲೆಯ ಅಂಚಿನುದ್ದಕ್ಕೂ ಸಾಲಾಗಿ ಸೇರುವ ಇರುವೆಗಳು ತಮ್ಮಶಕ್ತಿ ಪ್ರಯೋಗಿಸಿ ಆ ಎಲೆಗಳನ್ನು ಬೇಕಾದಹಾಗೆ ಬಾಗಿಸುತ್ತವೆ. ಎಲೆಗಳ ನಡುವಿನ ಅಂಚನ್ನು ಲಾರ್ವ ಅಥವಾ ಸಿಲ್ಕಗಳನ್ನು ಬಳಸಿ ಜೋಡಿಸುತ್ತದೆ. ಗೂಡನ್ನು ಹೆಣೆಯಲು ಶುರುಮಾಡಿದರೆ 24 ಗಂಟೆಯಲ್ಲಿ ಗೂಡು ಸಿದ್ಧವಾಗುತ್ತದೆ. ಗೂಡು ನೀರು ಒಳನುಗ್ಗದಂತೆ ವ್ಯವಸ್ಥೆ ಹೊಂದಿದೆ. ಗೂಡಿನ ಒಳಗಿನ ವಿಶಾಲ ಜಾಗದಲ್ಲಿ ಸಾವಿರಾರಗಟ್ಟಲೆ ಇರುವೆಗಳು ವಾಸವಾಗಿರುತ್ತದೆ. ಅಪಾಯ ಎದುರಾದಾಗ ಜೋರಾಗಿ ಶಬ್ದ ಮಾಡುತ್ತಾ ಗೂಡಿನಿಂದ ಹೊರಬರುತ್ತದೆ. ವೈರಿಗಳಿಗೆ ಕೈಗೆಟುಕದಂತೆ ಕೊಂಬೆಗಳ ತುತ್ತ ತಿದಿಯಲ್ಲಿ ಇವು ಗೂಡು ಕಟ್ಟುತ್ತವೆ.

ಗೂಡಿನೊಳಗೆ ರಾಜಮನೆತನ:

ಸರಪಳಿಗಳಂತೆ ಒಂದಕ್ಕೊಂದು ಜೋಡಣೆಗೊಂಡು ಕೈಗೆಟುಕದ ಎಲೆಗಳನ್ನೂ ಬಾಗಿಸಿ ಸನಿಹಕ್ಕೆ ತರುತ್ತವೆ. ನಂತರ ಅವುಗಳನ್ನು ಒಂದಕ್ಕೊಂದು ಜೋಡಿಸಿ ಗೂಡನ್ನು ಹೆಣೆಯುತ್ತವೆ. ಈ ರೀತಿಯ ಕ್ಲಿಷ್ಟ ಕಾರ್ಯವನ್ನು ಕರಾರುವಕ್ಕಾಗಿ ಸಾಂಘಿಕ ಪರಿಶ್ರಮದಿಂದ ನಿರ್ವಹಿಸುತ್ತವೆ. ಎಲ್ಲ ಇರುವೆಗಳಂತೆಯೇ ಸಂಘ ಜೀವಿಯಾದ ಚಿಗಳಿಗಳ ಒಂದು ಗುಂಪಿನಲ್ಲಿ ಒಂದೆರಡು ರಾಣಿಯರು, ಕೆಲವು ಗಂಡು ಮತ್ತು ಲಕ್ಷಗಟ್ಟಲೆ ಹಿರಿ ಕಿರಿಯ ಕೆಸಗಾರ ಇರುವೆಗಳಿರುತ್ತವೆ. ಮೊಟ್ಟೆಯಿಡುವುದಷ್ಟೇ ರಾಣಿಯ ಕೆಲಸ. ಗೂಡು ಕಟ್ಟುವುದು, ಆಹಾರ ತರುವುದು, ವೈರಿಗಳಿಂದ ಗೂಡನ್ನು ರಕ್ಷಿಸುವುದು ಮೊದಲಾದ ಕೆಲಸ ಹಿರಿಯ ಕೆಸಗಾರ ಇರುವೆಗಳದ್ದು.

ಆಹಾರ ಮತ್ತು ವಾಸ:
ಚಿಗಳಿಗಳು ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಸ್ಯಗಳು ಮತ್ತು ಕೆಲ ಕೀಟಗಳು ಸೃವಿಸುವ ಸಿಹಿ ದೃವ, ಚಿಕ್ಕಪುಟ್ಟ ಕೀಟಗಳೇ ಮರದಮೇಲೆಯೇ ಹೆಚ್ಚಾಗಿ ವಾಸಿಸುವ ಈ ಇರುವೆಯ ಆಹಾರ. ಕೆಲವೊಮ್ಮೆ ಕುಟುಂಬ ದೊಡ್ಡದಾಗಿದ್ದರೆ ಒಂದೇ ಮರದಲ್ಲಿ ಹಲವಾರು ಗೂಡು ಕಟ್ಟಿಕೊಂಡಿರುತ್ತವೆ. ಒಂದು ಗೂಡಿನಿಂದ ಇನ್ನೊಂದು ಗೂಡಿಗೆ ಮರಿಗಳನ್ನು ವರ್ಗಾ ಯಿಸುತ್ತದೆ.


ಮರಗಳ ರಕ್ಷಣೆ:
ಚಿಗಳಿ ಗೂಡಿನಿಂದ ಮರಗಳಿಗೆ ಹಾನಿಯಾಗುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ಬದಲಾಗಿ ಚಗಳಿ ತಾನು ವಾಸವಾಗಿರುವ ಮರವನ್ನು ರಕ್ಷಣೆ ಮಾಡುತ್ತದೆ. ಚೀನಿಯರು ಕೃಷಿಯ ರಕ್ಷಣೆಗಾಗಿ ಚಿಗಳಿಗಳನ್ನು ಸಾಗಣೆ ಮಾಡುತ್ತಿದ್ದರು. ಈಗಲೂ ಸಹ ಕೆಲವು ಕಡೆ ಇವುಗಳನ್ನು ನೈಸರ್ಗಿಕ ಕೀಟನಾಶಕಗಳಂತೆ ಬಳಸುತ್ತಾರೆ. ಆದರೆ ಕೆಲವು ಸಸ್ಯಗಳಿಗೆ ಇವು ಮಾರಕವೂ ಹೌದು. ಅನೇಕ ಕಡೆ ಈ ಇರುವೆ ಮತ್ತು ಇದರ ಮೊಟ್ಟೆಗಳನ್ನು ಆಹಾರವಾಗಿಯೂ ಬಳಸುತ್ತಾರೆ.

ಔಷಧಯಾಗಿ ಬಳಕೆ:  

ಚಿಗಳಿ ಕಚ್ಚಿದ ಜಾಗದಲ್ಲಿ 'ಫಾರ್ಮಿಕ್ ಆಸಿಡ್' ಸೃವಿಸುವುದರಿಂದ ಅತಿಯಾಗಿ ಉರಿಯಾಗುತ್ತದೆ. ವೈರಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಫರ್ಮಿಕ್ ಆಸಿಡ್ ಗಳನ್ನು ಹೊರಸೂಸುತ್ತವೆ. ಹೀಗಾಗಿ ಚಿಗಳಿ ಕಚ್ಚಿದರೆ ಮೈಗೆ ಗಟ್ಟಿಯಾಗಿ ಅಂಟಿಕೊಳುತ್ತದೆ. ಇವುಗಳ ದೇಹದಿಂದ ಹೊರಸೂಸುವ ಫಾರ್ಮಿಕ್ ಆಸಿಡ್ ಗೆ ಕೆಲವೊಂದು ಸೋಂಕುಗಳನ್ನು ನಿವಾರಿಸುವ ಗುಣವಿರುವುದರಿಂದ ಇವುಗಳನ್ನು  ಔಷಧಿಯಾಗಿ ಬಳಸಲಾಗುತ್ತದೆ.

No comments:

Post a Comment