ಜೀವನಯಾನ

Friday, June 29, 2012

ಬಣ್ಣದ ಬೆಳಕಲ್ಲಿ ಮೂಡಿದ ನಯಾಗರ ಜಲಪಾತ


ನಯಾಗರ ಜಲಪಾತ ನೋಡಲು ಹಗಲಿಗಿಂತ ರಾತ್ರಿಯೇ ಚಂದ. ರಾತ್ರಿಯ ಕತ್ತಲಿನಲ್ಲಿ ಬಣ್ಣಬಣ್ಣದ ಲೇಸರ್ ಸ್ಪಾಟ್ ಲೈಟ್ ಹರಿಸಿದಾಗ ಜಲಪಾತದ ಭೋರ್ಗರೆಯುವ ನೀರಿನ ಮೇಲೆ ಕಾಮನ ಬಿಲ್ಲಿನ ಬಣ್ಣದ ಹೊಳಪಿನಿಂದ ನಯಾಗರ ರಂಗೇರುತ್ತದೆ. ಇದನ್ನು ನೋಡಲು ಬರುವ ಪ್ರವಾಸಿಗರಿಗೆ ವಿಶಾಲ ಜಲಪಾತದ ಆಗಸದ ಮೆಲೆ ಚಿತ್ತಾರ ಬಿಂಬಿಸುವ ರಂಗು ರಂಗಿನ ಬಾಣ ಬಿರುಸಿನ ಸುರಿಮಳೆ ದಿಗ್ಭ್ರಮೆ ಮೂಡಿಸುತ್ತದೆ. ಇದರ ಜತೆಗೆ ಬಿಳಿಯ ಲೋಹದ ಪುಡಿಗಳು, ಕೃತಕ ಅಗ್ನಿ ಪರ್ವತಗಳು, ನೌಕಾ ಸ್ಫೋಟಕಗಳನ್ನು ಹಾಯಿಸಿ ಅಲ್ಲೋಂದು ಅದ್ಭುತ ಭ್ರಮಾಲೋಕವೇ ಸೃಷ್ಟಿಯಾಗುತ್ತದೆ. ಈ ವಿಸ್ಮಯ ಸವಿಯಲು ನಯಾಗರಕ್ಕೆ ಪ್ರತಿದಿನ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. 


  ನಯಾಗರಕ್ಕೆ ಅಳವಡಿಸಿದ ಬೆಳಕಿಗೂ ಒಂದು ಇತಿಹಾಸವಿದೆ. ನಯಾಗರ ಜಲಪಾತದ ಮೇಲೆ ಪ್ರಥಮಬಾರಿಗೆ 1879ರಲ್ಲೇ ಬಣ್ಣ ಬಣ್ಣದ ಕ್ರತಕ ವಿದ್ಯುತ್ ಬೆಳಕನ್ನು ಹರಿಸಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಯಿತು. ಸುಮಾರು 200 ಬಗೆಯ ಬಣ್ಣದ ಬೆಕಿನ ಕಿರಣಗಳನ್ನು ನಯಾಗರದ ಮೇಲೆ ಬಿಡಲಾಗುತ್ತದೆ.


  • ಎರಡು ದೇಶಗಳಲ್ಲಿ ಹರಿಯುತ್ತದೆ
ನಯಾಗರ ಅಮೆರಿಕದ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಒಂದು ಅದ್ಭುತ ಜಲಪಾತ ಸೃಷ್ಟಿಸಿರುವುದೇ ಸೋಜಿಗ! ಈ ನದಿಯ ಪಶ್ಚಿಮ ಭಾಗದಲ್ಲಿ ಕೆನಡ ಇದ್ದರೆ ಪೂರ್ವದಲ್ಲಿ ಅಮೆರಿಕ ಇದೆ. ನಮ್ಮ ಜೋಗ್ ಜಲಪಾತದ ರಾಜಾ, ರಾಣಿ, ರೋರರ್, ರಾಕೆಟ್ ತರ ನಯಾಗರ ಕೂಡಾ ಮೂರು ಜಲಪಾತಗಳನ್ನು ಹೊಂದಿದೆ. ಅವೇ ಅಮೇರಿಕನ್ ಜಲಪಾತ, ಬ್ರೈಡರ್ ಜಲಪಾತ, ಕೆನಡಿಯನ್ ಅಥವಾ ಕುದುರೆ ಬೂಟಿನ ಜಲಪಾತ.  ಇದರಲ್ಲಿ ಮುಖ್ಯ ವಾದದ್ದು ಕೆನಡಿಯನ್ ಜಲಪಾತ. ನಯಾಗರ ಜಲಪಾತದ ಶೇ.  90ರಷ್ಟು ನೀರು ಇಲ್ಲಿಯೇ ಹರಿಯುತ್ತದೆ. ಇದನ್ನು ಪೂರ್ತಿಯಾಗಿ ಅಮೆರಿಕದ ಭಾಗದಿಂದ ನೋಡಲು ಆಗುವುದಿಲ್ಲ. ಇನ್ನು ಉಳಿದ ಶೇ. 10ರಷ್ಟು ನೀರು ಅಮೆರಿಕನ್ ಜಲಪಾದಿಂದ ಧುಮ್ಮಿಕ್ಕುತ್ತದೆ.  


ನಯಾಗರ ಜಲಪಾತ ಜೋಗ್ಫಾಲ್ಸ್ ನಷ್ಟು ಎತ್ತರವಾಗಿಲ್ಲ. ಇದರ ಎತ್ತರ ಕೇವಲ 173 ಅಡಿ. ಆದರೆ ಅದರ ಅಗಲವೇ ನಯಾಗರಕ್ಕೆ ಅಪಾರ ಗಾಂಭೀರ್ಯ ತಂದು ಕೊಡುತ್ತದೆ. ಹೀಗಾಗಿಯೇ ಅಮೆರಿಕಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗನೂ ನಯಾಗರ ನೋಡಲು ಬಯಸುತ್ತಾನೆ. ಪ್ರತಿ ವರ್ಷ 12 ದಶ ಲಕ್ಷ ಪ್ರವಾಸಿಗರು ನಯಾಗರದ ಸೊಬಗು ವೀಕ್ಷಿಸುತ್ತಾರೆ. ಮೇ ತಿಂಗಳ ಮಧ್ಯ ಭಾಗದಲ್ಲಿ ಈ ಜಲಪಾತ ನೋಡಲು ಸುಂದರವಾಗಿರುತ್ತದೆ. ನೀಲಿ ಬಣ್ಣದ ರೇನ್ ಕೋಟ್ ಧರಿಸಿ ಗುಂಪುಗುಂಪಾಗಿ ಬೋಟ್ನಲ್ಲಿ ಯಾನ ಮಾಡುತ್ತಾ ಜಲಪಾತದ ಬುಡದವರೆಗೂ ಹೋಗಿಬರಲು ಸಾಧ್ಯವಿದೆ.

  • ನಯಾಗರದ ಕುತೂಹಲ ಸಂಗತಿಗಳು
  • ನಯಾಗರ ಜಲಪಾತ ಸುಮಾರು 12 ಸಾವರ ವರ್ಷಗಳಷ್ಟು ಹಿಂದೆ ಸೃಷ್ಟಿಯಾಗಿದೆ.
  • ಈ ಜಲಪಾತ ಗಂಟೆಗೆ 56 ಕಿ.ಮೀ. ವೇಗದಲ್ಲಿ ಹರಿಯುತ್ತದೆ.
  • ನಿಮಿಷಕ್ಕೆ 6 ಮಿಲಿಯನ್ ಘನ ಅಡಿಯಷ್ಟು ನೀರು ಒಂದೇ ಸಮನೆ ಧುಮ್ಮಿಕ್ಕುತ್ತದೆ.
  • ಪ್ರತಿ ಸೆಕೆಂಡಿಗೆ 3,160 ಟನ್ ನೀರು ನಯಾಗರದಿಂದ ಹರಿಯುತ್ತದೆ.
  • 40 ಲಕ್ಷ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದನ್ನು ಕೆನಡಾ ಮತ್ತು ಅಮೆರಿಕಗಳು ಹಂಚಿಕೊಳ್ಳುತ್ತವೆ.
  • ನಯಾಗರಕ್ಕೆ ನೀರೊದಗಿಸುವ ಒಂಟಾರಿಯೋದ ಒಡಲು ಕಾಲಿಯಾಗುತ್ತಿದ್ದಂತೆ ಸುಪಿರೀಯರ್, ಮಿಚಗನ್, ಹುರೊನ್ ಮತ್ತು ಈರಿ ಸರೋವರಗಳು ನಯಾಗರವನ್ನು ಸೇರಿಕೊಳ್ಳುತ್ತವೆ. ಈ ಐದು  ಸರೋವರಗಳ ನೀರು ಜಗತ್ತಿನ ಜಗತ್ತಿನ ಸಿಹಿನೀರಿನ 5ನೇ ಒಂದರಷ್ಟಿದೆ.

No comments:

Post a Comment