ಜೀವನಯಾನ

Sunday, June 3, 2012

ಬಣ್ಣ ಬಣ್ಣದ ಅಂಗಿ ಧರಿಸುವ ಗೋಸುಂಬೆ....

ಯಾರಾದರೂ ಆಡಿದ ಮಾತಿನಂತೆ ನಡೆದುಕೊಳ್ಳದಿದ್ದರೆ ಅವರನ್ನು ಬಣ್ಣ ಬದಲಿಸುವ ಊಸರವಳ್ಳಿ (ಗೋಸುಂಬೆ) ಎಂದು ಕರೆಯುವುದು ಸಾಮಾನ್ಯ. ಹಾಗಾದರೆ ಗೋಸೂಂಬೆಗೆ ನಿಜವಾಗಿಯೂ ತನ್ನ ಹಿನ್ನೆಲೆಯ ಬಣ್ಣಕ್ಕೆ ತಕ್ಕಂತೆ ಬಣ್ಣ ಬದಲಿಸುವ ಸಾಮರ್ಥ್ಯ ಇದೆಯೇ? ಹೌದಾದರೆ ಅದಕ್ಕೆ ಹೇಗೆ ಗುತ್ತಾಗುತ್ತದೆ ಯಾವ ಬಣ್ಣದ ಎಲೆಯ ಮೇಲೋ, ಹೂಗಳ ಮೇಲೋ, ಬಂಡೆಯ ಮೇಲೋ ತಾನು ಇರುವುದು?  ಅದು ಹೇಗೋ ಗೊತ್ತಾದರೂ ಮೈಬಣ್ಣ ಬದಲಿಸುವ ಅವಶ್ಯಕತೆಯಾದರೂ ಏತಕ್ಕೆ?  ಹೀಗೆ ಎಷ್ಟೊಂದು ಪ್ರಶ್ನೆಗಳನ್ನು ಗೋಸುಂಬೆ ತನ್ನೊಳಗೇ ಅಡಗಿಸಿ ಕೊಂಡಿದೆ ಅಲ್ಲವೇ?

  • ಉತ್ತರ ಕಂಡುಕೊಳ್ಳೋಣ ಬನ್ನಿ
 ಗೋಸುಂಬೆಗಳು ಬಹಳ ನಿಧಾನವಾಗಿ ಚಲಿಸುವ ಸರಿಸೃಪಗಳು. ಇವು ಹಲ್ಲಿಗಳ ಜಾತಿಗೆ ಸೇರಿವೆ. ಬೇರೆ ಹಲ್ಲಿಯಂತೆ ವೇಗವಾಗಿ ಬಂಡೆಯೋಳಕ್ಕೆ ನುಸುಳಿಕೊಳ್ಳಲು ಇವುಗಳಿಗೆ ಸಾಧ್ಯವಿಲ್ಲ. ಹಾಗಾಗಿ ಇದರ ಬೇಟೆಗೆ ಹಾವು, ಹದ್ದು, ಗಿಡುಗ ಕಾಡು ಬೆಕ್ಕು ಮುಂತಾದ ಪ್ರಾಣಿಗಳು ಸದಾ ಹೊಂಚು ಹಾಕುತ್ತಲೇ ಇರುತ್ತವೆ. ಆದರೆ ಎಲ್ಲರನ್ನೂ ವಂಚಿಸುವ ಚಾಣಾಕ್ಷ ಈ ಗೋಸುಂಬೆ. ಎಲೆಯ ಮರೆಯಲ್ಲಿ ಹಸಿರು ಬಣ್ಣ, ಒಣಗಿದ ಎಲೆಗಳ ನಡುವೆ ಕಂದು ಬಣ್ಣ, ಹೂಗಳ ಮಧ್ಯೆ ನೀಲಿ. ಹೀಗೆ ವಿವಿಧ ಬಣ್ಣದ ಬಟ್ಟೆ ಧರಿಸುವ ಮೂಲಕ ತಮ್ಮನ್ನು ವೈರಿಯಿಂದ ಮರೆಮಾಚುತ್ತವೆ. ಇದು ಗೋಸುಂಬೆಯ ರಕ್ಷಣಾ ತಂತ್ರ.

ಎಲ್ಲಾ ಪ್ರಾಣಿಗಳಂತೆ ಚಲನ ವಲನಗಳ ನಿಯಂತ್ರಣ ಇರುವುದು ನರಗಳ ಕೈಯಲ್ಲಿ. ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಎಡ್ರಿಯಾನ್ ಹಾರ್ಮೋನುಗಳು ಸಹ ಚಲನೆಯನ್ನು ನಿಯಂತ್ರಿಸುತ್ತವೆ. ಅಂತೆಯೇ ಗೋಸುಂಬೆಗಳು ಅವು ನಿಂತಿರುವ ಜಾಗಗಳಿಗೆಲ್ಲಾ ಪ್ರತಿಸ್ಪಂದಿಸಲು ಈ ಎಡ್ರಿಯಾನ್ಗಳೇ ಮುಖ್ಯ ಕಾರಣ.

 ನಮಗೆ ಇರುವಂತೆ ಚರ್ಮದ ಬಣ್ಣಕ್ಕೆ ಒಂದು ಪಿಗ್ಮೆಂಟ್ (ವರ್ಣ ದೃವ್ಯ) ಗೋಸುಂಬೆಗಳಲ್ಲಿಯೂ ಇರುತ್ತವೆ. ಆದರೆ ಆದರೆ ಗೋಸುಂಬೆಗಳಿಗೆ ಇನ್ನೊಂದು ಪಿಗ್ಮೆಂಟ್ ಇರುತ್ತದೆ ಬೇರೆ ಬಣ್ಣಗಳಿಗೋಸ್ಕರ. ಇದಕ್ಕೆ ಕ್ರೋಮ್ಯಾಟೋಫೋರ್ ಎನ್ನುತ್ತೇವೆ. ಗೋಸುಂಬೆಗಳ ಮೈ ಬಣ್ಣ ಬದಲಿಕೆಗೆ ಕ್ರೋಮ್ಯಾಟೋಫೋರ್ಗಳೇ ಕಾರಣ.

ಇವುಗಳ ಸಾಮಾನ್ಯ ಬಣ್ಣ ಕಂದು ಮತ್ತು ಹಸಿರು. ಆದರೆ ಕಪ್ಪು, ಕಂದು, ನೀಲಿ, ಹಸಿರು, ಬೂದಿ, ನೇರಳೆ, ಹಳದಿ, ಬಿಳಿ ಇಷ್ಟು ವರ್ಣವನ್ನು ಒಂದು ಗೋಸುಂಬೆ  ತಾಳಬಹುದು. ಗೋಸುಂಬೆಗಳು ಯಾವ ಬಣ್ಣದ ಹಿನ್ನೆಲೆಯಲ್ಲಿರುತ್ತೋ ಆ ಬಣ್ಣಕ್ಕೆ ತನ್ನ ಮೈ ಬಣ್ಣ ಬದಲಿಸಿಕೊಳ್ಳಬಲ್ಲದು ಎಂಬ ನಂಬಿಕೆ ತಪ್ಪು. ಹಾಗೆ ಮಾಡಲು ಅವಕ್ಕೆ ಸಾಧ್ಯವಿಲ್ಲ. ಮೇಲೆ ಹೇಳಿದ ಬಣ್ಣಗಳನ್ನೇ ಗೋಸುಂಬೆ ಸದಾ ಬದಲಿಸುತ್ತಿರುತ್ತದೆ. ಆರಂಭದಿಂದ ಮುಕ್ತಾಯ ವಾಗುವಂತೆ ವರ್ಣಚಕ್ರವನ್ನೇ ನಿಮರ್ಿಸುತ್ತೆ. ತಾನು ಆ ಕ್ಷಣದಲ್ಲಿರುವ ಪರಿಸರಕ್ಕೆ ಬಣ್ಣವನ್ನು ಧರಿಸುವುದೇ ವಿನಃ ಹಿನ್ನೆಯ ಬಣ್ಣವನ್ನಲ್ಲ. ಬಹುತೇಕ ಗೋಸುಂಬೆಗಳು ಸೂರ್ಯನ ಬೆಳಕು, ವಾತಾವರಣ, ಮತ್ತು ಸಂವೇದನೆಗೆ ತಕ್ಕಂತೆ ಇವು ತಮ್ಮ ಮೈ ಬಣ್ಣ ಬದಲಿಸಿಕೊಳ್ಳುತ್ತವೆ. ಬೆಳಕಿನಲ್ಲಿ ಇವುಗಳ ಮೈ ಹೊಳೆದರೆ ಕತ್ತಲಲ್ಲಿ ಕಪ್ಪಾಗುತ್ತದೆ. ಕೇವಲ ಕ್ಷಣಾರ್ಧದಲ್ಲಿ ಇವು ತಮ್ಮ ಮೈ ಬಣ್ಣವನ್ನು ಪದೇ ಪದೇ ಬದಲಿಸಿಕೊಳ್ಳಬಲ್ಲವು.

ಗೋಸುಂಬೆಯ ಲಕ್ಷಣಗಳು 

 ಗೋಸುಂಬೆಗಳು ವಿವಿಧ ನಮೂನೆಯ ಗಾತ್ರಗಳಲ್ಲಿರುತ್ತವೆ. ಎರಡು ಸೆ.ಮೀನಷ್ಟು ಚಿಕ್ಕ ಗಾತ್ರದಿಂದ ಹಿಡಿದು 60 ಸೆ.ಮೀ ವರೆಗಿನ ದೊಡ್ಡ ಗಾತ್ರದ ಗೋಸುಂಬೆಗಳನ್ನು ಕಾಣಬಹುದು. ಇವು ಸಾಮಾನ್ಯವಾಗಿ ಆಫ್ರಿಕಾ, ದಕ್ಷಿಣ ಯುರೋಪ್, ಏಷ್ಯಾ ಮತ್ತು ಅರೇಬಿಯಾಗಳಲ್ಲಿ ಕಂಡುಬರುತ್ತವೆ. ಗೋಸುಂಬೆಗಳ ನಾಲಿಗೆ ಅವುಗಳ ದೇಹದ ಅರ್ಧದಷ್ಟು ಉದ್ದವಾಗಿರುತ್ತದೆ. ಇದರ ನಾಲಿಗೆಯಲ್ಲಿರುವ ವಿಶೇಷ ಅಂಟಿನ ದೃವ ಇರುತ್ತದೆ. ನಾಲಿಗೆಯನ್ನು ಹೊರಹಾಕಿ ಕ್ಷಣಾರ್ಧದಲ್ಲಿ ಹುಳ ಹಪ್ಪಟೆಗಳನ್ನು ತಿಂದು ಮುಗಿಸುತ್ತವೆ. ಕಾಲು ಮತ್ತು ಬಾಲಗಳು ವಸ್ತುವಿಗೆ ಅಂಟಿಕೊಳ್ಳುವುದರಿಂದ ಯಾವುದೇ ಸ್ಥಳದಲ್ಲಿಯಾದರೂ ಇವು ಕುಳಿತು ಕೊಳ್ಳಬಲ್ಲವು. ಬಣ್ಣ ಬದಲಿಸುವುದರಲ್ಲಿ ಗೋಸುಂಬೆಗಳು ವಿದ್ಯಾ ಪಾರಂಗತವಾದರೂ ಇತ್ತೀಚಿಗೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.

No comments:

Post a Comment