ಜೀವನಯಾನ

Sunday, June 3, 2012

ಬೆನ್ನಿನ ಮೇಲೆ ಮೂಟೆ ಹೊರುವ ಬಸವನ ಹುಳು

ಬೆನ್ನಿನ ಮೇಲೊಂದು ಶಂಖದ ಮೂಟೆ, ಎಂಜಲು ತುಂಬಿದ ಮೈ, ಮುಟ್ಟಲು ಹೇಸುವಷ್ಟು ಮೃದು ಮಾಂಸ ಖಂಡ. ಇದೆಲ್ಲಾ ಬಸವನ ಹುಳುವಿನ ದೇಹದ ಆಕಾರ. ದಾರಿಯುದ್ದಕ್ಕೂ ಎಂಜಲು ಸುರಿಸುತ್ತಾ ತೆವಳುವ ಇವುಗಳ ನಡಿಗೆ ಸಾಗುವುದೇ ಇಲ್ಲ ಅನ್ನುವಷ್ಟು ನಿಧಾನ. ದಾರಿಯಲ್ಲಿ ಏನಾದರು ಎಡವಿದರೆ ಎಲುಬಿಲ್ಲದ ಇದರ ದೇಹ ಕೂಡಲೇ ಬೆನ್ನಮೇಲಿನ ಚಿಪ್ಪೊಳಗೆ ಬಚ್ಚಿಕೊಂಡುಬಿಡುತ್ತದೆ. ಬಸವನ ಹುಳು ಸುತ್ತಲಿನ ಪರಿಸರಕ್ಕೆ ಸ್ಪಂದಿಸುಸುವ ರೀತಿ ಇದು.


 
ಬಸವನ ಹುಳುಗಳಲ್ಲಿ ಹೆಚ್ಚಿನವು ನೆಲದ ಮೇಲೆ ವಾಸಿಸಿದರೆ ಇನ್ನು ಕೆಲವು ನೀರಿನ ಮೇಲೆ ಜೀವಿಸುತ್ತವೆ. ಇವುಗಳ ಬೆನ್ನಿನ ಮೇಲಿರುವ ಚಿಪ್ಪೇ ಇವುಗಳಿಗೆ ಮನೆ. ತನಗೆ ಅಪಾಯ  ಎದುರಾಗಿದೆ ಎಂದು ಗುತ್ತಾದ ಕೂಡಲೇ ಇವು ಶಂಖದ ಆಕಾರದ ಚಿಪ್ಪಿನ ಕವಚದಲ್ಲಿ ಸೇರಿಕೊಳ್ಳುತ್ತವೆ. ಈ ಚಿಪ್ಪುಗಳು ಪರಭಕ್ಷಕ ಪ್ರಾಣಿಗಳಿಂದ ಹುಳುವಿಗೆ ರಕ್ಷಣೆ ನೀಡುತ್ತದೆ. ನೆಲದ ಮೇಲೆ ವಾಸಿಸುವ ಹುಳಗಳು  ಬದಲಾಗುವ ವಾತಾವರಣಕ್ಕೆ ಒಗ್ಗಿಕೊಳ್ಳುವ ಸಾಮಥ್ರ್ಯ ಹೊಂದಿವೆ. ತೇವವಿರವ ಅಥವಾ ನೀರಿನಲ್ಲಿ ವಾಸಿಸುವ ಹುಳಗಳಿಗೆ ತೆಳ್ಳಗಿನ ಚಿಪ್ಪಿದ್ದರೆ. ನೆಲದ ಮೇಲಿರುವ ಹುಳಗಳ ಚಿಪ್ಪು ದಪ್ಪವಾಗಿರುತ್ತವೆ. ಮರುಭೂಮಿಯಲ್ಲಿ ವಾಸಿಸುವ ಕೆಲವು ಬಸವನ ಹುಳಗಳು ಎರಡರಿಂದ ಮೂರು ವರ್ಷಗಳವರೆಗೆ ಚಿಪ್ಪಿನಲ್ಲಿಯೇ ತಮ್ಮನ್ನು ಬಂಧಿಸಿಕೊಂಡಿರುತ್ತವೆ. ಕೆಲವು ಬಿಲವಾಸಿ ಬಸವನ ಹುಳಗಳು ಸಹ ಇವೆ. ಮಳೆಗಾಲದಲ್ಲಿ ಮಾತ್ರ ಬಿಲದಿಂದ ಇವು ಹೊರಗೆ ಬರುತ್ತವೆ. ವಾತಾವರಣ ಬಿಸಿ ಮತ್ತು ಶುಷ್ಕವಾಗಿದ್ದರೆ ಭೂಮಿಯಲ್ಲಿ 7 ರಿಂದ 15 ಸೆಂಟಿಮೀಟರ್ ವರೆಗೆ ಬಿಲತೋಡಿಕೊಂಡು ತಣ್ಣನೆ ಇದ್ದುಬಿಡುತ್ತವೆ. ಮಳೆ ಬಂದು ಭೂಮಿ ಮೆತ್ತಗಾಗುವ ವರೆಗೂ ಇವು ಹೊರಗೆ ಬರುವುದಿಲ್ಲ. ಈ ಹುಳಗಳ ಆಯಸ್ಸ 4 ರಿಂದ 5 ವರ್ಷ.

ಆಹಾರ ಸರಪಳಿಯ ಭಾಗ
ಬಸವನ ಹುಳಗಳು ಆಹಾರ ಸರಪಳಿಯ ಮಹತ್ವದ ಕೊಂಡಿಯಾಗಿವೆ. ಇವು ಪಕ್ಷಿ, ಸರೀಸೃಪ ಮತ್ತು ಜಲಚರಗಳಿಗೆ ಉತ್ತಮ ಆಹಾರ. ಮಾನವರು ಸಹ  ಇವುಗಳನ್ನು ತಿನ್ನಬಹುದು. ವಿದೇಶಗಳಲ್ಲಿ ಬಸವನ ಹುಳುವಿನಿಂದ ಮಾಡಿದ ಬಗೆಬಗೆಯ ಖಾದ್ಯಗಳು ತುಂಬಾ ಜನಪ್ರಿಯ.  

ಬ್ಲೇಡ್ ಮೇಲೂ ನಡೆಯಬಲ್ಲದು
ಬಸವನ ಹುಳು ಸ್ನಾಯುಗಳನ್ನು ಸರಣಿ ಪ್ರಕಾರವಾಗಿ ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ಪಾದದಲ್ಲಿ ಅಲೆಗಳನ್ನು ಸೃಷ್ಟಿಸಿ ಮುಂದಕ್ಕೆ ಸಾಗುತ್ತದೆ. ಚಲಿಸುವುದಕ್ಕೆ ಸಹಾಯವಾಗಲಿ ಎಂಬ ಕಾರಣಕ್ಕಾಗಿ ಅಂಟಿನಂತಹ ಲೋಳೆಗಳನ್ನು ಹೊರಹಾಕುತ್ತವೆ. ಹೀಗಾಗಿ ಇವು ಚಲಿಸುವ ದಾರಿಯುದ್ದಕ್ಕೂ ಲೋಳೆಗಳ ಗುರುತುಗಳು ಅಂಟಿರುತ್ತವೆ. ಇವು ಹೊರಹಾಕುವ ಲೋಳೆಗಳ ಸಹಾಯದಿಂದ  ಎಂಥ ಹರಿತವಾದ ವಸ್ತುಗಳಮೇಲೆ ಸಹ ಸರಾಗವಾಗಿ ನಡೆಯಬಲ್ಲವು. ಹರಿತವಾದ ಬ್ಲೇಡಿನ ಮೇಲೆ ನಡೆದರೂ ಇವುಗಳಿಗೆ ಯಾವುದೇ ಗಾಯವಾಗುವುದಿಲ್ಲ.

 ಉಭಯ ಲಿಂಗಿಯ ಜೀವಿ

ಬಸವನ ಹುಳು ಬೆಳೆದಂತೆ ಇವುಗಳ ಬೆನ್ನಿನ ಮೇಲಿನ ಚಿಪ್ಪು ಸಹ ಬೆಳೆಯುತ್ತದೆ. ಚಿಪ್ಪುಳು ವೈವಿಧ್ಯಮಯ ಆಕಾರದದಲ್ಲಿರುತ್ತವೆ.  ಇವುಗಳಲ್ಲಿ ಸುಮಾರು 7 ಸಾವಿರ ಜಾತಿಗಳಿವೆ.  ಇವಕ್ಕೆ ಎರಡು ಜೊತೆ ಸ್ಪರ್ಶಾಂಗಗಳು ಇದ್ದು, ಉದ್ದನೆಯ ಸ್ಪರ್ಶಾಂಗದ ತುದಿಯಲ್ಲಿ ಕಣ್ಣುಗಳು ಇರುತ್ತವೆ. ಇವುಗಳಿಗೆ ಬಿಸಿಲೆಂದರೆ ಆಗಿಬರುವುದಿಲ್ಲ. ಹೆಚ್ಚಾಗಿ ತಂಪಾದ ಪ್ರದೇಶವನ್ನು ಇವು ಇಷ್ಟಪಡುತ್ತವೆ. ಇವು ಉಭಯಲಿಂಗಿಯ ಜೀವಿಗಳು. ಎಲ್ಲಾ ಹುಳುಗಳೂ ಮೊಟ್ಟೆಯಿಡುತ್ತವೆ. ಒಂದು ಸಲಕ್ಕೆ ಇವು 85 ಮೊಟ್ಟೆಗಳನ್ನು ಇಡುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಮರಿಯಾಗುತ್ತವೆ. ಈ ಹುಳಗಳಿಗೆ ಕಿವಿಯಿಲ್ಲ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಸ್ಪರ್ಶಾಂಗಗಳ ಮೇಲೆ ಇವು ಸಂಪೂರ್ಣ ಅವಲಂಬಿತವಾಗಿವೆ. ಇವು ತಮಗಿಂತಲೂ ಹತ್ತುಪಟ್ಟು ಹೆಚ್ಚಿನ ಭಾರ ಹೊರಬಲ್ಲವು. ಸಕ್ಕರೆ ಅಥವಾ ಉಪ್ಪು ಬಸವನ ಹುಳಗಳಿಗೆ ಮಾರಕ. ಇವುಗಳ ಮೇಲೆ ಉಪ್ಪು ಅಥವಾ ಸಕ್ಕರೆಯನ್ನು ಬೀರಿದರೆ ಇವು ಸತ್ತು ಹೋಗುತ್ತವೆ.

No comments:

Post a Comment