ಜೀವನಯಾನ

Wednesday, September 9, 2015

ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ

ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಮೆಡಿಟರೇನಿಯನ್ ಸಮುದ್ರದಲ್ಲಿ ಪುರಾತನ ಕಾಲದ ಎಲ್ಲ ನಾಗರಿಕರಿಗೂ ದಾರಿದೀಪವಾಗಿತ್ತು. ಕ್ರಿಸ್ತಶಕ ಪೂರ್ವ 283ರಲ್ಲಿ ನಿರ್ಮಿಸಲಾದ ಈ ದ್ವೀಪಸ್ತಂಭ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿತ್ತು. ಸುಮಾರು 2 ಸಾವಿರ ವರ್ಷಗಳ ವರೆಗೆ ನಿಂತಿದ್ದ ಇದು ಭೂಕಂಪದಿಂದ ಅವಸಾನಗೊಂಡಿತ್ತು. ಅಲೆಕ್ಸಾಂಡ್ರಿಯಾ ರಾಜ್ಯದ ಬಾವುಟದಲ್ಲಿ ಮತ್ತು ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಚಿಹ್ನೆಯಲ್ಲಿ ಮಾತ್ರ ಈ ಲೈಟ್ ಹೌಸ್ ಉಳಿದುಕೊಂಡಿದೆ.


ದೀಪಸ್ತಂಭದ ಹಿಂದಿನ ಕಥೆ
ಗ್ರೀಕ್ ಸಾಮ್ರಾಜ್ಯದ ಚಕ್ರವರ್ತಿ ಅಲೆಕ್ಸಾಂಡರ್ ಕ್ರಿ.ಪೂ. 331ರಲ್ಲಿ ಈಜಿಪ್ಟ್ನ ಮೇಲೆ ದಂಡೆತ್ತಿ ಹೋಗಿದ್ದ. ಆ ವೇಳೆ ಗ್ರೀಕ್ ಮತ್ತು ಈಜಿಪ್ಟ್ಗೆ ಸಂಪರ್ಕ ಸೇತುವೆಯಂತೆ ಮೆಡಿಟರೇನಿಯನ್ ತಟದಲ್ಲಿ ತನ್ನ ಹೆಸರಿನ ನಗರವೊಂದನ್ನು ನಿರ್ಮಿಸಲು ತನ್ನ ಸೇನಾನಿ ಮೊದಲನೇ ಟೊಲೆಮಿ ಸೊರ್ಟರ್ಗೆ ಆದೇಶಿಸಿದ್ದ. ಹೀಗಾಗಿ ಅಲೆಕ್ಸಾಂಡರನ ಹೆಸರಿನಿಂದಲೇ ಅಲೆಕ್ಸಾಂಡ್ರಿಯಾ ಎಂಬ ಹೆಸರು ಬಂದಿದೆ. ಅಲೆಕ್ಸಾಂಡರನ ಮರಣದ ಬಳಿಕ ಈ ರಾಜ್ಯಕ್ಕೆ ಟೊಲೆಮಿ ತಾನೇ ರಾಜನೆಂದು ಘೋಷಿಸಿಕೊಂಡ. ಆತ ಫೆರೋಸ್ ದ್ವೀಪದಲ್ಲಿ ಹಡಗುಗಳಿಗೆ ದಾರಿತೋರಲು ಬೃಹತ್ ಲೈಟ್ ಹೌಸ್ ಅನ್ನು ನಿರ್ಮಿಸಿದ್ದ. ಫೆರೋಸ್ ದ್ವೀಪದ ಮೇಲೆ ನಿರ್ಮಾಣಗೊಂಡಿದ್ದರಿಂದ ಲೈಟ್ಹೌಸ್ ಅನ್ನು ಸಹ ಫೆರೋಸ್ ಎಂದು ಕರೆಯಲಾಗುತ್ತಿತ್ತು.
 ಲೈಟ್ಹೌಸ್ ನಿರ್ಮಿಸಿದ ಶಿಲ್ಪಿ  ಗ್ರೀಸ್ನ ಸೊಸ್ಟ್ರಾಟೋಸ್. ಲೈಟ್ಹೌಸ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 20 ವರ್ಷಗಳು ಬೇಕಾದವು. ದ್ವೀಪಸ್ತಂಭ 450 ಅಡಿ ಎತ್ತರವಿತ್ತು ಎಂದು ಹೇಳಲಾಗಿದೆ. ಅಂದಿನ ಕಾಲಕ್ಕೆ ಅದು ವಿಶ್ವದ ಅತ್ಯಂತ ಎತ್ತರದ ಕಟ್ಟಡವೆನಿಸಿಕೊಂಡಿತ್ತು. ಅಲ್ಲದೆ, ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಅಂದಿನ ಕಾಲದಲ್ಲೂ ಜನಾಕರ್ಷಣೆಯ ಕೇಂದ್ರವಾಗಿತ್ತು.

ದೀಪಸ್ತಂಭ ಹೇಗಿತ್ತು ಗೊತ್ತಾ?
ಮೂರು ಹಂತದಲ್ಲಿ ದ್ವೀಪಸ್ತಂಭವನ್ನು ನಿರ್ಮಿಸಲಾಗಿತ್ತು. ಮೊದಲ ಹಂತದಲ್ಲಿ 240 ಅಡಿ ಎತ್ತರ ಮತ್ತು 100 ಚದರ ಅಡಿ ವಿಸ್ತಾರವಾಗಿತ್ತು. ಎರಡನೇ ಹಂತದಲ್ಲಿ 115 ಅಡಿ ಎತ್ತರವಾಗಿತ್ತು. ಕೊನೆಯ ಮೂರನೇ ಹಂತದಲ್ಲಿ 60 ಅಡಿ ಎತ್ತರದ ಕೊಳವೆಯನ್ನು ಹೊಂದಿತ್ತು. ಗೋಪುರದ ತುತ್ತತುದಿಯಲ್ಲಿ ಸಮುದ್ರ ದೇವತೆ ಪೊಸೈಡನ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಾಮಾನ್ಯವಾಗಿ ಈಜಿಪ್ಟ್ ನ ಪ್ರಸಿದ್ಧ ಗೀಜಾ ಪಿರಾಮಿಡ್ಡುಗಳ ಜತೆ ಇದನ್ನು ಹೋಲಿಕೆ ಮಾಡುತ್ತಾರೆ.
ಕೊಳವೆಯ ಮೇಲ್ಭಾಗದಿಂದ ಉರುವಲನ್ನು ತುಂಬಿಸಿ ಬೆಂಕಿಯನ್ನು ಹಚ್ಚಲಾಗುತ್ತಿತ್ತು. ದ್ವೀಪಸ್ತಂಭದಿಂದ ಹೊರಹೊಮ್ಮುತ್ತಿದ್ದ ಬೆಳಕು ಯಾತ್ರಿಕರಿಗೆ ದಾರಿ ದೀಪವಾಗಿತ್ತು. ದ್ವೀಪಸ್ತಂಭದ ಒಳಭಾಗದಲ್ಲಿ ಮೆಟ್ಟಿಲುಗಳಿದ್ದವು. ಇದರಿಂದ ಜನರು ದೀಪದ ಕೋಣೆಗೆ ತೆರಳಲು ಸಾಧ್ಯವಾಗುತ್ತಿತ್ತು. ಅಲ್ಲದೆ ಬೆಂಕಿಯ ಬೆಳಕು ಹೆಚ್ಚಿನ ದೂರಕ್ಕೆ ಪ್ರತಿಫಲಿಸಲಿ ಎಂಬ ಕಾರಣಕ್ಕೆ ಕಲಾಯಿಹಾಕಿದ ತಾಮ್ರದ ಕನ್ನಡಿಯನ್ನು ದೀಪಸ್ತಂಭದ ಒಳಗೆ ಇರಿಸಲಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ದೀಪಸ್ತಂಭದ ಬೆಳಕು ಮತ್ತು ಹೊಗೆ ಸುಮಾರು 10 ಮೈಲಿ ದೂರದವರೆಗೂ ಕಾಣಿಸುತ್ತಿತ್ತು.

ಇನ್ನೊಂದು ಲೈಟ್ ಹೌಸ್ ನಿರ್ಮಾಣ
ಆದರೆ, ಇಂಥದ್ದೊಂದು ಭವ್ಯಕಟ್ಟಡ ಭೂಕಂಪಗಳಿಂದ ತೀರ್ವ ಹಾನಿಗೆ ಒಳಗಾಗಿತ್ತು. ಅಲ್ಲದೆ, ಅದನ್ನು ಯಾರೂ ಬಳಸುತ್ತಿರಲಿಲ್ಲ. ಅದರ ಕೆಲವು ಅವಶೇಷಗಳು ಸಾಗರದಲ್ಲಿ ಹೂತುಹೊಗಿದ್ದವು. 12-14ನೇ ಶತಮಾನದಲ್ಲಿ ಮಾಮ್ಲುಕ್ ಸುಲ್ತಾನ್ ಖಯತ್ ಬೇ ಎಂಬಾತ ಅವುಗಳನ್ನು ತನ್ನ ಕೋಟೆಗಳನ್ನು ನಿರ್ಮಿಸಲು ಬಳಸಿಕೊಂಡಿದ್ದನಂತೆ. ಆ ಕೋಟೆ ಇಂದಿಗೂ ಇದೆ. ಅಲೆಕ್ಸಾಂಡ್ರಿಯ ಮೆಡಿಟರೇನಿಯನ್  ಸಾಗರದಲ್ಲಿ ಪುರಾತನ ಲೈಟ್ ಹೌಸ್ ಇತ್ತು ಎಂದು ಹೇಳಲಾದ ಸ್ಥಳದಲ್ಲಿ ಇಂದು ಒಂದು ಚಿಕ್ಕ ಲೈಟ್ಹೌಸ್ ಅನ್ನು ನಿರ್ಮಿಸಲಾಗಿದೆ.

No comments:

Post a Comment