ಜೀವನಯಾನ

Tuesday, June 2, 2015

ಸಲಾರ್ ಡಿ ಉಯುನಿ ಎಂಬ ಪ್ರಕೃತಿ ಸೃಷ್ಟಿಸಿದ ಕನ್ನಡಿ!

ನೀವು ಎಂದಾದರೂ ಬೃಹದಾಕಾರದ ಕನ್ನಡಿಯ ಮುಂದೆ ನಿಂತಿದ್ದೀರಾ?  ಅದರ ಮೇಲೆ ನಡೆದಾಡಿದ್ದೀರಾ? ಅಂತಹ ಕನ್ನಡಿಯನ್ನು ಯಾರೂ ತಯಾರಿಸಬೇಕಾಗಿಲ್ಲ. ಮಾನವನಿಂದಲೂ ಸೃಷ್ಟಿಸಲಾಗದಷ್ಟು ಬೃಹದಾಕಾರದ ಕನ್ನಡಿಯನ್ನು ಬೊಲಿವಿಯಾದ ಸಲಾರ್ ಡಿ ಉಯುನಿಯಲ್ಲಿ ಪ್ರಕೃತಿಯೇ ಅದನ್ನು ಸೃಷ್ಟಿಸಿದೆ. ಇದೊಂದು ಜಗತ್ತಿನ ಬೃಹತ್ ಉಪ್ಪಿನ ಸರೋವರ. ಬೇಸಿಗೆಯಲ್ಲಿ ಸರೋವರ ಉಪ್ಪಿನ ಹಾಸಿಗೆಯಾಗಿ ಮಾರ್ಪಡುತ್ತದೆ. ಆಗ ಅದರ ಮೇಲೆ ಕಾರು, ಬೈಕ್ಗಳಳಲ್ಲಿ ಪ್ರಯಾಣಿಸಬಹುದು. ಮಲಗಿ ಆನಂದಿಸಬಹುದು. ಮಳೆಗಾಲದಲ್ಲಿ ಇಲ್ಲಿ ಉಪ್ಪು ನೀರಿನ ಪ್ರವಾಹ ಉಂಟಾಗುತ್ತದೆ. ನೀರು ನೀಲಿ ಬಣ್ಣಕ್ಕೆ ತಿರುಗಿ ಕನ್ನಡಿಯ ತರಹ ಹೊಳೆಯುತ್ತದೆ. ಇಲ್ಲಿ ಎಷ್ಟೇ ಅಗೆದರೂ ಉಪ್ಪು ಖಾಲಿಯಾಯಿತು ಎಂಬ ಮಾತೇ ಇಲ್ಲ.


 ಮೊಗೆದಷ್ಟೂ ಖಾಲಿಯಾಗದ ಉಪ್ಪು!
ಸಮುದ್ರ ಮಟ್ಟದಿಂದ 3656 ಅಡಿಯಷ್ಟು ಎತ್ತರದ ಪ್ರದೇಶದಲ್ಲಿರುವ ಇದು ದಕ್ಷಿಣ ಅಮೆರಿಕ ಖಂಡದ ಬೊಲಿವಿಯಾದ ಪೊಟೋಸಿ ಮತ್ತು ಒರುರೋ ಪ್ರಾಂತ್ಯಕ್ಕೆ ಸೇರಿದೆ. 10,582 ಚದರ ಮೈಲಿಗೆ ವ್ಯಾಪಿಸಿರುವ ಈ ಸರೋವರ 30- 40 ಸಹಸ್ರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸಲಾರ್ ಡಿ ಉಯುನಿಗೆ ಆವರಣ ದ್ವೀಪ ಎನ್ನುವ ಅರ್ಥವಿದೆ. ವರ್ಷಕ್ಕೆ ಇಲ್ಲಿ 25 ಸಾವಿರ ಟನ್ ಉಪ್ಪನ್ನು ತೆಗೆಯಲಾಗುತ್ತದೆ. ಹಾಗಿದ್ದರೂ ಉಪ್ಪು ಮಾತ್ರ ಖಾಲಿಯಾಗುವುದಿಲ್ಲ. ಕಾರಣ ಇಲ್ಲಿ 10 ಶತಕೋಟಿ ಟನ್ಗಷ್ಟು ಉಪ್ಪು ಸಂಗ್ರಹವಾಗಿದೆ. ಅಷ್ಟೇ ಅಲ್ಲ 10 ಕೋಟಿ ಟನ್ಗಳಷ್ಟು ಲೀಥಿಯಂ ಕೂಡ ಇಲ್ಲಿದೆ. ಖನಿಜಾಂಶ ಮತ್ತು ಉಪ್ಪು ಹೇರಳವಾಗಿ ಇರುವುದರಿಂದ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಉಪ್ಪಿನ ಪದರದಿಂದಲೇ ಕಲ್ಲುಗಳನ್ನು ಮಾಡಿ ಕಟ್ಟಿದಂತಹ ಹೋಟೆಲ್ಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಉಪ್ಪಿನಲ್ಲೂ ಅರಳುವ ಗುಲಾಬಿ ಹೂ!
ಇಲ್ಲಿರುವುದು ಮಣ್ಣಿನಂತೆ ಕಂಡರೂ ಅದರಲ್ಲಿ ಉಪ್ಪೇ  ಜಾಸ್ತಿ. ಹೀಗಾಗಿ ಕೆಲವೇ ಜಾತಿಯ ಸಸ್ಯಗಳ ಇಲ್ಲಿ ಬೆಳೆಯುತ್ತವೆ. ಒಂದು ಬಗೆಯ ಗುಲಾಬಿ ಗಿಡಗಳು, ಬೃಹದಾಕಾರದ ಪಾಪಸ್ಕಳ್ಳಿಯ ಗಿಡಗಳನ್ನು ಇಲ್ಲಿ ಕಾಣಬಹುದು. 25 ಅಡಿ ಎತ್ತರದ ಈ ಸಸ್ಯಗಳ ಬೆಳವಣಿಗೆ ವರ್ಷಕ್ಕೆ ಒಂದು ಸೆಂಟಿ ಮೀಟರ್ನಷ್ಟು ಮಾತ್ರ. ಆದರೆ, ಅವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಲ್ಲದೆ, ಇಲ್ಲಿ ಹಿಮಕರಡಿಯನ್ನು ಹೋಲುವ ಆಂಡಿಯನ್ ನರಿ, ಕೊಕ್ಕರೆ, ಹೆಬ್ಬಾತುಗಳನ್ನು ಕಾಣಬಹದು.

ಮೋಡ ಆಕಾಶದ ಪ್ರತಿಬಿಂಬ!
ಮಳೆ ಸುರಿದಾಗ ಸಲಾರ್ನ ಉಪ್ಪು ಭರಿತ ಭೂಮಿಯ ಮೇಲೆ ತೆಳುವಾದ ನೀರಿನ ಹೊದಿಕೆ ಸೃಷ್ಟಿಯಾಗುತ್ತದೆ. ಅದು ನೋಡುಗರನ್ನು ಮಂತ್ರಮುಗ್ಧವಾಗಿಸುತ್ತದೆ. ಈ ಸನ್ನಿವೇಶದಲ್ಲಿ ಸೂರ್ಯ, ಮೋಡ, ಆಕಾಶ ಹಾಗೂ ಇತರ ಪ್ರತಿಬಿಂಬಗಳು ಪ್ರತಿಫಲಿಸಲ್ಪಡುತ್ತದೆ. ಅದರ ಮೇಲೆ ನಡೆದಾಡುವುದು ಯಾವುದೂ ಅನ್ಯಗ್ರಹದ ಮೇಲೆ ನಿಂತ ಅನುಭವನ್ನು ನೀಡುತ್ತದೆ. ಪ್ರವಾಸಿಗರು ಇಲ್ಲಿ ಸುತ್ತುವರಿದಿರುವ ಬಂಡೆಗಳನ್ನು ನೋಡಲು ಜೀಪ್ ಸವಾರಿ ಮಾಡುತ್ತಾರೆ. ಬಿಸಿ ನೀರಿನ ಬುಗ್ಗೆಗಳು, ಸಣ್ಣಪ್ರಮಾಣದ ಜ್ವಾಲಾಮುಖಿಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.   

ರೈಲ್ವೆ ಇಂಜಿನ್ಗಳ ಸ್ಮಶಾನ!
ಬ್ರಿಟಿಷರು 19ನೇ ಶತಮಾನದಲ್ಲಿ ಇಲ್ಲಿನ ಉಪ್ಪುಗಳನ್ನು ತಮ್ಮ ದೇಶಕ್ಕೆ ರಫ್ತು ಮಾಡುವ ಸಲುವಾಗಿ ರೈಲ್ವೆ ಹಳಿಯನ್ನು ನಿಮರ್ಿಸಿದ್ದರು. ಅದೀಗ ಪಳೆಯುಳಿಕೆಯಾಗಿ ಇಂದಿಗೂ ಉಳಿದುಕೊಂಡಿದೆ. ಸ್ಥಳೀಯರು ರೈಲ್ವೆಯ ಸ್ಮಶಾನವೆಂದು ಕರೆಯುವ ನೂರಾರು ರೈಲ್ವೆ ಇಂಜಿನ್ಗಳು, ಬೋಗಿಗಳು ಪ್ರವಾಸಿಗರನ್ನು ಸೆಳೆಯುತ್ತವೆ

No comments:

Post a Comment