ಜೀವನಯಾನ

Tuesday, April 7, 2015

ಮಣಿಪುರದಲ್ಲೊಂದು ತೇಲುವ ಸರೋವರ!

ಇಲ್ಲಿ ಉದ್ಯಾನವನವೇ ನೀರಿನಮೇಲೆ ತೇಲುತ್ತಿದೆ. ಮಣಿಪುರದ ರಾಜಧಾನಿ ಇಂಫಾಲ್ ಸಮೀಪವಿರುವ ಲೋಕ್ತಾಕ್ ಸರೋವರದಲ್ಲಿ ಫ್ಯೂಮಿಡ್ಗಳೆಂದು ಕರೆಯಲ್ಪಡುವ ಹಲವಾರು ದ್ವೀಪ ಮಾದರಿ ರಚನೆಗಳು ತೇಲುತ್ತಾ ಇರುತ್ತವೆ. ಹೀಗಾಗಿ ತೇಲುವ ಸರೋವರ ಅಂತಲೇ ಇದನ್ನು ಕರೆಯುತ್ತಾರೆ. ಈ ಸರೋವರದ ಒಂದು ಭಾಗವಾಗಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನ ಈ ಸರೋರದ ಮೇಲೆ ನಿಂತಿದೆ. ನೀರಿನ ಮೇಲೆ ತೇಲುವ ಜಗತ್ತಿನ ಏಕೈಕ ರಾಷ್ಟ್ರೀಯ ಉದ್ಯಾನ ಎಂದು ಕರೆಸಿಕೊಂಡಿದೆ. ಇದನ್ನು ತೇಲುವ ಸ್ವರ್ಗ ಅಂತಲೂ ಬಣ್ಣಿಸಲಾಗಿದೆ. 

ಅತಿದೊಡ್ಡ ಸಿಹಿ ನೀರಿನ ಸರೋವರ:
ಲೋಕ್ತಾಕ್ ಸರೋವರದ ನೀರು ಸದಾ ಹಸಿರಾಗಿ ಗೋಚರಿಸುತ್ತದೆ. ಇದಕ್ಕೆ ಮುಖ್ಯಕಾರಣ ಸರೋವರದಲ್ಲಿ ಬೆಳೆಯುತ್ತಿರುವ ಹಸಿರು ಪಾಚಿ ಸಸ್ಯಗಳು ಮತ್ತು ನೀರಿನಲ್ಲಿ ಹಲವಾರು ಸಸ್ಯವರ್ಗ. ಆದರೂ ಇದರ ನೀರು ಸಿಹಿಯಾಗಿರುತ್ತದೆ. ಉತ್ತರ ಭಾರತದ ಅತ್ಯಂತದೊಡ್ಡ ಸಿಹಿ ನೀರಿನ ಸರೋವರ ಎಂಬ ಖ್ಯಾತಿಯೂ ಲೋಕ್ತಾಕ್ ಸರೋವರಕ್ಕೆ ಇದೆ. ಸರೋವರದ ಮೇಲೆ ತೇಲುವ ದ್ವೀಪಗಳು ಸುತ್ತಮುತ್ತಲಿನ ಮೀನುಗಾರರಿಗೆ ತಂಗುದಾಣವೂ ಹೌದು. ಅವುಗಳಲ್ಲಿ ಕೆಲವು ನೈಸರ್ಗಿಕ ರಚನೆಯಾಗಿದ್ದರೆ ಇನ್ನು ಕೆಲವು ದ್ವೀಪಗಳನ್ನು ಮೀನುಗಾರಿಕೆಯ ದೃಷ್ಟಿಯಿಂದ ಕೃತಕವಾಗಿ ಸೃಷ್ಟಿಸಲಾಗಿದೆ. ಇಲ್ಲಿ ಪ್ರತಿವರ್ಷ  1500 ಟನ್ಗಳಷ್ಟು ಮೀನುಗಳ ಸಾಕಣೆ ಮಾಡಲಾಗುತ್ತದೆ. ಅಂದಹಾಗೆ ಇದು ಮಣಿಪುರ ರಾಜಧಾನಿ ಇಂಫಾಲ್ನಿಂದ ಕೇವಲ 48 ಕಿ.ಮೀ. ದೂರದಲ್ಲಿದೆ.

ಇಂಫಾಲ್ ಜನರ ಜೀವನಾಡಿ:

ಇದು ಇಲ್ಲಿನ ಜನರಿಗೆ ಕೇವಲ ಸರೋವರವಾಗಿ ಉಳಿದಿಲ್ಲ. ಇದುವೇ ಜನರ ಜೀವನಾಧಾರ. ಮಣಿಪುರದ ಆಥರ್ಿಕತೆಯ ಮೇಲೂ ಸರೋವರ ಪ್ರಮುಖ ಪ್ರಭಾವ ಬೀರುತ್ತಿದೆ. ಈ ಸರೋವರದ ಜಲಾನಯನ ಪ್ರದೇಶ ಒಟ್ಟು 980 ಚದರ್ ಕಿ.ಮೀ. ಇದರಲ್ಲಿ 430 ಚದರ್ ಕಿ.ಮೀ. ವ್ಯಾಪ್ತಿಯಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, 1971ರಲ್ಲಿ 491 ಚದರ್ ಕಿ.ಮೀ.ಯಷ್ಟಿದ್ದ ಸರೋವರದ ವ್ಯಾಪ್ತಿ ಈಗ 236 ಚದರ್ ಕಿ.ಮೀ. ಪ್ರದೇಶಕ್ಕೆ ಕುಗ್ಗಿದೆ. ಇದೊಂದು ಪ್ರವಾಸಿತಾಣವಾಗಿ ಕೂಡ ಪ್ರಸಿದ್ಧಿ ಪಡೆದಿದೆ. ಬೋಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಪ್ರವಾಸಿಗರಿಗೆ ಮನರಂಜನೆ ಒದಗಿಸುತ್ತವೆ. ಸೆಂಡ್ರಾ ದ್ವೀಪ ಇಲ್ಲಿನ ಪ್ರಮುಖ ಆಕರ್ಷಣೆ. ಈ ಸರೋವರ ಅನೇಕ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣವಾಗಿದೆ. 57 ಬಗೆಯ ಜಲಚರ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಅಳಿವಿನಂಚಿನಲ್ಲಿರುವ ಸಂಗಾಯ್ ಪ್ರಜಾತಿಯ ಜಿಂಕೆಗಳು ಕಾಣಸಿಗುತ್ತವೆ.

ಆಪತ್ತು ಎದುರಾಗಿದೆ:
ಇತ್ತೀಚಿನ ದಿನಗಳಲ್ಲಿ ಸರೋವರದ ಸುತ್ತಮುತ್ತಲಿನ ಹಸಿರು ಪ್ರದೇಶ ನಾಶವಾಗುತ್ತಿದೆ. ಬ್ಯಾರೇಜ್ಗಳ ನಿರ್ಮಾಣ, ಅರಣ್ಯ ನಾಶದಿಂದ ಸರೋವರದಲ್ಲಿ ಪ್ರತಿವರ್ಷ ಹೆಚ್ಚೆಚ್ಚು ಹೂಳು ಸಂಗ್ರವಾಗುತ್ತಿದೆ. ಈ ಸರೋವರದಲ್ಲಿ ಜಲವಿದ್ಯುತ್ ಯೋಜನೆಯ ಮೂಲಕ ಇಂಫಾಲ್ ನಗರಕ್ಕೆ ವಿದ್ಯುತ್ ನೀಡಲಾಗುತ್ತಿದೆ. ಅಲ್ಲದೆ, ಇಂಫಾಲ್ ನಗರದ ಚರಂಡಿ ನೀರನ್ನು ಈ ಸರೋವರಕ್ಕೆ ಬಿಡಲಾಗುತ್ತಿದೆ. ಇದರಿಂದ ನದಿಯ ಸೌಂದರ್ಯ ಹಾಳಾಗಿದೆ. ಅಲ್ಲದೆ, ಸರೋವರದ ಮೇಲೆ ತೇಲುವ ಹಸಿರು ಪಾಚಿಗಳ ಗಾತ್ರಕೂಡ ಕಿರಿದಾಗುತ್ತಿದೆ.

No comments:

Post a Comment