ಜೀವನಯಾನ

Wednesday, May 21, 2014

ಮಲಬಾರ್ ಅಳಿಲು ಕಾಣಲು ಬಲು ಅಪರೂಪ!

ಭಾರತದ ದೈತ್ಯ ಅಳಿಲು ಅಥವಾ ಮಲಬಾರ್ ಅಳಿಲು ಕಾಣಿಸಿಕೊಳ್ಳುವುದೇ ಅಪರೂಪ. ಕಣ್ಣಲ್ಲಿ ಕಣ್ಣಿಟ್ಟು ಕಾದುಕುಂತರೂ, ಇದ್ದಕಡೆ ಇರಲ್ಲ. ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣಸಿಗುವ ಈ ಸಸ್ಯಾಹಾರಿ ಅಳಿಲು ಕರ್ನಾಟಕದ  ಭದ್ರಾ ಅರಣ್ಯ, ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತದೆ. ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಇದಕ್ಕೆ ಕೆಂದಳಿಲು ಎಂದು ಕರೆಯುವುದುಂಟು.


ಆಕರ್ಷಕ ಮೈಬಣ್ಣ:
ಪರಿಸರ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಇವುಗಳ ಬಣ್ಣದಲ್ಲಿ ವ್ಯತ್ಯಾಸವಿದೆ. ಕರಾವಳಿ ಮತ್ತು ಸೌಪರ್ಣಿಕ ಅರಣ್ಯದಲ್ಲಿ ಅತಿ ಕೆಂಪು ಮತ್ತು ಕಂದು ಬಣ್ಣದ  ಅಳಿಲು ಕಂಡುಬಂದರೆ, ಒಣ ಹವೆ ಇರುವಂತಹ ಅರಣ್ಯಗಳಲ್ಲಿ ತಿಳಿಗೆಂಪು ಜತೆಗೆ ಮುಖ, ಪಾದ, ಹೊಟ್ಟೆ, ಎದೆಯ ಮೇಲೆ ಕಂದು ಮತ್ತು ಬಿಳಿಯ ಮಿಶ್ರಣವಿರುವ ಅಳಿಲುಗಳಿವೆ. ಹೂಗಳ ಕೇಸರ ಶಲಾಕೆಯ ಗೊಂಚಲಿನಂತೆ ಕಾಣುವ ಬಾಲ. ರೇಷಿಮೆ ನುಣುಪಿನ ಚರ್ಮ, ದೊಡ್ಡದಾದ ಪಿಳಿಪಿಳಿ ಕಣ್ಣುಗಳು ಇದಕ್ಕಿವೆ. ಈ ಅಳಿಲುಗಳಿಗೆ ದೃಷ್ಟಿ ವಿಪರೀತ ಚುರುಕು.
ತಲೆ ಮತ್ತು ಶರೀರ 35 ರಿಂದ 45 ಸೆ.ಮೀ. ಇದ್ದರೆ, ಬಾಲಮಾತ್ರ ದೇಹದ ಒಂದೂವರೆ ಪಟ್ಟು ಉದ್ದವಿರುತ್ತದೆ. ಬಾಲ ಸುಮಾರು ಎರಡು ಅಡಿಯಷ್ಟು ಉದ್ದವಿದ್ದು, ಎರಡು ಕೆ.ಜಿ. ತೂಕವಿರುತ್ತದೆ. ಮಲಬಾರ್ ಅಳಿಲುಗಳಿಗೆ ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದಲ್ಲಿರುವ ಕಾಲುಗಳಿಗಿಂತ ಉದ್ದ. ಪ್ರತಿಪಾದಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ.
ಮಲಬಾರ್ ಅಳಿಲುಗಳು ಮರದಿಂದ ಮರಕ್ಕೆ ಸುಮಾರು 20 ಅಡಿಗಳಷ್ಟು ಹಾರಬಲ್ಲವು. ಎದ್ದು ಕಾಣುವ ಮೈಬಣ್ಣವಿದ್ದರೂ, ಕ್ಷಣಾರ್ಧದಲ್ಲಿ ಶತ್ರುಗಳ ಕಣ್ಣು ತಪ್ಪಿಸಿಕೊಳ್ಳಬಲ್ಲವು.

ಎತ್ತರದ ಮರದಲ್ಲಿ ಒಂಟಿ ಜೀವನ:
ಇವುಗಳು ಮಾನವನ ಚಟುವಟಿಕೆ ಕಡಿಮೆ ಇರುವ ಅರಣ್ಯದೊಳಗಿನ ಎತ್ತರವಾದ ದೊಡ್ಡ ಮರಗಳಲ್ಲಿ ಜೀವಿಸುತ್ತವೆ. ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಅನೇಕ ಮರಗಳ ಮೇಲೆ ಗೂಡು ನಿರ್ಮಿಸಿ ದಾರಿ ತಪ್ಪಿಸುವ ಜಾಣತನ ಮೆರೆಯುತ್ತವೆ.
ಸಸ್ಯಾಹಾರಿಯಾದ ಇವು ಕಾಡುಮರಗಳ ಹಣ್ಣು ತಿಂದು ಜೀವಿಸುತ್ತವೆ. ಹೆಣ್ಣು ಅಳಿಲು ಎತ್ತರವಾದ ಮರಗಳ ಮೇಲೆ ಕವಲುಗಳ ನಡುವೆ ಪೊಟರೆ ಮಾಡಿಕೊಂಡು ಮಾರ್ಚ್ ನಲ್ಲಿ ಮರಿಹಾಕುತ್ತದೆ. ಜೀವಿತಾವಧಿಯಲ್ಲಿ ಏಳೆಂಟುಬಾರಿ ಮರಿಹಾಕುವ ಇವು. ಪ್ರತಿ ಬಾರಿ ಗೂಡುಕಟ್ಟುವಾಗಲೂ ಕಿ.ಮೀ.ಗಟ್ಟಲೆ ಅಂತರ ಕಾಯ್ದುಕೊಳ್ಳುತ್ತವೆ. ಇವುಗಳು ಗುಂಪಾಗಿ ಕಾಣಿಸಿಕೊಳ್ಳುವುದು ಬಹಳ ವಿರಳ. ಏಕೆಂದರೆ ಇವು ಒಂಟಿತನವನ್ನೇ ಇಷ್ಟಪಡುತ್ತವೆ.
ಇದು ಮರಬಿಟ್ಟು ನೆಲದ ಮೇಲೆ ಇಳಿಯುವುದು ಬಹಳ ಕಡಿಮೆ. ಇಶೇಷ ಗುಣವೆಂದರೆ, ಮುಂಜಾನೆ ಮತ್ತು ಸಂಜೆ ಮಾತ್ರ ಆಹಾರ ಅರಸುತ್ತವೆ. ಬಿಸಿಲೇರಿದಂತೆ ವಿಶ್ರಾಂತಿಗೆ ಜಾರುತ್ತವೆ. ಅಚ್ಚರಿ ಎಂದರೆ, ಕೆಂದಳಿಲು ಇರುವ ಜಾಗದಲ್ಲಿ ಹಾರುವ ಬೆಕ್ಕು ಜೀವಿಸುತ್ತದೆ. ಬೆಳಗ್ಗೆ ಕೆಂದಳಿಲು ಕಾಣಿಸಿಕೊಂಡ ಮರದಲ್ಲೇ ಸಂಜೆ ಹಾರುವ ಬೆಕ್ಕು ಕಾಣಿಸಿಕೊಳ್ಳುವುದು ಕಾಡಿನ ಅಚ್ಚರಿಯಲ್ಲೊಂದು.

ನಶಿಸುತ್ತಿರುವ ಸಂಕುಲ:
ಇದರ ಪಾದದ ಕೆಳಗೆ ಮೆತ್ತನೆಯ ಗೊರಸು ಇದೆ. ಕಾಲುಗಳಲ್ಲಿ ಗಟ್ಟಿಮುಟ್ಟಾದ ಉಗುರುಗಳು ಇರುವುದರಿಂದ ಮರಹತ್ತುವುದು ಇವುಗಳಿಗೆ ಸಲೀಸು. ಇವುಗಳ ಬಾಚಿ ಹಲ್ಲುಗಳು ಜೀವನ ಪರ್ಯಂತ ಬೆಳೆಯುತ್ತಲೇ ಇರುತ್ತವಂತೆ.
ಅರಣ್ಯದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪ, ಸ್ಥಳೀಯರ ಬಾಯಿ ಚಪಲ ಮತ್ತು ಶ್ರೀಮಂತರ ವಿಲಾಸಿ ಚರ್ಮ ಉತ್ಪನ್ನಗಳ ತಯಾರಿಕೆಗೆ ಬಲಿಯಾಗಿ ನಶಿಸಿಹೋಗುವ ಪ್ರಾಣಿಗಳ ಪಟ್ಟಿಗೆ ಮಲಬಾರ್ ಅಳಿಲು ಕೂಡ ಸೇರಿದೆ.
ನಾಲ್ಕರಿಂದ ಐದು ಕೆ.ಜಿ. ತೂಗುವ ಇವುಗಳನ್ನು ಮಲೆನಾಡಿಗರು ಮತ್ತು ಗಿರಿಜನರು ತಿನ್ನುತ್ತಾರೆ. ರಾತ್ರಿಯವೇಳೆ ಮರದ ಟೊಂಗೆಗಳನ್ನು ಬಿಗಿದಪ್ಪಿ ಮಲಗುವ ಕೆಂದಳಿಲುಗಳನ್ನು ಬ್ಯಾಟರಿ ಬೆಳಕು ಬಿಟ್ಟು ಕದಲದಂತೆ ಮಾಡಿ ಬೇಟೆ ಆಡುತ್ತಾರೆ. ಅವುಗಳ ತುಪ್ಪಳ ಮತ್ತು ಚರ್ಮದ ಮಾರಾಟಕ್ಕಾಗಿ ಮರಗಳಲ್ಲಿ ಬಲೆಬೀಸಿ ಹಿಡಿಯುತ್ತಾರೆ.
   

No comments:

Post a Comment