ಜೀವನಯಾನ

Wednesday, May 14, 2014

ಕೀಟ ಲೋಕದ ಕುಂಬಾರ!

ಕಣಜದ ಮಣ್ಣಿನ ಗೂಡು

ಗೆದ್ದಲು ಹುಳು ಮಣ್ಣಿನ ಹುತ್ತವನ್ನು ನಿರ್ಮಿಸುವುದನ್ನು ನೋಡಿದ್ದೀರಿ. ಅದೇರೀತಿಯಲ್ಲಿ ಕಣಜ ಕೀಟಗಳು ಸಹ ಮಣ್ಣಿನ ಮನೆಯನ್ನು ನಿರ್ಮಿಸುತ್ತವೆ. ಒಂದು ಬಹುಮಹಡಿ ಕಟ್ಟಡ ಕಟ್ಟಬೇಕೆಂದರೆ ವಿನ್ಯಾಸಕಾರ, ಎಂಜಿನೀಯರ್, ಕೂಲಿ ಕಾರ್ಮಿಕರು ಹೀಗೆ ಹಲವು ಮಂದಿ ಪ್ರಯಾಸಪಡಬೇಕು. ಆದರೆ, ಕಣಜ ಯಾರ ಸಹಾಯವೂ ಇಲ್ಲದೆ ಏಳು ಅಂತಸ್ತಿನ ಮನೆಯನ್ನು ಒಬ್ಬೊಂಟಿಯಾಗಿ ಕಟ್ಟಿಕೊಳ್ಳುತ್ತದೆ. ಮನೆಯ ಗೋಡೆಗಳಿಗೆ, ರಂದ್ರವಿರುವ ಜಾಗಗಳಿಗೆ, ಮರದ ಕೊಂಬೆಗಳಿಗೆ ಮಣ್ಣನ್ನು ಮೆತ್ತಿ ಗೂಡನ್ನು ನಿರ್ಮಿಸುತ್ತದೆ. ಕುಂಬಾರನ ಮಡಿಕೆಯಂತಹ ಆಕಾರದ ಗೂಡು ಕಟ್ಟುವುದರಿಂದ ಈ ಕಣಜಗಳಿಗೆ ಕೀಟಲೋಕದ ಕುಂಬಾರ ಎನ್ನುವ ಹೆಸರು ಬಂದಿದೆ. 


ಮನೆ ನಿರ್ಮಾಣ ಹೇಗೆ?
ಎಲ್ಲರೂ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರೆ, ಕಣಜವು ತನ್ನ ಸಂತಾನ ರಕ್ಷಣೆಗಾಗಿ ಗೂಡನ್ನು ನಿರ್ಮಿಸುತ್ತದೆ. ಪುಟ್ಟದಾದ ಗೂಡನ್ನು ಕಟ್ಟಿಕೊಳ್ಳಲು ಸೂಕ್ತವಾದ ಮಣ್ಣನ್ನು ಆಯ್ದುಕೊಳ್ಳುವ ಕಣಜ, ತನ್ನ ಜೊಲ್ಲಿನಿಂದ ಅದನ್ನು ಮೆದುಗೊಳಿಸುತ್ತದೆ. ಬಳಿಕ ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತುತಂದು ನಿದಿಷ್ಟ ಸ್ಥಳವೊಂದರಲ್ಲಿ ಗೂಡನ್ನು ಕಟ್ಟುತ್ತದೆ. ಮನೆಯ ಒಳಗೆ ಆರೇಳು ಅಂತಸ್ತುಗಳಿದ್ದು, ಮರಿಗಳನ್ನು  ಇರಿಸಲು ಪ್ರತ್ಯೇಕವಾದ ಕೋಣೆಗಳಿರುತ್ತವೆ. ಹೆಣ್ಣು ಕೀಟ ಮನೆ ಕಟ್ಟುವುದರಲ್ಲಿ ನಿಷ್ಣಾತ. ಒಂದುದಿನದ ಒಳಗಾಗಿಯೇ ಅದು ತನ್ನ ಮನೆಯನ್ನು ಕಟ್ಟಿ ಮುಗಿಸುತ್ತದೆ.

ಒಂದಕ್ಕಿಂತಲೂ ಹೆಚ್ಚು ಗೂಡು
ಮನೆ ಪೂರ್ಣಗೊಂಡ ಬಳಿಕ ಅದರ ಒಳಗೆ ಮೊಟ್ಟೆಗಳನ್ನು ಇಡುತ್ತದೆ. ಬಳಿಕ ಕಂಬಳಿ ಹುಳಗಳನ್ನು ಬೇಟೆ ಆಡುತ್ತದೆ. ಕಂಬಳಿಹುಳಗಳನ್ನು ಸಾಯಿಸದೇ ಅವುಗಳ ಎಚ್ಚರ ತಪ್ಪಿಸಿ ಎರಡು ಮೂರು ಹುಳಗಳನ್ನು ಗೂಡಿನ ಒಳಕ್ಕೆ ಇರಿಸಿ, ದೂಡಿನ ಬಾಗಿಲನ್ನು ಮಣ್ಣಿನಿಂದ ಮುಚ್ಚುತ್ತದೆ. ಕಣಜದ ಮರಿಗಳು ಮೊಟ್ಟೆಯಿಂದ ಹೊರ ಬರುವ ವೇಳೆಗೆ ಸಿದ್ಧ ಆಹಾರದ ರೂಪದಲ್ಲಿ ಕಂಬಳಿ ಹುಳುಗಳನ್ನು ನೀಡುತ್ತವೆ. ಕಂಬಳಿ ಹುಳುಗಳನ್ನು ತಿಂದು ಇಂಥ ಪ್ರಕ್ರಿಯೆ ಕೀಟ ಜಗತ್ತಿನಲ್ಲಿ  ಅಪರೂಪದ ಸಂಗತಿ.
ಕಣಜ ತನ್ನ ಮರಿಗಳಿಗಾಗಿ ಒಂದಕ್ಕಿಂತಲೂ ಹೆಚ್ಚು ಗೂಡುಗಳನ್ನು ನಿರ್ಮಿಸುತ್ತದೆ.
ಕೆಲವೊಮ್ಮೆ ಅವು ನೆಲದ ಒಳಗೂ ಗೂಡನ್ನು ಕಟ್ಟುವುದೂ ಇದೆ. ಆದರೆ, ಬಹುತೇಕ ಸಮಯದಲ್ಲಿ ಗೋಡೆ ಅಥವಾ ಮರದ ಕೊಂಬೆಗಳಿಗೆ ಗೂಡು ಕಟ್ಟಿದ್ದನ್ನು ಕಾಣಬಹುದು.

ಆಕರ್ಷಕ ರೂಪ:
ಆಕರ್ಷಕ ಗುಣಗಳನ್ನು ಹೊಂದಿರುವ ಕಣಜ ಹುಳು ಅಷ್ಟೇ ಅಪಾಯಕಾರಿಯೂ ಹೌದು. ಚೂಪಾದ ಸೂಜಿಯಂತೆಯೇ ಚುಚ್ಚುವ ಮುಳ್ಳುಗಳನ್ನು ಹೊಂದಿರುವ ಅವು ಶಿಸ್ತು, ಸಂಯಮ ಮತ್ತು ಬದ್ಧತೆಯನ್ನೂ ಮೈಗೂಡಿಸಿಕೊಂಡಿರುತ್ತವೆ.
ಸುಂದರವಾದ ಸಣ್ಣ ನಡುವಿನ ಈ ಕೀಟ ನೋಡಲು ಜೇನು ಹುಳುವಿನಂತೆಯೇ ಕಾಣುತ್ತದೆ. ಆದರೆ, ಕಣಜದ ಮುಳ್ಳು ಜೇನಿಗಿಂತ ವಿಷಕಾರಿ. ಕಣಜ ಚುಚ್ಚಿದ ಜಾಗದಲ್ಲಿ ಉರಿ, ನೋವು ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಇವು ಕಪ್ಪು ಬಣ್ಣದಲ್ಲಿ ಕಂಡುಬರುತ್ತದೆ. ಹೊಟ್ಟೆ ಮತ್ತು ದೇಹದ ತುಂಬ ಹಳದಿ ಮತ್ತು ಕೆಂಪು ಬಣ್ಣದ ಪಟ್ಟಿಗಳಿರುತ್ತವೆ. ದೇಹ 9ರಿಂದ 20 ಮಿಲಿ ಮೀಟರ್ನಷ್ಟು ಉದ್ದವಿರುತ್ತದೆ. ಇವುಗಳಲ್ಲಿ ಹಲವಾರು ಉಪ ಪ್ರಭೇದಗಳಿದ್ದು, 3200ಕ್ಕೂ ಹೆಚ್ಚು ವಿಧಗಳಿವೆ.

ರೈತನಿಗೆ ಉಪಕಾರಿ:

ಬೆಳೆದ ಕೀಟವು ಹೂವಿನ ಮಕರಂದವನ್ನು ಹೀರುತ್ತದೆ. ಹೆಚ್ಚಾಗಿ ಒಂಟಿಯಾಗಿಯೇ ವಾಸಿಸುತ್ತದೆ. ಬೆಳೆಗಳನ್ನು ನಾಶಮಾಡುವ ಕಂಬಳಿಹುಳುಗಳನ್ನು ತಿನ್ನುವುದರಿಂದ ಮತ್ತು ಪರಾಗಸ್ಪರ್ಶಕ್ಕೆ ನೆರವಾಗುವುದರಿಂದ ಈ ಕೀಟವು ರೈತನಿಗೆ ಉಪಕಾರಿಯಾಗಿದೆ.


 

No comments:

Post a Comment